ನೋಡಲು ಸುಂದರಿಯ ಬೆರಳಿನಂತೆ ಕಾಣುವ ಬೆಂಡೆಯನ್ನು ಇಂಗ್ಲಿಷಿನಲ್ಲಿ 'ಲೇಡಿಸ್ ಫಿಂಗರ್' ಅಂತಲೇ ಕರೆಯುತ್ತಾರೆ. ಇದನ್ನು ಅಂತರ್ ಬೆಳೆ ಹಾಗೂ ಪೂರ್ಣ ಪ್ರಮಾಣದ ಬೆಳೆಯಾಗಿ ರಾಜ್ಯದ ಹಲವೆಡೆ ಬೆಳೆಯುತ್ತಾರೆ.
ಕೃಷಿ ಪ್ರಕಾರಗಳಲ್ಲಿ ಒಂದಾದ ಬೆಂಡೆಕಾಯಿ ಬೆಳೆ ಕೃಷಿಕರ ಆದಾಯದದ ಮೂಲಗಳ ಪೈಕಿ ಒಂದು. ಆದರೆ ಇದು ಸುಲಭವಾಗಿ ಬೆಳೆಯುವ ಬೆಳೆಯಲ್ಲ. ನಿರಂತರ ಕಣ್ಗಾವಲು, ಕಾಳಜಿ ಬೇಕು. ಇಲ್ಲವಾದರೆ ಹತ್ತಾರು ರೋಗಗಳಿಗೆ ತುತ್ತಾಗಿ ಕೃಷಿಕನ ಶ್ರಮ ವ್ಯರ್ಥವಾಗುವ ಆಪಾಯವಿದೆ.
ರೈತರ ಅನುಕೂಲಕ್ಕಾಗಿ ಇಲ್ಲಿ ಕೆಲವು ಬೆಂಡೆಕಾಯಿ ತಳಿಗಳ ಮಾಹಿತಿ ನೀಡುತ್ತಿದ್ದೇನೆ. ಬೆಂಡೆಕಾಯಿ ಬೆಳೆಯಲು ಒಣ ಪ್ರದೇಶದಲ್ಲಿ ಜೂನ್- ಜುಲೈ ಮತ್ತು ಜನವರಿ ಫೆಬ್ರವರಿ ತಿಂಗಳು ಸೂಕ್ತ ಕಾಲವಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಜನವರಿ-ಫೆಬ್ರವರಿ ಸೂಕ್ತಕಾಲ. ಕರಾವಳಿ ಪ್ರದೇಶದಲ್ಲಿ ಜೂನ್ –ಜುಲೈ ಸೂಕ್ತಕಾಲವಾಗಿದೆ.
ಹೆಚ್ಚು ಇಳುವರಿ ಕೊಡುವ ಬೆಂಡೆಕಾಯಿ ತಳಿಗಳು
ಅರ್ಕಾ ಅನಾಮಿಕ:
ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ ಹಾಗೂ ಕವಲು ರೆಂಬೆಗಳನ್ನು ಹೊಂದಿರುತ್ತದೆ. ತರಕಾರಿಯಾಗಿ ಉಪಯೋಗಿಸುವ ಹಂತದಲ್ಲಿ ಕಾಯಿಗಳು ಕಡು ಹಸಿರು ಬಣ್ಣದಿಂದ ಕೂಡಿದ್ದು, ಉದ್ದವಾಗಿ, ಮೃದುವಾಗಿರುತ್ತವೆ. ಕಾಯಿಗಳು ಒಳ್ಳೆಯ ಶೇಖರಣಾ ಹಾಗೂ ಅಡಿಗೆ ಗುಣಗಳನ್ನು ಹೊಂದಿರುತ್ತದೆ. ಈ ತಳಿಗೆ ಹಳದಿ ನಂಜು ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 13-135 ದಿನಗಳು. ಒಂದು ಹೆಕ್ಕೇರಿಗೆ 20 ಟನ್ ಇಳುವರಿ ಬರುತ್ತದೆ.
ಅರ್ಕಾ ಅಭಯ್:
ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ. ಹಾಗೂ ಕವಲು ರೆಂಬೆಗಳನ್ನು ಹೊಂದಿರುತ್ತವೆ. ತರಕಾರಿಯಾಗಿ ಉಪಯೋಗಿಸುವ ಹಂತದಲ್ಲಿ ಕಾಯಿಗಳು ಕಡು ಹಸಿರು ಬಣ್ಣದಿಂದ ಕೂಡಿದ್ದು, ಉದ್ದವಾಗಿದ್ದು, ಮೃದುವಾಗಿರುತ್ತವೆ. ಕಾಯಿಗಳು ಒಳ್ಳೆಯ ಶೇಖರಣಾ ಗುಣ ಹಾಗೂ ಅಡಿಗೆ ಗುಣಗಳನ್ನು ಹೊಂದಿರುತ್ತದೆ. ಬೆಳೆಯ ಅವಧಿ 120-130 ದಿನಗಳು. ಒಂದು ಹೆಕ್ಟೇರಿಗೆ 18 ಟನ್ ಇಳುವರಿ ಪಡೆಯಬಹುದು.
ಪರ್ಬಾಲಿ ಕ್ರಾಂತಿ:
ಹಳದಿ ಎಲೆ ನಂಜುರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿರುವ ಈ ತಳಿಯು ಹೆಚ್ಚು ಇಳುವರಿಯನ್ನು ಕೊಡುತ್ತದೆ. ಈ ತಳಿಯ ಕಾಯಿಗಳು ದಟ್ಟ ಹಸಿರಾಗಿದ್ದು, 10-15 ಸೆಂ.ಮೀ ಉದ್ದವಿರುತ್ತದೆ. ಇದನ್ನು ಹೆಚ್ಚು ದಿನ ಇಡಬಹುದಾಗಿದ್ದು, ಅಡುಗೆಗೆ ತುಂಬಾ ಯೋಗ್ಯವಾಗಿದೆ. ಇಳುವರಿ ಸಾಮರ್ಥ್ಯ ಪ್ರತಿ ಹೆಕ್ಟೇರಿಗೆ 15 ಟನ್ ಇಳುವರಿ ಪಡೆಯಬಹುದು.
ಪೂಸಾ ಸವಾನಿ:
ಇದು ತಕ್ಕ ಮಟ್ಟಿಗೆ ನಿರೋಧಕ ಶಕ್ತಿ ಪಡೆದ ತಳಿಯಾಗಿದ್ದು, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ದೆಹಲಿಯಿಂದ ಬಿಡುಗಡೆಯಾದ ತಳಿಯಾಗಿದೆ. ಈ ತಳಿಯನ್ನು ಎಲ್ಲಾ ವಲಯಗಳಿಗೆ ಶಿಫಾರಸ್ಸು ಮಾಡಲಾಗಿದ್ದು, ಕಡು ಹಸಿರು, 5 ಸಾಲುಗಳಿರುವ ನಯವಾಗಿರುತ್ತದೆ. ಹಳದಿ ನಂಜುರೋಗಕ್ಕೆ ಬೇಗ ತುತ್ತಾಗುತ್ತದೆ.
Share your comments