ವಯಸ್ಸು ಆಗಲೇ 78. ಆದರೆ ಅವರಲ್ಲಿನ ಉತ್ಸಾಹಕ್ಕೆ ಈಗಿನ್ನೂ 18ರ ತುಂಬು ಹರೆಯ! ಹೆಸರು ಮೊಹಮ್ಮದ್ ಅಜೀಮುಲ್ಲಾ. ವಾಸವಿರುವುದು ಮೈಸೂರು ಜಿಲ್ಲೆ ಹುಣಸೂರಿನ ಆಜಾದ್ ನಗರದಲ್ಲಿ. ಅಜೀಮುಲ್ಲಾ ಅವರಿಗೆ 6 ಎಕರೆ ಜಮೀನಿದೆ. ಹಲವಾರು ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿರುವ ಈ ಹಿರಿಯ ರೈತ, ಈಬಾರಿ ಬಾಳೆ ಬೆಳೆಯಲ್ಲಿ ಹೊಸತೊಂದು ಪ್ರಯೋಗ ಮಾಡಿ ಗಮನಸೆಳೆದಿದ್ದಾರೆ.
ಸಾಮಾನ್ಯವಾಗಿ ಒಂದು ಎಕರೆ ಜಮೀನಿನಲ್ಲಿ 800ರಿಂದ 1000 ಬಾಳೆ ಸಸಿಗಳನ್ನು ನೆಡಬಹುದು. ಆದರೆ ಮೊಹಮ್ಮದ್ ಅಜೀಮುಲ್ಲಾ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ 1800 ಬಾಳೆ ಸಸಿಗಳನ್ನು ನಾಟಿ ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ಬಾಳೆ ಕೃಷಿಯಲ್ಲಿ ತೊಡಗಿಕೊಂಡಿರುವ ಅಜೀಮುಲ್ಲಾ ಅವರು, ಇದುವರೆಗೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಬಾಳೆ ಬೆಳೆಯುತ್ತಿದ್ದರು. ಆದರೆ ಈ ಬಾರಿ ರಾಷ್ಟಿçÃಯ ಬಾಳೆ ಸಂಶೋಧನಾ ಕೇಂದ್ರದ (ಎನ್ಆರ್ಸಿಬಿ) ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಅಧಿಕ ಸಾಂದ್ರ ಅಥವಾ ಅತಿ ಸಾಂದ್ರ ನಾಟಿ (ಹೈ ಡೆನ್ಸಿಟಿ ಪ್ಲಾಂಟಿAಗ್- ಎಚ್ಡಿಪಿ) ಪದ್ಧತಿಯ ಮೂಲಕ ಬಾಳೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಪರಿಣಾಮ, ಒಂದು ಎಕರೆಯಲ್ಲಿ 1800 ಬಾಳೆ ಸಸಿಗಳು ಕುಳಿತಿವೆ.
ಹಿರಿಯ, ಉತ್ಸಾಹಿ ಪ್ರಗತಿಪರ ಕೃಷಿಕ
ವಯಸ್ಸು 78 ಆದರೂ ಅಜೀಮುಲ್ಲಾ ಅವರಿಗೆ ಕೃಷಿ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಹೀಗಾಗಿ ತಮ್ಮ 6 ಎಕರೆ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಪ್ರಗತಿಪರ ಕೃಷಿಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಕಲ್ಲು ಚಪ್ಪರ ಹಾಕುವ ಮೂಲಕ ಹೀರೇಕಾಯಿ ಹಾಗೂ ಹಾಗಲಕಾಯಿ ಬೆಳೆದಿರುವ ಅಜೀಮುಲ್ಲಾ, ಉತ್ತಮ ಇಳುವರಿ ಪಡೆದಿದ್ದಾರೆ. ವಿಶೇಷವೇನೆಂದರೆ, ಇವರ ಮನೆ ಇರುವುದು ಹುಣಸೂರಿನ ಆಜಾದ್ ನಗರದಲ್ಲಿ. ಮನೆಗೆ ಸ್ವಲ್ಪ ದೂರದಲ್ಲೇ ಇವರ ಜಮೀನು ಕೂಡ ಇದೆ. ಆದರೆ ಮಕ್ಕಳ ವಿದ್ಯಾಭ್ಯಾಸದ ಉದ್ದೇಶದಿಂದ ಅಜಿಮುಲ್ಲಾ ಅವರು ಬೆಂಗಳೂರಿನಲ್ಲಿ ಮನೆ ಮಾಡಿ ಅಲ್ಲೇ ನೆಲೆಸಿದ್ದಾರೆ. ವಾರದಲ್ಲಿ ಎರಡು ಅಥವಾ ಮೂರು ದಿನ ಹುಣಸೂರಿಗೆ ಬಂದು ಜಮೀನು ಮತ್ತು ಅಲ್ಲಿನ ಬೆಳೆಗಳ ನಿವಹಣೆ ಮಾಡುತ್ತಾರೆ.
