1. ಸುದ್ದಿಗಳು

ಮದುವೆ ನಿರಾಕರಿಸಿದ ಯುವತಿ ; ಯುವಕನಿಂದ ಬರೋಬ್ಬರಿ 850 ಅಡಿಕೆ ಗಿಡ ನಾಶ!

KJ Staff
KJ Staff
Today News : Todays most important news

ಈ ದಿನದ ಪ್ರಮುಖ ಸುದ್ದಿಗಳು

1. ಮದುವೆ ನಿರಾಕರಿಸಿದ ಯುವತಿ ; ಯುವಕನಿಂದ ಬರೋಬ್ಬರಿ 850 ಅಡಿಕೆ ಗಿಡ ನಾಶ!

2 . 2023 ನೇ ಸಾಲಿನ ಆನೆ ಗಣತಿ : ಸುಮಾರು 350 ರಷ್ಟು ಆನೆಗಳ ಹೆಚ್ಚಳ! 

3 . ಸೆಪ್ಟೆಂಬರ್ 18ರಂದು ಗಣೇಶ ಚತುರ್ಥಿ : ಪರಿಸರ ಸ್ನೇಹಿ ಗಣೇಶ ಕೂರಿಸಲು ಮನವಿ

4 . ಗೃಹಲಕ್ಷ್ಮೀ ಯೋಜನೆಗೆ  ಆಗಸ್ಟ್ 27 ರಂದು ಚಾಲನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

5 . ಕಾಲು ಜಾರಿ ಬಿದ್ದ ಸಾಲುಮರದ ತಿಮ್ಮಕ್ಕ; ಆಸ್ಪತ್ರೆಗೆ ದಾಖಲು!

1 - ಮದುವೆ ಮಾಡಿಕೊಳ್ಳಲು ಹೆಣ್ಣು ಕೊಡದ ಕಾರಣಕ್ಕೆ ಯುವಕನೊಬ್ಬ ಹೆಣ್ಣಿನ ಮನೆಯವರ ಅಡಿಕೆ ತೋಟ ನಾಶ ಮಾಡಿದ್ದಾನೆ. ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲ ಎಂದು ಕೋಪಗೊಂಡ ಯುವಕ ಸುಮಾರು 850 ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾನೆ. 

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೆಂಕಟೇಶ್ ಪುತ್ರಿ ಸಿಂಚನಾಳನ್ನ ಅದೇ ಗ್ರಾಮದ ಅಶೋಕ್ ಎಂಬಾತನಿಗೆ ಕೊಟ್ಟು ವಿವಾಹ ಮಾಡಲು ನಿಶ್ಚಯಿಸಲಾಗಿತ್ತು.

ಆದರೆ, ಅಶೋಕ ಅವರ ನಡವಳಿಕೆ ಸರಿಯಿಲ್ಲ ಎಂಬ ಕಾರಣಕ್ಕೆ ಮದುವೆಗೆ ಯುವತಿ ಹಾಗೂ ಆಕೆಯ ತಂದೆ ನಿರಾಕರಿಸಿದ್ದರು ಎಂದು ತಿಳಿದು ಬಂದಿದೆ.

2 - ವಿಕಾಸಸೌಧದಲ್ಲಿ ನಿನ್ನೆ 2023ನೇ ಸಾಲಿನ ಆನೆ ಗಣತಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ನೂತನ ವರದಿಯ ಪ್ರಕಾರ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.

ರಾಜ್ಯದಲ್ಲಿ 2017ರಲ್ಲಿ ಸುಮಾರು 6049 ಆನೆಗಳಿದ್ದವು. ಈ ಬಾರಿ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಸರಿಸುಮಾರು 350 ರಷ್ಟು ಆನೆಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

