ಮಲೆನಾಡಿನಲ್ಲಿ ವರ್ಷಧಾರೆ ಮುಂದುವರೆದಿದ್ದು, ಭಾನುವಾರ ಉತ್ತಮ ಮಳೆಯಾಗಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಆದರೆ ಕರಾವಳಿಯಲ್ಲಿ ಮಳೆಯಬ್ಬರ ತುಸು ಇಳಿಕೆಯಾಗಿದೆ. ಇನ್ನೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಕಳಸ, ಶೃಂಗೇರಿ ಭಾಗದಲ್ಲಿಯೂ ಉತ್ತಮ ಮಳೆಯಾಗಿದೆ. ಚಾರ್ಮಾಡಿ ಘಾಟಿ ಮಾರ್ಗ, ಗಿರಿಶ್ರೇಣಿ, ಇತರೆಡೆಗಳ ಜಲಪಾತ, ಹಳ್ಳಕೊಳ್ಳಗಳು ಮೈದುಂಬಿಕೊಳ್ಳುತ್ತಿವೆ.ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿಯ ಘಟ್ಟಪ್ರದೇಶದಲ್ಲಿ ರಭಸದ ಮಳೆ ಸುರಿದರೆ ಉಳಿದೆಡೆ ಚದುರಿದಂತೆ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ವಿಟ್ಲ, ಬಂಟ್ವಾಳದಲ್ಲಿ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ಸಾಧಾರಣ ಮಳೆಯಾಗಿದೆ. ಕಾಪು ತಾಲ್ಲೂಕಿನಲ್ಲಿ ಕಡಲ್ಕೊರೆತ ಶುರುವಾಗಿದೆ. ಗಾಳಿ– ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಎರ್ಮಾಳು, ತೆಂಕ, ನಡಿಪಟ್ಣ, ಕಾಡಿಪಟ್ಣ ಹಾಗೂ ಪಡುಬಿದ್ರಿಯಲ್ಲಿ ಕಡಲ್ಕೊರೆತ ಉಂಟಾಗಿದೆ.
ಹಾಸನ ನಗರದ ಸುತ್ತಮುತ್ತ ಹಾಗೂ ಸಕಲೇಶಪುರದಲ್ಲಿ ತುಂತುರು ಮಳೆಯಾಗಿದೆ. ಕಲಬುರಗಿ ನಗರ ಸೇರಿ ಜಿಲ್ಲೆಯ ಕಮಲಾಪುರ ಮತ್ತು ಚಿತ್ತಾಪುರ ತಾಲ್ಲೂಕಿನ ಕೆಲ ಕಡೆ, ಧಾರವಾಡ ಹಾಗೂ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಕಾರವಾರ, ಅಂಕೋಲಾ, ಕುಮಟಾ ಭಾಗದಲ್ಲಿ ಬೆಳಿಗ್ಗೆ ಸಾಧಾರಣ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ವಿವಿಧೆಡೆ ಜಿಟಿಜಿಟಿ ಮಳೆಯಾಯಿತು.
Share your comments