1. ಪಶುಸಂಗೋಪನೆ

ಗೋಕೃಪಾಮೃತ ಜಲ ತಯಾರಾಗಿದ್ದು ಎಲ್ಲಿ, ಹೇಗೆ; ತಯಾರಿಸಿದ್ದು ಯಾರು ಗೊತ್ತಾ?

ಬನ್ಸಿ ಗಿರ್ ಗೋಶಾಲೆಯ ಗಿರ್ ಹಸುವಿನ ಜೊತೆ ಗೋಪಾಲ್ಭಾಯ್ ಸುತಾರಿಯ

ಸಾವಯವ ಕೃಷಿ, ಇದೊಂದು ಸನಾತನ ಕೃಷಿ ಪದ್ಧತಿ. ಮಾನವ ಆಹಾರಕ್ಕಾಗಿ ಉಳುಮೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡ ದಿನದಿಂದಲೂ ಈ ಪದ್ಧತಿ ಜಾರಿಯಲ್ಲಿದೆ. ನಿಸರ್ಗದೊಂದಿಗೆ ಬೆರೆತಿದ್ದ ಮನುಷ್ಯ. ಅದು ನೀಡುವ ಗಾಳಿ, ಬೆಳಕು, ನೀರನ್ನು ಬಳಸಿಕೊಂಡು ಗೆಡ್ಡೆ-ಗೆಣಸು, ಆಹಾರ ಧಾನ್ಯಗಳನ್ನು ಬೆಳೆಯಲು ಆರಂಭಿಸಿದ್ದ. ದಿನಗಳು ಉರುಳಿದಂತೆ ಅದೇ ನಿಸರ್ಗದ ಮಡಿಲಲ್ಲಿ ದೊರೆಯುವ ಎಲೆ, ಚೆಕ್ಕೆಗಳನ್ನು ಕೊಳೆಸಿ ಅದನ್ನು ತನ್ನ ಜಮೀನಿಗೆ ಹಾಕಿದ. ಅದಕ್ಕೆ ‘ಗೊಬ್ಬರ’ ಎಂಬ ಹೆಸರಿಟ್ಟ. ಬಳಿಕ ಜಾನುವಾರುಗಳನ್ನು ಸಾಕಿ, ಅವುಗಳ ಸಗಣಿಯನ್ನೂ ಗೊಬ್ಬರವಾಗಿ ಬಳಸಿಕೊಂಡ. ಹೀಗೆ ವಿಕಸನ ಹೊಂದುತ್ತಾ ಬಂದಿರುವುದೇ ಸಾವಯವ ಕೃಷಿ ಪಯಣ.

ಸಹ್ರಾರು ವರ್ಷಗಳ ಇತಿಹಾಸವಿರುವ ಈ ಸನಾತನ ಸಾವಯವ ಕೃಷಿ ಇಂದು ಹೊಸದೊಂದು ರೂಪವನನ್ನೇ ಪಡೆದಿದೆ. ದನಕರುಗಳ ಮೂತ್ರ, ಸಗಣಿ ಮಾತ್ರವಲ್ಲ ಅವುಗಳ ಮೈತೊಳೆದಾಗ ಹರಿದು ಪೋಲಾಗುವ ನೀರನ್ನೂ ಸಂಗ್ರಹಿಸುವ ಕೃಷಿಕರು ಅದನ್ನು ಪೋಷಕಾಂಶಗಳ ರೂಪದಲ್ಲಿ ತಮ್ಮ ಬೆಳೆಗಳಿಗೆ ಹಾಕುತ್ತಾರೆ. ಇದರೊಂದಿಗೆ ಪ್ರಕೃತಿದತ್ತವಾಗಿ ಬೆಳೆದ ಗಿಡಮರಗಳು ಚಳಿಗಾಲದಲ್ಲಿ ಉದುರಿಸುವ ಎಲೆ, ಮರದ ಚೆಕ್ಕೆ-ತೊಗಟೆ, ಕೊಳೆತ ರೆಂಬೆ-ಕೊಂಬೆಗಳು, ಮರದ ದಿನ್ನೆಗಳು, ಮರ ಕೊರೆದಾಗ ಸಿಗುವ ಮರದ ಪುಡಿ (ವುಡ್ ಪೌಡರ್), ಕಾಡಲ್ಲಿ ಬೆಳೆಯುವ ಹಸಿರೆಲೆ ಗಿಡಗಳು, ನಾನಾ ಮರಗಳ ಹಸಿರು ಎಲೆ, ಸೊಪ್ಪು ಇವೆಲ್ಲವನ್ನೂ ಬಳಸಿಕೊಂಡು, ಗೊಬ್ಬರ, ಕೀಟನಾಶಕ ದ್ರಾವಣ ಸಿದ್ಧಪಡಿಸಿಕೊಂಡು ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳಿಗೆ ಸಿಂಪಡಿಸುವ ಮುಲಕ ಆರೋಗ್ಯಕರ ಕೃಷಿ ಪದ್ಧತಿ ಅನುಸರಿಸಿ ಅನುಕರಣೀಯರು ಎಂದೆನಿಸಿದ್ದಾರೆ.

