ಕರ್ನಾಟಕದಲ್ಲಿ ಜೂನ್ ಎರಡನೇ ಅಥವಾ ಮೂರನೇ ವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೊರೋನಾದಿಂದಾಗಿ ವಿದ್ಯಾರ್ಥಿಗಳು ಆತಂಕಕ್ಕೊಳಗಾಗುವುದು ಬೇಡ. ವ್ಯವಸ್ಥಿತ ಹಾಗೂ ಸುರಕ್ಷಿತ ಪರೀಕ್ಷೆ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಭರವಸೆ ನೀಡಿದರು.
ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ 10ನೇ ತರಗತಿಯ ಪರೀಕ್ಷೆಗಳನ್ನು ಶೀಘ್ರವೇ ನಡೆಸಲು ತೀರ್ಮಾನಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು 20 ಅಥವಾ 30 ದಿನಗಳ ಒಳಗೆ ವೇಳಾಪಟ್ಟಿ ಪ್ರಕಟಿಸಲಾಗುವುದು. ಈ ವೇಳಾಪಟ್ಟಿ ಬಿಡುಗಡೆಯಾದ ದಿನ ಮತ್ತು ಪರೀಕ್ಷೆ ನಡೆಸುವ ದಿನಾಂಕದ ನಡುವೆ ಕನಿಷ್ಠ 15 ದಿನ ಅಂತರ ಇರುವಂತೆ ನೋಡಿಕೊಳ್ಳಲಾಗುವುದು. ಲಾಕ್‌ಡೌನ್ ಕಾರಣ ಮುಂದೂಡಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸಲು ತಕ್ಷಣ ಸಿದ್ಧತೆ ಆರಂಭಿಸುವಂತೆ ರಾಜ್ಯದ ಎಲ್ಲ ಜಿಲ್ಲೆಗಳ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ತಿಳಿಸಿದ್ದಾರೆ.
ಕೊರೊನಾ ನಂತರದ ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವಶ್ಯಕವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಗಳನ್ನು ನಿರ್ವಹಿಸುವ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದರು.
ಜ್ವರ ತಪಾಸಣೆ ಕಡ್ಡಾಯ: ‘ಪರೀಕ್ಷಾ ಕೊಠಡಿಗೆ ಬರುವ ವಿದ್ಯಾರ್ಥಿಗಳಿಗೆ ಮುಖಗವಸು, ಸ್ಯಾನಿಟೈಜರ್ ಒದಗಿಸಿ ಥರ್ಮಲ್ ತಪಾಸಣೆಗೆ ಒಳಪಡಿಸಬೇಕು. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಯಾವುದೇ ವಿದ್ಯಾರ್ಥಿ ನೆಲದ ಮೇಲಾಗಲೀ, ಬಯಲಿನಲ್ಲಾಗಲಿ ಕುಳಿತು ಪರೀಕ್ಷೆ ಬರೆಯದಂತೆ ಎಚ್ಚರ ವಹಿಸಬೇಕು’ ಎಂದು ಸಚಿವರು ಸೂಚಿಸಿದರು.
ಸುರಕ್ಷಿತ ವಲಯಕ್ಕೆ ಸ್ಥಳಾಂತರ: ‘ಕಂಟೈನ್‌ಮೆಂಟ್ ವಲಯಗಳಲ್ಲಿರುವ ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತ ವಲಯ
ಗಳಿಗೆ ಸ್ಥಳಾಂತರಿಸಲು ಕ್ರಮ ವಹಿಸಬೇಕು’ ಎಂದು ಸಚಿವರು ಸೂಚಿಸಿದರು.
ಪ್ರತಿ ಪರೀಕ್ಷಾ ಕೊಠಡಿಯಲ್ಲಿ ತಲಾ 24 ಮಕ್ಕಳ ಬದಲಿಗೆ ಕಡಿಮೆ ಸಂಖ್ಯೆಯಲ್ಲಿ ಮಕ್ಕಳನ್ನು ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕು, ಪ್ರತಿ ಕೇಂದ್ರದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ, ವೈದ್ಯಕೀಯ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ಸಮಗ್ರವಾದ ಕ್ರಿಯಾಯೋಜನೆ ತಯಾರಿಸಬೇಕು’ ಎಂದು ಅವರು ಸೂಚನೆ ನೀಡಿದರು.
Share your comments