ರಾಜ್ಯದಲ್ಲಿ ಏಪ್ರೀಲ್ 13 ರಿಂದ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗಾಳಿಯ ಒತ್ತಡ ಕಡಿಮೆಯಾಗಿರುವ ಪರಿಣಾಮ ದಕ್ಷಿಣ ಕನ್ನಡದಲ್ಲಿ ಏಪ್ರೀಲ್ 13 ರಿಂದ ಏಪ್ರೀಲ್ 15 ರವರೆಗೆ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈಗಾಗಲೇ ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಜೋರಾಗಿ ಬೀಸಿದ ಗಾಳಿಗೆ ಕಲಬುರಗಿ ಜಿಲ್ಲೆಯಲ್ಲಿ ಮರಗಳು ಧರೆಗುರುಳಿವೆ. ಮನೆಯ ಮೇಲಿರುವ ಪತ್ರಾಸ್ ಗಳು ಹಾರಿ ಹಾನಿಯನ್ನುಂಟು ಮಾಡಿದೆ.
ರಾಜ್ಯದಲ್ಲಿ ಇನ್ನೇರಡು ದಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗಲಿದೆ. ಹಾಸನ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಏಪ್ರೀಲ್ 14 ರಿಂದ ಮುಂದಿನ ಮೂರು ದಿನಗಳ ಕಾಲ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ. ಈ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 72 ಗಂಟೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರ ಮತ್ತು ಮಂಗಳವಾರ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗಿದೆ. ಮಂಗಳವಾರ ಸಾಯಂಕಾಲದವರೆಗೆ ಗುಡುಗು ಮಿಂಚಿನ ಆರ್ಭಟ ಮುಂದುವರೆದಿತ್ತು. ಕಲಬುರಗಿ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಾಯಂಕಾಲ 5 ರನಂತರ ದಟ್ಟವಾದ ಮೋಡ ಆವರಿಸಿ ಮಳೆ ಸುರಿಯಿತು.
ತಮಿಳುನಾಡು, ಕೇರಳ, ಮಧ್ಯಪ್ರದೇಶ, ತೆಲಂಗಾರ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಐದು ದಿನಗಳ ಕಾಲ ಮಳೆಯಾಗಲಿದೆ. ದಕ್ಷಿಣ ತಮಿಳುನಾಡು, ಕೇರಳ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಏಪ್ರೀಲ್ 14 ರಿಂದ16 ರವರೆಗೆ ಮಳೆಯಾಗಲಿದೆ.
Share your comments