ಕೈಯಲ್ಲಿ ಚಾಕು ಹಿಡಿದು ಜೀವ ಉಳಿಸುವ ಸಾಮರ್ಥ್ಯ ಇರುವುದು ವೈದ್ಯರಿಗೆ ಮಾತ್ರ. ಭೂಮಿ ಮೇಲೆ ಕಾಯಿಲೆಗಳನ್ನು ಸೃಷ್ಟಿಸಿದ ದೇವರು ಅವುಗಳೊಂದಿಗೆ ವೈದ್ಯರನ್ನೂ ಹುಟ್ಟಿಸಿದ. ಹಾಗೇ, ಮನುಷ್ಯ ನಂಬಿರುವಂತೆ ಇಡೀ ಭೂ ಮಂಡಲದಲ್ಲಿ ಜೀವ ನೀಡುವ ಸಾಮರ್ಥ್ಯ ಇರುವುದು ಆ ದೇವನೊಬ್ಬನಿಗೆ. ಆದರೆ ವಾಸ್ತವ ಜಗತ್ತಿನಲ್ಲಿ ವೈದ್ಯರು ದೇವರ ಸ್ಥಾನ ತುಂಬಿದ್ದಾರೆ. ಪ್ರತಿ ನಿತ್ಯ ಲಕ್ಷಾಂತರ ಮಂದಿಯ ಪ್ರಾಣ ಉಳಿಸುವ ಪವಿತ್ರ ಕಾಯಕ ಮಾಡುತ್ತಿರುವ ವೈದ್ಯರನ್ನು ಸ್ಮರಿಸಲು ಇಂದು ಸುದಿನ. ದೇಶದ ಸಮಸ್ತ ವೈದ್ಯಗಣಕ್ಕೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು (ಜುಲೈ 1).
‘ಜನರು ತಮ್ಮ ಕಾಯಿಲೆ ವಾಸಿ ಮಾಡಿದ ವೈದ್ಯರಿಗೆ, ಅವರ ಸೇವೆ ಮತ್ತು ತೋರಿದ ಕಾಳಜಿಗಾಗಿ ಹಣ ಪಾವತಿ ಮಾಡುತ್ತಾರೆ. ಆದರೂ ಅವರು ವೈದ್ಯರ ರುಣದಲ್ಲೇ ಇರುತ್ತಾರೆ’ ಎಂಬುದು ಶ್ರೇಷ್ಠ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಅವರ ಪ್ರಸಿದ್ಧ ಹೇಳಿಕೆ. ಇದು ಜಾಗತಿಕ ಸತ್ಯ. ಹಾಗೇ ‘ವೈದ್ಯೋ ನಾರಾಯಣೋ ಹರಿ’ ಎಂಬುದು ಬರೀ ಉಕ್ತಿಯಲ್ಲ. ಇದರಲ್ಲಿನ ಒಂದೊAದು ಪದ, ಅಕ್ಷರವೂ ಸತ್ಯವನ್ನೇ ಸಾರುತ್ತದೆ. ಏನಾದರೊಂದು ಅನಾಹುತ ಸಂಭವಿಸಿದಾಗ ‘ಕಾಪಾಡಪ್ಪಾ’ ಎಂದು ಜನ ಬೇಡುವುದು ಒಂದು ದೇವರಲ್ಲಿ ಮತ್ತೊಂದು ವೈದ್ಯರಲ್ಲಿ. ಹಾಗೇ ಸುಮ್ಮನೆ ವೈದ್ಯರಿಲ್ಲದ ಜಗತ್ತನ್ನೊಮ್ಮೆ ಊಹಿಸಿಕೊಳ್ಳಿ. ಅಸಾಧ್ಯ ಅಲ್ಲವೇ? ಅದರಲ್ಲೂ ಕಣ್ಣಿಗೆ ಕಾಣದ ವೈರಸ್ ಒಂದು ಸಾಂಕ್ರಾಮಿಕ ಸೋಂಕನ್ನು ಹರಡಿ, ಜನರ ಪ್ರಾಣ ಹೊತ್ತೊಯ್ಯುತ್ತಿರುವ ಇಂದಿನ ದಿನಗಳಲ್ಲಂತೂ ವೈದ್ಯರಿಲ್ಲದ ಜಗತ್ತಿನ ಕಲ್ಪನೆ ಸಾಧ್ಯವೇ ಇಲ್ಲ.
