ತನ್ನ ಹಸು ಅಥವಾ ಎಮ್ಮೆ ಹೆಣ್ಣು ಕರುವನ್ನೇ ಹಾಕಲಿ ಎಂಬುದು ಎಲ್ಲಾ ಹೈನುಗಾರರ ಬಯಕೆ. ರಾಸು ಗರ್ಭಧರಿಸಿದಾಗ ಎಲ್ಲಾ ಹೈನು ರೈತರು, ‘ಈ ಸಲ ನನ್ ಹಸು/ಎಮ್ಮೆ ಹೆಣ್ಗರ ಹಾಕ್ಲಿ; ನಿನಗೆ ತುಪ್ಪದ ದೀಪ ಹಚ್ತೇನೆ’ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಎಲ್ಲಾ ರೈತರ ಬೇಡಿಕೆ ಈಗ ಭಗವಂತನ ಕಿವಿಗೆ ಬಿದ್ದಿದೆ. ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ದೇವರು, ಬಲಗೈಲಿ ತಥಾಸ್ತು ಎನ್ನುವ ಮೂಲಕ ಹೆಣ್ಣು ಕರುವಿನ ವರ ಕರುಣಿಸಿದ್ದಾನೆ!!
ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ (ಎನ್ಡಿಡಿಬಿ) ಅಂಗ ಸಂಸ್ಥೆಯಾಗಿರುವ ಎನ್ಡಿಡಿಬಿ ಡೈರಿ ಸರ್ವಿಸಸ್ ‘ಲೈಂಗಿಕವಾಗಿ ವಿಭಾಗಿಸಲಾದ ವೀರ್ಯ ತಂತ್ರಜ್ಞಾನ’ (sex-sorted semen technology) ಎಂಬ ವಿನೂತನ ಹಾಗೂ ದೇಶೀ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ. ಎಮ್ಮೆ ಮತ್ತು ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಿಸುವ ಮೂಲಕ ಕೇವಲ ಮತ್ತು ಕೇವಲ ಹೆಣ್ಣು ಕರುವನ್ನೇ ಹೆರುವಂತೆ ಮಾಡುವುದು ಈ ತಂತ್ರಜ್ಞಾನದ ವಿಶೇಷತೆ. 2020ರ ಅಕ್ಟೋಬರ್ನಲ್ಲೇ ಈ ತಂತ್ರಜ್ಞಾನದ ಪ್ರಯೋಗ ಆರಂಭವಾಗಿದ್ದು, ಪ್ರಸ್ತುತ ಈ ತಂತ್ರಜ್ಞಾನ ಯಶಸ್ವಿಯಾಗಿದೆ. ಗರ್ಭಧಾರಣೆ ಮಾಡಲಾದ ಹಸು ಅಥವಾ ಎಮ್ಮೆ ಹೆಣ್ಣು ಕರುವನ್ನೇ ಹೆರುತ್ತದೆ ಎಂದು ಶೇ.90ರಷ್ಟು ಗ್ಯಾರಂಟಿಯನ್ನು ತಜ್ಞರು ನೀಡುತ್ತಾರೆ. ಆದರೆ, ಈವರೆಗಿನ ಪ್ರಯೋಗ ಮತ್ತು ಪರೀಕ್ಷೆಗಳ ವೇಳೆ ಶೇ.99ರಷ್ಟು ಸಕಾರಾತ್ಮಕ ಫಲಿತಾಂಶ ಲಭ್ಯವಾಗಿದೆ ಎಂದು ತಂತ್ರಜ್ಞಾನ ಅಭಿವೃದ್ಧಿಪಡಿಸಿದ ತಂಡದ ಸದಸ್ಯ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.
ಈವರೆಗೆ ಕೃತಕ ಗರ್ಭಧಾರಣೆ ಮಾಡಿದ ಸಂದರ್ಭದಲ್ಲಿ ವೈದ್ಯರು ಸಾಮಾನ್ಯವಾಗಿ ಗಂಡು ಅಥವಾ ಹೆಣ್ಣು ಕರು ಎಂದು ಖಚಿತವಾಗಿ ಹೇಳದೆ, 50:50 ಸಾಧ್ಯತೆ ಇದೆ ಎಂದು ಅಡ್ಡಗೋಡೆ ಮೇಲೆ ದೀಪ ಇರಿಸಿಸುತ್ತಿದ್ದರು. ಆದರೆ ಈ ನೂತನ ತಂತ್ರಜ್ಞಾನ ಹೈನು ಉದ್ಯಮದಲ್ಲಿ ಕ್ರಾಂತಿಗೆ ಮುನ್ನುಡಿ ಬರೆಯಲಿದೆ. ಎಲ್ಲಾ ರಾಸುಗಳು ಹೆಣ್ಣು ಕರುವನ್ನೇ ಹಾಕುವುದರಿಂದ ಹೈನು ರೈತರ ಆದಾಯ ಹೆಚ್ಚಾಗಲಿದೆ ಎಂದು ಎನ್ಡಿಡಿಬಿ ಹೇಳಿದೆ. ಈ ತಂತ್ರಜ್ಞಾನದ ಫಲವಾಗಿ ತಮಿಳುನಾಡಿನ ಅಲಮಾಧಿ ಸೆಮನ್ ಸ್ಟೇಷನ್ನಲ್ಲಿ ಮೊದಲ ಹೆಣ್ಣು ಕರು ಜನಿಸಿದ್ದು, ಆರೋಗ್ಯವಾಗಿದೆ.
