ಪ್ರಮುಖ ಹಾಗೂ ಕೃಷಿ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.
ಕನ್ನಡಿಗರಿಗೆ ಸಿಹಿಸುದ್ದಿ: ಇನ್ಮುಂದೆ 11,400 ಕೇಂದ್ರ ಸರ್ಕಾರಿ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಬಹುದು!
ದಿವಂಗತ ಜಯಲಲಿತಾ ಅವರ 11 ಸಾವಿರ ರೇಷ್ಮೆ ಸೀರೆ ಸೇರಿ ದುಬಾರಿ ವಸ್ತು ಹರಾಜು!
ಅಡಿಕೆ ಧಾರಣೆಯಲ್ಲಿ ಸುಧಾರಣೆ: ಕ್ವಿಂಟಾಲ್ಗೆ 47 ಸಾವಿರ
ರೈತರ ಟ್ರ್ಯಾಕ್ಟರ್ಗಳಿಗೆ ಡೀಸೆಲ್ ಸಹಾಯ ಧನ: ರೈತ ಶಕ್ತಿ ಯೋಜನೆಗೆ ಜ.31ರಂದು ಚಾಲನೆ
ಎಸ್.ಎಲ್ ಭೈರಪ್ಪ, ಸುಧಾ ಮೂರ್ತಿ ಸೇರಿ ಎಂಟು ಕನ್ನಡಿಗರಿಗೆ ಪದ್ಮ ಪ್ರಶಸ್ತಿ ಗೌರವ
ಹಾವೇರಿಯ ರಾಣೆಬೆನ್ನೂರು ಹೊರವಲಯದಲ್ಲಿ ಮೆಗಾ ಎಪಿಎಂಸಿ
ಗಣರಾಜ್ಯೋತ್ಸವ ಪರೇಡ್: ಕರ್ನಾಟಕದ ನಾರಿಶಕ್ತಿ ಸ್ತಬ್ಧಚಿತ್ರ ಪ್ರದರ್ಶನ
ಸತತ 14 ವರ್ಷ ಸ್ತಬ್ಧಚಿತ್ರ ಪ್ರದರ್ಶನದ ದಾಖಲೆ!
38.37 ಲಕ್ಷ ವಿದ್ಯಾರ್ಥಿಗಳಿಂದ ಮೊಟ್ಟೆ ನೀಡಲು ಬೇಡಿಕೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ
74ನೇ ಗಣರಾಜ್ಯೋತ್ಸವ: ಭಾರತೀಯರಿಗೆ ಶುಭಾಶಯ ಕೋರಿದ ಗೂಗಲ್ ಡೂಡಲ್
ಪಾಕಿಸ್ತಾನದಲ್ಲಿ ಹಣ ದುಬ್ಬರ ಆಹಾರಕ್ಕೆ ಸೃಷ್ಟಿ ಆಯ್ತು ಹಾಹಾಕಾರ!
ರಾಜ್ಯದ ಪ್ರಮುಖ ನದಿ ನೀರು ನೇರ ಬಳಸದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ
ಸುದ್ದಿಗಳ ವಿವರ ಈ ರೀತಿ ಇದೆ.
1. ದಿವಂಗತ ಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಸ್ತಿ ಹರಾಜು ಹಾಕುವ ಪ್ರಕ್ರಿಯೆಗಳು ಪ್ರಾರಂಭವಾಗಿದೆ. ಜಯಲಲಿತಾ ಅವರ ಆಸ್ತಿಯನ್ನು ಔಪಚಾರಿಕವಾಗಿ ಹರಾಜು ಮಾಡಲು ಕ್ರಮಕೈಗೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ. ಇದರಿಂದಾಗಿ ಜಯಲಲಿತ ಅವರ ದುಬಾರಿ ಬೆಲೆಯ ರೇಷ್ಮೆ ವಸ್ತುಗಳು ಹರಾಜಾಗಿವೆ. ಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜಯಲಲಿತಾ ಅವರು 1991 ರಿಂದ 1996 ರವರೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ತಮಿಳುನಾಡಿನ ಭ್ರಷ್ಟಾಚಾರ ನಿಗ್ರಹ ದಳವು ಜಯಲಲಿತಾ, ಶಶಿಕಲಾ, ಸುಧಾಕರನ್ ಮತ್ತು ಇಲಾಕಾಸ್ಸಾ ಅವರ ವಿರುದ್ಧ ಆ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಪ್ರಕರಣವನ್ನು ದಾಖಲಿಸಿದೆ. ಅವರ ಮನೆಗಳಲ್ಲಿ ತಪಾಸಣೆ ನಡೆಸಿದಾಗ ಆದಾಯಕ್ಕಿಂತ 66 ಕೋಟಿ ರೂಪಾಯಿ ಆಸ್ತಿ ಸಂಗ್ರಹಿಸಿರುವುದು ಬೆಳಕಿಗೆ ಬಂದಿದ್ದು, ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲಾಗಿತ್ತು. ಪ್ರಕರಣದ ವಿಚಾರಣೆಯನ್ನು ಪ್ರತ್ಯೇಕ ನ್ಯಾಯಾಲಯ ನಡೆಸಿತ್ತು. ವಿಚಾರಣೆ ವೇಳೆ ಜಯಲಲಿತಾ ಮನೆಯಿಂದ 27 ಮಾದರಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 11,344 ದುಬಾರಿ ರೇಷ್ಮೆ ಸೀರೆಗಳು, ಶಾಲುಗಳು, 750 ಜೋಡಿ ಚಪ್ಪಲಿಗಳು ಮತ್ತು 250 ಶಾಲುಗಳು ಸೇರಿವೆ. ಇವುಗಳನ್ನು 2011 ರಿಂದ ಕರ್ನಾಟಕ ಸರ್ಕಾರದ ಖಜಾನೆಯಲ್ಲಿ ಇರಿಸಲಾಗಿದೆ.
