1. ಸುದ್ದಿಗಳು

ರೆಪೋ ದರ ಮತ್ತಷ್ಟು ಇಳಿಕೆ, ಜನರಿಗೆ ಇನ್ನಷ್ಟು ಸಾಲದ ಹೊರೆ ಇಳಿಸಿದ ಆರ್.ಬಿ.ಐ

ಲಾಕ್‌ಡೌನ್ ಜಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಾಲಗಾರರ ನೆರವಿಗೆ ಧಾವಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ಬ್ಯಾಂಕ್‌ಗಳಿಂದ ಗ್ರಾಹಕರು ಪಡೆದಿರುವ ಗೃಹ, ವಾಹನ ಮತ್ತು ವೈಯುಕ್ತಿಕ ಸಾಲಗಳ ಮಾಸಿಕ ಕಂತು ಪಾವತಿಸಲು (ಇಎಂಐ) ಮತ್ತೆ 3 ತಿಂಗಳ ವಿನಾಯ್ತಿಯನ್ನು ವಿಸ್ತರಿಸಿ ಘೋಷಣೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಿಂದ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದ ನಂತರ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಮಾರ್ಚ್ 27 ಹಾಗೂ ಏಪ್ರಿಲ್ 17ರಂದು ಸುದ್ದಿಗೋಷ್ಠಿ ನಡೆಸಿ ಮಹತ್ವದ ಘೋಷಣೆ ಹೊರಡಿಸಿದ್ದರು. ಇದೀಗ ಮೂರನೇ ಬಾರಿ ಪತ್ರಿಕಾಗೋಷ್ಠಿ ನಡೆಸಿ ಮತ್ತಷ್ಟು ಮಹತ್ವದ ಘೋಷಣೆ ಪ್ರಕಟಿಸಿದ್ದಾರೆ.

ಕೊರೊನಾ ತಡೆಗೆ ಜಾರಿ ಮಾಡಿರುವ ಲಾಕ್‌ಡೌನ್ ಸಂದರ್ಭದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದವರು ಮರು ಪಾವತಿಗೆ ತೀವ್ರ ತೊಂದರೆಗೆ ಸಿಲುಕಿದ್ದನ್ನು ಗಮನಿಸಿದ್ದ ಆರ್‌ಬಿಐ, ಮಾರ್ಚ್ 1 ರಿಂದ 3 ತಿಂಗಳ ಕಾಲ ಇಎಂಐ ಪಾವತಿಗೆ ವಿನಾಯ್ತಿ ನೀಡಿತ್ತು. ಈಗ ಮತ್ತೆ 3 ತಿಂಗಳು ಇಎಂಐ ಪಾವತಿಸುವುದಕ್ಕೆ ವಿನಾಯ್ತಿಯನ್ನು ವಿಸ್ತರಿಸಿದ್ದು, ಸಾಲಗಾರರು ನಿಟ್ಟುಸಿರು ಬಿಡುವಂತಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ ಗೌರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂನ್ 1 ರಿಂದ ಆಗಸ್ಟ್ 31ರವರೆಗೆ ಸಾಲಗಾರರು ಇಎಂಐ ಪಾವತಿಸುವುದರಿಂದ ನಿಶ್ಚಿಂತೆಯಿಂದ ಇರಬಹುದು.

ಲಾಕ್‌ಡೌನ್‌ನಿಂದ ತೀವ್ರ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲು ಮುಂದಾಗಿರುವ ಆರ್‌ಬಿಐ, ರೆಪೋದರವನ್ನು 40 ಮೂಲ ಅಂಶಗಳಷ್ಟು (ಬೇಸಿಸ್ ಪಾಯಿಂಟ್ಸ್) ಕಡಿಮೆ ಮಾಡಿದೆ.

ರೆಪೋದರ ಶೇ. 4.4 ರಷ್ಟು ಇದ್ದದ್ದನ್ನು ಶೇ. 4 ಕ್ಕೆ ಕಡಿತಗೊಳಿಸಿದೆ. ರಿವರ್ಸ್ ರೆಪೋ ದರವನ್ನು ಶೇ. 3.75 ರಿಂದ ಶೇ. 3.35 ಕ್ಕೆ ಇಳಿಸಲು ತೀರ್ಮಾನಿಸಿದೆ. ರೆಪೋದರ ಇಳಿಕೆಯಿಂದ ಗೃಹ, ವಾಹನ ಹಾಗೂ ವೈಯುಕ್ತಿಕ ಸಾಲದ ಮೇಲಿನ ಬಡ್ಡಿ ದರವೂ ಕಡಿಮೆಯಾಗಲಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು.

ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ. 8.7 ಕ್ಕೆ ಇಳಿಕೆಯಾಗಿದೆ. ಮಾರುಕಟ್ಟೆ ಚೈತನ್ಯಕ್ಕಾಗಿ ಸಿಡ್ಬಿ (ಎಸ್ಐಡಿಬಿಐ) ಗೆ 3 ತಿಂಗಳಲ್ಲಿ 15 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಅಂಕಿ ಅಂಶಗಳ ಸಮೇತ ವಿವರಿಸಿದರು.

ಲಾಕ್‌‌‌ಡೌನ್ ಜಾರಿಯಿಂದ ಕಳೆದ ಎರಡು ತಿಂಗಳ ಅವಧಿಯಲ್ಲಿ ಆರ್ಥಿಕತೆ ಮೇಲೆ ದುಷ್ಪರಿಣಾಮ ಉಂಟಾಗಿದ್ದು, ಚೇತರಿಕೆಗೆ ಮತ್ತಷ್ಟು ಕಾಲಾವಕಾಶ ಅಗತ್ಯವಿದೆ ಎಂದು ಅವರು ಹೇಳಿದರು.

Published On: 22 May 2020, 08:50 PM English Summary: RBI extension of moratorium on loans

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.