ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ರವಿವಾರ ನಂದೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಸಕ್ತ 2021-22ನೇ ಸಾಲಿನ ರೈತರೇ ಸ್ವತ ತಮ್ಮ ಬೆಳೆಗಳ ಸಮೀಕ್ಷೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರೈತ ಬಂಧುಗಳು ತಮ್ಮ ಕ್ಷೇತ್ರಗಳಲ್ಲಿ ಬೆಳೆದಿರುವ ಬೆಳೆಗಳನ್ನು ಸ್ವತ: ಬೆಳೆ ಸಮೀಕ್ಷೆ ಆಪ್ ಮೂಲಕ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆಪ್‌ನಲ್ಲಿ ಬೆಳೆದ ಬೆಳೆಗಳ ವಿವರ ನೀಡಿದಲ್ಲಿ ಮುಂದೆ ಅದು ಪಹಣಿಯಲ್ಲಿ ದಾಖಲುಗೊಂಡು ಬೆಳೆ ವಿಮೆ ಪರಿಹಾರ, ಕನಿಷ್ಟ ಬೆಂಬಲ ಬೆಲೆ ಯೋಜನೆ ಹಾಗೂ ಇನ್ನಿತರ ಪರಿಹಾರ ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಹೀಗಾಗಿ ರೈತರು ಸಕ್ರಿಯರಾಗಿ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ದೇಶದಲ್ಲಿ 800ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ದೇಶಕ್ಕೆ ಬೇಕಾಗುವ ಪ್ರಮಾಣಕ್ಕಿಂತ ಶೇ.40ರಷ್ಟು ಹೆಚ್ಚು ಉತ್ಪಾದನೆಯಾಗುತ್ತದೆ. ಆದರೆ ಎಣ್ಣೆ ಬೀಜಗಳು ಅಮದು ಮಾಡಿಕೊಳ್ಳಲಾಗುತ್ತದೆ. ದೇಶದ ಜನಸಂಖ್ಯೆಗೆ ಬೇಡಿಕೆ ಅನುಗುಣವಾಗಿ ಬೆಳೆ ಬೆಳೆಯಬೇಕಿದೆ. ಬೇರೆ ದೇಶಕ್ಕೆ ಹೋಲಿಸಿದರೆ ಮಿಶ್ರ ಬೆಳೆ ಬೆಳೆಯಲು ನಾವು ಹಿಂದಿದ್ದು, ಮಿಶ್ರ ಬೆಳೆಗೆ ಹೆಚ್ಚಿನ ಒತ್ತು ನೀಡಿ ರೈತರು ಆದಾಯ ದ್ವಿಗುಣಗೊಳಿಸುವತ್ತ ಮುಂದಾಗಬೇಕು ಎಂದರು.
100 ಎಕರೆಯಲ್ಲಿ ಇಸ್ರೇಲ್ ಕೃಷಿ ಪದ್ಧತಿ: ವಿಜನ್-2050 ಭಾಗವಾಗಿ ಕಲಬುರಗಿ ಜಿಲ್ಲೆಯ 100 ಎಕರೆ ಪ್ರದೇಶಲ್ಲಿ ಪೈಲಟ್ ಯೋಜನೆಯಾಗಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಬಳಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಸ್ರೇಲ್ ದೇಶದ ದಕ್ಷಿಣ ಭಾರತದ ಕಾನ್ಸುಲೇಟ್ ಜನರಲ್ ಜೊನಾಥನ್ ಜಡ್ಕಾ ಅವರ ನೇತೃತ್ವದ ತಂಡ ಶೀಘ್ರದಲಿಯೇ ಕಲಬುರಗಿಗೆ ಬಂದು ಇಲ್ಲಿನ ಅಧಿಕಾರಿ ಮತ್ತು ರೈತರಿಗೆ ಅಗತ್ಯ ಸಲಹೆ ನೀಡಲಿದೆ ಎಂದರು.
ಟ್ರಾö್ಯಕ್ಟರ್ ಚಲಾಯಿಸಿದ ಸಚಿವರು: ಕೃಷಿ ಇಲಾಖೆಯ ಗ್ರಾಮ ಮಟ್ಟದಲ್ಲಿ ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಸ್ಥಾಪನೆ ಯೋಜನೆಯಡಿ ನಂದೂರಿನ ರೋಹಿಣಿ ರೈತ ಉತ್ಪಾದಕರ ಕಂಪನಿಗೆ 10 ಲಕ್ಷ ರೂ. ವೆಚ್ಚದ ಘಟಕಕ್ಕೆ ಶೇ.80ರಷ್ಟು ಸಬ್ಸಿಡಿ ದರದೊಂದಿಗೆ ಮಂಜೂರಾಗಿರುವ ಟ್ರ್ಯಾಕ್ಟರ್, ರಾಶಿ ಯಂತ್ರ, ರೋಟೊ ವೇಟರ್, 3-ಸ್ಪೇಯರ್‌ಗಳನ್ನು ಸಚಿವರು ಕಂಪನಿಗೆ ವಿತರಿಸಿದರು. ವಿತರಣೆ ಮುನ್ನ ಸಚಿವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಮತ್ತು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಸ್ಥಳೀಯ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ತಿನ ಶಾಸಕ ಶಶೀಲ ಜಿ. ನಮೋಶಿ, ಮುಖಂಡ ಶಿವರಾಜ ಪಾಟೀಲ ರದ್ದೆವಾಡಗಿ ಅವರನ್ನು ಕೂಡಿಸಿಕೊಂಡು ಟ್ರ್ಯಾಕ್ಟರ್ ಚಲಾಯಿಸಿ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಎಸ್.ಪಿ. ಡಾ. ಸಿಮಿ ಮರಿಯಮ್ ಜಾರ್ಜ್, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ. ದಿಲೀಷ್ ಶಶಿ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಜಂಟಿ ಕೃಷಿ ನಿದೇಶಕ ಡಾ.ರತೇಂದ್ರನಾಥ ಸೂಗೂರು, ಸಹಾಯಕ ನಿರ್ದೇಶಕ ಚಂದ್ರಕಾAತ ಜೀವಣಗಿ ಮತ್ತಿತರು ಇದ್ದರು.
