1. ಸುದ್ದಿಗಳು

INDIA ಸಭೆಗೆ IAS ಅಧಿಕಾರಿಗಳ ಬಳಕೆ: ಸ್ಪಷ್ಟನೆ ನೀಡಿದ ಸಿಎಂ

Maltesh
Maltesh
India 01

ಬಿಜೆಪಿಯವರು ಕ್ಷುಲ್ಲಕ ಕಾರಣಕ್ಕೆ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದ್ದಾರೆ, ಆದರೆ ಅವರ ಜೊತೆ ಜೆಡಿಎಸ್ ನವರು ಸೇರಿ ಪ್ರತಿಭಟಿಸಿರುವುದು ವಿಪರ್ಯಾಸ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಬಲ ವಿರೋಧ ಪಕ್ಷದ ಪಾತ್ರ ಬಹುಮುಖ್ಯ. ವಿರೋಧ ಪಕ್ಷಗಳು ಸರ್ಕಾರದ ತಪ್ಪು ನಿರ್ಧಾರಗಳನ್ನು, ನೀತಿ ನಡವಳಿಕೆಯನ್ನು ಸಂವಿಧಾನಾತ್ಮಕವಾಗಿ ಖಂಡಿಸಲು, ವಿರೋಧಿಸಲು, ಪ್ರತಿಭಟಿಸಲು ಅವಕಾಶವಿದೆ.

ಸದನವು ಕೆಲವು ನಿಯಮಾವಳಿಗಳನ್ನು, ವಿಧಾನ ಸಭಾಧ್ಯಕ್ಷರ ಸ್ಥಾನವು ತನ್ನದೇ ಆದ ಘನತೆ ಗೌರವವನ್ನು ಹೊಂದಿದೆ. ಪತ್ರಿಕೆಗಳನ್ನು ಹರಿದು ಗೌರವಾನ್ವಿತ ಸಭಾಧ್ಯಕ್ಷರ ಮುಖಕ್ಕೆ ಎಸೆಯುವುದು ಅಸಭ್ಯ ಅಷ್ಟೇ ಅಲ್ಲ ಸಂಸದೀಯ ವ್ಯವಸ್ಥೆಗೆ ತೋರುವ ಅಗೌರವವಾಗುತ್ತದೆ.

21-05-2018 ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವಿರೋಧ ಪಕ್ಷಗಳ ನಾಯಕರನ್ನು ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದ್ದರು. ಇದನ್ನು ಕುಮಾರಸ್ವಾಮಿ ಅವರು ಮರೆತರೇ?

ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದ ಜಾತ್ಯಾತೀತ ಜನತಾದಳದ ಜನರಲ್ ಸೆಕ್ರೆಟರಿ ಡ್ಯಾನಿಷ್ ಅಲಿ ಅವರ ಸತ್ಕಾರಕ್ಕಾಗಿ ವೈ.ಎಸ್ ಪಾಟೀಲ್ ಎಂಬ ಐಎಸ್ ಅಧಿಕಾರಿ ನೇಮಕ ಮಾಡಿರಲಿಲ್ಲವೇ? ಡ್ಯಾನಿಷ್ ಅಲಿ ಅವರು ಸಂಸದರೇ? ಶಾಸಕರೇ? ಹೋಗಲಿ ಗ್ರಾಮ ಪಂಚಾಯತಿ ಸದಸ್ಯರಾದ್ರೂ ಆಗಿದ್ರಾ? ಹೀಗೆ ಗಣ್ಯರ ಸ್ವಾಗತ, ಸತ್ಕಾರಕ್ಕೆ ಐಎಎಸ್ ಅಧಿಕಾರಿಗಳನ್ನು ನೇಮಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಇದೇನು ಹೊಸದಾಗಿ ಮಾಡಿರುವುದಲ್ಲ.