----------------
2. ಅಡಿಕೆ ಧಾರಣೆ ಇತ್ತೀಚಿನ ದಿನಗಳಲ್ಲಿ ಚೇತರಿಕೆ ಕಾಣುತ್ತಿದ್ದು, ಪ್ರತಿ ಕ್ವಿಂಟಲ್ಗೆ 47 ಸಾವಿರ ರೂಪಾಯಿ ಗಡಿ ದಾಟಿದೆ. ಅಕ್ಟೋಬರ್ನಲ್ಲಿ ಅಡಿಕೆ ಧಾರಣೆ 53 ಸಾವಿರ ದಾಟಿತ್ತು. ಭೂತಾನ್ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ ಬೆನ್ನಲ್ಲೇ ಡಿಸೆಂಬರ್ನಲ್ಲಿ 39 ಸಾವಿರಕ್ಕೆ ಕುಸಿದಿತ್ತು. ವಾರದಿಂದ ಅಡಿಕೆ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಿದೆ. ಡಿಸೆಂಬರ್ನಲ್ಲಿ ಅಡಿಕೆ ಧಾರಣೆ ಕುಸಿದಾಗ, ಜನವರಿಯಲ್ಲಿ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
----------------
3. ಕೃಷಿ ಇಲಾಖೆಯ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ರೈತ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿ 31 ರಂದು ಕೃಷಿ ಇಲಾಖೆಯ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. ದೇಶದಲ್ಲಿಯೇ ಪ್ರಥಮ ಬಾರಿಗೆ ರೈತರಿಗೆ ಉಚಿತ ಡೀಸೆಲ್ ಇಂಧನ ವಿತರಿಸುವ ರೈತ ಶಕ್ತಿ ಯೋಜನೆ ಇದಾಗಿದೆ. ಕೃಷಿ ವಿಶ್ವವಿದ್ಯಾಲಯದ ಆಡಳಿತ ಸಭಾಭವನದ ಸಭಾಂಗಣದಲ್ಲಿ ಈ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಅವರು ಮಾತನಾಡಿದರು. ಜ.31 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷಿ ಇಲಾಖೆಯ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ಹಾಗೂ ಕೃಷಿ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ರೈತ ಮಕ್ಕಳಿಗೆ ನೀಡುವ ರೈತನಿಧಿ ವಿದ್ಯಾರ್ಥಿ ವೇತನವನ್ನು ರೈತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು. ಅಲ್ಲದೇ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಸಾವಯವ ಕೃಷಿ ನೈಸರ್ಗಿಕ ಕೃಷಿ ಕುರಿತು ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಕೃಷಿ ಯಂತ್ರೋಪಕರಣಗಳ ವಿತರಣೆ ಸಹ ನಡೆಯಲಿದೆ ಎಂದಿದ್ದಾರೆ. ರೈತ ಶಕ್ತಿ ಯೋಜನೆಯಡಿ ಪ್ರತಿ ಎಕರೆಗೆ ರೂ.250 ಗಳಂತೆ ಗರಿಷ್ಠ 5 ಎಕರೆಗೆ ರೂ.1250 ಗಳನ್ನು ರೈತರ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುವುದು. ಈಗಾಗಲೇ ಕಿಸಾನ್ ಸಮ್ಮಾನ್ ಯೋಜನೆಗೆ ಫ್ರುಟ್ಸ್ ವೆಬ್ ಸೈಟ್ ಮೂಲಕ ರೈತರ ನೋಂದಣಿ ಗುರುತಿನ ಸಂಖ್ಯೆ ಬಳಸಿ ತಂತ್ರಾಂಶದ ಮೂಲಕ ಇದನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಕೃಷಿ ಭೂಮಿಯ ವಿಸ್ತೀರ್ಣದ ಆಧಾರದಲ್ಲಿ ರೈತರ ಖಾತೆಗೆ ಸಹಾಯಧನ ವರ್ಗಾವಣೆಯಾಗಲಿದೆ.
