ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳ ಬಳಕೆಗೆ ಮೊದಲು ಮಾಹಿತಿ ಪಡೆದುಕೊಳ್ಳುವುದು ಅವಶ್ಯ. ಮಿತವಾಗಿ ಬಳಸುವುದರಿಂದ ಅವುಗಳ ದುರ್ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು. ಕೀಟನಾಶಕ ಸಿಂಪರಣೆ ಮಾಡುವುದಕ್ಕಿಂತ ಮುಂಚೆ ಏನೇನು ಕ್ರಮಕೈಗೊಳ್ಳಬೇಕೆಂಬುದರ ಮಾಹಿತಿ ಇಲ್ಲಿದೆ.
- ನಾವು ಕೀಟ ನಾಶಕಗಳನ್ನು ಅಥವಾ ಪೀಡೆನಾಶಕಗಳನ್ನು ಬಳಸುವಾಗ ಪೀಡೆಗಳ ಸಂಖ್ಯೆ ಆರ್ಥಿಕ ಹಾನಿಯ ಮಟ್ಟಕ್ಕಿಂತ ಹೆಚ್ಚಿದೆಯೇ? ಎಂದು ಗಮನಿಸಬೇಕು, ಆರ್ಥಿಕ ಮಟ್ಟಕಿಂತ ಹೆಚ್ಚಿದ್ದಾಗ ಮಾತ್ರ ರಾಸಾಯನಿಕಗಳನ್ನು ಉಪಯೋಗಿಸಬೇಕು. ಇದರಿಂದ ಅನಾವಶ್ಯಕ ಖರ್ಚು ಮತ್ತು ಅನಾವಶ್ಯಕ ಬಳಕೆಯನ್ನು ತಡೆಯಬಹುದು.
- ಶಿಫಾರಸ್ಸು ಮಾಡಿದಂತಹ ಪೀಡೆನಾಶಕಗಳನ್ನು ನಿಗದಿಪಡಿಸಿರುವ ಪ್ರಮಾಣದಲ್ಲಿ, ನಿಗದಿತ ಬೆಳೆಗಳಿಗೆ ಮಾತ್ರ ಉಪಯೋಗಿಸಬೇಕು.
- ಇತರೆ ಹತೋಟಿ ಕ್ರಮಗಳನ್ನು ಬಳಸಿ ಕೀಟ ಹತೋಟಿ ಮಾಡಬೇಕು, ಸಾಧ್ಯವಾಗದ ಸಂದರ್ಭದಲ್ಲಿ ಪೀಡೆನಾಶಕಗಳ ಬಳಕೆ ಅಂತಿಮ ಆಯ್ಕೆಯಾಗಬೇಕು.
- ಅವೈಜ್ಞಾನಿಕವಾಗಿ ಸಿಂಪರಣೆ ಹಾಗೂ ವೈಜ್ಞಾನಿಕವಾಗಿ ಎರಡರಿಂದ ಮೂರು ಕೀಟನಾಶಕಗಳನ್ನು ಬೆರೆಸಿ ಸಿಂಪಡಿಸುವುದರಿಂದ ಹೆಚ್ಚಿನ ಹತೋಟಿ ಸಾಧ್ಯವಿಲ್ಲ ಹಾಗೂ ಇದರಿಂದ ಖರ್ಚುಹೆಚ್ಚಾಗುತ್ತದೆ.
- ಒಂದೇ ರೀತಿಯ ಕೀಟನಾಶಕವನ್ನು ಪದೇಪದೇ ಅದೇ ಬೆಳೆಗೆ ಉಪಯೋಗಿಸಬಾರದು.
- ಎರಡು ಸಿಂಪರಣೆಗಳ ಮಧ್ಯೆಎಂಟರಿಂದ ಹದಿನೈದು ದಿನಗಳ ಅಂತರವಿರಬೇಕು.
- ಕೀಟನಾಶಕಗಳ ಸುರಕ್ಷಿತ ಬಳಕೆ
- ಕೀಟನಾಶಕಗಳನ್ನು ಬೆಳಗ್ಗೆ ಅಥವಾ ಸಂಜೆ ಸಿಂಪರಣೆ ಮಾಡಬೇಕು.
- ಪೀಡೆನಾಶಕಗಳನ್ನು ಯಾವುದೇ ತಿನ್ನುವ ಆಹಾರಪದಾರ್ಥಗಳ ಜೊತೆ ಶೇಖರಣೆಮಾಡಬಾರದು.
- ಕೀಟನಾಶಕ ಬಳಸಿದ ನಂತರ ಉಳಿದ ಕೀಟನಾಶಕವನ್ನು ಅದೇ ಡಬ್ಬಿಯಲ್ಲಿ ಶೇಖರಿಸಿಡಬೇಕು.
- ಮಕ್ಕಳ ಕೈಗೆ ಸಿಗುವ ಹಾಗೆ ಕೀಟನಾಶಕಗಳನ್ನು ಶೇಖರಿಸುವುದು ಅಪಾಯ.
- ಚಿಕ್ಕಮಕ್ಕಳು ಮೈಮೇಲೆ ಗಾಯವಿರುವವರು ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರು ಸಿಂಪರಣೆ ಮಾಡಬಾರದು.
- ಸಿಂಪರಣೆ ಮಾಡುವಾಗ ಮೈ-ಕೈ ಮುಚ್ಚುವ ಹಾಗೆ ಕೋಟು,ಕನ್ನಡಕ, ಕೈಚೀಲ ಹಾಗೂ ಬೂಟುಗಳನ್ನು ಧರಿಸಿದರೆ ಉತ್ತಮ.
