ಸ್ಮಾರ್ಟ್ ಕಾರ್ಡ್, ಡೆಬಿಟ್ ಕಾರ್ಡ್, ಕ್ರೇಡಿಟ್ ಕಾರ್ಡ್ಗಳ ಈ ಜಮಾನಾದಲ್ಲಿ ಎಲ್ಲವೂ ಆನ್ಲೈನ್. 5 ಜಿ ವೇಗದಲ್ಲಿ ಸಾಗುತ್ತಿರುವ ಈ ದುನಿಯಾದಲ್ಲಿ ಸಾಲ ಪಡೆಯಲು ಜಸ್ಟ್ ಒಂದೇ ಒಂದು ನಿಮಿಷ ಸಾಕು. ಈಗೀಗ ಸ್ಮಾರ್ಟ್ ಫೋನ್ಗಳು ಬಂದ ನಂತರ ಸಾಕಷ್ಟು ಲೋನ್ ಆಪ್ಗಳು ಜಸ್ಟ್ ಒಂದು ನಿಮಿಷದಲ್ಲಿ ಸಾಲವನ್ನು ಕೊಡುತ್ತವೆ. ಆಪ್ಗಳಷ್ಟೇ ಅಲ್ಲ ಸಾಲ ಕೊಡಲು ಬ್ಯಾಂಕ್ಗಳು, ಫೈನಾನ್ಸ್ಗಳು ಬಳಸುವ ಮಾನದಂಡವೇ ಅವು ಬಳಸುವ CIBIL ಸ್ಕೋರ್ ಅರ್ಥಾತ್ ಕ್ರೆಡಿಟ್ ಸ್ಕೋರ್!.
ಏನಿದು CIBIL ಸ್ಕೋರ್..?
CIBIL ಸ್ಕೋರ್ ಇದು ವ್ಯಕ್ತಿಯು ಸಾಲ ಪಡೆಯಲು ಅರ್ಹತೆಯನ್ನು ಹೊಂದಿದ್ದಾನೆ ಇಲ್ಲವೋ ಎಂಬುದನ್ನು ಸಾಂಖ್ಯಿಕ ರೂಪದಲ್ಲಿ ವರದಿ ನೀಡುವ ಒಂದು ಪ್ರಕ್ರಿಯೆಯಾಗಿದೆ. ಒಬ್ಬ ವ್ಯಕ್ತಿಯು ಈ ಮೊದಲು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾನೆ, ಅದನ್ನು ಸಕಾಲಕ್ಕೆ ಮರುಪಾವತಿ ಮಾಡಿದ್ದಾನೋ ಇಲ್ಲವೋ ಹಾಗೂ ಪ್ರಸ್ತುತ ಆ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಮತ್ತು ಸಾಲ ನೀಡಲು ಅವನು ಅರ್ಹನೆ ಎಂಬಿತ್ಯಾದಿ ಇತಿಹಾಸಗಳನ್ನೊಳಗೊಂಡ ಒಂದು ಪ್ರಕ್ರಿಯೆ CIBIL ಸ್ಕೋರ್. ಕ್ರೆಡಿಟ್ ಮಾಹಿತಿ ಬ್ಯೂರೋ ಲಿಮಿಟೆಡ್ ಇದರ ವಿಸ್ತೃತ ರೂಪವಾಗಿದೆ. CIBIL ಸ್ಕೋರ್ ಸಾಮಾನ್ಯವಾಗಿ ಭಾರತದಲ್ಲಿ 300 ರಿಂದ 900 ರವರೆಗೆ ಇರುತ್ತದೆ, ಹೆಚ್ಚಿನ ಸ್ಕೋರ್ ಉತ್ತಮ ಕ್ರೆಡಿಟ್ ಅರ್ಹತೆಯನ್ನು ಸೂಚಿಸುತ್ತದೆ. ಸ್ಕೋರ್ ಅನ್ನು ವಿವಿಧ ಅಂಶಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
ರೈತರಿಗೆ CIBIL ಸ್ಕೋರ್ ಯಾಕೆ ಬೇಕು..?