ಹೈನುಗಾರರಿಗೆ ಹೇಗೆ ಲಾಭದಾಕ?
ಇದು ತುಂಬಾ ಸರಳ. ಹೈನೋದ್ಯಮ ನಿಂತಿರುವುದು ಹಸು ಮತ್ತು ಎಮ್ಮೆಗಳ ಮೇಲೆ. ಹಸು, ಎಮ್ಮೆಗಳು ನೀಡುವ ಹಾಲು ಮಾರಾಟ ಮಾಡಿ ಹೈನುಗಾರ ಆದಾಯ ಗಳಿಸುತ್ತಾನೆ. ಸದ್ಯದ ಪರಿಸ್ಥಿತಿಯಲ್ಲಿ ಗರ್ಭಧರಿಸಿದ ಹಸು ಹೆಣ್ಣು ಕರು ಹಾಕುವುದೋ ಇಲ್ಲಾ ಗಂಡು ಕರು ಹಾಕುವುದೋ ಎಂದು ಹೇಳಲಾಗದು. ಒಂದಮ್ಮೆ ಗಂಡು ಕರು ಹುಟ್ಟಿದರೆ ಹೈನುಗಾರನ ದನಗಳ ಸಂತತಿ ವೃದ್ಧಿಯಾಗುವುದಿಲ್ಲ. ಆದರೆ, ಆತನ ಹಸುಗಳು ಕೇವಲ ಹೆಣ್ಣು ಕರುವನ್ನೇ ಹಾಕಿದಾಗ ಆತನ ಬಳಿ ಹಸುಗಳ ಸಂಖ್ಯೆ ಹೆಚ್ಚುತ್ತದೆ. ಹಸುಗಳು ಹೆಚ್ಚಾದರೆ ಹಾಲಿನ ಪ್ರಮಾಣ ಕೂಡ ಹೆಚ್ಚಾಗಿ ಆದಾಯ ವೃದ್ಧಿಯಾಗುತ್ತದೆ. ಇನ್ನೊಂದೆಡೆ ಹೆಚ್ಚುವರಿ ಹಸುಗಳನ್ನು ಮಾರಾಟ ಮಾಡುವ ಮೂಲಕವೂ ರೈತ ಹಣ ಗಳಿಸಬಹುದು.
ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತೆ?
ಹೋರಿ ಅಥವಾ ಕೋಣದ ವೀರ್ಯದಲ್ಲಿ ಎಕ್ಸ್ ಮತ್ತು ವೈ ಎಂಬ ಎರಡು ವಿಧದ ಕ್ರೋಮೋಜೋಮ್ಗಳು ಇರುತ್ತವೆ. ಹೋರಿಗಳು ವೈ ಕ್ರೋಮೋಜೋಮ್ ಹೊಂದಿದ್ದರೆ ಹಸುಗಳು ಎಕ್ಸ್ ಕ್ರೋಮೋಜೋಮ್ ಹೊಂದಿರುತ್ತವೆ. ವಿನೂತನ ತಂತ್ರಜ್ಞಾನದ ಮೂಲಕ ವೀರ್ಯದಲ್ಲಿನ ಈ ಎರಡೂ ಕ್ರೋಮೋಜೋಮ್ಗಳನ್ನು ಮೊದಲು ಬೇರ್ಪಡಿಸಲಾಗುತ್ತದೆ. ಹೀಗೆ ಬೇರ್ಪಡಿಸಿದ ವೀರ್ಯವನ್ನು ವರ್ಷಗಳವರೆಗೆ ದ್ರವರೂಪದ ನೈಟ್ರೋಜನ್ನಲ್ಲಿ ಶೇಖರಿಸಿ ಇರಿಸಲಾಗುತ್ತದೆ. ಬಳಿಕ ರೈತರ ಬೇಡಿಕೆಗೆ ಅನುಗುಣವಾಗಿ ಗಂಡು ಅಥವಾ ಹೆಣ್ಣು ಕರು ಜನಿಸಲು ಬೇಕಿರುವ ವೀರ್ಯವನ್ನು ಹಸುವಿನ ಗರ್ಭದೊಳಗೆ ಸೇರಿಸಲಾಗುತ್ತದೆ.