India 02

ಅನೇಕ ಜನ ಹಾಲಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ರಾಜ್ಯಸಭಾ, ಲೋಕಸಭಾ ಸದಸ್ಯರು, ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರುಗಳು ಇಂತಹ ಗಣ್ಯರನ್ನು ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನು ನೇಮಿಸಿದರೆ ತಪ್ಪೇನು? ಒಂದು ಸರ್ಕಾರವಾಗಿ ರಾಜ್ಯಕ್ಕೆ ಆಗಮಿಸಿದ ಅತಿಥಿಗಳನ್ನು ಸತ್ಕರಿಸುವ ಕೆಲಸ ಮಾಡಿದ್ದೇವೆ, ಇದನ್ನು ವಿರೋಧಿಸಿ ಉಪಸಭಾಧ್ಯಕ್ಷರ ಮೇಲೆ ಬಿಜೆಪಿಯವರು ಮುಗಿಬಿದ್ದು, ಪತ್ರಿಕೆಗಳನ್ನು ಹರಿದು ಅವರ ಮುಖದ ಮೇಲೆ ಎಸೆದು ಅನಾಗರಿಕರಂತೆ ನಡೆದುಕೊಂಡಿದ್ದಾರೆ.

ಕಳೆದ ನಲವತ್ತು ವರ್ಷದಿಂದ ನಾನು ವಿಧಾನಸಭೆಯಲ್ಲಿದ್ದೇನೆ, ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ನಾವು ಈ ಹಿಂದೆ ಸರ್ಕಾರದ ವಿರುದ್ಧ ಸದನದ ಬಾವಿಗಿಳಿದು ಪ್ರತಿಭಟಿಸಿದ್ದೇವೆ, ಧರಣಿ ಮಾಡಿದ್ದೇವೆ ಆದರೆ ಎಂದೂ ಸಭಾಧ್ಯಕ್ಷರ ಸ್ಥಾನದ ಘನತೆಗೆ ಧಕ್ಕೆಯಾಗುವಂತೆ ವರ್ತಿಸಿಲ್ಲ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಜನರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಹುಡುಕುವ ಮನಸ್ಸು ಬಿಜೆಪಿಯವರಿಗೆ ಇಲ್ಲ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಿರುವುದರಿಂದ ವಿಪಕ್ಷಗಳು ಹತಾಶೆಗೊಂಡಿವೆ.

India 03

ಬಿಜೆಟ್ ಕುರಿತು ಮಾತನಾಡಲು ಅದರಲ್ಲಿ ದೋಷಗಳು ಇಲ್ಲ. ಬಿಜೆಪಿಯವರು ಎಂದಿಗೂ ಕೊಟ್ಟ ಮಾತಿನಂತೆ ನಡೆದುಕೊಂಡವರಲ್ಲ, ನಾವು ಬಸವಾದಿ ಶರಣರ ಮಾತುಗಳಲ್ಲಿ ನಂಬಿಕೆಯಿಟ್ಟು ನುಡಿದಂತೆ ನಡೆಯುವವರು. ನಮ್ಮ ಸರ್ಕಾರದ ಯೋಜನೆಗಳಿಂದ ರಾಜ್ಯದ ಜನ ಸಂತೃಪ್ತರಾಗಿದ್ದಾರೆ. ಉಚಿತ ಬಸ್ ಪ್ರಯಾಣದ ಫಲಾನುಭವಿ ಹೆಣ್ಣುಮಕ್ಕಳು ಧರ್ಮಸ್ಥಳಕ್ಕೆ ಹೋದಾಗ ನನ್ನ ಹೆಸರಿನಲ್ಲಿ ಪೂಜೆ ಮಾಡಿಸಿದ್ದಾರಂತೆ, ಈ ಮಾತನ್ನು ಸ್ವತಃ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದು ಶ್ಲಾಘಿಸಿದ್ದಾರೆ.

