ಸಿಡಿಲಿನಿಂದಾಗಿ ಒಂದೇ ವಾರದಲ್ಲಿ ಬಿಹಾರನಲ್ಲಿ 100ಕ್ಕೂ ಹೆಚ್ಚು ಜನ ಮೃತಪಟ್ಟಿರುವುದು ಒಂದೆಡೆಯಾದರೆ ಪ್ರವಾಹದಿಂದಾಗಿ ಅಸ್ಸಾಂನಲ್ಲಿ 34ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಒಂದೆಡೆ ಕೊರೋನಾ ಆತಂಕ ಮತ್ತೊಂದೆಡೆ ಪ್ರಕೃತಿ ವಿಕೋಪದಿಂದಾಗಿ ಜನ ಆತಂಕದಲ್ಲಿ ಜೀವನ ಕಳೆಯುವಂತಾಗಿದೆ. ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಒಂದೇ ದಿನ ಸಿಡಿಲು ಬಡಿದು 31 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಇನ್ನು ಅಸ್ಸಾಂನಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ 34 ಜನ ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ ಎಂದು ತಿಳಿದು ಬಂದಿದೆ.
ಅಸ್ಸಾಂನ 22 ಜಿಲ್ಲೆಗಳಲ್ಲಿ ಮಳೆ ಮುಂದುವರೆದದ್ದು, ಬ್ರಹ್ಮಪುತ್ರ ನದಿ ಪಾತ್ರದಲ್ಲಿ ಭೀಕರ ಪ್ರವಾಹ ತಲೆದೋರಿದ್ದು, ಇದರಿಂದ 16,03,255 ಜನರು ಬಾಧಿತರಾಗಿದ್ದು, ನೆರೆಯಿಂದ ಸಾವಿಗೀಡಾದವರ ಸಂಖ್ಯೆ 34 ಕ್ಕೆ ತಲುಪಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ದಕ್ಷಿಣ ಅಸ್ಸಾಂನಲ್ಲಿ ಮಂಗಳವಾರ ನಸುಕಿನ ಜಾವ ಉಂಟಾದ ಭೂಕುಸಿತದಿಂದಾಗಿ ಮಕ್ಕಳು ಸೇರಿದಂತೆ 20 ಜನರು ಮೃತಪಟ್ಟಿದ್ದರು. ಕಛಾರ್ ಜಿಲ್ಲೆಯ ಕೋಲಾಪುರ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಒಂದೇ ಕುಟುಂಬದ ಏಳು ಜನ ಸಾವಿಗೀಡಾಗಿದ್ದರು ಬ್ರಹ್ಮಪುತ್ರ ನದಿ ಪಾತ್ರದಲ್ಲಿ ಅಪಾಯಮಟ್ಟ ಮೀರಿ ನೀರು ಹರಿಯುತ್ತಿದೆ.
ಬಿಹಾರದಲ್ಲಿ ಸಿಡಿಲು ಬಡಿದು ಮತ್ತೆ 31 ಮಂದಿ ಸಾವು
ಬಿಹಾರದಲ್ಲಿ ಸಿಡಿಲಿನ ಆರ್ಭಟಕ್ಕೆ ಗುರುವಾರ ಮತ್ತೆ 31 ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯದ 8 ಜಿಲ್ಲೆಗಳಲ್ಲಿ ಸಿಡಿಲಿನ ಅಬ್ಬರ ಜೋರಾಗಿತ್ತು. ಒಂದು ವಾರದ ಅವಧಿಯಲ್ಲಿ ಬಿಹಾರದಲ್ಲಿ 100ಕ್ಕೂ ಹೆಚ್ಚು ಮಂದಿ ಸಿಡಿಲಿನಿಂದ ಸಾವಿಗೀಡಾಗಿದ್ದಾರೆ. ಜೂ. 25ರಂದು 83 ಮಂದಿ ಮತ್ತು ಜೂ. 30ರಂದು 11 ಮಂದಿ ಸಿಡಿಲು ಬಡಿದು ಸಾವಿಗೀಡಾಗಿದ್ದರು. ಉತ್ತರ ಪ್ರದೇಶದಲ್ಲಿ ಗುರುವಾರ ಸಿಡಿಲು ಬಡಿದು ಐವರು ಸಾವಿಗೀಡಾಗಿದ್ದಾರೆ. ಪಾಟ್ನಾ, ಸಮಸ್ತಿಪುರ, ಪೂರ್ವ ಚಂಪಾರನ್, ಪಶ್ಚಿಮ ಚಂಪಾರನ್, ಶಿಯೋಹರ್, ಕತಿಹಾರ್, ಮಾಧೇಪುರ ಮತ್ತು ಪೂರ್ಣಿಯಾ ಎಂಬ ಎಂಟು ಜಿಲ್ಲೆಗಳಿಂದ ಸಾವುನೋವು ಸಂಭವಿಸಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
Share your comments