ಇಷ್ಟು ದಿನಗಳ ಕಾಲ ಅಡಿಕೆ ಬೆಳೆಗಾರರು ತಾವು ಬೆಳೆದ ಅಡಿಕೆಯನ್ನು ತಾವೇ ಅಂಗಡಿ ಹೋಗಿ ಮಾರಾಟ ಮಾಡಬೇಕಾಗಿತ್ತು. ಆದರೆ ಇದೀಗ ಕಾಲ ಬದಲಾಗುತ್ತಿದೆ ಇನ್ನು ಮುಂದೆ ಕೃಷಿಕನ ಮನೆಗೆ ಹೋಗಿ ಕಂಪನಿಯೊಂದು ಅಡಿಕೆ ಖರೀದಿ ನಡೆಸಲಿದೆ.
ಹೌದು ನೇರವಾಗಿ ರೈತನ ಮನೆಗೆ ಹೋಗಿ ಅಡಿಕೆ ಖರೀದಿ ಮಾಡುವ 'ಕ್ಯಾಂಪ್ಕೋ ಆನ್ ವೀಲ್' ಯೋಜನೆಯನ್ನು ಕ್ಯಾಂಪ್ಕೋ ಸಂಸ್ಥೆ ಜಾರಿ ಮಾಡಲಿದೆ.
ಮಂದಿನ ವರ್ಷ ಜನವರಿಯಿಂದ ರೈತನ ಮನೆಯಿಂದಲೇ ಅಡಿಕೆ ಖರೀದಿ ಮಾಡುವ 'ಕ್ಯಾಂಪ್ಕೋ ಆನ್ ವೀಲ್' ಯೋಜನೆ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಈ ಯೋಜನೆ ಆರಂಭಿಸಲಾಗಿದೆ.ಮಂದಿನ ವರ್ಷದಿಂದ ಎಲ್ಲ ಪ್ರದೇಶಗಳಿಗೂ ವಿಸ್ತರಿಸುವ ಚಿಂತನೆಯಿದೆ. . ಕ್ಯಾಂಪ್ಕೋ ಸದಸ್ಯರಲ್ಲಿ ಅನೇಕರು ಹಿರಿಯ ನಾಗರಿಕರು. ಅವರಿಗೆ ಅಡಿಕೆ ಸುಲಿದು ಪರಿಷ್ಕರಿಸಿದ ನಂತರ ಕ್ಯಾಂಪ್ಕೋ ಶಾಖೆಗಳಿಗೆ ಒಯ್ದು ಮಾರಾಟಕ್ಕೆ ಕಷ್ಟವಾಗುತ್ತಿದೆ. ಕಾರ್ಮಿಕರು ಸಮಯಕ್ಕೆ ಒದಗಿಸುವುದು ಕೂಡಾ ಕಡಿಮೆಯಾಗಿರುವುದನ್ನು ಗಮನಿಸಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರಿಂದ ಕ್ಯಾಂಪ್ಕೋ ಮತ್ತು ಸದಸ್ಯರ ನಡುವೆ ಬಾಂಧವ್ಯ ವೃದ್ಧಿ ಆಗುವ ಜತೆಗೆ ಸದಸ್ಯರ ಸಾಗಾಟದ ಶ್ರಮ ಕಡಿಮೆಯಾಗಲಿದ್ದು, ಖಾಸಗಿಯವರ ಮುಷ್ಟಿಯಿಂದ ಸದಸ್ಯರನ್ನು ರಕ್ಷಿಸುವ ಹೊಣೆಗಾರಿಕೆಯೂ ಈಡೇರಲಿದೆ ಎಂದು ಅವರು ಹೇಳಿದರು.
ಗ್ರಾಹಕರಿಗೆ ಕ್ಯಾಂಪ್ಕೋದ ಎಲ್ಲ ರೀತಿಯ ಚಾಕಲೇಟ್ಗಳನ್ನು ಪರಿಚಯಿಸುವ ಮತ್ತು ಸುಲಭವಾಗಿಸುವ ದೃಷ್ಟಿಯಿಂದ ಬೆಂಗಳೂರು ಮತ್ತು ಪುತ್ತೂರಿನಲ್ಲಿ ವಿಶೇಷ ಚಾಕಲೇಟು ಕಿಯೋಸ್ಕ್ಗಳು ಕಾರ್ಯಪ್ರವೃತ್ತವಾಗಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸ್ಪೈಸ್ ಟೋಫಿ ಎಂಬ ಹೊಸ ಚಾಕಲೇಟು ಉತ್ಪನ್ನ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಉತ್ತಮ ಬೇಡಿಕೆ ಇದೆ ಎಂದರು.
ಅಮೆಝಾನ್ನಲ್ಲಿ ಸಿಗಲಿದೆ ಕ್ಯಾಂಪ್ಕೋ ಅಡಿಕೆ, ಕಾಳು ಮೆಣಸು!
ಕ್ಯಾಂಪ್ಕೋ ಸಂಸ್ಥೆಯು ಅಡಿಕೆ ಹಾಗೂ ಕಾಳುಮೆಣಸನ್ನು ಶೀಘ್ರದಲ್ಲೇ 'ಅಮೆಝಾನ್' ಆನ್ಲೈನ್ ಮೂಲಕ ಮಾರಾಟ ಮಾಡಲಿದೆ. ಈಗಾಗಲೇ ಕ್ಯಾಂಪ್ಕೋ ಚಾಕಲೇಟ್ ಅಮೆಝಾನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಇದೀಗ ಅಡಿಕೆ ಹಾಗೂ ಕಾಳು ಮೆಣಸು ಕೂಡಾ ಗ್ರಾಹಕರಿಗೆ ಪ್ಯಾಕ್ ಮಾಡಿ ಅಮೆಝಾನ್ನಲ್ಲಿ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
Share your comments