1. ಸುದ್ದಿಗಳು

ಈರುಳ್ಳಿ ಬೆಲೆ- ರೈತರಿಗೆ 1 ರೂ. ಗ್ರಾಹಕರಿಗೆ 20 ರೂ.; ದಲ್ಲಾಳಿಗಳ ಜೇಬು ಸೇರುತ್ತಿರುವ ಲಾಭವೆಷ್ಟು?

ಈರುಳ್ಳಿ ಬೆಲೆ ಮತ್ತೊಮ್ಮೆ ಸುದ್ದಿ ಮಾಡುತ್ತಿದೆ. ಎರಡು ವರ್ಷಗಳ ಹಿಂದೆ ಒಂದು ಕೆ.ಜಿ.ಗೆ 100 ರೂಪಾಯಿ ತಲುಪುವ ಮೂಲಕ ದಾಖಲೆ ಬರೆದು ಗ್ರಾಹಕರ ಕಣ್ಣುಗಳಲ್ಲಿ ನೀರು ತರಿಸಿದ್ದ ಈರುಳ್ಳಿ, ಈ ಬಾರಿ ರೈತರ ಕಣ್ಣಲ್ಲಿ ನೀರು ಹರಿಸುತ್ತಿದೆ. ಜೊತೆಗೆ ಗ್ರಾಹಕರೂ ಕೊಂಚ ಅಳುಮುಖ ಮಾಡಿಕೊಂಡಿದ್ದಾರೆ. ಆದರೆ, ಇವರಿಬ್ಬರ ನಡುವೆ ಸದ್ದಿಲ್ಲದೆ ಜೇಬು ತುಂಬಿಸಿಕೊAಡು ಗಹಗಹಿಸಿ ನಗುತ್ತಿರುವುದು ಮಾತ್ರ ದಲ್ಲಾಳಿಗಳು.

ಇತ್ತೀಚಿನ ಒಂದೆರಡು ವಾರಗಳಿಂದ ಎಲ್ಲೆಲ್ಲೂ ಈರುಳ್ಳಿ ಬೆಲೆಯದ್ದೇ ಚರ್ಚೆ ನಡೆಯುತ್ತಿದೆ. ರೈತರು ಬೆಲೆ ಹೆಚ್ಚಾಗುತ್ತಿಲ್ಲ ಎಂದು ಚಿಂತಿಸಿದರೆ, ಗ್ರಾಹಕರು ಬೆಲೆ ಕಡಿಮೆಯಾಗುತ್ತಿಲ್ಲ ಎಂದು ಸಂಕಟಪಡುತ್ತಿದ್ದಾರೆ. ಬೆಳಗಾವಿ, ಹಬ್ಬಳ್ಳಿ-ಧಾರವಾಡ, ಬಿಜಾಪುರ, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ, ಗದಗ ಮೊದಲಾದ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆದ ರೈತರು, ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಫಸಲನ್ನು ರಸ್ತೆಗೆ ಸುರಿಯುವ ಆಲೋಚನೆಯಲ್ಲಿದ್ದಾರೆ. ಇನ್ನೂ ಕೆಲವು ರೈತರು ಬೆಳೆ ಕಟಾವು ಮಾಡಿದ ಕುಲಿ ಕೂಡ ಸಿಗುವುದಿಲ್ಲ ಎಂದು ಈರುಳ್ಳಿ ಕಟಾವು ಮಾಡದೆ ಹಾಗೇ ಬಿಟ್ಟಿದ್ದಾರೆ. ಇತ್ತ ಚಿತ್ರದುರ್ಗ ಜಿಲ್ಲೆಯ ರೈತರೊಬ್ಬರು ಟ್ರಾö್ಯಕ್ಟರ್‌ಗೆ ಕಲ್ಟಿವೇಟರ್ ಹಾಕಿಕೊಂಡು ಈರುಳ್ಳಿ ಬೆಳೆಯನ್ನೆಲ್ಲಾ ಹಾಳು ಮಾಡಿದ್ದಾರೆ.