ಎಚ್ಡಿಪಿ ಬಗ್ಗೆ ತಿಳಿದದ್ದು ಹೇಗೆ?
ಹೊಸ ಪ್ರಯೋಗದ ಚಿಂತನೆಯಲ್ಲಿದ್ದ ಅಜೀಮುಲ್ಲಾ ಅವರು, ಅಂತರ್ಜಾಲದಲ್ಲಿ ಬಾಳೆ ಬೆಳೆಯುವ ವಿವಿಧ ವಿಧಾನಗಳ ಕುರಿತು ಹುಡುಕಾಟ ನಡೆಸಿದರು. ಜೊತೆಗೆ, ಕೃಷಿಗೆ ಸಂಬAಧಿಸಿದ ಹಲವು ಪುಸ್ತಕಗಳನ್ನು ಓದುತ್ತಿದ್ದರು. ಹೀಗಿರುವಾಗ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಡಿಯಲ್ಲಿ ಬರುವ ಎನ್ಆರ್ಸಿಬಿಯ ಜಾಲತಾಣದಲ್ಲಿ ಅತಿ ಸಾಂದ್ರತೆ ನಾಟಿ ಪದ್ಧತಿ ಮುಲಕ ಬಾಳೆ ಬೆಳೆಯುವ ಕುರಿತು ಮಾಹಿತಿ ಲಭ್ಯವಾಯಿತು. ಹಾಗೇ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದ (ಐಐಎಚ್ಆರ್) ವೆಬ್ಸೈಟಿನಲ್ಲೂ ಈ ಕುರಿತು ಮಾಹಿತಿ ಇತ್ತು. ಇದರೊಂದಿಗೆ ಎನ್ಆರ್ಸಿಬಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಅಜೀಮುಲ್ಲಾ, ಅತಿ ಸಾಂದ್ರ ನಾಟಿ ಪದ್ಧತಿಯಲ್ಲೇ ಬಾಳೆ ಬೆಳೆಯಲು ನಿರ್ಧರಿಸಿದರು.
ಏನಿದು ಅತಿ ಸಾಂದ್ರ ನಾಟಿ?
ಸಾಮಾನ್ಯವಾಗಿ ಸಾಂಪ್ರದಾಯಿಕ ನಾಟಿ ಪದ್ಧತಿಯಲ್ಲಿ ಬಾಳೆ ಸಸಿಗಳನ್ನು 7-8 ಅಡಿಗೆ ಒಂದರಂತೆ, ಸಾಲಿನಿಂದ ಸಾಲಿಗೆ 8-9 ಅಡಿ ಅಂತರದಲ್ಲಿ ನಾಟಿ ಮಾಡಲಾಗುತ್ತದೆ. ಆದರೆ ಹೈ ಡೆನ್ಸಿಟಿ ಪ್ಲಾಂಟಿAಗ್ (ಅತಿ ಸಾಂದ್ರ ನಾಟಿ, ದಟ್ಟ ನಾಟಿ ಅಥವಾ ಅಧಿಕ ಸಾಂದ್ರ ನಾಟಿ) ಪದ್ಧತಿಯಲ್ಲಿ ಹತ್ತು ಅಡಿ ಅಂತರದಲ್ಲಿ ಒಂದು ಸಾಲು ಮಾಡಿ ಒಂದೊಂದು ಸಾಲಿನಲ್ಲಿ ಒಂದರ ಪಕ್ಕ ಒಂದರಂತೆ, ಒಂದು ಗುಣಿಯಿಂದ ಮತ್ತೊಂದು ಗುಣಿಗೆ ಕನಿಷ್ಠ ಒಂದೂವರೆ ಅಡಿ ಅಂತರ ಬಿಟ್ಟು ಜೋಡಿ ಸಸಿಗಳನ್ನು ನೆಡಲಾಗುತ್ತದೆ. ಇದರಿಂದ ಕಡಿಮೆ ಸ್ಥಳದಲ್ಲಿ ಹೆಚ್ಚು ಸಸಿಗಳನ್ನು ನಾಟಿ ಮಾಡಬಹುದಲ್ಲದೆ, ಈ ಪದ್ಧತಿ ಅನುಸರಿಸುವುದರಿಂದ ಒಟ್ಟಾರೆ ಇಳುವರಿ ಕೂಡ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.