ಏನಿದು ಬೆಳೆ ಸಮೀಕ್ಷೆ?
ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ (Crop Survey) ಯನ್ನು ಮೊಬೈಲ್ ಆ್ಯಪ್ ಮೂಲಕ ದಾಖಲಿಸುವ ವಿನೂತನ ಯೋಜನೆ ಬೆಳೆ ಸಮೀಕ್ಷೆಯಾಗಿದೆ. ಹೌದು ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಆರಂಭಿಸಿದೆ. ಬೆಳೆ ಸಮೀಕ್ಷೆ ಮಾಡಲು ರೈತರು ಈಗ ಎಲ್ಲಿಯೂ ಹೋಗಬೇಕಿಲ್ಲ. ಸ್ವತಃ ರೈತರೇ ತಮ್ಮ ಮೊಬೈಲ್ ಮೂಲಕ ಸಮೀಕ್ಷೆ ಮಾಡಬಹುದು.
ರೈತರು ತಮ್ಮ ಜಮೀನುಗಳ ಸರ್ವೇ ನಂಬರ್, ಹಿಸ್ಸಾ ನಂಬರ್‌ವಾರು ತಾವು ಬೆಳೆದ ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಇನ್ನಿತರೆ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವತಃ ತಾವೇ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ದಾಖಲಿಸಬೇಕಾಗುತ್ತದೆ.ರೈತರು ತಮ್ಮ ಮೊಬೈಲ್‌ಗಳಲ್ಲಿ ‘ಖಾರಿಫ್ ಸೀಸನ್ ಫಾರ್ಮರ್ ಕ್ರಾಪ್ ಸರ್ವೆ 2021-22’ (Kharif Season Farmer Crop Survey 2021-22) ಎಂಬ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಅನ್ನು ತಮ್ಮ ಆಂಡ್ರಾಯ್ಡ್ ಮೊಬೈಲ್‌ನ ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಗೂಗಲ್ ಪ್ಲೇ ಸ್ಟೋರ್ ನಲ್ಲಿ harif Season Farmer Crop Survey 2021-22 ಟೈಪ್ ಮಾಡಿ ಆ್ಯಪ್ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.ಆಗ ಮುಂಗಾರು ರೈತರ ಬೆಳೆ ಸಮೀಕ್ಷೆ 2021-22 ಚಿತ್ರ ಕಾಣುತ್ತದೆ. . ಆ್ಯಪ್‌ನಲ್ಲಿ ಆರ್ಥಿಕ ವರ್ಷ (2021-22) ಹಾಗೂ ಋತು (ಮುಂಗಾರು) ಎಂದು ಆಯ್ಕೆ ಮಾಡಬೇಕು. ಆಧಾರ್ ಕಾರ್ಡ್ ಬಾರ್ ಕೋಡ್ ಸ್ಕ್ಯಾನ್ ಮಾಡಬಹುದು. ಆಧಾರ್ ಸಂಖ್ಯೆ, ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು,ಹುಟ್ಟಿದ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ , ಲಿಂಗ, ನಮೂದಿಸಿ ಸಕ್ರಿಯಗೊಳಿಸಿದ ಬಳಿಕ ರೈತರು ನಮೂದಿಸಿದ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್ವರ್ಡ್ (ಓಟಿಪಿ) ಬರುತ್ತದೆ. ಆ ಓಟಿಪಿ ಸಂಖ್ಯೆಯನ್ನು ದಾಖಲಿಸಿ ನೋಂದಣಿಗೆ ಸಲ್ಲಿಸಬೇಕು.
ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡ ನಂತರ ಮೊದಲು ರೈತರ ಜಮೀನು ಇರುವ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮದ ಹೆಸರನ್ನು ನಮೂದಿಸಬೇಕು. ಆ ನಂತರ, ಕೃಷಿ ಬೆಳೆ ಬೆಳೆದಿರುವ ಸರ್ವೇ ನಂಬರ್, ಹಿಸ್ಸಾ ಹಾಗೂ ಹೊಲದ ಮಾಲೀಕರ ಹೆಸರು ಆಯ್ಕೆ ಮಾಡಬೇಕು. ಬಳಿಕ ಅಲ್ಲಿ ನಮೂದಿಸಲಾಗಿರುವ ಸರ್ವೇ ನಂಬರ್‌ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ಕ್ಷೇತ್ರವನ್ನು ನಮೂದಿಸಿ, ಬೆಳೆಯ ಫೋಟೊ ತೆಗೆದು ಮಾಹಿತಿಯನ್ನು ಅಪ್ ಲೋಡ್ ಮಾಡಬೇಕು.
Share your comments