1. ಯಶೋಗಾಥೆ

ಮೈಸೂರಿನ ಈ ಯುವ ರೈತ ವರ್ಷವಿಡೀ ಆದಾಯ ಗಳಿಸುತ್ತಾರೆ; ಹೇಗೆ ಗೊತ್ತಾ..?

ರೈತ ಜಗದೀಶ್

ಸಮಗ್ರ ಕೃಷಿ ಪದ್ಧತಿಯು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು, ಕೃಷಿ ಉತ್ಪಾದನೆ, ರೈತರ ಆರ್ಥಿಕತೆ ಹಾಗೂ ಜೀವನ ಮಟ್ಟವನ್ನು ಸುಧಾರಿಸಲು ತುಂಬಾ ಸಹಾಯಕಾರಿಯಾಗಿದೆ. ಇತ್ತೀಚೆಗೆ ಅನಿಶ್ಚಿತ ಮಳೆ, ಹವಾಮಾನ ವೈಪರಿತ್ಯಗಳಿಂದಾಗಿ ಉತ್ಪಾದನೆ ಸುಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದು, ಬೆಳೆಗಳ ಇಳುವರಿ ಹಾಗೂ ಆದಾಯ ಕುಂಠಿತಗೊಳ್ಳುತ್ತಿದೆ. ಕಾರಣ, ಬೆಳೆÀಗಳ ಜೊತೆಗೆ ಕೃಷಿ ಅವಲಂಬಿತ ಉಪಕಸುಬುಗಳ ಸೂಕ್ತ ಸಂಯೋಜನೆಯಿAದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಸುಸ್ಥಿರ ಹಾಗೂ ವೈವಿಧ್ಯಮಯ ಉತ್ಪಾದನೆ ಪಡೆದು ಆದಾಯ ಹೆಚ್ಚಿಸಿಕೊಳ್ಳುವ ಜೊತೆಗೆ ವರ್ಷಪೂರ್ತಿ ರೈತ ಕುಟುಂಬಕ್ಕೆ ಉದ್ಯೋಗ ಸೃಷ್ಟಿಸಿ, ಸ್ವಾವಲಂಬಿ ಜೀವನೋಪಾಯ ಪಡೆಯುವುದೇ ಸಮಗ್ರ ಕೃಷಿ ಪದ್ಧತಿಯ ತತ್ವವಾಗಿದೆ. ಆದ್ದರಿಂದ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಇಂದಿನ ಪರಿಸ್ಥಿತಿಗೆ ಸೂಕ್ತವಾದ ಮಾರ್ಗೋಪಾಯವಾಗಿದೆ. ಈ ದಿಸೆಯಲ್ಲಿ ಮೈಸೂರು ತಾಲೂಕಿನ ವರುಣಾ ಹೋಬಳಿಯ ಮೇಗಳಾಪುರ ಗ್ರಾಮದ ಪ್ರಗತಿಪರ ರೈತ ಜಗದೀಶ್, ರೇಷ್ಮೆ ಆಧಾರಿತ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಲಾಭದಾಯಕ ಕೃಷಿಯಲ್ಲಿ ತೊಡಗಿದ್ದಾರೆ.

