ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುವ ಸುಸಜ್ಜಿತವಾದ ಪಶು ಸಂಜೀವಿನಿ ವಾಹನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಪಶು ಸಂಗೋಪನೆ ಇಲಾಖೆಯ 15 ಸುಸಜ್ಜಿತ ಪಶು ಶಸ್ತ್ರಚಿಕಿತ್ಸಾ ವಾಹನ “ಪಶು ಸಂಜೀವಿನಿ’ (Pashu Sanjeevini) ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
,ಪಶುಸಂಗೋಪನೆ ಇಲಾಖೆ ರೈತರ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕೃಷಿಯ ಜತೆಗೆ ಪಶುಪಾಲನೆಯಲ್ಲಿ ತೊಡಗಿದವರು ಜಾನುವಾರು ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಸದ್ಯ 15 ಜಿಲ್ಲೆಗಳಿಗೆ ಪಶು ಸಂಜೀವಿನಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು. ರಾಜ್ಯದಲ್ಲಿ ಮೊದಲ ಬಾರಿಗೆ ಇದನ್ನು ಜಾರಿಗೆ ತರಲಾಗುತ್ತಿದ್ದು ಜಾನುವಾರಗಳ ಆರೋಗ್ಯ ರಕ್ಷಣೆಗೆ ಸರ್ಕಾರ ಸಜ್ಜಾಗಿದ್ದು ರೈತರ ಕರೆಗಳಿಗೆ ತುರ್ತಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಲಿದೆ. ಈ ಸೇವೆಗಳನ್ನು ಇಲಾಖೆಯ ಹೆಲ್ಪಲೈನ್ (Help line)ಸೇವೆಗಳಿಗೆ ಲಿಂಕ್ ಮಾಡಿ 24 X 7 ಜಾನುವಾರುಗಳ ರಕ್ಷಣೆಗೆ ಉದ್ದೇಶಿಸಲಾಗಿದೆ. 2019-20 ನೇ ಸಾಲಿನ ಬಜೆಟ್ ಘೋಷಣೆಯ ರೂ. 2 ಕೋಟಿ ಅನುದಾನ ಮತ್ತು ಇಲಾಖೆಯ ಇತರೆ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ್ ಮಾತನಾಡಿ, ಸುಸಜ್ಜಿತ ಆಂಬ್ಯುಲೆನ್ಸ್ (Ambulance) ವಾಹನದಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಾದ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗಶಾಲೆ, ಸ್ಕ್ಯಾನಿಂಗ್ ಉಪಕರಣ ಅಳವಡಿಕೆ ಮಾಡಲಾಗಿರುತ್ತದೆ. 250 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಇದ್ದು, 200 ಕೆ.ಜಿ. ತೂಕ ಸಾಮರ್ಥ್ಯದ ಶಸ್ತ್ರ ಚಿಕಿತ್ಸಾ ಟೇಬಲ್, ಎ.ಸಿ. ವ್ಯವಸ್ಥೆ, ಪಶುವೈದ್ಯರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಿದೆ. ಮನುಷ್ಯರ ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಸಲಕರಣೆಗಳಂತೆ ಎಲ್ಲ ಸಲಕರಣಗಳು ಪಶು ಆ್ಯಂಬುಲೆನ್ಸ್ನಲ್ಲಿ ಇರುತ್ತವೆ. ಇದಲ್ಲದೆ ಶಸ್ತ್ರಚಿಕಿತ್ಸಾ ಉಪಕರಣಗಳ ಕಿಟ್, ಮರಣೋತ್ತರ ಪರೀಕ್ಷೆ ಉಪಕರಣಗಳ ಕಿಟ್, ಪ್ರಸೂತಿ ಕಿಟ್ಗಳು ಮತ್ತು ಇತರೆ ಉಪಕರಣಗಳನ್ನು ಇಡಲು ಕಪಾಟುಗಳ ವ್ಯವಸ್ಥೆ ಒದಗಿಸಲಾಗಿದೆ.
Share your comments