----------------
ಲಂಡನ್ ವಿ.ವಿ ಪದವಿ ಪ್ರದಾನ ಸಮಾರಂಭದಲ್ಲಿ ಹಾರಿತು ಕನ್ನಡದ ಬಾವುಟ
----------------
4. ಎಸ್.ಎಲ್ ಭೈರಪ್ಪ, ಸುಧಾ ಮೂರ್ತಿ ಹಾಗೂ ಎಸ್.ಎಂ ಕೃಷ್ಣ ಸೇರಿ ಎಂಟು ಜನ ಕನ್ನಡಿಗರು ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಸೇರಿ ಆರು ಜನ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಹಾಗೂ ಇನ್ಫೋಸಿಸ್ ಫೌಂಡೇಷನ್ನ ಅಧ್ಯಕ್ಷೆ ಸುಧಾಮೂರ್ತಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಕರ್ನಾಟಕದ ಐವರು ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಡಾ. ಖಾದರ್ ವಲ್ಲಿ ದುಡೆ ಕುಲ್ಲಾ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ, ತಮಟೆಯ ತಂದೆಯೆಂದು ಪ್ರಖ್ಯಾತರಾದ ಚಿಕ್ಕಬಳ್ಳಾಪುರದ ಪಿಂಡಿ ಪಾಪನಹಳ್ಳಿ ಮುನಿವೆಂಕಟಪ್ಪ, ಬೀದರ್ನ ಕಲಾವಿದ ಷಾ ರಶೀದ್ ಅಹ್ಮದ್ ಖಾದ್ರಿ, ಪುರಾತತ್ವ ಶಾಸ್ತ್ರಜ್ಞ ಎಸ್.ಸುಬ್ಬರಾಮನ್ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ ಸಾಧಕರು.
----------------
5. ಹಾವೇರಿಯ ಹಿರೇಕೆರೂರು ತಾಲ್ಲೂಕಿನ 109 ಗ್ರಾಮಗಳಿಗೆ 335 ಕೋಟಿ ರೂ.ಗಳ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರಾಣೆಬೆನ್ನೂರಿನ ಹೊರವಲಯದಲ್ಲಿ ಮೆಗಾ ಎಪಿಎಂಸಿಗಾಗಿ 100 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಜಲಜೀವನ್ ಮಿಷನ್ ಅಡಿ ಹಿರೇಕೆರೂರು ತಾಲ್ಲೂಕಿನ 109 ಗ್ರಾಮಗಳಿಗೆ 335 ಕೋಟಿ ರೂ.ಗಳ ಯೋಜನೆಗೆ ಅಡಿಗಲ್ಲು ಹಾಕಿದ್ದೇವೆ. 196 ಕೋಟಿ ರೂ.ಗಳ ವೆಚ್ಚದಲ್ಲಿ ಹಿರೇಕೆರೂರು- ರಟ್ಟಿಹಳ್ಳಿ ಭಾಗದಲ್ಲಿ ಪ್ರತಿ ಮನೆಗೆ ನೀರು ಒದಗಿಸಲು ಶಂಕುಸ್ಥಾಪನೆ ನೆರವೇರಿದೆ. ಹಾವೇರಿ ಜಿಲ್ಲೆಯಲಿ ಸುಮಾರು 2,500 ಕೋಟಿ ರೂ.ಗಳ ಜಲಜೀವನ್ ಮಿಷನ್ ಯೋಜನೆಗೆ ಅನುದಾನ ನೀಡಿ ಕೆಲಸ ಪ್ರಾರಂಭವಾಗಿದೆ ಎಂದರು.
