ರೈತರು ರಾಸಾಯನಿಕ ಕೃಷಿಯಿಂದ ಬಿಡುಗಡೆ ಹೊಂದಿ ಅರಣ್ಯ ಕೃಷಿಯತ್ತ ಸಾಗಬೇಕೆಂದು ಪ್ರಗತಿಪರ ರೈತ, ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮದ ಲಕ್ಷೀಕಾಂತ ಹಿಬಾರೆ (laxmikanth Hibare) ಹೇಳಿದ್ದಾರೆ.
ಅವರು ಕೃಷಿ ಜಾಗರಣ ಮಾಸಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ, ತನ್ನ ಪಾಲಿಗೆ ಬಂದ ಪಾಳುಬಿದ್ದ ಜಮೀನಿನಲ್ಲಿಯೇ ಅರಣ್ಯ ಕೃಷಿ ಮಾಡಿದ್ದೇನೆ. ರೈತರೂ ಸಹ ತಗಮಗೆ ಬಂದ ಭೂಮಿ ಫಲವತ್ತತೆಯಿಂದ ಕೂಡಿಲ್ಲ, ಕೃಷಿಯಲ್ಲಿ ಆದಾಯವಿಲ್ಲವೆಂದು ಕೊರಗಬಾರದು. ಇಂದು ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತಿವೆ. ಸರ್ಕಾರದ ಸೌಲಭ್ಯ ಪಡೆದು ಅರಣ್ಯ ಕೃಷಿ (Agro forestry) ಮಾಡಿ ಕೈತುಂಬಾ ಸಂಪಾದನೆ ಮಾಡಬಹುದು ಎಂದರು.
ಪ್ರಸ್ತುತ ದಿನಗಳಲ್ಲಿ ರೈತರು ಕೃಷಿಗಾಗಿ ಸಾಕಷ್ಟು ವೆಚ್ಚ ಮಾಡುತ್ತಿದ್ದು, ಇದನ್ನು ಕಡಿಮೆ ಮಾಡಬೇಕಾಗಿದೆ. ನಾವುಗಳು ಅರಣ್ಯ ಅಪ್ಪಿಕೊಳ್ಳುವ ಮೂಲಕ ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ಕೃಷಿಯಲ್ಲಿ ಮಾಡುವಿಕೆ ಹೋಗಿ ಕೊಂಡುಕೊಳ್ಳುವಿಕೆ ಬಂದಿದೆ. ಬೆಳೆ ಉತ್ಪಾದನೆಗೆ ಬೀಜ, ಗೊಬ್ಬರ, ಔಷಧ ಹೀಗೆ ಎಲ್ಲವನ್ನು ಕೊಂಡು ಬೆಳೆಯಬೇಕಾಗಿದೆ. ಆದರೆ ಈ ಹಿಂದೆ ಕೃಷಿಯಲ್ಲಿ ಹೆಚ್ಚು ಖರೀದಿ ಮಾಡುತ್ತಿರಲಿಲ್ಲ. ಹಿಂದೆ ಪೂರ್ವಜರು ಮಾಡಿದಂತೆ ಇಂದು ಅರಣ್ಯ ಕೃಷಿ ಅಳವಡಿಸಿಕೊಂಡರೆ ಕೃಷಿಯಲ್ಲಿ ಹಾನಿಯಾಗುವುದಿಲ್ಲ ಎಂದರು.