ಕೊರೊನಾ ಸೋಂಕು ವೈದ್ಯರ ಮಹತ್ವವನ್ನು ಸಾರಿ ಹೇಳಿದೆ. ಒಂದೊಮ್ಮೆ ವೈದ್ಯರೂ ಕೊರೊನಾ ವೈರಸ್ಸಿನ ಭಯದಿಂದ ಜನರಿಗೆ ಸೇವೆ ಸಲ್ಲಿಸಲು ಮುಂದೆ ಬಾರದೇ ಇದ್ದಿದ್ದರೆ ಇಂದಿಗೆ ಜಗತ್ತಿನ ಮುಕ್ಕಾಲು ಭಾಗ ಜನಸಂಖ್ಯೆ ಮಣ್ಣಲ್ಲಿ ಮಣ್ಣಾಗಿರುತ್ತಿತ್ತು. ಆದರೆ ವೈದ್ಯರು ಹಾಗೆ ಮಾಡಲಿಲ್ಲ. ಮಾರಕ ವೈರಸ್ಸೊಂದು ಜನರ ದೇಹದೊಳಗೆ ಹೊಕ್ಕು ಅವರ ಪ್ರಾಣ ಹಿಂಡುತ್ತಿರುವ ವಿಷಯ ಗೊತ್ತಾದಾಗ ರಕ್ಷಣೆಗಾಗಿ ಮೊದಲು ಓಡಿ ಬಂದವರು ವೈದ್ಯರು. ಕೊರೊನಾ ಸೋಂಕು ದಾಂಗುಡಿಯಿಟ್ಟ ಆರಂಭದ ದನಗಳಲ್ಲಿ ಮಾಸ್ಕ್ ಒಂದನ್ನು ಬಿಟ್ಟರೆ ಬೇರಾವುದೇ ರಕ್ಷಣಾ ಸಾಧನಗಳು ಇರಲಿಲ್ಲ. ಮನೆಯ ಸದಸ್ಯರೇ ಸೋಂಕಿತರ ಹತ್ತಿರ ಹೋಗಲು ಹೆದರುತ್ತಿದ್ದಂತಹ ಕಠಿಣ ಪರಿಸ್ಥಿತಿಯಲ್ಲೂ ದೇಶದ ವೈದ್ಯರು ಲಕ್ಷ ಲಕ್ಷ ಜನರ ಬಳಿ ಸುಳಿದು ಅವರಿಗೆ ಚಿಕಿತ್ಸೆ ನೀಡಿದ್ದಾರೆ.
ಜನರಿಗಾಗಿ ಮನೆ ತೊರೆದರು
ಇತರರ ಒಳಿತಿಗಾಗಿ ಅಥವಾ ಬೇರೊಬ್ಬರ ಆರೋಗ್ಯ ಚೆನ್ನಾಗಿರಲಿ ಎಂದು ತನ್ನ ಮನೆ, ಮನೆಯವರನ್ನೆಲ್ಲಾ ತೊರೆದು ಯಾರಾದರೂ ಬರುತ್ತಾರೆಂದರೆ ಅದು ವೈದ್ಯರು ಮಾತ್ರ. ಅರ್ಧ ರಾತ್ರಿಯಲ್ಲಿ ಕರ್ತವ್ಯದ ಕರೆ ಬಂದರೂ ನಿದ್ರೆಯಿಂದೆದ್ದು ಓಡಿ ಬರುವ ಪ್ರಾಂಜಲ ಮನಸ್ಸಿನ ವೃತ್ತಿಪರರೇನಾದರೂ ಇದ್ದಾರೆ ಎಂದಾದರೆ ಅದು ವೈದ್ಯರು. ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿAದ ದೇಶದ ಲಕ್ಷಾಂತರ ವೈದ್ಯರು ಎರಡು, ಮೂರು ತಿಂಗಳ ಕಾಲ ತಮ್ಮ ಮನೆಗೇ ಹೋಗಿಲ್ಲ. ದೇಶದ ಜನರ ಒಳಿತಿಗಾಗಿ, ಅವರ ಪ್ರಾಣ ರಕ್ಷಣೆಗಾಗಿ ಆಸ್ಪತ್ರೆಯನ್ನೇ ಮನೆ ಮಾಡಿಕೊಂಡ ವೈದ್ಯರು, ದಿನದ 24 ಗಂಟೆಯೂ ಅಲ್ಲೇ ಇದ್ದು, ಜನರ ಜೀವ ಉಳಿಸಿದ್ದಾರೆ. ಮನೆಯಲ್ಲಿರುವ ಬೆಚ್ಚಗಿನ ಕೋಣೆ, ಮೆತ್ತಗಿನ ಹಾಸಿಗೆ, ಹೊದಿಕೆ ಎಲ್ಲವನ್ನೂ ಬಿಟ್ಟು, ಆಸ್ಪತ್ರೆಯ ಕಾರಿಡಾರುಗಳು, ಸ್ರೆಚರ್ಗಳು, ಬರಿ ನೆಲದ ಮೇಲೆ ಮಲಗಿ ಅದೆಷ್ಟೋ ರಾತ್ರಿಗಳನ್ನು ಕಳೆದಿದ್ದಾರೆ. ಕುಳಿತಲ್ಲಿಯೇ ತೂಕಡಿಸಿದ್ದಾರೆ. ಸೋಂಕು ತೀವ್ರ ಸ್ವರೂಪ ಪಡೆದ ದಿನಗಳಲ್ಲಿ ಎಷ್ಟೋ ವೈದ್ಯರು ವಾರಗಟ್ಟಲೆ ಸರಿಯಾಗಿ ನಿದ್ದೆಯನ್ನೂ ಮಾಡಿಲ್ಲ.
ಹಾಗಾದರೆ ಹೆಚ್ಚು ಕಾಳಜಿ ತೋರುವ ಮನೆಯವರು, ಪ್ರೀತಿಯ ಮಡದಿ, ಮುದ್ದಿನ ಮಕ್ಕಳನ್ನು ಬಿಟ್ಟು ಬಂದ ವೈದ್ಯರು, ಆಸ್ಪತ್ರೆಯನ್ನೇ ಮನೆಯನ್ನಾಗಿಸಿಕೊಂಡು ಹಗಲಿರುಳೆನ್ನದೇ ಶ್ರಮಿಸಿದ್ದು ಯಾರಿಗಾಗಿ? ಗುರುತು ಪರಿಚಯವೇ ಇಲ್ಲದ ಜನರಿಗಾಗಿ. ನೀವೇ ಯೋಚಿಸಿ ನೋಡಿ, ನಾಮು, ನಿಶಾನೆ ತಿಳಿಯದ ಅನಾಮಿಕ, ಅಪರಿಚಿತರ ಕಷ್ಟಕ್ಕೆ ಮಿಡಿಯುವರು ಜಗತ್ತಿನಲ್ಲಿ ಎಷ್ಟು ಮಂದಿ ಸಿಗುತ್ತಾರೆ? ಎಲ್ಲರೂ ನಾನು, ನನ್ನ ಮನೆ, ನನ್ನ ಮಡದಿ, ನನ್ನ ಮಕ್ಕಳು ಎಂದು ಯೋಚಿಸುತ್ತಿರುವ ಈ ದಿನಗಳಲ್ಲಿ ತನ್ನದೆಲ್ಲವನ್ನೂ ಬದಿಗಿರಿಸಿ ಪರರಿಗಾಗಿ ಪ್ರಾಣವನ್ನೂ ಲೆಕ್ಕಿಸದೆ ಶ್ರಮಿಸುತ್ತಿರುವ ದೇಶದ ವೈದ್ಯರಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ಹೀಗೆ ಸ್ವಾರ್ಥವೇ ಇಲ್ಲದೆ ದುಡಿಯುತ್ತಿರುವ ವೈದ್ಯಗಣಕ್ಕೆ ಕೃತಜ್ಞತೆ ಸಲ್ಲಿಸಲು ಇದೊಂದು ದಿನ ದೊರೆತಿದೆ. ಹಾಗಂತಾ ಡಾಕ್ಟರ್ಗಳನ್ನು ಗೌರವಿಸಲು ಇದೊಂದೇ ದಿನವಲ್ಲ. ಇದು ಸಾಂಕೇತಿಕ ಮಾತ್ರ. ನಮ್ಮೆಲ್ಲರಿಗೂ ಒಂದಿಲ್ಲೊAದು ರೀತಿಯಲ್ಲಿ ಪುನರ್ಜನ್ಮ ನೀಡಿರುವ, ನೀಡುತ್ತಿರುವ ವೈದ್ಯರನ್ನು, ಅವರ ನಿಸ್ವಾರ್ಥ ಸೇವೆಯನ್ನು ಪ್ರತಿ ದಿನವೂ ಸ್ಮರಿಸಬೇಕು. ಗೌರವಿಸಬೇಕು.