----------------
ಮಹದಾಯಿ ಯೋಜನೆಗೆ ವಿರೋಧ: ಗೋವಾದಲ್ಲಿ ನಿರ್ಣಯ
6. ಕರ್ನಾಟಕದ ಹಿರಿಮೆ ಮತ್ತು ಅಸ್ಮಿತೆಯನ್ನು ಬಿಂಬಿಸುವ ನಾರಿ ಶಕ್ತಿ ಸ್ತಬ್ಧಚಿತ್ರ ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವದಂದು ವಿಜೃಂಭಿಸಿತು. ಜನ
ಸಾಮಾನ್ಯರ ಸಾಧನೆಯ ಪ್ರತೀಕವಾಗಿರುವ ಈ ಸ್ತಬ್ಧಚಿತ್ರ ಅತ್ಯಂತ ಕಡಿಮೆ ಅವಧಿಯಲ್ಲಿ ಸಿದ್ಧಗೊಂಡಿದೆ. ಈ ಮೂಲಕ ಸತತ 14 ವರ್ಷಗಳಿಂದ ಪಥಸಂಚಲನದಲ್ಲಿ ಪಾಲ್ಗೊಂಡ ದೇಶದ ಏಕೈಕ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಕರ್ನಾಟಕದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡುವ ವಿಚಾರವಾಗಿ ಹಲವು ವಿವಾದಗಳು ತಲೆದೂರಿದ್ದವು. ಕೇಂದ್ರ ಸರ್ಕಾರವು ಕರ್ನಾಟಕದ ಸ್ತಬ್ಧಚಿತ್ರವನ್ನು ಮೊದಲು ಕೈಬಿಟ್ಟಿತ್ತು. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಜನರಿಂದ ತೀವ್ರವಾದ ವಿರೋಧ ವ್ಯಕ್ತವಾಗಿತ್ತು. ಅದಾದ ನಂತರ ಪುನಃ ಕೊನೆಯ ಕ್ಷಣದಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ಕಲ್ಪಿಸಲಾಯಿತು.
--------------
7. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 38.37 ಲಕ್ಷ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡುವಂತೆ ಕೇಳಿದ್ದಾರೆ. ರಾಜ್ಯದಲ್ಲಿ ಪೌಷ್ಟಿಕಾಂಶದ ಕೊರತೆ ನೀಗಿಸಲು ಶಿಕ್ಷಣ ಇಲಾಖೆಯು 1ರಿಂದ 8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ, ಚಿಕ್ಕಿ ಅಥವಾ ಬಾಳೆ ಹಣ್ಣು ನೀಡುತ್ತಿದೆ. ಮಕ್ಕಳ ಬೇಡಿಕೆಗೆ ಅನುಗುಣವಾಗಿ ಮೂರು ಪದಾರ್ಥಗಳಲ್ಲಿ ಅವರು ಬಯಸಿದ್ದನ್ನು ನೀಡಲು ಎಲ್ಲ ಶಾಲೆಗಳಿಗೂ ಸೂಚಿಸಲಾಗಿದೆ. ವಿದ್ಯಾರ್ಥಿಗಳ ಬೇಡಿಕೆ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿದ್ದು, 47.97 ಲಕ್ಷ ಮಕ್ಕಳಲ್ಲಿ ಶೇ 79.98 ಮಕ್ಕಳು ಬೇಯಿಸಿದ ಮೊಟ್ಟೆಗೆ ಬೇಡಿಕೆ ಸಲ್ಲಿಸಿದ್ದಾರೆ. 2.27 ಲಕ್ಷ ಮಕ್ಕಳು ಚಿಕ್ಕಿ ಅಥವಾ ಬಾಳೆಹಣ್ಣು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಬೆಳಗಾವಿ, ಬೆಂಗಳೂರು, ಕಲಬುರಗಿ ಹಾಗೂ ಮೈಸೂರು ವಿಭಾಗದಲ್ಲಿ ಮೊಟ್ಟೆಗೆ ಹೆಚ್ಚಿನ ಬೇಡಿಕೆ ಬಂದಿದೆ.