ಅಂಗಾಂಶ ಬಾಳೆ ಸಸಿ ಬಳಕೆ
ಮೊಹಮ್ಮದ್ ಅಜೀಮುಲ್ಲಾ ಅವರು ಸಹ ಸಾಲಿನಿಂದ ಸಾಲಿಗೆ ಹತ್ತು ಅಡಿ ಅಂತರ ಕೊಟ್ಟು ಪ್ರತಿ ಸಾಲಿನಲ್ಲೂ ನಿರ್ದಿಷ್ಟ ಅಂತರದಲ್ಲಿ ಜೋಡಿ ಬಾಳೆ ಸಸಿಗಳನ್ನು ನೆಟ್ಟಿದ್ದಾರೆ. ಸ್ಥಳೀಯ ನರ್ಸರಿ ಒಂದರಲ್ಲಿ ಅಂಗಾಂಶ ಕೃಷಿ (ಟಿಶ್ಶು ಕಲ್ಚರ್) ಪದ್ಧತಿ ಮೂಲಕ ಅಭಿವೃದ್ಧಿಪಡಿಸಿರುವ ಅತ್ಯುತ್ತಮ ಗುಣಮಟ್ಟದ ಏಲಕ್ಕಿ ಬಾಳೆ ಸಸಿಗಳನ್ನು ನಾಟಿ ಮಾಡಿದ್ದಾರೆ. ಒಂದು ಸಸಿಗೆ 25 ರೂ. ನೀಡಿದ್ದು, 1800 ಸಸಿಗಳಿಗೆ 45,000 ರೂ.ಪಾಯಿ ವೆಚ್ಚವಾಗಿದೆ.
ನಾಟಿ, ಪೋಷಣೆ ಹೇಗೆ?
“ಜೆಸಿಬಿ ಯಂತ್ರದ ಮೂಲಕ ತೆಗೆದ ಗುಣಿಗಳಿಗೆ ಮೊದಲು ಬೇವಿನ ಹಿಂಡಿ, ಸಲ್ಫರ್, ಡಿಎಪಿ, ಬೋರಾನ್, ಸಾವಯವ ಹಾಗೂ ಕೊಟ್ಟಿಗೆ ಗೊಬ್ಬರವನ್ನು ತುಂಬಿ, ಆ ಬಳಿಕ ಬಾಳೆ ಸಸಿಗಳನ್ನು ನೆಡಲಾಗಿದೆ. ಮೊದಲು ಗುಣಿಗೆ ವಿವಿಧ ಪೋಷಕಾಂಶಗಳನ್ನು ತುಂಬಿ ಗಿಡ ನೆಟ್ಟಿದ್ದೇವೆ. ಮೊದಲ ತಿಂಗಳು ಪ್ರತಿ ಗಿಡಕ್ಕೆ 100 ಗ್ರಾಂ ಯೂರಿಯಾ, 300 ಗ್ರಾಂ. ಸೂಪರ್ ಪ್ರಾಕ್ಸಿ, 100 ಗ್ರಾಂ. ಎಂಒಪಿ ನೀಡಿದ್ದೇನೆ. ಬಳಿಕ ಮೂರನೇ ತಿಂಗಳಲ್ಲಿ, ಪ್ರತಿ ಗಿಡಕ್ಕೆ 160 ಗ್ರಾಂ. ನೈಟ್ರೋಜನ್, 50 ಗ್ರಾಂ. ಫಾಸ್ಫರಸ್, 490 ಗ್ರಾಂ. ಪೊಟ್ಯಾಶ್ ನೀಡಲಾಗಿದೆ. ಗಿಡಗಳಿಂದ ಉತ್ತಮ ಗುಣಮಟ್ಟದ ಬಾಳೆ ಗೊನೆ ಪಡೆಯಲು ಪೊಟ್ಯಾಶ್ ಅತ್ಯವಶ್ಯಕವಾಗಿರುವ ಪೋಷಕಾಂಶವಾಗಿದೆ. ಇವೆಲ್ಲವುಗಳ ಜೊತೆ ಎನ್ಆರ್ಸಿಬಿಯಲ್ಲಿ ದೊರೆಯುವ ‘ಬನಾನಾ ಶಕ್ತಿ’ ಎಂಬ ಸೂಕ್ಷ್ಮ ಪೋಷಕಾಂಶವನ್ನು ಸಹ ಗಿಡಗಳಿಗೆ ನೀಡಿದ್ದೇನೆ” ಎನ್ನುತ್ತಾರೆ ಮೊಹಮ್ಮದ್ ಅಜೀಮುಲ್ಲಾ ಅವರು.
ಅಜೀಮುಲ್ಲಾ ಅವರ ಬಾಳೆ ತೋಟದ ಸುತ್ತ ಜಿ-9 ಪಚ್ಚಬಾಳೆ ಗಿಡಗಳನ್ನು ಬೆಳೆಸಿದ್ದಾರೆ. ಇದರಿಂದ ಎರಡು ರೀತಿಯ ಲಾಭಗಳಿದ್ದು, ಹೆಚ್ಚು ಗಾಳಿ ಬೀಡಿದ ಸಂದರ್ಭದಲ್ಲಿ ಈ ಪಚ್ಚಬಾಳೆ ಗಿಡಗಳು ನೈಸರ್ಗಿಕ ಬೇಲಿಯಂತೆ ಕಾರ್ಯನಿರ್ವಹಿಸಲಿದ್ದು, ಏಲಕ್ಕೆ ಬಾಳೆ ಗಿಡಗಳನ್ನು ಗಾಳಿ ಹೊಡೆತದಿಂದ ರಕ್ಷಿಸುತ್ತವೆ. ಜೊತೆಗೆ ಇವುಗಳಿಂದ ಉತ್ತಮ ಇಳುವರಿ ಕೂಡ ಬರುತ್ತದೆ. ಅಜೀಮುಲ್ಲಾ ಅವರ 4 ತಿಂಗಳ ಬಾಳೆ ತೋಟ ಸಮೃದ್ಧವಾಗಿ ಬೆಳೆದಿದೆ. ಎನ್ಆರ್ಸಿಬಿ ವಿಜ್ಞಾನಿಗಳಾಗಿರುವ ಡಾ.ವಡಿವೇಲು ಹಾಗೂ ಅವರ ತಂಡದ ಸದಸ್ಯರು ಬಾಳೆ ತೋಟಕ್ಕೆ ಭೇಟಿ ನೀಡಿ, ಉಪಯುಕ್ತ ಸಲಹೆ ನೀಡುತ್ತಿದ್ದಾರೆ. ಒಟ್ಟಾರೆ ಈ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಕೃಷಿಯಲ್ಲಿ ತೊಡಗಿಕೊಂಡು, ಒಬ್ಬ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿರುವ ಮೊಹಮ್ಮದ್ ಅಜೀಮುಲ್ಲಾ ಅವರು ಯುವ ರೈತರಿಗೆ ಮಾದರಿಯಾಗಿ ನಿಲ್ಲುತ್ತಾರೆ.
Share your comments