ಮುಂಬೈನಲ್ಲಿ 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಯನ್ನು ಕೊರೋನಾ ನಿಯಂತ್ರಣದ ಕೆಲಸಕ್ಕೆ ನಿಯೋಜನೆ ಮಾಡಬಾರದು, ಅವರು ಮನೆಯಲ್ಲಿರಲು ಸೂಚಿಸಿದಂತೆ ಈಗ ಕರ್ನಾಟಕದಲ್ಲಯೂ ಸಹ ಐವತ್ತೈದು ವರ್ಷ ಮೇಲ್ಪಟ್ಟವರೂ ರಜೆ ಮೇಲೆ ಮನೆಯಲ್ಲಿರಲು ಸೂಚಿಸಲಾಗಿದೆ.
ಕೊರೋನಾ ಯೋಧರಾದ ಪೊಲೀಸರ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ರಜೆ ಕೊಟ್ಟು ಅವರು ಮನೆಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.
ಅವರು ನಗರದ ಎಲ್ಲಾ ಇನ್ಸಪೆಕ್ಟರ್, ಪಿಎಸ್ಐಗಳಿಗೆ ಭಾನುವಾರ ಸೂಚನೆಗಳನ್ನು ನೀಡಿದ ಅವರು, ಧೈರ್ಯದಿಂದ ಕೆಲಸ ಮಾಡಿ, ಸರ್ಕಾರ ಹಾಗೂ ಸಾರ್ವಜನಿಕರು ನಮ್ಮ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಆರೋಗ್ಯ ಸಮಸ್ಯೆಯಿರುವ ಐವತೈದು ವರ್ಷ ಮೇಲ್ಪಟ್ಟ ಪೊಲೀಸರಿಗೆ ರಜೆ ಕೊಟ್ಟು ಮನೆಯಲ್ಲಿರುವಂತೆ ಹೇಳಬೇಕು. ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗದಂತೆ ನೋಡಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಕಂಟಕವಾಗಿ ಪರಿಣಮಿಸುತ್ತಿದೆ. ಭಾನುವಾರ ಒಂದೇ ದಿನ 16 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇಲ್ಲಿಯವರೆಗೆ ಮೂವರು ಪೊಲೀಸರು ಕೊವಿಡ್-19ನಿಂದ ಮೃತಪಟ್ಟಿದ್ದಾರೆ. ಕರ್ತವ್ಯದಲ್ಲಿರುವ ಪೊಲೀಸರಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದರಿಂದ ವಿಶ್ರಾಂತಿ ಪಡೆಯಲು ತಿಳಿಸಬೇಕು. ಠಾಣೆಯಲ್ಲಿ ಸಿಬ್ಬಂದಿಯ ಕೊರತೆಯಾದರೆ ಹೋಂಗಾರ್ಡ್ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಸೂಚನೆಗಳು:
ಪೊಲೀಸ್ ಠಾಣೆಯೊಳಗೆ ಅಪರಿಚಿತರನ್ನು ಬಿಡಬಾರದು. ಠಾಣೆಯ ಹೊರಗೇ ಸಾರ್ವಜನಿಕರಿಂದ ದೂರುಗಳನ್ನು ಆಲಿಸಬೇಕು. ದೂರು ಕೇಳುವಾಗ ಸಾರ್ವಜನಿಕರಿಂದ ಪೊಲೀಸರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್, ಕೈಗವಸುಗಳನ್ನು ಧರಿಸಬೇಕು. ಅಗತ್ಯವಿದ್ದಲ್ಲಿ ಪಿಪಿಇ ಕಿಟ್ಗಳನ್ನೂ ಬಳಸಿಕೊಳ್ಳಬೇಕು.
ಹೊಯ್ಸಳ, ಚೀತಾ, ಕೋಬ್ರಾ, ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಠಾಣೆಯ ಹೊರಗೇ ಕರ್ತವ್ಯ ನಿರ್ವಹಿಸಬೇಕು. ಅನವಶ್ಯಕವಾಗಿ ಠಾಣೆಗೆ ಆಗಮಿಸಬಾರದು.
ಮಹತ್ವದ ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳನ್ನು ಬಂಧಿಸಬೇಕು. ಡಿಸಿಪಿ ಹಾಗೂ ಎಸಿಪಿ ಅನುಮತಿಯಿಲ್ಲದೆ ಯಾರನ್ನೂ ಬಂಧಿಸಬಾರದು. ಠಾಣೆಯ ಒಳಭಾಗದಲ್ಲಿ ಕುಡಿಯಲು ಬಿಸಿ ನೀರು, ಕೈಕಾಲು ತೊಳೆಯಲು, ಸ್ನಾನ ಮಾಡಲು ಸಹ ಬಿಸಿ ನೀರು ಸಿಗುವಂತೆ ಅನುವು ಮಾಡಿಕೊಡಬೇಕು. ಠಾಣೆಯಲ್ಲಿ ಯಾವಾಗಲೂ ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ ಇರುವಂತೆ ನಿಗಾ ವಹಿಸಬೇಕು.
ಯಾವುದೇ ಠಾಣೆಯ ಪೊಲೀಸ್ ಸಿಬ್ಬಂದಿಯಲ್ಲಿ ಕೊವಿಡ್-19 ದೃಢಪಟ್ಟರೆ, ಮತ್ಯಾರಾದರೂ ಕ್ವಾರಂಟೈನ್ಗೆ ಹೋದರೆ ಉಳಿದವರು ಭಯಪಡದೆ, ಆತ್ಮಸ್ಥೈರ್ಯ ಕಳೆದುಕೊಳ್ಳದೆ ಕರ್ತವ್ಯ ನಿರ್ವಹಿಸಬೇಕು.
ಎಂಒಬಿ ರಿಕವರಿ ಮಾಡಬೇಕಾದಲ್ಲಿ ಇರುವ ತಂತ್ರಜ್ಞಾನ ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಠಾಣೆಗೆ ಹಂಚಿಕೆಯಾಗಿರುವ ಜೀಪ್, ದ್ವಿಚಕ್ರವಾಹನ ವಾಹನಗಳಿಗೆ ಪ್ರತಿದಿನ ಸ್ಯಾನಿಟೈಸೇಶನ್ ಮಾಡಬೇಕು.
ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ಕರೊನಾ ಪಾಸಿಟಿವ್ ಕಂಡುಬಂದರೆ ಅಂಥವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದಲ್ಲಿ, ಅವರ ಆರೋಗ್ಯದ ಬಗ್ಗೆ ಕ್ಷಣಕ್ಷಣದ ಮಾಹಿತಿಯನ್ನೂ ನೀಡಬೇಕು. ಹೊರಗಿನವರು ಯಾರೂ ಕ್ವಾರ್ಟಸ್ ಪ್ರವೇಶ ಮಾಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
Share your comments