ಇದು ಸಂತಸದ ವಿಷಯವಾಗಿದ್ದು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

3 - ನೀರಿನಲ್ಲಿ ಸರಿಯಾಗಿ ಕರಗದ ಮತ್ತು ಜಲ ಮೂಲಗಳನ್ನು ಕಲುಷಿತಗೊಳಿಸುವ ರಾಸಾಯನಿಕ ಬಣ್ಣ ಲೇಪಿತ, POP ಗಣಪತಿ ಮೂರ್ತಿಗಳ ತಯಾರಿಕೆ, ದಾಸ್ತಾನು ಮತ್ತು ಮಾರಾಟ ಮಾಡದಂತೆ ಜನಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಕಲುಷಿತ ನೀರು ಸೇವನೆಯಿಂದ ರಾಜ್ಯದ ವಿವಿಧೆಡೆಗಳಲ್ಲಿ ಜೀವಹಾನಿಯಾಗಿದ್ದು, ಅಮೂಲ್ಯವಾದ ಜನ, ಜಾನುವಾರುಗಳ ಜೀವ ಉಳಿಸಲು POP ಯಿಂದ ತಯಾರಿಸಿದ ಹಾಗೂ ಅಪಾಯಕಾರಿ ರಾಸಾಯನಿಕ ಬಣ್ಣ ಬಳಸಿದ ಮೂರ್ತಿಗಳ ತಯಾರಿಕೆ, ದಾಸ್ತಾನು, ಮಾರಾಟ ಮಾಡದಂತೆ ಜಾಗೃತಿ ಮೂಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಲಾಗಿದೆ ಎಂದರು.

ಈ ಬಾರಿ ಸೆಪ್ಟೆಂಬರ್ 18ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಪೂಜಿಸುವ ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿಕೊಳ್ಳುವೆ ಎಂದರು.

4 - ರಾಜ್ಯ ಸರ್ಕಾರದ ಬಹುನಿರೀಕ್ಷಿತ “ಗೃಹಲಕ್ಷ್ಮೀ” ಯೋಜನೆಗೆ ಇದೇ ತಿಂಗಳ 27 ರಂದು ಚಾಲನೆ ನೀಡಲಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದ್ದಾರೆ.

ಈ ಯೋಜನೆಗೆ ರಾಜ್ಯದ 11 ಸಾವಿರ ಕಡೆ ಚಾಲನೆ ಸಿಗಲಿದ್ದು, ಎಲ್ಲ ಗ್ರಾಮ ಪಂಚಾಯತಿ, ನಗರಸಭೆ, ಪುರಸಭೆ ಸೇರಿದಂತೆ ಆಯಾ ಸ್ಥಳಗಳಲ್ಲಿ ಈ ಯೋಜನೆಯ ಚಾಲನಾ ಸಮಾರಂಭ ನಡೆಯಲಿದೆ ಎಂದರು.

ಬೆಳಗಾವಿಯಲ್ಲೇ ”ಗೃಹಲಕ್ಷ್ಮೀ” ಯೋಜನೆಗೆ ಚಾಲನೆ ಸಿಗಬೇಕೆಂಬುದು ನನ್ನ ಕನಸು. ಈ ಕುರಿತು ಮಾನ್ಯ ಸಿಎಂ ಮತ್ತು ಡಿಸಿಎಂ ಬಳಿ ಮನವಿ ಸಲ್ಲಿಸಿದ್ದೆ. ನನ್ನ ಮನವಿಗೆ ಸ್ಪಂದಿಸಿ ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಸಹಕರಿಸುತ್ತಿದ್ದಾರೆ ಎಂದು ಅವರು ಸಂತಸ ವ್ಯಕತಪಡಿಸಿದ್ದಾರೆ.

5 -  ಕಾಲು ಜಾರಿ ಬಿದ್ದ ಸಾಲುಮರದ ತಿಮ್ಮಕ್ಕ ಅವರನ್ನು ಬೆಂಗಳೂರಿನ ಜಯನಗರದ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮರಗಳನ್ನೇ ಮಕ್ಕಳಂತೆ ಮಮಕಾರದಿಂದ ನೀರೆರೆದು ಪೋಷಿಸಿ ಮಾದರಿಯಾಗಿದ್ದ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರು ಜಾರಿಬಿದ್ದು ಗಾಯಗೊಂಡ ಕಾರಣ ಬೆಂಗಳೂರಿನ ಜಯನಗರ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಆಸ್ಪತ್ರೆಯಲ್ಲಿ ಸಾಲು ಮರದ ತಿಮ್ಮಕ್ಕನವರಿಗೆ ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಕಾಲು ಜಾರಿ ಬಿದ್ದ ಹಿನ್ನೆಲೆಯಲ್ಲಿ ಬೆನ್ನು ಮೂಳೆಯಲ್ಲಿ ನೋವು ಕಾಣಿಸಿಕೊಂಡಿದೆ. ಇನ್ನುಳಿದಂತೆ ಆರೋಗ್ಯವಾಗಿದ್ದಾರೆ. ಆದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Published On: 11 August 2023, 02:16 PM English Summary: Today News : Todays most important news

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.