1. ಪಶುಸಂಗೋಪನೆ

ಮನೆಯ ಅಗತ್ಯಕ್ಕಾಗಿ ಹಸು ಖರೀದಿಸಬೇಕೆ ಅಥವಾ ವಾಣಿಜ್ಯಕ್ಕಾಗಿ ಎಂಬುದನ್ನು ನಿರ್ಧರಿಸಿ ಹೈನುಗಾರಿಕೆ ಮಾಡಿ; ಇಲ್ಲಿವೆ ಉಪಯುಕ್ತ ಸಲಹೆಗಳು

animal husbandry

ಈಗ ಬಹಳಷ್ಟು ಜನ ಹಸು ಸಾಕಣೆ ಮಾಡಲು ಮುಂದೆ ಬರುತ್ತಿದ್ದಾರೆ. ಅದರಲ್ಲೂ ಕೊರೊನಾ ಲಾಕ್‌ಡೌನ್ ಇರುವ ಕಾರಣ ಕಳೆದ ಒಂದು ವರ್ಷದಿಂದ ಡೈರಿ ಉದ್ಯಮಕ್ಕೆ ಲಗ್ಗೆ ಇಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ಉದ್ಯಮದ ಬಗ್ಗೆ ಸೂಕ್ತ ಮಾಹಿತಿ ಇಲ್ಲದ ಕಾರಣ ಹಲವರು ಎಡವುತ್ತಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಎಂತಹ ಹಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಬಹುತೇಕರಿಗೆ ಮಾಹಿತಿ ಇರುವುದಿಲ್ಲ.

ಹಸು ಖರೀದಿಸುವವರಲ್ಲಿ ಎರಡು ವಿಭಾಗಗಳಿವೆ. ಕೆಲವರು ವಾಣಿಜ್ಯ ಉದ್ದೇಶಕ್ಕಾಗಿ ಅಂದರೆ, ಹೈನುಗಾರಿಕೆಯನ್ನು ಒಂದು ಉದ್ಯೋಗ ಅಥವಾ ಉದ್ಯಮವಾಗಿ ಆರಂಭಿಸಲು ಹಸು ಕೊಂಡರೆ, ಇನ್ನೂ ಕೆಲವರು ಕೇವಲ ಮನೆಯಲ್ಲಿನ ಹಾಲು, ಮೊಸರಿನ ಅಗತ್ಯಕ್ಕಾಗಿ ಹಸುಗಳನ್ನು ಕೊಂಡುಕೊಳ್ಳುತ್ತಾರೆ. ಮನೆಯ ಅಗತ್ಯಕ್ಕೆ ಮಾತ್ರ ಕೊಳ್ಳುವುದಾದರೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಮನೆಯಲ್ಲಿ ದನಕರುಗಳನ್ನು ನೋಡಿಕೊಳ್ಳಲು ಜನರಿದ್ದಾರೆ ಎಂದಾದರೆ ಯಾವುದಾದರೂ ದೇಸಿ ತಳಿಯ, ಜವಾರಿ ಹಸುಗಳನ್ನು ಖರೀದಿಸಿದರೂ ಸಾಕು. ಹೈಬ್ರೀಡ್ ಅಥವಾ ಫಾರಂ ಹಸುಗಳ ನಿರ್ವಹಣೆಗೆ ಹೆಚ್ಚು ಸಮಯ ಬೇಕು. ಜೊತೆಗೆ ಅವುಗಳ ಆಹಾರ ಮತ್ತಿತರ ವೆಚ್ಚಕ್ಕೆ ಹಣವೂ ಖರ್ಚಾಗುತ್ತದೆ. ಹೀಗಾಗಿ ದಿನಕ್ಕೆ ನಾಲ್ಕು ಲೀಟರ್‌ನಷ್ಟು ಹಾಲು ನೀಡುವ ಸಾಮರ್ಥ್ಯ ಹೊಂದಿರುವ ಅಮೃತಮಹಲ್, ಹಳ್ಳಿಕಾರ್ ರೀತಿಯ ಹಸುಗಳ ಆಯ್ಕೆ ಸೂಕ್ತ.