ಸಾಲ ಪಡೆಯಲು : ಸಾಮಾನ್ಯವಾಗಿ ಯಾರೇ ಆಗಲಿ ಸಾಲ ಪಡೆಯಬೇಕಾದರೆ ಅವರು ಸಿಬಿಲ್ ಸ್ಕೋರ್ ಹೊಂಡಿರುವುದು ಕಡ್ಡಾಯ. ಅವರು ಹೊಂದಿರುವ ಸಿಬಿಲ್ ಸ್ಕೋರ್ನ ಮೇಲೆಯೇ ಅವರಿಗೆ ಸಾಲ ನೀಡಲಾಗುತ್ತದೆ. ಇನ್ನು ಉತ್ತಮವಾದ CIBIL ಸ್ಕೋರ್ ಹೊಂದಿದ್ದರೆ ರೈತರು ಸಾಲವನ್ನು ಸುಲಭವಾಗಿ ಪಡೆಯಲು ಅನುಕೂಲವಾಗುತ್ತದೆ. ಬ್ಯಾಂಕಿನಲ್ಲಿ ಅಧಿಕಾರಿಗಳು ಉತ್ತಮ CIBIL ಸ್ಕೋರ್ ಹೊಂದಿರುವ ರೈತರಿಗೆ ಅವರು ಅರ್ಜಿ ಸಲ್ಲಿಸಿದ ಯೋಜನೆಯಗಳಲ್ಲಿ ಶೀಘ್ರ ಸಾಲ ಮಂಜೂರು ಮಾಡುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ.
ಕಡಿಮೆ ಬಡ್ಡಿ ದರ: ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವಲ್ಲಿ ಹಾಗು ನೆರವು ನೀಡುವಲ್ಲಿ CIBIL ಸ್ಕೋರ್ ಸಹಾಯ ಮಾಡುತ್ತದೆ. ಉತ್ತಮವಾದ CIBIL ಸ್ಕೋರ್ ಹೊಂದಿದ್ದರೆ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ನೀವು ಸರಿಯಾದ ಮರುಪಾವತಿಯ ಇತಿಹಾಸವನ್ನು ಹೊಂದಿದ್ದರೆ ನಿಮಗೆ ಬಡ್ಡಿದರದಲ್ಲಿ ವಿನಾಯಿತಿಯನ್ನು ನೀಡಲಾಗುತ್ತದೆ. ಇದು ರೈತರಿಗೆ ಆರ್ಥಿಕವಾಗಿ ಸಬಲರಾಗುವಲ್ಲಿ ಬೆಂಬಲವಾಗಿ ನಿಲ್ಲುತ್ತದೆ.
ಕೃಷಿ ಉಪಕರಣಗಳ ಖರೀದಿಗೆ ಅನುಕೂಲ: ಸಾಮಾನ್ಯವಾಗಿ ರೈತರು ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸಾಕಷ್ಟು ಹಣಕಾಸಿನ ತೊಂದರೆ ಅನುಭವಿಸುತ್ತಾರೆ. ಅವರಿಗೆ ಕೃಷಿ ಯಂತ್ರೋಪಕರಣ ಕಂಪನಿಯವರು ನಿಮ್ಮ CIBIL ಸ್ಕೋರ್ ಚೆನ್ನಾಗಿದ್ದರೆ ಬ್ಯಾಂಕಿನವರ ಜೊತೆ ಮಾತನಾಡಿ ಸುಲಲಿತವಾಗಿ ಸಾಲದ ವ್ಯವಸ್ಥೆಯನ್ನು ಮಾಡುತ್ತಾರೆ.
ಉದ್ಯೋಗವಕಾಶಗಳು: ಹಲವಾರು ಖಾಸಗಿ ಕಂಪನಿಗಳಲ್ಲಿ ನೇಮಕಾತಿ ಮಾಡಿಕೊಳ್ಳುವಾಗ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸುತ್ತಾರೆ. ಇದು ನೇಮಕಾತಿಯ ಒಂದು ಭಾಗವಾಗಿರುತ್ತದೆ. ಹೆಚ್ಚಾಗಿ ಇದು ಬ್ಯಾಂಕಿಂಗ್ ವಲಯದಲ್ಲಿನ ಉದ್ಯೋಗಗಳಲ್ಲಿ ಕಂಡು ಬರುತ್ತದೆ.
ಇನ್ನೊಂದು ಪ್ರಮುಖ ವಿಷಯವನ್ನು ಗಮನಿಸುವುದಾದರೆ ರೈತರು ಕೃಷಿ ಸಾಲವನ್ನು ಪಡೆಯಬೇಕಾದಲ್ಲಿ ಅವರ ಸಿಬಿಲ್ ಸ್ಕೋರ್ 750 ಅಥವಾ 750 ಕ್ಕಿಂತ ಹೆಚ್ಚಿಗೆ ಇರಬೇಕೆಂಬುದು ಬ್ಯಾಂಕಿಂಗ್ ತಜ್ಞರ ಅಭಿಪ್ರಾಯ. 750 ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಇದ್ದಲ್ಲಿ ಕೃಷಿ ಸಾಲ ಮಂಜೂರಾಗುವ ಸಾಧ್ಯತೆಗಳು ಹೆಚ್ಚಿಗೆ ಇರುತ್ತವೆ.
Share your comments