ದೀಪಾವಳಿ ಹಬ್ಬಕ್ಕಾಗಿ ಸಾಮಾನ್ಯವಾಗಿ ಓಡಾಟ ಹೆಚ್ಚಿರುತ್ತದೆ. ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಹೆಚ್ಚು ಜನ ಊರಿಗೆ ತೆರಳುತ್ತಾರೆ. ಅವರು ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ಮುಂಗಡವಾಗಿ ಟಿಕೇಟ್ ಬುಕ್ ಮಾಡಿದರೆ ಶೇ. 5 ರಷ್ಟು ರಿಯಾಯಿತಿಯನ್ನು ಹೋಗುವ ಬರುವ ಟಿಕೇಟ್ ಮುಂಗಡವಾಗಿ ಕಾಯ್ದಿರಿಸಿದರೆ ಶೇ. 10 ರಷ್ಟು ರಿಯಾಯಿತಿಯನ್ನು ನೀಡಿದೆ. ಪ್ರಯಾಣಿಕರು ಇದರ ಸೌಲಭ್ಯ ಪಡೆದುಕೊಳ್ಳಬಹುದು.
ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ 1000 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ. ಇದೇ 13 ಹಾಗೂ 14ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆ ಗಳು ಹಾಗೂ ಹೊರರಾಜ್ಯಗಳಿಗೆ ವಿಶೇಷ ಬಸ್‌ಗಳು ಹೊರಡಲಿವೆ. 16ರಂದು ಬೆಂಗಳೂರಿಗೆ ವಾಪಸ್ ಆಗಲಿವೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿಗೆ ಬಸ್‌ಗಳು ಸಂಚಾರ ಮಾಡಲಿವೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾ ಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿಗೆ ತೆರಳಲಿವೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳಕ್ಕೆ ಶಾಂತಿ ನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್‌ಗಳು ಸಂಚರಿಸಲಿವೆ. ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವಿದೆ ಎಂದು ನಿಗಮ ತಿಳಿಸಿದೆ.
ಇ ಟಿಕೆಟ್ ಅನ್ನು www.ksrtc.in ಮೂಲಕ ಬುಕ್ ಮಾಡಬಹುದಾಗಿದೆ. ಗಣಕೀಕೃತ ಬುಕ್ಕಿಂಗ್ ಕೌಂಟರ್ ಮೂಲಕವೂ ಆಸನಗಳನ್ನು ಕಾಯ್ದಿರಿಸಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್
ಕಾಯ್ದಿರಿಸಿದಲ್ಲಿ ಶೇ 5 ರಷ್ಟು ರಿಯಾಯಿತಿ ಸಿಗಲಿದೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟನ್ನು ಒಟ್ಟಿಗೆ
ಕಾಯ್ದಿರಿಸಿದರೆ ಬರುವ ಪ್ರಯಾಣ ದರದಲ್ಲಿ ಶೇ 10 ರಷ್ಟು ರಿಯಾಯಿತಿ ಇರಲಿದೆ.
ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನಿಗಮದ ಕಾರ್ಯಾಚರಣೆ ಇರುವ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದಲೂ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ ಎಂದು ಪ್ರಕಟಣೆ ತಿಳಿಸಿದೆ.
ವಾಯುವ್ಯ ಕರ್ನಾಟಕ ಸಂಸ್ಥೆಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ
ಹುಬ್ಬಳ್ಳಿ: ದೀಪಾವಳಿ ಹಬ್ಬದ ಪ್ರಯುಕ್ತ ವಿವಿಧ ಸ್ಥಳಗಳಿಗೆ ಹೆಚ್ಚುವರಿಯಾಗಿ 200ಕ್ಕೂ ಹೆಚ್ಚು ಬಸ್‌ಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲ್ಪಿಸಿದೆ.
ನ.12 ಮತ್ತು 13 ರಂದು ಬೆಂಗಳೂರು, ಹುಬ್ಬಳ್ಳಿ– ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಹಾವೇರಿ ಜಿಲ್ಲಾ ಕೇಂದ್ರಗಳಿಂದ ವಿವಿಧ ಸ್ಥಳಗಳಿಗೆ ಹಾಗೂ ನ. 16, 17ರಂದು ವಾಪಸ್ ಬರಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಈ.ಕ.ರ.ಸಾ.ಸಂಸ್ಥೆಯಿಂದ ಹೆಚ್ಚಿನ ಬಸ್‍ಗಳ ಕಾರ್ಯಾಚರಣೆ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನವೆಂಬರ್ 14ರ ನರಕ ಚತುರ್ದಶಿ, ನ.15ರ ದೀಪಾವಳಿ ಅಮಾವಾಸ್ಯೆ ಹಾಗೂ ನವೆಂಬರ್ 16 ರಂದು ಬಲಿಪಾಡ್ಯಮಿ ಇರುವ ಪ್ರಯುಕ್ತ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಜಿಲ್ಲೆಗಳಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಅಗತ್ಯಕ್ಕೆ ತಕ್ಕಂತೆ ಸುಮಾರು 220 ಸಾರಿಗೆ ಬಸ್‍ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮರಾವ್ ತಿಳಿಸಿದ್ದಾರೆ.
ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಿಂದ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ದಾವಣಗೆರೆ ನಗರಗಳ ನಡುವೆ ಜನದಟ್ಟಣೆ ನಿರೀಕ್ಷಿಸಿ ಕಾರ್ಯಾಚರಣೆಗೆ ಹೆಚ್ಚಿನ ಬಸ್ ಸೇವೆ ಕಲ್ಪಿಸಲಾಗಿದೆ.
ಟಿಕೇಟ ದರದ ಮೇಲೆ ಶೇ.5 & 10 ರಷ್ಟು ರಿಯಾಯಿತಿ: ಈ ಸಾರಿಗೆಗಳಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಗಡವಾಗಿ ಆಸನ ಕಾಯ್ದಿರಿಸುವಾಗ 4 ಅಥವಾ 4ಕ್ಕಿಂತ ಹೆಚ್ಚಿನ ಜನರ ಗುಂಪಿನ ಒಂದೇ ಟಿಕೆಟ್ ಪಡೆದುಕೊಂಡಲ್ಲಿ ಮೂಲ ಟಿಕೆಟ್ ದರದ ಶೇ.5 ರಷ್ಟು ರಿಯಾಯಿತಿ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೇ ಹೋಗುವಾಗ ಮತ್ತು ಬರುವಾಗಿನ ಆಸನಗಳನ್ನು ಒಮ್ಮೆಲೇ ಕಾಯ್ದಿರಿಸಿದಲ್ಲಿ ಬರುವಾಗಿನ ಮೂಲ ಟಿಕೆಟ್ ದರದ ಮೇಲೆ ಶೇ.10ರಷ್ಟು ರಿಯಾಯಿತಿ ಸೌಲಭ್ಯ ಕಲ್ಪಿಸಲಾಗಿದೆ.
Share your comments