ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ತರಕಾರಿ, ಹೂವು ಖರೀದಿಗೆ ವರ್ತಕರು ಬಾರದೆ ಲೋಡ್ ಗಟ್ಟಲೇ ತರಕಾರಿ ಉಳಿದುಕೊಳ್ಳುತ್ತಿದೆ. ಇದರಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.
ಕೋವಿಡ್ 2ನೇ ಅಲೆಯನ್ನು ತಡೆಯುವುದಕ್ಕಾಗಿ ಸರ್ಕಾರ ಹೇರಿದ್ದ ಜನತಾ ಕರ್ಫ್ಯೂ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ. ನಾಲ್ಕು ಗಂಟೆಗಳ ಕಾಲ ನೀಡಿದ ಸಮಯಾವಕಾಶದಲ್ಲೇ ವ್ಯಾಪಾರ ವಹಿವಾಟು ಮುಗಿಸಲು ನಿಗದಿಮಾಡಿದ್ದರಿಂದ ಖರೀದಿದಾರರು ಬಾರದೆ ರೈತರು ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ದಲ್ಲಾಳಿಗಳು ನಿರ್ಮಿಸುತ್ತಿದ್ದಾರೆ.
ಕೃಷಿ ಉತ್ಪನ್ನಗಳನ್ನು ವಾಪಸ್ಸು ಕೊಂಡೊಯ್ಯುವಂತೆ ರೈತರಿಗೆ ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ತರಕಾರಿ ಹಣ್ಣು ಕೊಯ್ಲು ಮಾಡುವುದು, ಸಾಗಾಟಕ್ಕೆ ಹಣ ವಿನಿಯೋಗಿಸಿದ್ದ ರೈತ ಮತ್ತೆ ಮನೆಗೆ ಕೊಂಡೊಯ್ಯಲು ಮತ್ತಷ್ಟು ಹಣ ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಅನಿವಾರ್ಯವಾಗಿ ದಲ್ಲಾಳಿಗಳು ಕೇಳಿದ ಬೆಲೆಗೆ ಮಾರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವು ರೈತರು ಖರೀದಿಯಾಗದೆ ಇರುವುದರಿಂದ ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ರಸ್ತೆಯಲ್ಲಿಯೇ ಎಸೆಯುತ್ತಿದ್ದಾರೆ.
ಎಲ್ಲಾ ಎಪಿಎಂಸಿಗಳು ಹಾಗೂ ತರಕಾರಿ ಮಾರುಕಟ್ಟೆಗಳು ಬೆಳಗ್ಗೆ 6 ರಿಂದ 10ರವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಆದರೆ ಈ ನಾಲ್ಕು ತಾಸು ಅವಧಿಯಲ್ಲಿ ಮಾರಾಟ ಮಾಡಲು ಕಷ್ಟವಾಗುತ್ತಿದೆ. ಬೆಲೆ ಕಡಿಮೆಯಿಂದ ಬೇಸತ್ತ ರೈತರು ತಾವು ಬೆಳೆದ ಬೆಳೆಯನ್ನು ಕಟಾವು ಮಾಡದೆ ತಮ್ಮ ಕೃಷಿ ಭೂಮಿಯಲ್ಲೇ ಕೊಳೆಯಲು ಬಿಡುವಂತಾಗಿದೆ.
ಸಾಲಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಇರಲಿ, ಕನಿಷ್ಟ ಕೂಲಿ ಹಣವೂ ಸಿಗದೆ ಪರದಾಡುವಂತಾಗಿದೆ. ಟೊಮ್ಯಾಟೊ ಬೆಲೆ ಕುಸಿದು ರೈತರು ಮಾರುಕಟ್ಟೆಗೆ ಸಾಗಿಸಲು ಖರ್ಚು ಸಹ ಭರಿಸಲು ಸಾಧ್ಯವಾಗದೆ ತೋಟದಲ್ಲಿ ಬಿಡುತ್ತಿದ್ದಾರೆ.ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾಲು ಉತ್ಪಾದಕರಿಗೆ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಸರ್ಕಾರ ಆದೇಶವನ್ನು ಪರಿಷ್ಕರಿಸಿ ರಾತ್ರಿ 8ರವರೆಗೆ ಸಮಯಾವಕಾಶ ಒದಗಿಸಿದೆ. ಹಾಲಿನ ಮಳಿಗೆ ತೆರೆದಿರುವ ಮಾದರಿಯಲ್ಲಿ ಎಪಿಎಂಸಿಯಲ್ಲೂ ರಾತ್ರಿ 8 ಗಂಟೆಯವರೆಗೆ ತರಕಾರಿ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
Share your comments