- ನಾಜಲ್ಗಳನ್ನು ಬಾಯಿಯಿಂದ ಊದಿ ಸರಿಪಡಿಸಲು ಯತ್ನಿಸಬಾರದು.
- ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಸಿಂಪಡಣೆ ಮಾಡಬಾರದು ಹಾಗೂ ಸಿಂಪಡಣೆ ಮಾಡುವಾಗ ಗಾಳಿಯ ವೇಗ ಕಡಿಮೆಇರಬೇಕು.
- ಸಿಂಪಡಿಸುವಾಗ ಆಹಾರ, ಹಣ್ಣು-ಹಂಪಲು, ಧೂಮಪಾನ, ಮದ್ಯಪಾನ ಮಾಡಬಾರದು.
- ಸಿಂಪರಣಾ ಉಪಕರಣಗಳನ್ನು ಸ್ವಚ್ಛನೀರಿ ನಿಂದತೊಳೆದು ಒಣಗಿಸಿ ಇಡಬೇಕು.
- ಬಾವಿಯಲ್ಲಿ, ಕೆರೆಯಲ್ಲಿ, ದನಕರು ನೀರು ಕುಡಿಯುವ ತೊಟ್ಟಿಯಲ್ಲಿ, ನಾಲೆಗಳಲ್ಲಿ ಸಿಂಪರಣಾ ಉಪಕರಣಗಳನ್ನು ತೊಳೆಯಬಾರದು.
- ಸಿಂಪಡಣೆ ಮಾಡಿದ ನಂತರ ಉಳಿದ ನೀರು ಮಿಶ್ರಿತ ರಾಸಾಯನಿಕವನ್ನು ಶೇಖರಿಸಿಡಬಾರದು.
- ಸಿಂಪರಣೆ ಮಾಡಿದ ಪ್ರದೇಶದಲ್ಲಿ ಹಸು, ಕರು, ಕುರಿ, ಮೇಕೆ ಮುಂತಾದ ರಾಸುಗಳನ್ನು ಮೇಯಲು ಬಿಡಬಾರದು.
- ಹೊಲದ ಒಂದು ಮೂಲೆಯಲ್ಲಿ ಆಳವಾದ ಗುಂಡಿತೋಡಿ ಅಲ್ಲಿಗೆ ಖಾಲಿಯಾದ ಕೀಟನಾಶಕಗಳ ಡಬ್ಬಿಯನ್ನು ಹಾಕಿ ಮಣ್ಣಿನಲ್ಲಿ ಮುಚ್ಚಬೇಕು.
- ತೆಂಗಿನಲ್ಲಿ ಕೀಟನಾಶಕಗಳ ಬೇರುಣಿಸುವ ಮುನ್ನ ಎಳನೀರು ಅಥವಾ ಕಾಯಿಗಳನ್ನು ಕೀಳಬೇಕು. ಬೇರುಣಿಸಿದ ನಂತರ 30ರಿಂದ 35 ದಿನಗಳವರೆಗೆ ಗಿಡದಿಂದ ತೆಂಗಿನಕಾಯಿ ಅಥವಾ ಎಳನೀರು ಕೀಳಬಾರದು.
- ಸಿಂಪಡಿಸಿದನಂತರ ಸ್ನಾನಮಾಡಬೇಕು, ನಂತರ ಶುಭ್ರ ಬಟ್ಟೆ ಧರಿಸಬೇಕು.
- ಸಿಂಪರಣೆ ಮಾಡಿದ ನಂತರ ಸುರಕ್ಷಿತ ಅವಧಿ ಮುಗಿಯುವವರೆಗೂ ಬೆಳೆ ಕಟಾವು ಮಾಡಬಾರದು,ಹಣ್ಣು-ಕಾಯಿ ಕೀಳಬಾರದು.
- ಕಣ್ಣಿಗೆ, ಮೈಮೇಲೆ, ಚರ್ಮದ ಮೇಲೆ ಕೀಟನಾಶಕ ಬಿದ್ದರೆ,ಹೆಚ್ಚು ನೀರು ಬಳಸಿ ಸ್ವಚ್ಛ ಗೊಳಿಸಬೇಕು.
- ಕೀಟನಾಶಕ ಸೇವಿಸಿದಲ್ಲಿ ಹಾಲು ಅಥವಾ ನೀರು ಮತ್ತು ಹಿಟ್ಟನ್ನು ಮಿಶ್ರಣಮಾಡಿ ಕುಡಿಸಿವಾಂತಿ ಮಾಡಿಸಬೇಕು,ಆಗ ಹೊಟ್ಟೆಯಲ್ಲಿನ ವಿಷ ಪದಾರ್ಥದ ಪರಿಣಾಮ ಕಡಿಮೆಯಾಗುತ್ತದೆ. ತದನಂತರ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಕೀಟನಾಶಕದ ಬಾಟಲಿ ಅಥವಾ ಡಬ್ಬವನ್ನು ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆನೀಡಬೇಕು.
ಲೇಖಕರು: 1. ರಾಖೇಶ್.ಎಸ್, ಪ್ರಥಮ ವರ್ಷದ ಎಂ.ಎಸ್ಸಿ (ಕೃಷಿ), ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು-584104.
2. ಡಾ.ಎಸ್.ಜಿ.ಹಂಚಿನಾಳ್, ಸಹಾಯಕ ಪ್ರಾಧ್ಯಾಪಕರು, ಮುಖ್ಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು-584104.
Share your comments