ಒಂದೆಡೆ ಈರುಳ್ಳಿ ಬೆಳೆದ ರೈತರಿಗೆ ಕನಿಷ್ಠ ಬೆಲೆ ಕೂಡ ಸಿಗುತ್ತಿಲ್ಲ. ಮತ್ತೊಂದೆಡೆ ಗ್ರಾಹಕರಿಗೂ ಕಡಿಮೆ ಬೆಲೆಗೆ ಈರುಳ್ಳಿ ದೊರೆಯುತ್ತಿಲ್ಲ. ಸೆಪ್ಟೆಂಬರ್ 15, 16ರರಂದು ಚಿತ್ರದುರ್ಗ ಮತ್ತು ದಾವಣಗೆರೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಒಂದು ಕೆ.ಜಿ ಈರುಳ್ಳಿಗೆ ಧಾರಣೆ ಕೇವಲ 50 ಪೈಸೆಯಿಂದ ಒಂದು ರೂಪಾಯಿ ಇತ್ತು. ಆದರೆ ಅದೇ ದಿನ ರಾಜ್ಯದ ವಿವಿಧ ಮಾರುಕಟ್ಟೆಗಳು ಹಾಗೂ ಸಂತೆಗಳಲ್ಲಿ ಒಂದು ಕೆ.ಜಿ ಈರುಳ್ಳಿಗೆ 20 ರೂ. ಕೊಟ್ಟು ಗ್ರಾಹಕರು ಖರೀದಿ ಮಾಡಿದ್ದಾರೆ. ರೈತರು ಮಾರಾಟ ಮಾಡುತ್ತಿರುವ ಬೆಲೆ ಮತ್ತು ಗ್ರಾಹಕರು ಖರೀದಿಸುತ್ತಿರುವ ಬೆಲೆ ನಡುವೆ ಇಷ್ಟೊಂದು ವ್ಯತ್ಯಾಸವೇಕೆ? ಹಾಗಾದರೆ ರೈತರಿಗೂ ಸಿಗದ, ಗ್ರಾಹಕರ ಬಳಿಯೂ ಉಳಿಯದ ಈ ಹಣ ಯಾರ ಜೇಬು ಸೇರುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರವಾಗಿ ನಿಲ್ಲುವವರೇ ದಲ್ಲಾಳಿಗಳು.

ಆಡ ಹಗಲೇ ರೈತರ, ಗ್ರಾಹಕರ ದರೋಡೆ!

ರೈತರು ಮತ್ತು ಗ್ರಾಹಕರನ್ನು ಆಡ ಹಗಲೇ ದರೋಡೆ ಮಾಡಲಾಗುತ್ತಿದೆ. ಅತ್ತ ರೈತರಿಂದ ನ್ಯಾಯಯುತ ಬೆಲೆಗೆ ಖರೀದಿ ಮಾಡದೆ, ಇತ್ತ ಗ್ರಾಹಕರಿಗೂ ಕಡಿಮೆ ಬೆಲೆಗೆ ಮಾರಾಟ ಮಾಡದ ದಲ್ಲಾಳಿಗಳು ಈರುಳ್ಳಿ ಹೆಸರಲ್ಲಿ ಶ್ರೀಮಂತರಾಗುತ್ತಿದ್ದಾರೆ. ಒಂದೆಡೆ ಈರುಳ್ಳಿ ಬೆಳೆದ ರೈತ ಮನೆ-ಮಠ ಮಾರಿಕೊಂಡು ಬೀದಿಗೆ ಬಿದ್ದರೆ, ಆತನಿಂದ ಬೆಳೆ ಖರೀದಿಸಿದ ದಲ್ಲಾಳಿಗಳು ಮನೆ ಮೇಲೆ ಮನೆ ಕಟ್ಟುತ್ತಿದ್ದಾರೆ. ರೈತರಿಗೆ ಸಿಗುವುದು ಒಂದು ರೂಪಾಯಿ ಮತ್ತು ಗ್ರಾಹಕರು ಕೊಡುವುದು 20 ರೂಪಾಯಿ. ಈ ಎರಡೂ ದರಗಳ ನಡುವೆ ವ್ಯತ್ಯಾಸವಾಗಿ ಕಾಣುವ 19 ರೂಪಾಯಿಯ ಸಂಪೂರ್ಣ ಲಾಭ ದಲ್ಲಾಳಿಗಳ ಪಾಲಾಗುತ್ತಿದೆ. ದಲ್ಲಾಳಿಗಳು ಒಂದು ಕೆ.ಜಿ ಈರುಳ್ಳಿಯಿಂದ ಕನಿಷ್ಠವೆಂದರೂ 15 ರೂಪಾಯಿ ಲಾಭ ಪಡೆಯುತ್ತಿದ್ದಾರೆ.