ಆದರೆ ನೀವು ವಾಣಿಜ್ಯ ಉದ್ದೇಶಕ್ಕಾಗಿ ಹಸುಗಳನ್ನು ಖರೀದಿಸುತ್ತಿರುವಿರಿ ಎಂದಾದರೆ, ಆ ಕ್ಷಣಕ್ಕೆ ಸ್ವಲ್ಪ ಕಡಿಮೆ ಬೆಲೆಗೆ ಸಿಗುತ್ತಿವೆ ಎಂದು ಸಿಕ್ಕ ಸಿಕ್ಕ ಹಸುಗಳನನ್ನೆಲ್ಲಾ ಖರೀದಿಸುವ ಹುಂಬುತನ ತೋರಬೇಡಿ. ಡೈರಿ ಉದ್ಯಮದಲ್ಲಿ ಆತುರದ ಗುಣ ನಿಷಿದ್ಧ. ಹೀಗಾಗಿ ಹೈನುಗಾರಿಕೆ ಆರಂಭಿಸಲು ಬಯಸುವವರು ರಾಸುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬ ಕುರಿತು ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಡೈರಿಗಾಗಿ ತಳಿಗಳ ಆಯ್ಕೆ ಹಿಗಿರಲಿ

  • ಮೊದಲನೆಯದಾಗಿ ನಿಮ್ಮ ಊರಿನ ವಾತಾವರಣ, ಪರಿಸಿತ್ಥಿಗೆ ಹೊಂದಿಕೊಳ್ಳುವ ಹಸುವಿನ ತಳಿ ಆರಿಸಿ. ವಿದೇಶಿ ತಳಿಗಳು ಸೂಕ್ತ. ಆದರೆ, ಅವುಗಳು ನಿಮ್ಮ ವಾತಾವರಣಕ್ಕೆ ಹೊಂದಿಕೊಳ್ಳಬೇಕು.
  • ಹಸುವಿನ ತಳಿ ಗುಣ ಲಕ್ಷಣಗಳು ಹಾಗೂ ಹಾಲು ಉತ್ಪಾದನಾ ಕ್ಷಮತೆ ಆಧಾರದಲ್ಲಿ ಆಯ್ಕೆ ಮಾಡಿ.
  • ನೀವು ಹಾಲು ಮಾರಾಟ ಮಾಡಬೇಕೆಂದಿರುವ ಪ್ರದೇಶ, ಅಲ್ಲಿನ ಜನರ ಆಯ್ಕೆಯನ್ನು ಅಧ್ಯಯನ ಮಾಡಿ, ಗ್ರಾಹಕರ ಆಯ್ಕೆಗೆ ಪೂರಕವಾಗಿರುವ ಗುಣಮಟ್ಟದ ಹಾಲು ನೀಡುವ ಹಸು ತನ್ನಿ.
  • ಸಾಮಾನ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳನ್ನು ಹಸು ಖರೀದಿಗೆ ಸೂಕ್ತ ಸಮಯ ಎಂದು ಪರಿಗಣಿಸಲಾಗುತ್ತದೆ.
  • ಖಾಸಗಿ ಡೈರಿಗಳು ಇಲ್ಲವೇ ಕರ್ನಾಟಕ ಹಾಲು ಮಹಾಮಂಡಳಿಯ ಸಂಘಗಳಿಗೆ ಹಾಲು ಹಾಕುವುದಿದ್ದರೆ ಎಮ್ಮೆ ಹಾಗೂ ಹಸುವಿನ ಹಾಲನ್ನು ಪ್ರತ್ಯೇಕವಾಗಿ ಸರಬರಾಜು ಮಾಡಿ.
  • ಕೆಲವರು ವಿಶೇಷ ದೇಸಿ ತಳಿ ಹಸುಗಳ ಹಾಲಿಗೆ ಹೆಚ್ಚು ಬೇಡಿಕೆ ಇದೆ ಎಂದು ತಿಳಿದು ಅವುಗಳನ್ನು ಸಾಕಲು ಮುಂದಾಗುತ್ತಾರೆ. ಆದರೆ ಆ ಹಸುಗಳ ಹಾಲಿಗೆ ನಿಮ್ಮಲ್ಲಿ ಮಾರುಕಟ್ಟೆ ಇದೆಯೇ ಎಂದು ಮೊದಲು ತಿಳಿದುಕೊಂಡು, ನಂತರ ಅಂತಹ ಹಸು ಖರೀದಿಸಿ.
  • ಕೆಲ ಗ್ರಾಹಕರು ಕೊಬ್ಬಿನ ಅಂಶ ಕಡಿಮೆ ಇರುವ ಹಾಲು ಇಷ್ಟಪಡುತ್ತಾರೆ. ಮತ್ತೆ ಕೆಲವರು ಕೆನೆ ಸಂಗ್ರಹಿಸಿ ಹೆಚ್ಚು ಬೆಣ್ಣೆ ತೆಗೆಯುವ ಇರಾದೆ ಹೊಂದಿರುತ್ತಾರೆ. ಹೀಗಾಗಿ, ಮಿಶ್ರತಳಿ ಹಸು ಅಥವಾ ಎಮ್ಮೆಗಳನ್ನು ಸಾಕಿ.
  • ಹೋಟಲ್ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆ ಘಟಕಗಳಿಗೆ ಹಾಲು ಸರಬರಾಜು ಮಾಡುವ ಉದ್ದೇಶವಿದ್ದರೆ ಎಮ್ಮೆಗಳ ಡೈರಿ ಫಾರ್ಮ್ ಮಾಡಿಕೊಳ್ಳಿ.
  • ವಾಣಿಜ್ಯ ಉದ್ದೇಶದ ಡೈರಿ ಫಾರಂನಲ್ಲಿ ಕನಿಷ್ಠ 10 ಹಸುಗಳು ಇದ್ದರೆ ಉತ್ತಮ. ಭವಿಷ್ಯದಲ್ಲಿ ಹಾಲಿನ ಬೇಡಿಕೆ ಆಧರಿಸಿ ಇವುಗಳ ಸಂಖ್ಯೆ ಹೆಚ್ಚಿಸಬಹುದು.