ಜಗದೀಶ್ ಅವರು ತಮ್ಮ 4 ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿಯನ್ನು ಮುಖ್ಯ ಕೃಷಿಯಾಗಿ ನಿರ್ವಹಿಸುತ್ತಿದ್ದು, ಉಪ ಕಸುಬುಗಳಾಗಿ ಹೈನುಗಾರಿಕೆ, ಕೋಳಿ ಸಾಕಣೆ, ಕುರಿ ಮತ್ತು ಮೇಕೆ ಸಾಕಣೆ ಹಾಗೂ ಅರಣ್ಯ ಕೃಷಿ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ವಿವಿಧತೆಯಲ್ಲಿ ಸಮೃದ್ಧತೆ ಕಂಡ ಪರಿಪೂರ್ಣ ಯಶಸ್ವೀ ರೈತರಾಗಿರುವ ಅವರು ಅಧಿಕ ಲಾಭ ಗಳಿಸುತ್ತಿದ್ದಾರೆ. ಹಿಪ್ಪುನೇರಳೆಯು ರೇಷ್ಮೆ ಹುಳುಗಳಿಗೆ ಪ್ರಮುಖ ಆಹಾರವಾಗಿದ್ದು, ಇದು ಬಹುವಾರ್ಷಿಕ ಬೆಳೆಯಾದ್ದರಿಂದ, ಜಗದೀಶ್ ಅವರು ವರ್ಷದಲ್ಲಿ 8-10 ಬಾರಿ ರೇಷ್ಮೆ ಹುಳು ಸಾಕಣೆ ಮಾಡುತ್ತಿದ್ದಾರೆ. ಜೊತೆಗೆ ರೇಷ್ಮೆ ಬೇಸಾಯದಲ್ಲಿ ಉತ್ಪತ್ತಿಯಾಗುವ ಉಪ ಪಧಾರ್ಥಗಳಾದ ಹಿಪ್ಪುನೇರಳೆ ಬೆಳೆಯುಳಿಕೆಗಳು ಹಾಗೂ ರೇಷ್ಮೆ ಹುಳುಗಳ ಹಿಕ್ಕೆಗಳಿಂದ ಸಮೃದ್ದವಾದ ಕಾಂಪೋಸ್ಟ್ ಸಿದ್ಧಪಡಿಸಿ ತಮ್ಮ ಬೆಳೆಗಳಿಗೆ ನೀಡುವುದಲ್ಲದೇ, ಹಸುಗಳ ಸಗಣಿಯ ಜೊತೆಗೆ ಬೆರೆಸಿ, ಜೈವಿಕ ಇಂಧನ ಉತ್ಪಾದನೆಗೂ ಬಳಸುತ್ತಿದ್ದಾರೆ. ಹಾಗೆಯೇ ಹುಳುಗಳು ತಿಂದು ಬಿಟ್ಟ ಸೊಪ್ಪನ್ನು ದನಗಳಿಗೆ ಮೇವಾಗಿಯೂ ಉಯೋಗಿಸುವ ಮೂಲಕ ಸಮಗ್ರ ಕೃಷಿಯ ಸರಪಳಿ ಕೊಂಡಿಗಳನ್ನು ಉತ್ತಮ ರೀತಿಯಲ್ಲಿ ಜೋಡಿಸಿಕೊಂಡಿದ್ದಾರೆ.

ಕಡಿಮೆ ಖರ್ಚು ಅಧಿಕ ಆದಾಯ

ರೇಷ್ಮೆ ಕೃಷಿಯಲ್ಲಿ ಜಗದೀಶ್, X1 ಹಿಪ್ಪುನೇರಳೆ ತಳಿಯನ್ನು ಬೆಳೆಯುತ್ತಿದ್ದು, ಸಿ.ಎಸ್.ಆರ್2 ಘಿ ಸಿ.ಎಸ್.ಆರ್4 ದ್ವಿತಳಿ ರೇಷ್ಮೆ ಹುಳುಗಳನ್ನು ಸಾಕಣೆ ಮಾಡಿ ವರ್ಷಕ್ಕೆ 10 ಬೆಳೆ ಬೆಳೆಯುತ್ತಾರೆ. ಪ್ರತಿ ಬೆಳೆಗೆ 100 ಮೊಟ್ಟೆಗೆ ಸರಾಸರಿ 90 ಕೆ.ಜಿ ಇಳುವರಿ ಪಡೆಯುತ್ತಿರುವ ಇವರು, ಒಂದು ವರ್ಷಕ್ಕೆ ಖರ್ಚುಗಳೆಲ್ಲಾ ಕಳೆದು 5 ಲಕ್ಷ ರೂ.ವರೆಗೆ ನಿವ್ವಳ ಆದಾಯ ಗಳಿಸುತ್ತಿದ್ದಾರೆ. ಇನ್ನು ಜಗದೀಶ್ ಅವರ ಜೊತೆಗೆ, ಹೆಗಲಿಗೆ ಹೆಗಲಾಗಿ ಅವರ ಶ್ರೀಮತಿ ಮಂಜುಳಾ ಅವರು ಹಾಗೂ ಅವರ ಇಬ್ಬರು ಗಂಡು ಮಕ್ಕಳು ಸಹ ಶ್ರಮಪಟ್ಟು ಎಲ್ಲಾ ಕಾರ್ಯಗಳಲ್ಲಿಯೂ ಜಗದೀಶರಿಗೆ ಬೆನ್ನುಲುಬಾಗಿ ನಿಂತು ಸಹಕಾರ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೂಲಿ ಆಳುಗಳ ಅವಶ್ಯಕತೆಯನ್ನು ನೀಗಿಸಿ, ಕುಟುಂಬ ಸದಸ್ಯರುಗಳೇ ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡು ‘ಕಡಿಮೆ ಖರ್ಚು ಅಧಿಕ ಆದಾಯ’ ಸೂತ್ರವನ್ನು ಪಾಲಿಸಿ, ಇತರೆ ರೈತ ಕುಟುಂಬಗಳಿಗೆ ಮಾದರಿಯಗಿದ್ದಾರೆ.