ಇತ್ತೀಚೆಗಂತೂ ಸಾವಯವ ಕೃಷಿಯಲ್ಲಿ ‘ಗೋಕೃಪಾಮೃತ ಜಲ’ ಎಂಬ ಭೂಲೋಕದ ಅಮೃತ (ಕೃಷಿಗೆ ಸಂಬಂಧಿಸಿದಂತೆ) ದೊಡ್ಡ ಮಟ್ಟದಲ್ಲಿ ಕ್ರಾಂತಿಯಯನ್ನೇ ಮಾಡುತ್ತಿದೆ. ಅದು, ಸದ್ದಿಲ್ಲದ ನಿಶ್ಶಬ್ಧ ಕ್ರಾಂತಿ. ಗ್ರಾಮೀಣ ಭಾರತದ ಬಹಳಷ್ಟು ರೈತರು ಇಂದು ತಮ್ಮ ಬೆಳೆಗಳಿಗೆ ಗೋಕೃಪಾಮೃತ ಜಲ ಬಳಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಕೃಷಿಕರ ಪಾಲಿಗೆ ಹೊಸ ಆಶಾಕಕಿರಣವಾಗಿರುವ ಗೋಕೃಪಾಂಮೃತ ಜಲ ಕುರಿತ ಅಪರೂಪದ ಮಾಹಿತಿಯನ್ನು ನಿಮಗಾಗಿ ‘ಕೃಷಿ ಜಾಗರಣ’ ಹೊತ್ತು ತಂದಿದೆ.

ಗೋಕೃಪಾಮೃತ ಎಂಬ ವರ

ಗೋಕೃಪಾಮೃತ ಜಲವು ಸುಮಾರು 60 ವಿಧದ ಜೀವಾಣುಗಳ ಆಕರವಾಗಿದ್ದು, ಬೆಳೆಗಳನ್ನು ಕಾಡುವ ವಿವಿಧ ಕೀಟ ಬಾಧೆ ಹಾಗೂ ಕಂಡರಿಯದ ಹಲವು ರೋಗಗಳ ಹುಟ್ಟಡಗಿಸುವ ಕ್ರಿಮಿ ನಾಶಕದಂತೆ ಕೆಲಸ ಮಾಡುತ್ತದೆ. ನೆಲಕ್ಕೆ ಬಿದ್ದ ಬಳಿಕ ಮಣ್ಣಿನ ಫಲವತ್ತತೆಯನ್ನು ದುಪ್ಪಟ್ಟು, ಮೂರು ಪಟ್ಟು ಹೆಚ್ಚಿಸುವ ಈ ಅಮೃತವು, ಯೂರಿಯಾ, ಪೊಟ್ಯಾಶ್, ಡಿಎಪಿ, ಸಲ್ಫರ್, ರಂಜಕ, ಸಾರಜನಕ ಮತ್ತಿತರ ರಾಸಾಯನಿಕ ಗೊಬ್ಬರಗಳಿಗಿಂತಲೂ ವಿಗಿಲಾಗಿರುವ ಸರ್ವಶ್ರೇಷ್ಠ ಸಾವಯವ ಗೊಬ್ಬರವಾಗಿ ಕೆಲಸ ಮಾಡುತ್ತದೆ. ಇದರೊಂದಿಗೆ ಅತ್ಯುತ್ತಮ ಡಿ-ಕಂಪೋಸರ್, ಬೆಳೆ ವರ್ಧಕವಾಗಿ ಕಾರ್ಯನಿರ್ವಹಿಸುವ ಗೋಕೃಪಾಮೃತ ಜಲ, ಕೃಷಿ ಭೂಮಿಯಲ್ಲಿ ಎರೆ ಹುಳುಗಳ ಸಂತತಿ ಹೆಚ್ಚಿಸುವಲ್ಲಿ ಬಹುಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಇದನ್ನು ನಿರಂತರವಾಗಿ ಬಳಸಿದಾಗ ಕೃಷಿ ಭೂಮಿ ಮೃದುವಾಗಿ ಸಾಕಷ್ಟು ಪ್ರಮಾಣದ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ.