----------------
8. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಗುರುವಾರ ಹಾಗೂ ಶುಕ್ರವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಭಾಗ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಮೈಸೂರು, ದಾವಣಗೆರೆ, ಚಾಮರಾಜನಗರ, ಮಂಡ್ಯ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಗುಡುಗಿನಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ಕನಿಷ್ಠ ಉಷ್ಣಾಂಶವು 2ರಿಂದ 3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಗಳಿವೆ. ಆದರೆ, ಮೀನುಗಾರರಿಗೆ ಯಾವುದೇ ಮುನ್ನೆಚ್ಚರಿಕೆ ನೀಡಿಲ್ಲ. ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಹಾಗೂ ಮೋಡ ಮುಸುಕಿದ ವಾತಾವರಣ ಇರಲಿದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಉಳಿದಂತೆ ಬುಧವಾರ ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ 12.2 ಡಿಗ್ರಿ ಸೆಲ್ಸಿಯಸ್ ಮೈಸೂರಿನಲ್ಲಿ ದಾಖಲಾಗಿದೆ. ಸುಂಟಿಕೊಪ್ಪ, ಕೊಪ್ಪ, ಮಡಿಕೇರಿಯಲ್ಲಿ ತಲಾ ಮೂರು ಸೆಂ.ಮೀ ಮಳೆ ಆಗಿದೆ. ಪೊನ್ನಂಪೇಟೆ, ವಿರಾಜಪೇಟೆ, ಸೋಮವಾರ ಪೇಟೆ, ಗೋಣೆಕೊಪ್ಪ ಹಾಗೂ ಮೈಸೂರು ಸೇರಿದಂತೆ ವಿವಿಧೆಡೆ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
----------------
9. ದೇಶದಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಸರ್ಚ್ ಇಂಜಿನ್ ಗೂಗಲ್ ವಿಶೇಷ ಡೂಡಲ್ ರಚಿಸಿ ಭಾರತೀಯರಿಗೆ ಶುಭಾಶಯ ಕೋರಿದೆ. ಗುಜರಾತ್ನ ಅಹಮದಾಬಾದ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ಅವರು, ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಚಿಸಿದ ಕಾಗದದ ಕಲಾಕೃತಿಯ ವಿಡಿಯೋವನ್ನು ಗೂಗಲ್ ಹಂಚಿಕೊಂಡಿದೆ. ಗೂಗಲ್ ತನ್ನ ಮುಖಪುಟದಲ್ಲಿ ಹಂಚಿಕೊಂಡ ಕಲಾಕೃತಿಯನ್ನು ಕೈಗಳಿಂದ ಕತ್ತರಿಸಿದ ಕಾಗದದಿಂದ ರಚಿಸಲಾಗಿದೆ. ಇದರಲ್ಲಿ ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಸಿಆರ್ಎಫ್ಪಿ ಕವಾಯತು ತಂಡ ಸೇರಿದಂತೆ ಗಣರಾಜ್ಯೋತ್ಸವದ ಪರೇಡ್ನ ಹಲವು ಅಂಶಗಳು ಸೇರಿವೆ.
----------------
10. ಪಾಕಿಸ್ತಾನದಲ್ಲಿ ಹಣದುಬ್ಬರ ತೀವ್ರವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿದೆ. ಇದರಿಂದ ಅಲ್ಲಿನ ಜನ ನಿತ್ಯ ಬಳಕೆಯ ವಸ್ತುಗಳಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ತೀವ್ರವಾಗಿ ಗೋಧಿ ಕೊರತೆ ಎದುರಾಗಿದೆ. ಗೋಧಿ ಬೆಲೆ ಜನಸಾಮಾನ್ಯರ ಬದುಕನ್ನು ಅಸ್ತವ್ಯಸ್ತಗೊಳಿಸಿದ್ದು, ಸರ್ಕಾರದ ಸಬ್ಸಿಡಿ ಗೋಧಿಯನ್ನು ಖರೀದಿಸಲು ಪ್ರತಿ ಅಂಗಡಿಯಲ್ಲೂ ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ವಾರ ಪಾಕಿಸ್ತಾನದಲ್ಲಿ ಗೋಧಿಯ ಮಾರುಕಟ್ಟೆ ಬೆಲೆ ಕೆಜಿಗೆ 145 ರಿಂದ 160 ರೂಗೂ ಹೆಚ್ಚಾಗಿದೆ. ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳು ಗೋಧಿಯ ಪ್ರಮುಖ ಉತ್ಪಾದಕ ಸ್ಥಳಗಳಾಗಿವೆ. ಇಲ್ಲಿಯೂ ಬೆಲೆ ಹೆಚ್ಚಳವಾಗಿದೆ. ಖೈಬರ್ ಪಶ್ತೂನ್ ಪ್ರದೇಶ ಮತ್ತು ಬಲೂಚಿಸ್ತಾನದಲ್ಲಿ ಗೋಧಿ ಬೆಲೆ ಗಗನಕ್ಕೇರಿದೆ. ಗೋಧಿಯಿಂದ ತಯಾರಿಸಿದ ಆಹಾರ ಪದಾರ್ಥಗಳ ಬೆಲೆಯೂ ಏರಿಕೆ ಕಂಡಿದೆ.
----------------
Share your comments