ಹಸು ಹೇಗಿರಬೇಕು?

  • ಹೈನು ರಾಸುಗಳು ಐದನೆಯ ಕರುವಿನವರೆಗೆ ಹೆಚ್ಚು ಹಾಲು ನೀಡುತ್ತವೆ. ಆದ್ದರಿಂದ ಮೊದಲನೆಯ, ಎರಡನೆಯ ಕರುವು ಅಥವಾ ಸೂಲಿನ ಹಸು ಖರೀದಿಸಿ.
  • ಹಸು ಸಾಧುವಾಗಿದ್ದು, ಮನೆಯ ಯಾವುದೇ ಸದಸ್ಯ ಹಾಲು ಹಿಂಡಲು ಅವಕಾಶ ಮಾಡಿಕೊಡುವಂತಿರಬೇಕು.
  • ಹಸು ಆಕರ್ಷಕ ಮೈಕಟ್ಟು ಹೊಂದಿರಬೇಕು. ಹಿಂದಿನಿAದ ನೋಡಿದಾಗ ಹಸುವಿನ ದೇಹ ‘ವಿ’ ಆಕಾರದಲ್ಲಿ ಕಾಣಬೇಕು (ಹಿಂದೆ ಹೋದಂತೆ ಅಗಲವಾಗುತ್ತ ಸಾಗಬೇಕು).
  • ಮೈಮೇಲಿನ ಚರ್ಮ ಹೊಳೆಯುತ್ತಿರಬೇಕು. ಆಯಾ ತಳಿ ಹಸುಗಳ ಲಕ್ಷಣದಂತೆ ಬಣ್ಣ, ಗುಣ ಹೊಂದಿರಬೇಕು. ಕೂದಲುಗಳು ಮೃದುವಾಗಿರಬೇಕು.
  • ಕಾಂತಿಯುತ ಕಣ್ಣುಗಳು, ತೆಳುವಾದ ಕುತ್ತಿಗೆ ಭಾಗ ಹೊಂದಿರಬೇಕು. ಸದ್ದು ಮಾಡಿದಾಗ ಹಸು ಪ್ರತಿಕ್ರಿಯಿಸಬೇಕು. ಕಿವಿ, ಮೂಗು ಸೋರಬಾರದು.
  • ನಾಲ್ಕೂ ಕೆಚ್ಚಲುಗಳು ಸಮನಾಗಿ ಮತ್ತು ಮೃದುವಾಗಿ ಇರಬೇಕು. ಕೆಚ್ಚಲಿನ ಮೇಲೆ ಬಿರುಸು ಕೂದಲು ಮತ್ತು ಗಂಟುಗಳು ಇರಬಾರದು.
Published On: 13 June 2021, 08:30 PM English Summary: how to choose a best cow?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.