ಸುತಾರಿಯ ಅವರ ಶ್ರಮದ ಫಲ

ಗಜರಾತ್‌ನ ಪ್ರಗತಿಪರ ರೈತ, ಗಿರ್ ತಳಿಯ ಹಸುಗಳ ಸಂರಕ್ಷಣೆಯಲ್ಲಿ ನಿರತರಾಗಿರುವ ಹಾಗೂ ಬನ್ಸಿ ಗಿರ್ ಗೋಶಾಲೆಯ ಸಂಸ್ಥಾಪಕರಾಗಿರುವ ಗೋಪಾಲ್‌ಭಾಯ್ ಸುತಾರಿಯ ಅವರು ವರ್ಷಗಟ್ಟಲೆ ಶ್ರಮವಹಿಸಿ ಗೋಕೃಪಾಮೃತ (ಗೋ ಕೃಪಾ ಅಮೃತ) ಜಲವನ್ನು ಕಂಡುಹಿಡಿದು ರೈತ ಸಮುದಾಯಕ್ಕೆ ಅರ್ಪಿಸಿದ್ದಾರೆ. ಅವರ ಗೋಶಾಲೆಯಲ್ಲಿ ಗಿರ್ ಹಸುವೊಂದು ಆಗಷ್ಟೇ ಕರು ಹಾಕಿತ್ತು. ಆ ಹಸುಹೆರಿಗೆ ಬಳಿಕ ಹಾಕಿದ ಮೊದಲ ಸಗಣಿಯನ್ನು ನೆಲಕ್ಕೆ ಬೀಳದಂತೆ ಹಿಡಿದ ಸುತಾರಿಯ ಅವರು, ಆ ಸಗಣಿಯ ಮೇಲೆ ಮೂರು ತಿಂಗಳ ಕಾಲ ವಿವಿಧ ಹಂತಗಳಲ್ಲಿ ಪ್ರಯೋಗಗಳನ್ನು ನಡೆಸಿದರು. ಬಳಿಕ ಆ ಸಗಣಿಯಲ್ಲಿದ್ದ ಬಹುಪಯುಕ್ತ ಹಾಗೂ ಕೃಷಿ ಚಟುವಟಿಕೆಗೆ ಉಪಯುಕ್ತವಾಗಿರುವ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಪೂರಕವಾಗಿರುವ ಜೀವಾಣುಗಳನ್ನು (ಬ್ಯಾಕ್ಟೀರಿಯಾ) ಬೇರ್ಪಡಿಸಿ, ಸಂಗ್ರಹಿಸಿ ಗೋಕೃಪಾಮೃತ ಜಲ ತಯಾರಿಸಿದ್ದಾರೆ.

ಗಿರ್ ಹಸುವಿನ ಸಗಣಿ, ಗೋಮೂತ್ರ, ಗೋವಿನ ಹಾಲು, ಗೋವಿನ ಮೊಸರು, ಹಾಗೂ ಗೋವಿನ ತುಪ್ಪ (ಪಂಚಗವ್ಯ) ಹಾಗೂ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ ಸಿದ್ಧಪಡಿಸಿದ ಗೋಕೃಪಾಮೃತವನ್ನು ತಯಾರಿಸಿದ ಸುತಾರಿಯ ಅವರು, ಮೊದಲು ತಮ್ಮ ಈ ಅನ್ವೇಷಣೆಗೆ ಸರ್ಕಾರದಿಂದ ಪೇಟೆಂಟ್ ಪಡೆದು, ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಗೋಪಾಲ್‌ಭಾಯ್ ಸುತಾರಿಯ ಅವರು ರೈತರಿಗೆ ಉಪಯೋಗವಾಗುವ ಗೋಕೃಪಾಮೃತ ಕಂಡುಹಿಡಿದಿರುವುದನ್ನು ತಿಳಿದ ಮಹಾರಾಷ್ಟçದ ಕೊಲ್ಲಾಪುರ ಜಿಲ್ಲೆ, ಕರವೀರ ತಾಲೂಕಿನ ಕನೇರಿ ಸಿದ್ಧಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು, ಒಮ್ಮೆ ಗೋಪಾಲ್‌ಭಾಯ್ ಅವರನ್ನು ಭೇಟಿಯಾಗಿ, ಗೋವಿನಿಂದ ಸೃಜಿಸಿರುವ ಈ ಕೃಪಾಮೃತವನ್ನು ಹಣಕ್ಕಾಗಿ ಮಾರಾಟ ಮಾಡುವ ಬದಲು ರೈತರಿಗೆ ಉಚಿತವಾಗಿ ವಿತರಿಸುವಂತೆ ಸಲಹೆ ನೀಡಿದರು. ಅಂದಿ ನಿಂದ ಇಡೀ ದೇಶದಾದ್ಯಯಂತ ‘ಗೋ ಕೃಪಾ ಅಮೃತ ಜಲ’ವು ಉಚಿತವಾಗಿ ವಿತರಿಸಲ್ಪಡುತ್ತಿದೆ.

