1. ಯಶೋಗಾಥೆ

ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಪಡೆದು ಕೋಳಿ ಸಾಕಿ ಗೆದ್ದವರ ಯಶೋಗಾಥೆಗಳು

Kalmesh T
Kalmesh T
How to do poultry farming in the backyard?

How to do poultry farming in the backyard : ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತರಬೇತಿ ಪಡೆದು ಕೋಳಿ ಸಾಕಾಣಿಕೆ ಉದ್ಯಮದ ಮಹತ್ವ ಅರಿತ ಕೆಲ ಪ್ರಗತಿಪರ ರೈತ ಹಾಗೂ ರೈತ ಮಹಿಳೆಯರ ಯಶೋಗಾಥೆಗಳನ್ನ ಪರಿಚಯಿಸಿದ್ದಾರೆ ವಿಜಯಪುರದ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳಾದ ಡಾ. ಸಂಗೀತಾ ಜಾಧವ ಹಾಗೂ ಡಾ. ಪ್ರೇಮಾ ಬಿ. ಪಾಟೀಲ.

ಇತ್ತೀಚಿನ ದಿನಗಳಲ್ಲಿ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಾದಂತಹ ಹೈನುಗಾರಿಕೆ (Dairy farming), ಕೋಳಿ ಸಾಕಾಣಿಕೆ (Poultry Farming), ಕುರಿ ಹಾಗೂ ಆಡು ಸಾಕಾಣಿಕೆ (Sheep and goat rearing) ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿವೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಸ್ಥಳಿಯ ಕೋಳಿ ಅಥವಾ ನಾಟಿ ಕೋಳಿಗಳನ್ನು ಹಿತ್ತಲು ಕೋಳಿ ಸಾಕಾಣಿಕೆಗಾಗಿ ಬಳಸಲಾಗುತ್ತಿದೆ.

ಇವು ಸ್ಥಳಿಯ ಕೋಳಿ ತಳಿಗಳಾಗಿದ್ದು, ಆಯಾ ಪ್ರದೇಶದ ವಾತಾವರಣಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ ಈ ಕೋಳಿಗಳ ಮೊಟ್ಟೆ ಹಾಗೂ ಮಾಂಸ ಉತ್ಪಾದನಾ ಸಾಮರ್ಥ್ಯ ಕಡಿಮೆ ಇರುವದರಿಂದ, ಹಿತ್ತಲಲ್ಲಿ ಸಾಕಾಣಿಕೆಗೆ ಸೂಕ್ತವಿರುವ ಮೊಟ್ಟೆ ಹಾಗೂ ಮಾಂಸದ ಉತ್ಪಾದನೆಯಲ್ಲಿ ದೇಸಿ ಕೋಳಿಗಿಂತ ಸುಮಾರು 2-3 ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿರುವ ಸುಧಾರಿತ ತಳಿಗಳಿಗಳಾದ ಗಿರಿರಾಜ, ಸ್ವರ್ಣಧಾರಾ, ಗ್ರಾಮ ಪ್ರೀಯ, ಕಾವೇರಿ (Giriraja, Swarnadhara, Gram Priya, Kaveri) ಮುಂತಾದವುಗಳನ್ನು ಸಾಕುವುದು ಉತ್ತಮ. ಇವು ಯಾವುದೇ ಹವಾಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತವೆ.

ಬದಲಾಗುತ್ತಿರುವ ಆಹರ ಸೇವನೆ ಪದ್ದತಿಯಂತೆ ಜನರ ಬೇಡಿಕೆಯೂ ಕೂಡ ಬದಲಾಗುತ್ತಿದ್ದು, ಪೌಷ್ಠಿಕ ಆಹಾರದ ರೂಪದಲ್ಲಿ ಹಾಲು, ಮೊಟ್ಟೆ ಹಾಗೂ ಮಾಂಸದ ಬೇಡಿಕೆಯೂ ಸಹ ಹೆಚ್ಚಾಗುತ್ತಿದೆ. ಹೀಗಾಗಿ ಕೋಳಿ ಸಾಕಾಣಿಕೆ ಉದ್ಯಮದ ಮಹತ್ವ ಅರಿತ ಕೆಲ ಪ್ರಗತಿಪರ ರೈತ ಹಾಗೂ ರೈತ ಮಹಿಳೆಯರ ಯಶೋಗಾಥೆಯ ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ.