ಈರುಳ್ಳಿ ಹೆಸರಲ್ಲಿ ಕೋಟಿ ಲೂಟಿ

ಒಂದು ಅಂದಾಜಿನ ಪ್ರಕಾರ ಈ ಬಾರಿ ಒಂದು ಎಕರೆಗೆ 25ರಿಂದ 30 ಕ್ವಿಂಟಾಲ್ ಈರುಳ್ಳಿ ಇಳುವರಿ ಬಂದಿದೆ. ರಾಜ್ಯದಾದ್ಯಂತ ಅಂದಾಜು 2.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಸರಾಸರಿ ಇಳುವರಿ ಹಾಗೂ ಒಟ್ಟು ಬೆಳೆ ಪ್ರದೇಶವನ್ನು ತಾಳೆ ಹಾಕಿ ನೋಡಿದರೆ ರಾಜ್ಯದಲ್ಲಿ ಈ ಬಾರಿ 75 ಲಕ್ಷ ಕ್ವಿಂಟಾಲ್ ಈರುಳ್ಳಿ ಬೆಳೆಯಲಾಗಿದೆ. ಒಂದು ಕೆಜಿಗೆ ದಲ್ಲಾಳಿಗಳು 15 ರೂ. ಲಾಭ ಪಡೆಯುತ್ತಿದ್ದಾರೆ ಅಂದುಕೊಂಡರೆ ಒಟ್ಟಾರೆ ದಲ್ಲಾಳಿಗಳ ಜೇಬು ಸೇರುತ್ತಿರುವ ಹಣ ಬರೋಬ್ಬರಿ 11.25 ಕೋಟಿ ರೂಪಾಯಿ. ಜೊತೆಗೆ ಇಷ್ಟೊಂದು ಹಣ ಗ್ರಾಹಕರಿಂದ ದಲ್ಲಾಳಿಗಳ ತಿಜೋರಿ ಸೇರಲು ತಗುಲುವ ಸಮಯ ಕೇವಲ 20 ರಿಂದ 30 ದಿನಗಳು ಎಂದರೆ ನೀವು ನಂಬಲೇಬೇಕು!

