ರಾಜ್ಯದಲ್ಲಿ ಮಂಗಳವಾರ ಕೆಲವು ಕಡೆ ಅಕಾಲಿಕ ಮಳೆ ಸುರಿದು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತಂಪೆರಿದಿದೆ. ಗುಡುಗು ಮಿಂಚಿನ ಮಳೆಯಾಗಿದೆ. ಇಂದು ದಕ್ಷಿಣ ಹಾಗೂ ಮಲೆನಾಡಿನ ಐದು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಏಪ್ರೀಲ್ 21 ರಂದು (ಬುಧವಾರ) ಮಳೆಯಾಗುವ ನಿರೀಕ್ಷೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ಐದು ದಿನ ಮುಂದುವರೆಯಲಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗಾಳಿ ಒತ್ತಡ ಕಡಿಮೆಯಾಗಿರುವ ಪರಿಣಾಮ ತೇವಾಂಶ ಭರಿತ ಮೋಡಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಯಾಗುತ್ತಿದೆ. ಉಳಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಪ್ರೀಲ್ 25 ರವರೆಗೆ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳ ಕಾಲ ಮೋಡಕವಿದ ವಾತಾವರಣ ಇರಲಿದ್ದು, ದಕ್ಷಿಣ ಒಳನಾಡಿ ವಿವಿಧೆಡೆ ಅಲ್ಲಲ್ಲಿ ಚದುರಿದಂತೆ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ವಿವಿಧೆಡೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ.
ಮಂಗಳವಾರ ರಾಜ್ಯ ಕೆಲ ಭಾಗಗಳಲ್ಲಿ ಮಳೆ ಅಬ್ಬರ ಜೋರಾಗಿತ್ತು. ದಕ್ಷಿಣ ಕನ್ನಡದಲ್ಲಿ 70 ಮಿಮೀ, ಉಡುಪಿಯಲ್ಲಿ 66 ಮಿಮೀ, ರಾಮನಗರದಲ್ಲಿ 62 ಮಿಮೀ, ಶಿವಮೊಗ್ಗದಲ್ಲಿ 49 ಮಿಮೀ, ತುಮಕೂರಿನಲ್ಲಿ 25 ಮಿಮೀ, ಚಿಕ್ಕಮಗಳೂರಿನಲ್ಲಿ 35 ಮಿಮೀ, ದಾರವಾಡದಲ್ಲಿ 35 ಮಿಮೀ, ದಾವಣಗೆರೆಯಲ್ಲಿ 15 ಮಿಮೀ ಮಳೆಯಾಗಿದೆ.
Share your comments