ಯಶೋಗಾಥೆ 1: 12 ನೇ ತರಗತಿಯನ್ನು ಕಲಾ ವಿಭಾಗದಲ್ಲಿ ಉತ್ತಿರ್ಣರಾಗಿ ಕೃಷಿ ಕುಟುಂಬಕ್ಕೆ ಸೊಸೆಯಾಗಿ ಹೊದಂತಹ ಇವರು ಕೃಷಿಯ ಇತರೇ ಚಟುವಟಿಕೆಯಲ್ಲಿ ಕೋಳಿ ಸಾಕಾಣಿಕೆಯಲ್ಲಿ ವಿಶೇಷ ಆಸಕ್ತಿ ವಹಿಸಿ, ಕೃಷಿ ವಿಜ್ಞಾನ ಕೇಂದ್ರ ವಿಜಯಪುರದಲ್ಲಿ 2018 ರಲ್ಲಿ ತರಬೇತಿ ಪಡೆದ ನಂತರ ಸ್ವರ್ಣಧಾರಾ ಕೋಳಿ ಮರಿಗಳನ್ನು ಪಡೆದು ಸಾಕಾಣಿಕೆ ಪ್ರಾರಂಭಿಸಿದ್ದಾರೆ.

ಮೊದಲಿಗೆ ನಾಲ್ಕು ವಾರದ 20 ಕೊಳಿ ಮರಿಗಳಿಂದ ಪ್ರಾರಂಭಿಸಿದ ಇವರು ಹುಂಜಗಳನ್ನು ಸುಮಾರು 3 ರಿಂದ 4 ತಿಂಗಳುಗಳ ವರೆಗೆ ಸಾಕಾಣಿಕೆ ಮಾಡಿ ಆ ಹುಂಜಗಳು ಸುಮಾರು 1.8 ರಿಂದ 2.2 ಕಿ. ಗ್ರಾಂ ತೂಕ ಬಂದಾಗ ಒಂದು ಹುಂಜಕ್ಕೆ 400 ರೂಪಾಯಿಗಳಂತೆ ಮಾರಾಟ ಮಾಡುತ್ತಾರೆ.

ಹೆಣ್ಣು ಕೋಳಿಗಳನ್ನು ಮೊಟ್ಟೆಗಾಗಿ ಸಾಕಾಣಿಕೆ ಮಾಡಿ ನಂತರ ಆ ಮೊಟ್ಟೆಗಳಿಂದ ಮರಿಗಳನ್ನು ಪಡೆದು ನಿರಂತರ ಸುಮಾರು 50 ಹೆಣ್ಣು ಕೋಳಿಗಳನ್ನು ಉಳಿಸಿಕೊಂಡು ಅವುಗಳಿಗೆ 4 ಹುಂಜಗಳನ್ನು ಬಿಟ್ಟು ಉಳಿದವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಳೆದ ಲಾಕ್ ಡೌನ್ ಸಮಯದಲ್ಲಿ ಈ ಹಿತ್ತಲು ಕೋಳಿಗಳಿಗೆ ಹೆಚ್ಚಿನ ಬೇಡಿಕೆ ಬಂದು ಸುಮಾರು 20,000 ರೂಪಾಯಿಯ ಆದಾಯ ಪಡೆದಿದ್ದಾರೆ.

ಚಳಿಗಾಲ ಹಾಗೂ ಮಳೆಗಾಲದಲ್ಲಿ ಮೊಟ್ಟೆ ಹಾಗೂ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇರುವದರಿಂದ ಈ ಮಾಸಗಳಲ್ಲಿ ಪ್ರತಿ ತಿಂಗಳಿಗೆ ಸುಮಾರು 5000 ರೂಪಾಯಿಗಳ ಲಾಭ ಪಡೆಯುತ್ತಿದ್ದಾರೆ.

ಅಕ್ಷತಾ ಪೂಜಾರಿ, ಗ್ರಾಮ: ಮುತ್ತಗಿ , ತಾ: ಬ. ಬಾಗೇವಾಡಿ, ಜಿ: ವಿಜಯಪುರ, ಮೊಬೈಲ್ ನಂ: 9353689376

ಅಕ್ಷತಾ ಪೂಜಾರಿ

ಯಶೋಗಾಥೆ 2 : ಇವರು ಸಮಗ್ರ ಕೃಷಿಯಲ್ಲಿ ಆಸಕ್ತಿ ಹೊಂದಿರುವಂತಹ ಕುಟುಂಬ. ಕೃಷಿ ಜೊತೆಗೆ ತೋಟಗಾರಿಕೆ, ಹೈನುಗಾರಿಕೆ, ಆಡು ಸಾಕಾಣಿಕೆ, ಮೀನು ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆಯನ್ನು ಕೂಡ ಮಾಡುತ್ತಿದ್ದಾರೆ.