ಬರಗಾಲದಲ್ಲಿ ಸಾಕಷ್ಟು ಬಿಸಿಲು ಇದ್ದರೂ ಸಹ ಅಡವಿ ಗಿಡ, ಮರಗಳು ಸಾಯುವುದಿಲ್ಲ. ಆದರೆ ರೈತರು ಬೆಳೆದ ಕೃಷಿ ಸಾಯುತ್ತಿದೆ. ಆದ್ದರಿಂದ ಕಾಡು ಕೃಷಿ ಪರಿಚಯಿಸಬೇಕಾಗಿದೆ. ಮನುಷ್ಯರಿಗೆ ದೊರೆಯುತ್ತಿರುವ ಆಹಾರ ಮತ್ತು ಗಾಳಿ ವಿಷಪೂರಿತವಾಗುತ್ತಿದ್ದು, ಆದ್ದರಿಂದ ಕೃಷಿಯ ದಿಕ್ಕು ಬದಲಾವಣೆಯಾಗಬೇಕು. ಕೃತಕ ಗೊಬ್ಬರ ಬಳಸಿ ಬೆಳೆ ಬೆಳೆದು ಮಾರಾಟ ಮಾಡುವ ಪ್ರಕ್ರಿಯೆ ಬೆಳೆದಿದ್ದು, ಇದರಿಂದಾಗಿ ಜನಸಾಮಾನ್ಯರ ಆರೋಗ್ಯ (Health) ಹಾಳಾಗುತ್ತಿದೆ ಎಂದರು.
ಅರಣ್ಯ ಕೃಷಿಯೆಂದರೆ ಕೇವಲ ಮರಗಳು ಬೆಳೆಸುವುದಲ್ಲ, ಶ್ರೀಗಂಧ, ರಕ್ತಚಂದನ, ನುಗ್ಗೆ, ಲಿಂಬೆ, ನೆಲ್ಲಿಕಾಯಿ, ನೇರಳೆ, ಹೆಬ್ಬೇವು, ಪೇರಲ ಹೀಗೆ ಬಗೆಬಗೆಯ ಗಿಡಗಳನ್ನು ನೆಡುವುದರಿಂದ ಉತ್ತಮ ಆದಾಯ ಬರುತ್ತದೆ. ಈ ಗಿಡಗಳ ಮಧ್ಯೆದಲ್ಲಿಯೇ ಮಿಶ್ರಬೆಳೆ ಹಾಕಬಹುದು. ಗಿಡಗಳ ಮಧ್ಯದಲ್ಲಿ ಚೆಂಡುಹೂವು, ಎಲೆಕೋಸು, ಬದನೆಕಾಯಿ, ಸೇವಂತಿಗೆ, ಕಲ್ಲಂಗಡಿ ಅಂತರ್ ಬೆಳೆ ಹಾಕಿ ಆದಾಯ (Income) ಹೆಚ್ಚಿಸಿಕೊಳ್ಳಬಹುದು ಎಂದರು.
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರತಿ ಹೆಕ್ಟೇರಗೆ 50 ಸಾವಿರ ರೂಪಾಯಿಯವರೆಗೆ ಪ್ರೋತ್ಸಾಹ ಧನ ನೀಡಲಾಗುವುದು. ಒಂದು ಹೆಕ್ಟೆರ್ಗೆ 240 ಗಿಡಗಳನ್ನು ಹಾಕಬಹುದು. ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಕ್ಷೇತ್ರಗಳಿಂದ ರಿಯಾಯಿತಿ ದರದಲ್ಲಿ ಸಸಿ ಪಡೆಯಬುಹುದು. ಸಸಿಗಳನ್ನು ಪಡೆದು ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದರೆ ಪ್ರತಿ ಬದುಕುಳಿದ ಸಸಿಗೆ ಮೊದಲನೇ ವರ್ಷದ ಅಂತ್ಯದಲ್ಲಿ ರೂ. 30/- ಹಾಗೂ ಎರಡನೇ ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ಕ್ರಮವಾಗಿ ರೂ. 30/- ಹಾಗೂ ರೂ. 40/- ಹೀಗೆ ಒಟ್ಟು ರೂ. 125/- ಗಳನ್ನು ಪ್ರೋತ್ಸಾಹ ಧನ ನೀಡಲಾಗುವುದು. ಪ್ರೋತ್ಸಾಹಧನ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತದೆ. ಹಾಗಾಗಿ ರೈತಬಾಂಧವರು ಅರಣ್ಯ ಕೃಷಿ ಮಾಡಿ ಆದಾಯ ದುಪ್ಪಟ್ಟು ಮಾಡಿಕೊಳ್ಳಿ ಎಂದು ಕರೆ ನೀಡಿದರು.
Share your comments