ಧಾರವಾಡ : ಹುಬ್ಬಳ್ಳಿಯ ಆನಂದನಗರ, ನಿವಾಸಿಗಳಾದ ಅಶ್ವಿನಿ, ರತನ ಹೂಲಿಮಠ ಅವರ ತಂದೆ ಪ್ರೇಮಕುಮಾರ, ತಾಯಿ ರೂಪಾ ಎದುರುದಾರ ಹುಬ್ಬಳ್ಳಿಯ ವಿಜಯ ಬ್ಯಾಂಕ್ ನಿಂದ ರೂ.15 ಲಕ್ಷ ಗೃಹ ಸಾಲ 20 ಪಡೆದಿದ್ದರು. ಆ ಸಾಲದ ಮೇಲೆ ರೂ.5,434 ಕೊಟ್ಟು ಯನೈಟೆಡ್ ಇಂಡಿಯಾ ವಿಮೇ ಕಂಪನಿಯಿಂದ ರೂ.20 ಲಕ್ಷ ಮೊತ್ತಕ್ಕೆ ವಿಮೆ ಮಾಡಿಸಿದ್ದರು.
ಸದರಿ ಪಾಲಸಿ ದಿ:16/02/2012 ರಿಂದ ದಿ:15/05/2017 ರವರೆಗೆ ಚಾಲ್ತಿಯಲ್ಲಿತ್ತು. ದಿ:26/12/2015 ರಂದು ಕುಮುಟಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ವಿಮೆ ಹೊಂದಿದ ರೂಪಾ ಮೃತಪಟ್ಟಿದ್ದರು. ದಿ:05/10/2019 ರಂದು ಮೃತ ರೂಪಾ ಅವರ ಮಗ ಪ್ರೇಮಕುಮಾರ ಸಹ ಮೃತಪಟ್ಟಿದ್ದನು.
ಪ್ರೇಮಕುಮಾರ ಅವರ ನಿಧನದ ನಂತರ ಅವರ ವಾರಸುದಾರರಾದ ಪತ್ನಿ ಅಶ್ವಿನಿ ಹಾಗೂ ಮಗ ರತನ ತನ್ನ ತವರು ಮನೆಯಾದ ಮಂಡಲಗೇರಿ ಗ್ರಾಮಕ್ಕೆ ಹೋಗಿದ್ದರು. ಕೆಲ ದಿವಸಗಳ ನಂತರ ಮರಳಿ ತಮ್ಮ ನಿವಾಸಕ್ಕೆ ಬಂದಾಗ ಮನೆಗೆ ಎದುರುದಾರ ನಂ.1ನೇ ಬ್ಯಾಂಕಿನವರು ಸರಫೇಶಿಯಾ ನೋಟಿಸ್ ಅಂಟಿಸಿದ್ದನ್ನು ಕಂಡು, ತಮ್ಮ ಬಳಿ ಇರುವ ವಿಮೆ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಎದುರುದಾರ 1ನೇ ದವರ ಬಳಿ ವಿಮೆ ಪರಿಹಾರ ಕೇಳಿ ಕ್ಲೇಮ ಅರ್ಜಿ ಸಲ್ಲಿಸಿದ್ದರು.
ವಿಮಾ ಕಂಪನಿಯವರು ದೂರುದಾರರ ಕ್ಲೇಮ್ ಅರ್ಜಿಯನ್ನು ಪರಿಗಣಿಸಿ ಕ್ಲೇಮ್ ಅರ್ಜಿ ಸಲ್ಲಿಸಲು 17 ತಿಂಗಳ ತಡವಾಗಿದೆ ಅನ್ನುವ ಕಾರಣ ಹೇಳಿ ವಿಮಾ ಕಂಪನಿಯವರು ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಿದ್ದರು. ಅಂತಹ ವಿಮಾ ಕಂಪನಿಯವರ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ ನಂ.1 ಮತ್ತು 2ನೇ ರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಮೃತೆ ರೂಪಾಳು ಪಡೆದ ವಿಮೆ ಚಾಲ್ತಿಯಿದ್ದು ವಿಮಾ ಕಂಪನಿಯ ನಿಯಮಾವಳಿಯಂತೆ ವಿಮಾ ಹಣವನ್ನು ವಿಮಾದಾರರಿಗೆ ಕೊಡುವುದು ಅವರ ಕರ್ತವ್ಯವಾಗಿರುತ್ತದೆ ಆದರೆ ಅಂತಹ ಕರ್ತವ್ಯ ನಿರ್ವಹಣೆಯಲ್ಲಿ ವಿಮಾ ಕಂಪನಿ ವಿಫಲವಾಗಿದೆ.
ಆದ್ದರಿಂದ ಅವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ. ಕ್ಲೇಮ್ ಅರ್ಜಿ ಸಲ್ಲಿಸಲು ತಡವಾಗಿದೆ ಅನ್ನುವ ಒಂದೇ ಕಾರಣದಿಂದ ಅಂತಹ ಅರ್ಜಿಯನ್ನು ತಿರಸ್ಕರಿಸುವುದು ಸೂಕ್ತ ಮತ್ತು ನ್ಯಾಯಸಮ್ಮತವಲ್ಲ ಅಂತಾ ಆಯೋಗ ತಿಳಿಸಿ ವಿಮಾ ಒಪ್ಪಂದದಂತೆ ರೂ.15 ಲಕ್ಷ ವಿಮೆ ಹಣವನ್ನು ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಆಯೋಗ ಆದೇಶ ನೀಡಿದೆ. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.
Share your comments