ಮೊದಲಿಗೆ ನಾಟಿ ಕೋಳಿಗಳನ್ನು ಮನೆಯ ಉಪಯೊಗಕ್ಕೆ ಮಾತ್ರ ಸಾಕಾಣಿಕೆ ಮಾಡುತ್ತಿದ್ದರು. ನಂತರ ಕೃಷಿ ವಿಜ್ಞಾನ ಕೇಂದ್ರ ವಿಜಯಪುರದ ಒಂದು ಪ್ರೊಜೆಕ್ಟನಲ್ಲಿ ಇವರಿಗೆ 40 ಸ್ವರ್ಣಧಾರಾ ಕೋಳಿಮರಿಗಳನ್ನು ಸಾಕಾಣಿಕೆಗಾಗಿ ನೀಡಲಾಯಿತು. ಇದರ ಜೊತೆಗೆ ವೈಜ್ಞಾನಿಕವಾಗಿ ಯಾವ ರೀತಿಯಲ್ಲಿ ಕೋಳಿಗಳನ್ನು ಸಾಕಾಣಿಕೆ ಮಾಡಬೇಕೆಂಬುದರ ಕುರಿತು ಇವರಿಗೆ ತರಬೇತಿ ನೀಡಲಾಯಿತು.

ಇದರಲ್ಲಿ ಸ್ಥಳಿಯವಾಗಿ ಸಿಗುವ ಸಾಮಗ್ರಿಗಳನ್ನು ಉಪಯೋಗಿಸಿ ಆಹಾರ ತಯಾರಿಕೆ, ಕೋಳಿಗಳಿಗೆ ಮಾಡಬೇಕಾದ ವಿವಿಧ ಲಸಿಕೆಗಳ ಕುರಿತು ಹಾಗೂ ಕೋಳಿ ಮರಿಗಳ ಪಾಲನೆ ಕುರಿತ ವಿಷಯಗಳ ಸಂಪೂರ್ಣ ಮಾಹಿತಿ ನೀಡಲಾಯಿತು.

ಪ್ರಸ್ತುತ ಇವರು ಸ್ವರ್ಣಧಾರಾ ಕೋಳಿಗಳ ಜೊತೆಗೆ ಗಿರಿರಾಜ ಕೋಳಿಗಳನ್ನು ಕೂಡ ಸಾಕಾಣಿಕೆ ಮಾಡುತ್ತಿದ್ದು ಮೊಟ್ಟೆ ಹಾಗೂ ಕೋಳಿಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. ಕೇವಲ ಕೋಳಿ ಸಾಕಾಣಿಕೆಯಿಂದ ಇವರು ಸುಮಾರು 5000 ರೂಪಾಯಿಗಳ ಮಾಸಿಕ ಆದಾಯ ಪಡೆಯುತ್ತಿದ್ದಾರೆ.

ದೋಂಡಿಬಾಯಿ ಚವ್ಹಾಣ, ಗ್ರಾಮ: ಭೂತನಾಳ, ತಾ: ತಿಕೋಟಾ,  ಜಿ: ವಿಜಯಪುರ , ಮೊಬೈಲ್ ನಂ: 9686165783

ದೋಂಡಿಬಾಯಿ ಚವ್ಹಾಣ

ಯಶೋಗಾಥೆ 3 : ಇವರು ಒಬ್ಬ ಯುವ ರೈತನಾಗಿದ್ದು ವಿವಿಧ ತಳಿಯ ಕೋಳಿ ಸಾಕಾಣಿಕೆಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಇವರು ಬ್ರಾಯ್ಲರ್ ಕೋಳಿ ಸಾಕಾಣಿಕೆ ಜೊತೆಗೆ ಡಿ. ಪಿ. ಕ್ರಾಸ್ ಕೋಳಿಗಳ ಸಾಕಾಣಿಕೆಯನ್ನೂ ಮಾಡುತ್ತಿದ್ದ್ದುದಾರೆ.