ಟ್ರ್ಯಾಕ್ಟರ್ ಹರಿಸಿದ ರೈತ

‘60 ಸಾವಿರ ರೂ. ಖರ್ಚು ಮಾಡಿ ಒಂದು ಎಕರೆ ಈರುಳ್ಳಿ ಬೆಳೆದಿದ್ದೆ. ಕೊಯ್ಲಿಗೆ ಬಂದಾಗ ಗೆಡ್ಡೆಗೆ ಕೊಳೆ ರೋಗ ತಗುಲಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ. ಈರುಳ್ಳಿ ಕೊಯ್ಲು ಮಾಡಿ ಬೆಂಗಳೂರು ಮಾರುಕಟ್ಟೆಗೆ ಒಯ್ಯಲು ಕನಿಷ್ಠ ಒಂದು ಚೀಲಕ್ಕೆ 120-130 ರೂ. ಖರ್ಚಾಗುತ್ತದೆ. ಬಿತ್ತನೆ ಬೀಜ, ರಸಗೊಬ್ಬರ, ಔಷಧ ಸಿಂಪಡಣೆ, ಕಳೆ ಕೀಳಿಸಿದ್ದು, ಮನೆಯವರ ಶ್ರಮದ ವೆಚ್ಚವನ್ನೆಲ್ಲಾ ಸೇರಿಸಿದರೆ ಒಂದು ಚೀಲ ಈರುಳ್ಳಿಯನ್ನು ಬೆಂಗಳೂರಿನ ಮಾರುಕಟ್ಟೆಗೆ ಕೊಂಡೊಯ್ಯಲು 400 ರೂ. ಖರ್ಚಾಗುತ್ತದೆ. ಆದರೆ, ಮಾರುಕಟ್ಟೆಗೆ ಒಯ್ದರೆ ಸಿಗುವುದು ಚೀಲಕ್ಕೆ ಹೆಚ್ಚೆಂದರೆ 250 ರೂ. ಇಂತಹ ಚಂದಕ್ಕೆ ಕೊಯ್ಲು ಏಕೆ ಮಾಡಬೇಕೆಂದು ಈರುಳ್ಳಿ ಹೊಲದಲ್ಲಿ ಟ್ರ್ಯಾಕ್ಟರ್ ಹೊಡೆಸಿದ್ದೇನೆ. ಇಂತಹ ಪರಿಸ್ಥಿತಿ ಯಾವ ರೈತರಿಗೂ ಬರಬಾರದು’ ಎಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವೀರವ್ವನಾಗತಿಹಳ್ಳಿ ಗ್ರಾಮದ ರೈತ ಹರೀಶ್ ಅಳಲು ತೋಡಿಕೊಳ್ಳುತ್ತಾರೆ.

ಈರುಳ್ಳಿ ವ್ಯಾಪಾರವೇನೂ ಕದ್ದು ಮುಚ್ಚಿ ನಡೆಯುತ್ತಿಲ್ಲ. ರಾಜ್ಯದ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸರ್ಕಾರದ ಕಣ್ಗಾವಲಿನಲ್ಲೇ ಬೆಳೆಯ ವ್ಯಾಪಾರ-ವಹಿವಾಟು ನಡೆಯುತ್ತಿದೆ. ಹಾಗೇ ಸರ್ಕಾರದ ಕಣ್ಣೆದುರೇ ದಲ್ಲಾಳಿಗಳು ರೈತರಿಗೆ ಅನ್ಯಾಯ ಎಸಗುತ್ತಿದ್ದಾರೆ. ಈರುಳ್ಳಿಯ ಬೆಲೆ ಕುಸಿತ ಹಾಗೂ ಅದರಿಂದ ರೈತರು ಅನುಭವಿಸುತ್ತಿರುವ ನಷ್ಟದ ಬಗ್ಗೆ ಮಾಧ್ಯಮಗಳು ಪ್ರತಿ ದಿನ ವರದಿ ಮಾಡುತ್ತಲೇ ಇವೆ. ಆದರೆ ಸರ್ಕಾರವೇಕೆ ರೈತರಿಗೆ ಆಗುತ್ತಿರುವ ಈ ಅನ್ಯಾಯ ತಡೆಯಲು ಮನಸ್ಸು ಮಾಡುತ್ತಿಲ್ಲ ಎಂಬ ಪ್ರಶ್ನೆ ಈರುಳ್ಳಿ ಬೆಳೆಗಾರರನ್ನು ಕಾಡುತ್ತಿದೆ.

Published On: 19 September 2021, 01:59 PM English Summary: onion Price- how much money is going to broker's pocket?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.