1. ಸುದ್ದಿಗಳು

ಸೆ.30 ರಂದು ಮೆಗಾ ಲೋಕ್ ಅದಾಲತ್: 15 ಸಾವಿರ ಪ್ರಕರಣ ಇತ್ಯರ್ಥದ ಗುರಿ: ಗೌರವಾನ್ವಿತ ನ್ಯಾಯಾಧೀಶ ಕೆ.ಸುಬ್ರಮಣ್ಯ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಇದೇ 2021ರ ಸೆಪ್ಟೆಂಬರ್ 30 ರಂದು “ಮೆಗಾ ಲೋಕ್ ಅದಾಲತ್”ನ್ನು ಏರ್ಪಡಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಹಾಗೂ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಸುಬ್ರಮಣ್ಯ ಅವರು ಹೇಳಿದರು. ಶನಿವಾರ ಇಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ ಕಲಬುರಗಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಲಬುರಗಿ ಜಿಲ್ಲೆಗೆ ಒಳಪಟ್ಟ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳು ಹಾಗೂ ರಾಜೀ-ಸಂಧಾನದ ಮೂಲಕ ಇತ್ಯರ್ಥವಾಗುವಂತಹ ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು,  ಎಲ್ಲಾ ಕಕ್ಷಿದಾರರು, ಸಾರ್ವಜನಿಕರು ಹಾಗೂ ಸಂಬಂಧಪಟ್ಟವರು ಲೋಕ್ ಅದಾಲತ್‌ನಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಲಬುರಗಿ ಜಿಲ್ಲೆಯ ನ್ಯಾಯಾಲಯಗಳಲ್ಲಿ 42 ಸಾವಿರ ಪ್ರಕರಣಗಳು ಬಾಕಿಯಿದ್ದು, ಲೋಕ ಅದಾಲತ್‌ನಲ್ಲಿ 15 ಸಾವಿರ ಪ್ರಕರಣಗಳನ್ನು ರಾಜೀ-ಸಂಧಾನ ಮಾಡುವುದರ ಮೂಲಕ ಇತ್ಯರ್ಥಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೋಟಾರ್ ವಾಹನ, ಅಪಘಾತ, ಪರಿಹಾರ, ಭೂ ವ್ಯಾಜ್ಯಗಳು, ವೈವಾಹಿಕ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ ಸೇರಿದಂತೆ ಎಲ್ಲಾ ರೀತಿಯ ವ್ಯಾಜ್ಯಪೂರ್ವ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ಸಂಧಾನದ ಮುಖೇನ ಇತ್ಯರ್ಥಪಡಿಸಿಕೊಳ್ಳಲು ಅತ್ಯುತ್ತಮ ಅವಕಾಶವಿದೆ. ರಾಜೀ-ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯದ ಶುಲ್ಕವನ್ನು ಪೂರ್ಣವಾಗಿ ಹಿಂದಿರುಗಿಸಲಾಗುವುದು. ರಾಜೀ-ಸಂಧಾನದ ಮೂಲಕ ಇತ್ಯರ್ಥಗೊಂಡ ಪ್ರಕರಣಗಳಿಗೆ ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಕಲಬುರಗಿ ನಗರ, ತಾಲೂಕು ನ್ಯಾಯಾಲಯಗಳು ಸೇರಿ ಒಟ್ಟು 15 ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ನಡೆಯಲಿದ್ದು, ಕಕ್ಷಿದಾರರು ಮತ್ತು ಸಾರ್ವಜನಿಕರು  ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಶಾಂತ್. ಎಂ. ಚೌಗಲೆ ಅವರು ಇದ್ದರು.

Published On: 18 September 2021, 07:51 PM English Summary: Mega Lok Adalat on Sep 30

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.