ಹೈನುಗಾರಿಕೆಯಿಂದ ಅಧಿಕ ಆದಾಯ

ಇನ್ನು ಹೈನುಗಾರಿಕೆ ವಿಭಾಗಕ್ಕೆ ಬಂದಲ್ಲಿ ಜಗದೀಶ್ ಅವರು ಎಂಟು ಎಚ್.ಎಫ್ ಹಾಗೂ 2 ಜರ್ಸಿ ಹಸುಗಳು ಮತ್ತು ಐದು ಕರುಗಳನ್ನು ಪಾಲನೆ ಮಾಡುತಿದ್ದಾರೆ. ಹಾಲು ಕರೆಯುವ ಯಂತ್ರದ ಮೂಲಕ, ಸರಾಸರಿ ಒಂದು ವರ್ಷದಲ್ಲಿ 67000 ಲೀಟರ್ ಹಾಲು ಉತ್ಪಾದಿಸುತ್ತಾರೆ. ಈ ಮೂಲಕ ತಮ್ಮೆಲ್ಲಾ ಖರ್ಚುಗಳನ್ನು ಕಳೆದು ವರ್ಷಕ್ಕೆ ಸುಮಾರು 12 ಲಕ್ಷ ರೂ. ಆದಾಯವನ್ನು ಪಡೆಯುತ್ತಿದ್ದಾರೆ. ಇನ್ನು ಕೋಳಿ, ಕುರಿ ಸಾಕಣೆಯಿಂದಲೂ ಉತ್ತಮ ಗಳಿಕೆ ಮಾಡುತ್ತಿರುವ ಜಗದೀಶ್, 150 ನಾಟಿ ಕೋಳಿಗಳು, 15 ಕುರಿ ಮತ್ತು ಮೇಕೆಯನ್ನೂ ಸ್ಟಾಲ್ ಫೀಡಿಂಗ್ ಪದ್ಧತಿ ಮೂಲಕ ಸಾಕಣೆ ಮಾಡುತ್ತಾ, ವರ್ಷದಲ್ಲಿ ಸುಮಾರು 2 ಲಕ್ಷದಷ್ಟು ನಿವ್ವಳ ಆದಾಯ ಪಡೆಯುತ್ತಿದ್ದಾರೆ.