ನಮ್ಮ ಸರ್ಕಾರದ ಯಶಸ್ಸನ್ನು ಬಿಜೆಪಿಯವರಿಂದ ಸಹಿಸಲು ಆಗುತ್ತಿಲ್ಲ ಹಾಗಾಗಿ ಕ್ಷುಲ್ಲಕ ವಿಚಾರಕ್ಕೆ ಗದ್ದಲ ಎಬ್ಬಿಸುತ್ತಿದ್ದಾರೆ.
ಬಿಜೆಪಿಯವರು ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಾರೆ. ನಮಗೆ ಅವರಂತೆ ಬಿಜೆಪಿ ಮುಕ್ತ ರಾಜ್ಯ ನಿರ್ಮಿಸುವ ಬಯಕೆ ಇಲ್ಲ. ಬಿಜೆಪಿ ರಾಜ್ಯದಲ್ಲಿ ಇರಲಿ, ಆದರೆ ಅದು ಸದಾಕಾಲ ವಿರೋಧ ಪಕ್ಷದ ಸ್ಥಾನದಲ್ಲೇ ಇರಬೇಕು. ಬಿಜೆಪಿಯವರ ಇಂದಿನ ನಡವಳಿಕೆ ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವ, ಸಂವಿಧಾನ, ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಯಾರೊಬ್ಬರೂ ಹೀಗೆ ನಡೆದುಕೊಳ್ಳಲು ಸಾಧ್ಯವಿಲ್ಲ.

India 04

ನಾಡಿನ ಸರ್ವಜನರ ಕಲ್ಯಾಣ ಕಾರ್ಯಕ್ರಮಗಳು ಜಾರಿಯಾಗಿ, ಶೋಷಿತರು ಖುಷಿಯಿಂದ ಇರುವುದನ್ನು ಬಿಜೆಪಿಯವರಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಕೇಶವ ಕೃಪಾದಲ್ಲಿ ಕುಳಿತವರು ನೋಡಲಿ ಎಂದು ಸದನದಲ್ಲಿ ನಾಟಕವಾಡುತ್ತಿದ್ದಾರೆ. ಸರ್ಕಾರ ರಚನೆಯಾಗಿ ಇಷ್ಟು ದಿನಗಳಾದರೂ ಬಿಜೆಪಿಯವರಿಗೆ ಪ್ರತಿಪಕ್ಷದ ನಾಯಕನನ್ನು ಆರಿಸಲು ಸಾಧ್ಯವಾಗಿಲ್ಲ. ವಿಪಕ್ಷ ನಾಯಕನಿಲ್ಲದೆ ರಾಜ್ಯಪಾಲರ ಭಾಷಣ, ಬಜೆಟ್ ಭಾಷಣ ನಡೆದಿರುವುದು ಇತಿಹಾಸದಲ್ಲಿಯೇ ಇದು ಮೊದಲು.

ಬಿಜೆಪಿಯವರು ಇಂತಹ ಎಷ್ಟೇ ಕೀಳು ರಾಜಕೀಯ ಮಾಡಿದರು ಕೂಡ ನಾವು ನಮ್ಮ ಜನಪರವಾದ ನಿಲುವು ಮತ್ತು ಕಾಳಜಿಯಿಂದ ಕಿಂಚಿತ್ತೂ ವಿಚಲಿತರಾಗಲ್ಲ. ಅವರ ಆಟಾಟೋಪ, ಗೂಂಡಾಗಿರಿಗೆ ಹೆದರದೆ ನಾವು ನಂಬಿರುವ ತತ್ವ, ಸಿದ್ಧಾಂತದಡಿ ಕೆಲಸ ಮಾಡುತ್ತೇವೆ. ಇಂದು ನಡೆದಿರುವ ಘಟನೆಯನ್ನು ನಾನು ಖಂಡಿಸುತ್ತೇನೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ವಿರೋಧ ಪಕ್ಷಗಳು ಜವಾಬ್ದಾರಿಯಿಂದ ಕೆಲಸ ಮಾಡುತ್ತವೆ ಎಂದು ಭಾವಿಸಿದ್ದೇನೆ.

Published On: 20 July 2023, 10:32 AM English Summary: Use of IAS officers for INDIA meeting: CM clarified

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.