ಏನಿದು ರಾಷ್ಟ್ರೀಯ ವೈದ್ಯರ ದಿನ?
ಭಾರತ ಕಂಡ ಅತ್ಯಂತ ಶ್ರೇಷ್ಠ ವೈದ್ಯರಾಗಿರುವ ಡಾ.ಬಿಧಾನ್ ಚಂದ್ರ ರಾಯ್ ಅವರ ಸ್ಮರಣಾರ್ಥ ರಾಷ್ಟ್ರೀಯ ವೈದ್ಯ ದಿನವನ್ನು ಆಚರಿಸಲಾಗುತ್ತದೆ. ತಮ್ಮ ಜೀವನವನ್ನು ಜನಸೇವೆಗೆ ಮೀಸಲಿಟ್ಟ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅಸಂಖ್ಯ ಕೊಡುಗೆಗಳನ್ನು ನೀಡಿದ ಡಾ.ರಾಯ್ ಅವರ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರ 1961ರ ಫೆಬ್ರವರಿ 4ರಂದು ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ ನೀಡಿ ಸನ್ಮಾನಿಸಿತು. ಬಳಿಕ ಡಾ.ರಾಯ್ ಅವರ ಸ್ಮರಣಾರ್ಥ 1991ರ ಜುಲೈ ತಿಂಗಳ ಮೊದಲ ದಿನವನ್ನು (ಜುಲೈ 1) ರಾಷ್ಟ್ರೀಯ ವೈದ್ಯದಿನ ಎಂದು ಘೋಷಿಸಲಾಯಿತು.
ಜಾದವಪುರ್ ಟಿ.ಬಿ ಆಸ್ಪತ್ರೆ, ಚಿತ್ತರಂಜನ್ ಸೇವಾ ಸದನ, ಕಮಲಾ ನೆಹರು ಮೆಮೋರಿಯಲ್ ಆಸ್ಪತ್ರೆ, ವಿಕ್ಟೋರಿಯಾ ಇನ್ಸ್ಟಿಟ್ಯೂಷನ್ (ಕಾಲೇಜು), ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಮಹಿಳೆ ಮತ್ತು ಮಕ್ಕಳಿಗಾಗಿ ಚಿತ್ತರಂಜನ್ ಸೇವಾ ಸದನ ಸ್ಥಾಪಿಸಿದ ಕೀರ್ತಿ ಡಾ.ಬಿಧಾನ್ ಚಂದ್ರ ರಾಯ್ ಅವರಿಗೆ ಸಲ್ಲುತ್ತದೆ. ಜಗತ್ತಿನ ಹಲವು ದೇಶಗಳಲ್ಲಿ ರಾಷ್ಟ್ರೀಯ ವೈದ್ಯ ದಿನವನ್ನು ಆಚರಿಸಲಾಗುತ್ತದೆ. ಆದರೆ, ವೈದ್ಯರ ದಿನವನ್ನು ಮೊದಲು ಆಚರಿಸಿದ್ದು ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ, 1933ರಲ್ಲಿ. ಇದರೊಂದಿಗೆ ಅಮೆರಿಕದಲ್ಲಿ ಮಾರ್ಚ್ 30ರಂದು, ಕ್ಯೂಬಾದಲ್ಲಿ ಡಿಸೆಂಬರ್ 3ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ.
Share your comments