ಕಲಿಕೆಗೆ ಹಾತೊರೆಯುವ ಮನ

ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಏರ್ಪಡಿಸುವ ತರಬೇತಿಗಳು ಪ್ರಾತ್ಯಕ್ಷಿಕೆಗಳು ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಜಗದೀಶ್ ಅವರ ತೋಟದಲ್ಲಿ, ಪ್ರಸಕ್ತ ಸಾಲಿನಲ್ಲಿ ಇಲಾಖೆ ವತಿಯಿಂದ ಎಂಟು ಅಡಿ ಸಾಲಿನ ಅಂತರದಲ್ಲಿ ಹಿಪ್ಪುನೇರಳೆ ನಾಟಿ ಮಾಡುವ ಕುರಿತು ಪ್ರಾತ್ಯಕ್ಷಿಕೆ ಕೈಗೊಳ್ಳಾಗಿತ್ತು. 8 ಅಡಿ ಅಂತರದ ಸಾಲುಗಳಲ್ಲಿ ಬೆಳೆಗಳ ಮಧ್ಯೆ ಸರಾಗವಾಗಿ ಗಾಳಿಯಾಡುವುದರಿಂದ ಹಾಗೂ ಬೇರು ಬೆಳೆಗಳ ಬೆಳವಣಿಗೆ ಸರಾಗವಾಗಿ ಆಗುವುದರಿಂದ ಹಿಪ್ಪುನೇರಳೆ ಬೆಳೆಯು ಹೆಚ್ಚು ಹೆಚ್ಚು ಕವಲೊಡೆದು ಸಮೃದ್ಧವಾಗಿ ಬೆಳೆಯುತ್ತದೆ. ಹಾಗೂ ಹಿಪ್ಪುನೇರಳೆ ಬೆಳೆಗಳ ಮಧ್ಯೆ ಅಂತರ್ ಬೆಳೆಯಾಗಿ ಅಲಸಂದೆ, ಬೀನ್ಸ್, ಹೆಸರು, ಉದ್ದು ಮೊದಲಾದ ದ್ವಿದಳ ಧಾನ್ಯಗಳು ಹಾಗೂ ಹೂವಿನ ಬೆಳೆಗಳಾದ ಚೆಂಡು ಹೂ, ಸೇವಂತಿಗೆ, ಕನಕಾಂಬರ ಬೆಳೆÀಗಳನ್ನು ಬೆಳೆಯಬಹುದಾದಂತಹ ಉತ್ತಮ ತಾಂತ್ರಿಕತೆ ಇದಾಗಿದೆ. ಸುಧಾರಿತ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು, ಮಿಶ್ರಬೆಳೆ ಪದ್ದತಿಯಲ್ಲಿ ತೆಂಗು, ಅಡಿಕೆ, ನುಗ್ಗೆ, ಬೇವು, ಹಲಸು, ಮೇವಿನ ಬೆಳೆಗಳನ್ನು ಬೆಳೆಯುತ್ತಾರೆ. ಸುಧಾರಿತ ಯಂತ್ರೋಪಕರಣಗಳಾದ ರೋಟರಿ ಟಿಲ್ಲರ್, ಸೆರಿ ಮೋಟಾರ್, ಛಾಫ್ ಕಟ್ಟರ್‌ಗಳನ್ನು ಬಳಸಿಕೊಂಡು ವ್ಯವಸಾಯದಲ್ಲಿ ವೈವಿಧ್ಯತೆಯನ್ನು ಅಳವಡಿಸಿಕೊಂಡಿದ್ದಾರೆ.

ಜೊತೆ ಜೊತೆಗೆ ಇತ್ತೀಚಿನ ದಿನಗಳಲ್ಲಿ ಹಾಸುಹೊಕ್ಕಾಗಿರುವ ಶ್ವಾನ ಪ್ರಿಯರ ಅವಶ್ಯಕತೆಗಳನ್ನು ಧನಾತ್ಮಕವಾಗಿ ಉಪಯೋಗಿಸಿಕೊಂಡು ರೆಟ್ರೀವರ್, ಮತ್ತು ಲ್ಯಾಬ್ ತಳಿಯ ನಾಲ್ಕು ಶ್ವಾನಗಳನ್ನು ಸಾಕಿ, ಅವುಗಳ ವಂಶಾಭಿವೃದ್ದಿ ಮಾಡಿ, ಪಟ್ಟಣಗಳಲ್ಲಿ ಅವಶ್ಯಕತೆ ಇರುವ ಗ್ರಾಹಕರಿಗೆ ಸಣ್ಣ ಮರಿಗಳನ್ನು ಮಾರಾಟ ಮಾಡುವ ಮೂಲಕ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸುತ್ತಿದ್ದಾರೆ.

ಈ ರೀತಿಯಾಗಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಮೂಲಕ ಕೃಷಿಯಲ್ಲಿ ಮುಖ್ಯ ಕಸುಬಿನ ಜೊತೆಗೆ ಉಪಕಸುಬುಗಳನ್ನು ಅಳವಡಿಸಿಕೊಂಡು ನಿರಂತರ ಆದಾಯ ಮತ್ತು ನಿರಂತರ ಉತ್ಪಾದನೆ ಮಾಡಿದಲ್ಲಿ ರೈತರಿಗೆ ಯಾವುದೇ ನಷ್ಟದ ಸಂಭವ ಇರುವುದಿಲ್ಲ. ಬದಲಾಗಿ ಉತ್ತಮ ಹಾಗೂ ನಿರಂತರ ಆದಾಯ ಗಳಿಸಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನ ಪ್ರಗತಿಪರ ಯುವ ರೈತ ಜಗದೀಶ್: 9242929101.

ಲೇಖಕರು: ಎಸ್.ಜೆ.ಹೇಮಂತ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕರು, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ಇಲಾಖೆ, ಮೈಸೂರು

Published On: 25 August 2021, 10:23 AM English Summary: this farmer gets year long income by Integrated farming

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.