1. ಸುದ್ದಿಗಳು

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ: ಮೊದಲ ದಿನ ಸಂಪೂರ್ಣ ಯಶಸ್ವಿ

Lockdown

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣವನ್ನು ತಡೆಯಲು ವಾರಾಂತ್ಯದ ಕರ್ಫ್ಯೂ ಹೇರಿದ್ದ ಮೊದಲ ದಿನ ಶಾಂತಿಯುತವಾಗಿಯೂ, ಸಂಪೂರ್ಣ ಯಶಸ್ವಿಯಾಗಿಯೂ ಮುಗಿದಿದೆ. ಸೋಂಕು ಹರಡುವುದನ್ನು ತಡೆಯಲು ಕಳೆದ ರಾತ್ರಿಯಿಂದಲೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಯಾಗಿದ್ದು, ಜನಜೀವನ ಬಹುತೇಕ ಸ್ತಬ್ಧವಾಗಿ, ಇಡೀ ರಾಜ್ಯ ನಿಶ್ಯಬ್ಧವಾಗಿದೆ.

ಕಳೆದ ವರ್ಷದ ಲಾಕ್‌ಡೌನ್ ಮಾದರಿಯಲ್ಲೇ ವಾರಾಂತ್ಯ ಕರ್ಫ್ಯೂವನ್ನು ಜಾರಿ ಮಾಡಲಾಗಿದ್ದು, ಇಡೀ ರಾಜ್ಯದಲ್ಲಿ ಅಂಗಡಿ ಮುಂಗಟ್ಟುಗಳು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಒಂದು ರೀತಿ ರಾಜ್ಯ ಅಘೋಷಿತ ಬಂದ್‌ಗೆ ಒಳಪಟ್ಟಂತಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳನ್ನು ಓಡಿಸುವುದಾಗಿ ಹೇಳಿದ್ದರಾದರೂ ಬಸ್‌ಗಳಲ್ಲಿ ಸಂಚರಿಸಲು ಜನರಿಲ್ಲದ ಕಾರಣ ಸಾರಿಗೆ ಸಂಸ್ಥೆಯ ಬಸ್‌ಗಳ ಓಡಾಟವು ಅತ್ಯಂತ ವಿರಳವಾಗಿದ್ದು, ಅಲ್ಲೊಂದು, ಇಲ್ಲೊಂದು ಬಸ್ ಸಂಚಾರ ಹೊರತುಪಡಿಸಿದರೆ ಉಳಿದಂತೆ ಬಸ್‌ಗಳ ಸಂಚಾರವೂ ಸಂಪೂರ್ಣ ಸ್ತಗಿತಗೊಂಡಿದೆ. ಬಸ್‌ಗಳು ಬಸ್ ನಿಲ್ದಾಣದಲ್ಲೇ ನಿಂತಿವೆ.

ರಾಜ್ಯಾದ್ಯಂತ  ವ್ಯಾಪಾರ ಮಳಿಗೆಗಳು ಮುಚ್ಚಲ್ಪಟ್ಟವು, ಅಗತ್ಯ ಸೇವೆಗಳನ್ನು ಬೆಳಿಗ್ಗೆ 10 ಗಂಟೆಯ ನಂತರ ಸ್ಥಗಿತಗೊಳಿಸಲು ನಿಯಮಿಸಲಾಗಿತ್ತು. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಕೇವಲ ಪಾರ್ಸೆಲ್ ಸೇವೆಯನ್ನು ಮಾತ್ರ ಒದಗಿಸಿದವು ಮತ್ತು ಯಾರಿಗೂ ಕುಳಿತು ತಿನ್ನಲು ಅವಕಾಶವಿರಲಿಲ್ಲ. ಖಾಸಗಿ ವಾಹನಗಳ ಓಡಾಟಕ್ಕೂ ಬ್ರೇಕ್ ಹಾಕಲಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.

