ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಕೃಷಿ ಕೀಟಶಾಸ್ತ್ರ ವಿಭಾಗದ ವಿಸ್ಮಯಕಾರಿ ಕೀಟ ಪ್ರಪಂಚದಲ್ಲಿ ವಿವಿಧ ಬಗೆಯ ಕೀಟಗಳನ್ನು ಬಳಸಿಕೊಂಡು ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅನೇಕ ರೀತಿಯ ಮಾದರಿಗಳನ್ನು ಮಾಡಿ, ವಿವಿಧ ರೀತಿಯ ಕೀಟಗಳ ಬಗ್ಗೆ ಸಾರ್ವಜನಿಕರಿಗೆ, ರೈತಾಪಿ ವರ್ಗದವರಿಗೆ ಹಾಗೂ ಚಿಣ್ಣರಿಗೆ ಮಾಹಿತಿ ನೀಡಲಾಯಿತು.
ಅದರಲ್ಲೂ ಪ್ರಮುಖವಾಗಿ ಸಾಮಾನ್ಯ ಕೀಟದ ಪರಿಚಯ, ಕೀಟದ ದೇಹ ರಚನೆ, ಕೀಟಗಳಲ್ಲಿ ಸಂಘ ಜೀವನ ಮತ್ತು ಗೂಡು, ಮಾನವನಿಗೆ ರೋಗವನ್ನು ಹರಡುವ ಕೀಟಗಳು, ಜೇನು ಹುಳುಗಳ ಸೌಹಾರ್ದತ್ವ, ಜೇನು ಗೂಡಿನ ರಚನೆ.
ಜೇನು ಸಾಕಣೆಯ ವಿಧಾನ, ಜೇನು ಹುಳುಗಳ ಮಹತ್ವ, ರೇಷ್ಮೆ ಹುಳುವಿನ ಜೀವನ ಶೈಲಿ ಮತ್ತು ಅವುಗಳ ಮಹತ್ವ, ಜಲಚರ ಕೀಟಗಳು ಮತ್ತು ಅವುಗಳಿಂದ ಜೈವಿಕ ತ್ಯಾಜ್ಯಗಳ ನಿರ್ವಹಣೆ, ಮಾನವನ ಆಹಾರದಲ್ಲಿ ಕೀಟಗಳ ಪಾತ್ರ ಮತ್ತು ಅವುಗಳಿಂದ ದೊರೆಯುವ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಲಾಯಿತು.
ಅದರೊಂದಿಗೆ, ಕೀಟಗಳಿಂದ ಮಾಡಿದ ವಿವಿಧ ರೀತಿಯ ಕಲಾಕೃತಿಗಳಾದಂತಹ ಮೋಲ್ ಕ್ರಿಕೆಟ್ ಗಳಿಂದ ಮಾಡಿರುವ ಚಿಟ್ಟೆ ಸ್ವಾಮಿ ಕ್ರೀಡಾಂಗಣ, ಕೀಟಗಳ ಸರ್ಕಸ್ ಶೋ, ಕೀಟಗಳಲ್ಲಿ ಉಳಿವಿಗಾಗಿ ಹೋರಾಟದ ಮಾದರಿ, ಕೀಟ ವೃಕ್ಷ, ಬೋರಂಗಿ ಹುಳುಗಳಿಂದ ಮಾಡಿದ ಆಭರಣಗಳು, ಕೀಟದ ರಕ್ಕೆಗಳಿಂದ ಮಾಡಿರುವ ಓಲೆಗಳು, ಕೀ ಚೈನ್ ಗಳು ಹಾಗೂ ಗ್ರೀಟಿಂಗ್ ಕಾರ್ಡ ಗಳು ಎಲ್ಲರ ಕಣ್ಮನ ಸೆಳೆಯುತ್ತಿರುವುದರ ಜೊತೆಗೆ, ಈ ಬಾರಿಯ ಮೇಳದ ಆಕರ್ಷಕ ಕೇಂದ್ರ ಬಿಂದುವಾಗಿದೆ.
ಗೆದ್ದಲು ಹುಳುಗಳು ನಿರ್ಮಿಸಿರುವ ಮಣ್ಣಿನ ಹುತ್ತದ ನೈಜವಾದ ಮಾದರಿ ಗೆದ್ದಲು ಹುಳುಗಳ ಸಂಘ ಜೀವನಕ್ಕೆ ಸಾಕ್ಷಿಯಾಗುವುದರ ಜೊತೆಗೆ, ಹಾವುಗಳು ಹುತ್ತವನ್ನು ನಿರ್ಮಿಸುತ್ತವೆ ಎಂಬ ಮೂಢನಂಬಿಕೆಯನ್ನು ಜನರಲ್ಲಿ ನಿರ್ನಾಮ ಮಾಡಲು ಸಹಕಾರಿಯಾಯಿತು. ಕಪ್ಪು ಸೈನಿಕ ಹುಳು ಎಂಬ ಕೀಟವನ್ನು ಮಹತ್ತರವಾಗಿ ಜೈವಿಕ ತ್ಯಾಜ್ಯಗಳಿಂದ ಗೊಬ್ಬರ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದು ಎಂಬ ಮಾಹಿತಿಯನ್ನು ರೈತರಿಗೆ ನೀಡಲು ನೈಜ ಮಾದರಿಯನ್ನು ಇಡಲಾಗಿದೆ.
ಇವುಗಳೆಲ್ಲದರ ಜೊತೆಗೆ ರೈತನ ಮಿತ್ರ ಕೀಟಗಳಾದ ಪರಭಕ್ಷಕ ಕೀಟಗಳು, ಪರಾವಲಂಬಿ ಕೀಟಗಳು, ಜೇಡಗಳು ಮತ್ತು ಗುಲಗಂಜಿ ಹುಳುಗಳ ಬಗ್ಗೆ ಮಾಹಿತಿ ನೀಡಲಾಯಿತು ಎಂದು ಕೃಷಿ ಕೀಟಶಾಸ್ತ್ರದ ಪಿ ಹೆಚ್. ಡಿ. ವಿದ್ಯಾರ್ಥಿಗಳಾದ ರಾಖೇಶ್ ಮತ್ತು ವಿನುತಾ ತಿಳಿಸಿದ್ದಾರೆ.
Share your comments