ಕಳೆದ 6 ತಿಂಗಳ ಅವಧಿಯಲ್ಲಿ ಸುಮಾರು 1000 ಡಿ. ಪಿ. ಕ್ರಾಸ್ ಕೋಳಿಗಳನ್ನು 400-500 ರೂಪಾಯಿಯಂತೆ ಮಾರಾಟ ಮಾಡಿ 1.5 ಲಕ್ಷ ನಿವ್ವಳ ಆದಾಯ ಪಡೆದಿರುತ್ತಾರೆ. ಇವರ ಅನುಭವದಂತೆಯೂ ಕೂಡ ಬ್ರಾಯ್ಲರ್ ಕೋಳಿಗಳಿಗಿಂತ ಸುಧಾರಿತ ಕೋಳಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿರುವದಲ್ಲದೇ ಕಡಿಮೆ ವೆಚ್ಚದ ಆಹಾರ, ಕಡಿಮೆ ಶ್ರಮದಿಂದ ಮನೆಯಲ್ಲಿಯೇ ತಯಾರಿಸಿದ ಆಹಾರ ಉಪಯೋಗಿಸಿ ಈ ಸುಧಾರಿತ ತಳಿಗಳ ಸಾಕಾಣಿಕೆ ಲಾಭದಾಯಕವಾಗಿದೆ ಎನ್ನುತ್ತಾರೆ.

ಪ್ರಸ್ತುತ ಇವರಲ್ಲಿ 1500, ಒಂದು ವಾರದ ಡಿ. ಪಿ. ಕ್ರಾಸ್ ಕೋಳಿಗಳಿವೆ. ಇವರೂ ಕೂಡ ಸತತವಾಗಿ ಕೃಷಿ ವಿಜ್ಞಾನ ಕೇಂದ್ರ, ವಿಜಯಪುರದ ಸಂಪರ್ಕದಲ್ಲಿದ್ದು ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದಾರೆ.

ವೆಂಕಪ್ಪ ಸಿದ್ದಪ್ಪ ಗೌಂಡಿ, ಗ್ರಾಮ: ಚೆಬನೂರ, ತಾ: ಬ. ಬಾಗೇಡಾಡಿ, ಜಿ: ವಿಜಯಪುರ,  ಮೊಬೈಲ್ ನಂ: 9108826922

ಯಶೋಗಾಥೆ 4 : ಮೂಲತಃ ಕೃಷಿ ಕುಟುಂಬಕ್ಕೆ ಸೇರಿದ ಇವರು ಕೃಷಿ ಜೊತೆಗೆ ಕೋಳಿ ಸಾಕಾಣಿಕೆ ಮಾಡುತ್ತಿದ್ದು ಇವರು ಸ್ಥಳೀಯ ಕೋಳಿಗಳ ಜೊತೆಗೆ ಸ್ವರ್ಣಧಾರ ಹಾಗೂ ಗಿರಿರಾಜ ಕೋಳಿ ತಳಿಗಳ ಸಾಕಾಣಿಕೆ ಮಾಡುತ್ತಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರ ವಿಜಯಪುರದಲ್ಲಿ 2017 ರಲ್ಲಿ ತರಬೇತಿ ಪಡೆದ ನಂತರ ಸ್ವರ್ಣಧಾರಾ ಕೋಳಿ ಮರಿಗಳನ್ನು ಪಡೆದು ಸಾಕಾಣಿಕೆ ಪ್ರಾರಂಭಿಸುತ್ತಾರೆ. ಮೊದಲಿಗೆ 10 ನಾಟಿ ಕೋಳಿ ಸಾಕಾಣಿಕೆಯಿಂದ ಪ್ರಾರಂಭಿಸಿದ ಇವರು ಈಗ ಸುಮಾರು 28 ಸ್ವರ್ಣಧಾರಾ ಹಾಗೂ 35 ಗಿರಿರಾಜ ಹಾಗೂ 20 ನಾಟಿ ಕೋಳಿಗಳನ್ನು ಹೊಂದಿದ್ದಾರೆ.

ಕೋಳಿ ಹಾಗೂ ಹುಂಜಗಳನ್ನು ಕೇವಲ ಮಾಂಸಕ್ಕಾಗಿ ಸಾಕಾಣಿಕೆ ಮಾಡುತ್ತಿದ್ದಾರೆ. 10 ಸ್ವರ್ಣಧಾರಾ ಕೊಳಿಗಳನ್ನು ಮೊಟ್ಟೆಗಾಗಿ ಸಾಕಾಣಿಕೆ ಮಾಡುತ್ತಿದ್ದು, ಆ ಮೊಟ್ಟೆಗಳಿಂದ ಮರಿಗಳನ್ನು ತಯಾರು ಮಾಡುತ್ತಾರೆ.