ಕಾಂಟ್ರಾಕ್ಟ್ ಕಡ್ಡಾಯ!
ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ತಳಿ ಅಭಿವೃದ್ಧಿ ಕಾರ್ಯಕ್ರಮ ಒಂದನ್ನು ರೂಪಿಸಿದೆ. ಈ ಕಾರ್ಯಕ್ರಮ ಅನುಷ್ಠಾನಗೊಳಿಸುವ ಏಜೆನ್ಸಿಯು ನೂತನ ತಂತ್ರಜ್ಞಾನದ ಮೂಲಕ ಖಚಿತವಾಗಿ ಹೆಣ್ಣು ಕರುವನ್ನು ನೀಡುವ ಸಂಬಂಧ ರೈತರ ಜೊತೆ ಒಪ್ಪಂದ (ಕಾಂಟ್ರಾಕ್ಟ್) ಮಾಡಿಕೊಳ್ಳುತ್ತದೆ. ಒಪ್ಪಂದಕ್ಕೆ ಒಳಪಡುವ ಹೈನು ರೈತರು ಯೋಜನೆಯ ಮೊದಲ ಎರಡು ವರ್ಷಗಳಿಗಾಗಿ 750 ರೂ. ಠೇವಣಿ ಇರಿಸಬೇಕು. 3ನೇ ವರ್ಷದಿಂದ ಠೇವಣಿ ಮೊತ್ತ 400 ರೂ.ಗೆ ಇಳಿಕೆಯಾಗುತ್ತದೆ. ಯೋಜನೆ ವ್ಯಾಪ್ತಿಗೆ ಒಳಪಡುವ ರಾಸುಗಳನ್ನು ಕೃತಕ ಗರ್ಭಧಾರಣೆ ತಜ್ಞರು ತಪಾಸಣೆ ನಡೆಸಲಿದ್ದು, ಅತ್ಯುತ್ತಮ ಗರ್ಭಧಾರಣೆ ಸಾಮರ್ಥ್ಯ ಹೊಂದಿರುವ ಹಸುವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.
ಫೇಲಾದರೆ ಠೇವಣಿ ವಾಪಸ್
ಇಲ್ಲಿ ಮೂರು ಬಾರಿ ಕೃತಕ ಗರ್ಭಧಾರಣೆ ಪ್ರಯತ್ನಗಳನ್ನು ಮಾಡಲಿದ್ದು, ಒಂದೊಮ್ಮೆ ಮೂರನೇ ಪ್ರಯತ್ನದ ನಂತರವೂ ಹಸು ಅಥವಾ ಎಮ್ಮೆಯ ಯಶಸ್ವೀ ಗರ್ಭಧಾರಣೆ ಸಾಧ್ಯವಾಗದಿದ್ದರೆ ಸಂಪೂರ್ಣ ಠೇವಣಿ ಹಣವನ್ನು ರೈತರಿಗೆ ವಾಪಸ್ ನೀಡಲಾಗುತ್ತದೆ. ಹೆಣ್ಣು ಕರು ಜನಿಸಿದರೆ ಠೇವಣಿ ವಾಪಸ್ ನೀಡಲಾಗುವುದಿಲ್ಲ. ಆದರೆ ಗಂಡು ಕರು ಜನಿಸಿದರೆ 500 ರೂ.ಗಳನ್ನು ದನದ ಮಾಲೀಕನಿಗೆ ಮರಳಿ ನೀಡಲಾಗುತ್ತದೆ. ಯೋಜನೆಯಲ್ಲಿ ಒಬ್ಬ ಹೈನುಗಾರ ಎರಡು ರಾಸುಗಳನ್ನು ಮಾತ್ರ ನೋಂದಣಿ ಮಾಡಿಕೊಳ್ಳಬಹುದು. ಈ ಯೋಜನೆ ಅಡಿಯಲ್ಲಿ ಕೃತಕ ಗರ್ಭಧಾರಣೆ ಸೇರಿದಂತೆ ಎಲ್ಲ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ನೀಡಲಾಗುತ್ತದೆ.
ಇಂತಹ ಒಂದು ಕ್ರಾಂತಿಕಾರಿ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ತಂಡವನ್ನು ರೈತ ಸಮುದಾಯ ತುಂಬು ಹೃದಯದಿಂದ ಅಭಿನಂದಿಸಿದೆ. ಈ ಯೋಜನೆಯು ಶೀಘ್ರದಲ್ಲಿಯೇ ಜಾರಿಯಾಗಲಿದ್ದು, ಮಾಧ್ಯಮ ಜಾಹೀರಾತುಗಳ ಮೂಲಕ ರೈತರಿಗೆ ಮಾಹಿತಿ ನೀಡುವುದಾಗಿ ಪಶು ಸಂಗೋಪನೆ ಇಲಾಖೆ ತಿಳಿಸಿದೆ.
Share your comments