ಮೊದಲೇ ಹೇಳಿದಂತೆ ಗೋಕೃಪಾಮೃತದಲ್ಲಿ ಸುಮಾರು 60ಕ್ಕೂ ಹೆಚ್ಚು ವಿಧದ ಜೀವಾಣುಗಳಿದ್ದು, ಇದನ್ನು ಬೆಳೆಗೆ ಹಾಕುವುದರಿಂದ ಬೆಳೆ ಅಭಿವೃದ್ಧಿ ಹೊಂದುವುದಲ್ಲದೆ, ಭೂಮಿಯ ಫಲವತ್ತತೆ ಹೆಚ್ಚಳ, ಎರೆ ಹುಳುಗಳ ವೃದ್ಧಿ, ಕೀಟ ಬಾಧೆ, ರೋಗಗಳ ನಿಯಂತ್ರಣ ಸೇರಿ ಹತ್ತು ಹಲವು ಪ್ರಯೋಜನಗಳನ್ನು ರೈತರು ಪಡೆಯಬಹುದು. ಹಾಗಾದರೆ ನಿಮ್ಮ ಮನೆಯಲ್ಲಿ ಅಥವಾ ಕೃಷಿ ಭೂಮಿಯಲ್ಲಿ ಗೋಕೃಪಾಮೃತ ತಯಾರಿಸಲು ನೀವು ಮಾಡಬಬೇಕಾದ್ದು ಇಷ್ಟೇ, ನಿಮ್ಮ ಗ್ರಾಮ ಇಲ್ಲವೇ ಸಮೀಪದ ಗ್ರಾಮಗಳಲ್ಲಿ ಗೋಕೃಪಾಮೃತ ಜಲ ಸಿದ್ಧಪಡಿಸಿ ಬಳಸುತ್ತಿರುವ ರೈತರನ್ನು ಗುರುತಿಸಿ, ಅವರಿಂದ ಒಂದು ಲೀಟರ್ ಸಿದ್ಧ ಗೋಕೃಪಪಾಮೃತ ಜಲ ಪಡೆಯಿರಿ. ಬಳಿಕ ಅದನ್ನು ಮನೆಗೆ ತಂದು ಸೂಕ್ತ ವಿಧಾನ ಅನುಸರಿಸಿ 200 ಲೀಟರ್ ಗೋಕೃಪಾಮೃತ ಜಲ ಸಿದ್ಧಪಡಿಸಿ ಬೆಳೆಗೆ ಬಳಸಿ.

ಶುದ್ಧ ದೇಸಿ ಹಸುವಿನ ತಾಜಾ ಮಜ್ಜಿಗೆ, ಸಾವಯವ ಬೆಲ್ಲ ಹಾಗೂ ಒಂದು ಲೀಟರ್ ಸಿದ್ಧ ಗೋಕೃಪಾಮೃತ ಜಲ ಬೆರೆಸಿ, ಐದು ದಿನಗಳ ಕಾಲ ಡ್ರಮ್‌ನಲ್ಲಿ ಶೇಖರಿಸಿ ತಯಾರಿಸಿದ 200 ಲೀಟರ್ ಗೋಕೃಪಾಮೃತ ಜಲದಲ್ಲಿ 40,000 ಲೀಟರ್ ಗೋಕೃಪಾಮೃತ ಸಿದ್ಧಪಡಿಸಬಹುದು (ಒಂದು ಲೀಟರ್ ಸಿದ್ಧ ಗೋಕೃಪಾಮೃತದಿಂದ 200 ಲೀಟರ್‌ನಂತೆ). ಆದ್ದರಿಂದ ರೈತರು ಸಿದ್ಧಪಡಿಸಿದ ಗೋಕೃಪಾಮೃತವನ್ನು ತಮ್ಮ ಸಮೀಪದ ಆಸಕ್ತ ರೈತರಿಗೂ ಉಚಿತವಾಗಿ ನೀಡುವುದನ್ನು ಮರೆಯಬಾರದು ಎಂಬುದು ಗೋಪಾಲ್‌ಭಾಯ್ ಸುತಾರಿಯ ಅವರ ಮನವಿ.

Published On: 20 June 2021, 11:11 PM English Summary: the origin of gokrupamritha jala

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.