ಅನಗತ್ಯವಾಗಿ ಓಡಾಡುವವರ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದು, ಹಲವೆಡೆ ವಾಹನಗಳನ್ನು ಸೀಜ್ ಮಾಡಿದ್ದಾರೆ. ಆಟೋಗಳು ಓಡಾಡುತ್ತಿವೆಯಾದರೂ ಆಟೋದಲ್ಲಿ ಪ್ರಯಾಣಿಸುವವರೇ ಇಲ್ಲ. ಹಾಗಾಗಿ ಮಧ್ಯಾಹ್ನದ ನಂತರ ನಗರ ಪ್ರದೇಶಗಳಲ್ಲಿ ಆಟೋ ಸಂಚಾರವೂ ವಿರಳವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮೆಟ್ರೋ ರೈಲು ಸಂಚಾರವೂ ಸಂಪೂರ್ಣ ಬಂದ್ ಆಗಿದೆ.ವಾರಾಂತ್ಯ ಕರ್ಫ್ಯೂ ಕಾರಣ ಶನಿವಾರ, ಭಾನುವಾರ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಮೆಟ್ರೋ ನಿಗಮ ನಿನ್ನೆಯೇ ಪ್ರಕಟಣೆ ಹೊರಡಿಸಿತ್ತು. ಮಹಾನಗರ ಸಾರಿಗೆ ಸಂಸ್ಥೆ ಜನರ ಬೇಡಿಕೆಗಳಿಗೆ ಅನುಗುಣವಾಗಿ ಬಸ್‌ಗಳನ್ನು ಓಡಿಸುವುದಾಗಿ ಹೇಳಿತ್ತು ತುರ್ತು ಸೇವೆಗಾಗಿ ೫೦೦ ಬಸ್‌ಗಳನ್ನು ಮಾತ್ರ ಓಡಾಟಕ್ಕೆ ಬಿಟ್ಟಿದೆ. ಉಳಿದಂತೆ ಬಿಎಂಟಿಸಿ ಬಸ್‌ಗಳ ಸಂಚಾರವೂ ಸ್ಥಗಿತಗೊಂಡಿದೆ. ಬಸ್‌ಗಳಲ್ಲಿ ಪ್ರಯಾಣಿಸಲು ಜನರೇ ಇಲ್ಲ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರಿಗೆ ಪೊಲೀಸರ ಲಾಠಿಯ ಬಿಸಿಯು ಮುಟ್ಟಿಸಿರುವ ಪ್ರಕರಣಗಳು ಅಲ್ಲಲ್ಲಿ ನಡೆದಿವೆ. ಪ್ರಮುಖ ರಸ್ತೆಗಳಿಗೆ ಮೇಲ್ಸೇತುವೆಗಳಿಗೆ ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬೇಕಾಬಿಟ್ಟಿ ರಸ್ತೆಗಿಳಿಯುವವರಿಗೆ ಪೊಲೀಸರು ಎಚ್ಚರಿಕೆ ನೀಡಿ ಮನೆಗೆ ಕಳುಹಿಸುತ್ತಿದ್ದಾರೆ. ಏನೇನೋ ನೆಪ ಹೇಳಿ ರಸ್ತೆಯಲ್ಲಿ ಓಡಾಡುವವರಿಗೆ ಪೊಲೀಸರು ಗಂಭೀರ ಎಚ್ಚರ ನೀಡುತ್ತಿದ್ದು, ಮಾತು ಕೇಳದವರಿಗೆ ಬಿಸಿ ಮುಟ್ಟಿಸಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಬೆಂಗಳೂರಿನ ಎಲ್ಲೆಡೆ ಪೊಲೀಸರು ತಪಾಸಣೆ ನಡೆಸಿದ್ದು, ವಾಹನಗಳಲ್ಲಿ ಓಡಾಡುವರನ್ನು ತಡೆದು ಕಾರಣ ಕೇಳಿ, ತುರ್ತು ಎನಿಸಿದರೆ ಮಾತ್ರ ಓಡಾಟಕ್ಕೆ ಅವಕಾಶ ನೀಡಿದ್ದು, ಇಲ್ಲದಿದ್ದರೆ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ನೂರಾರು ದ್ವಿಚಕ್ರ ವಾಹನ, ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾರಾಂತ್ಯ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದೆ.

Published On: 24 April 2021, 08:18 PM English Summary: weekend curfew passes peacefully in karnataka

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.