ಇವರ ಅನುಭವದ ಪ್ರಕಾರ ಸ್ವರ್ಣಧಾರಾ ಕೋಳಿಗಳ ಮಾಂಸ ರುಚಿಕರವಾಗಿದ್ದು ಆ ಕೋಳಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎನ್ನುತ್ತಿದ್ದಾರೆ. ಈಗ ಸುಮಾರು 3000-4000 ಮಾಸಿಕ ಆದಾಯ ಈ ಕೊಳಿ ಸಾಕಾಣಿಕೆಯಿಂದ ಪಡೆಯುತ್ತಿದ್ದಾರೆ.

ಪ್ರಕಾಶ ದೊಡ್ಡಮನಿ, ಗ್ರಾಮ: ಮುತ್ತಗಿ, ತಾ: ಬ. ಬಾಗೇವಾಡಿ, ಜಿ: ವಿಜಯಪುರ, ಮೊಬೈಲ್ ನಂ: 9353689376

ಶಕುಂತಲಾ ರೇವಡಿಗಾರ

ಯಶೋಗಾಥೆ 5 : ಕೃಷಿ ವಿಜ್ಞಾನ ಕೇಂದ್ರ ವಿಜಯಪುರದಲ್ಲಿ 2019 ರಲ್ಲಿ ಕೈಗೊಂಡಂತಹ ರೈತ ಮಹಿಳೆಯರಿಗಾಗಿ ವೈಜ್ಞಾನಿಕ ಹಿತ್ತಲು ಕೋಳಿ ಸಾಕಾಣಿಕೆ ತರಬೇತಿ ಪಡೆದ ನಂತರ ಸ್ವರ್ಣಧಾರಾ ಕೋಳಿ ಮರಿಗಳನ್ನು ಪಡೆದು ಸಾಕಾಣಿಕೆ ಪ್ರಾರಂಭಿಸುತ್ತಾರೆ.

ಮೊದಲಿಗೆ ನಾಲ್ಕು ವಾರದ 20 ಕೋಳಿ ಮರಿಗಳಿಂದ ಪ್ರಾರಂಭಿಸಿದ ಇವರು ಹುಂಜಗಳನ್ನು ಸುಮಾರು 3 ರಿಂದ 4 ತಿಂಗಳುಗಳ ವರೆಗೆ ಸಾಕಾಣಿಕೆ ಮಾಡಿ ಆ ಹುಂಜಗಳು ಸುಮಾರು 1.8 ರಿಂದ 2.2 ಕಿ. ಗ್ರಾಂ ತೂಕ ಬಂದಾಗ ಒಂದು ಹುಂಜಕ್ಕೆ 400 ರೂಪಾಯಿಗಳಂತೆ ಮಾರಾಟ ಮಾಡುತ್ತಾರೆ.

ಹೆಣ್ಣು ಕೋಳಿಗಳನ್ನು ಮೊಟ್ಟೆಗಾಗಿ ಸಾಕಾಣಿಕೆ ಮಾಡಿ ನಂತರ ಆ ಮೊಟ್ಟೆಗಳಿಂದ ಮರಿಗಳನ್ನು ಪಡೆದು ನಿರಂತರ ಸುಮಾರು 50 ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ.

ಹೆಣ್ಣು ಕೋಳಿಗಳಿಂದ ಸಿಗುವಂತಹ ಮೊಟ್ಟೆಗಳನ್ನು ಸಧ್ಯಕ್ಕೆ ಮನೆಗೆ ಉಪಯೋಗಿಸುತ್ತಿದ್ದು ಮುಂದೆ ಇನ್ನಷ್ಟು ಕೋಳಿಗಳ ಸಂಖ್ಯೆಯನ್ನು ಹೆಚ್ಚಿಸಿ, ಕೋಳಿ ಸಾಕಾಣಿಕೆಯನ್ನು ಉಪಕಸುಬು ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿದ್ದಾರೆ.

ಶಕುಂತಲಾ ರೇವಡಿಗಾರ, ಗ್ರಾಮ: ಮುತ್ತಗಿ, ತಾ: ಬ. ಬಾಗೇವಾಡಿ, ಜಿ: ವಿಜಯಪುರ, ಮೊಬೈಲ್ ನಂ: 9986494268

Published On: 26 June 2023, 12:03 PM English Summary: How to do poultry farming in the backyard? Here is the success stories

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.