ದೇಶದ ಮೊಟ್ಟಮೊದಲ ಕಿಸಾನ್ ರೈಲು (first kisan rail) ಸಂಚಾರಕ್ಕೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar) ಅವರು ಶುಕ್ರವಾರ ಹಸಿರು ನಿಶಾನೆ ತೋರಿದರು.
ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ ಸಂಚರಿಸಲಿರುವ ರೈಲಿಗೆ ವರ್ಚುವಲ್ ವೇದಿಕೆ ಮೂಲಕ ನವದೆಹಲಿಯಿಂದ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕಿಸಾನ್ ರೈಲು ಕೃಷಿ ಕ್ಷೇತ್ರದ ಪ್ರಗತಿಗೆ ಮತ್ತು ಬೆಳೆಗೆ ನ್ಯಾಯಯುತ ದರ ಒದಗಿಸಲು ಸಹಕಾರಿಯಾಗಲಿದೆ. ಪ್ರಧಾನಮಂತ್ರಿಗಳ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸಲು ಇಂತಹ ಕಿಸಾನ್ ರೈಲುಗಳು (Kisan trains) ಸಹಕಾರಿಯಾಗಲಿವೆ ಎಂದರು.
ದೇಶದ ಮೂಲೆ ಮೂಲೆಗಳಿಗೆ ಕೃಷಿ ಉತ್ಪನ್ನಗಳನ್ನು ಸುಗಮ ಸಾಗಾಣಿಕೆಗೆ ಅನುಕೂಲ ಕಲ್ಪಿಸಲು ಸಾದ್ಯವಾಗಲಿದೆ. ಇದರಿಂದ ದೇಶದ ರೈತ ಸಮುದಾಯ ಸ್ವಾವಲಂಬಿಯಾಗುವ ಜೊತೆಗೆ ಪ್ರಗತಿಗೆ ಸಹಕಾರಿಯಾಗಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ಕಿಸಾನ್ ರೈಲು ಮೂಲಕ ಕೃಷಿ ಉತ್ಪನ್ನಗಳನ್ನು ಎಲ್ಲೆಡೆ ತಲುಪಿಸುವುದು ನಮ್ಮ ಆಶಯವಾಗಿದೆ ಎಂದರು.
ಸೂಕ್ತ ಸಾಗಾಣಿಕೆ ಸೌಲಭ್ಯವಿದ್ದರೆ ದರಕುಸಿತ ತಡೆಯಲು ಸಾಧ್ಯ. ಆದ್ದರಿಂದ ಇಂತಹ ಮಾರ್ಗದ ಅಗತ್ಯವಿದೆ. ರೈತರ ಅನುಕೂಲಕ್ಕಾಗಿ ವಿಶೇಷ ಕಿಸಾನ್ ರೈಲು ಆರಂಭಿಸುವ ಮೂಲಕ ರೈಲ್ವೆ ಇಲಾಖೆ ರೈತರ ಅಭಿವೃದ್ಧಿಗೆ ಕೈಜೋಡಿಸಿದೆ ಎಂದು ಕೃಷಿ ಸಚಿವ ತೋಮರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ರೈಲ್ವೆ ಇಲಾಖೆಯ ಸಚಿವ ಪಿಯುಷ್ ಗೋಯಲ್, ಮೊದಲ ಕಿಸಾನ್ ರೈಲು ಪೈಲಟ್ ಯೋಜನೆಯಾಗಿದೆ. ದೇಶದ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಮುಂದಾಗಿದೆ. ದೇಶದ ಪ್ರಗತಿಯ ಎಂಜಿನ್ ರೈಲ್ವೆ ಇಲಾಖೆ ಆಗಬೇಕು ಎಂಬುದು ಪ್ರಧಾನಮಂತ್ರಿಗಳ ಆಶಯವಾಗಿದೆ ಎಂದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಿಸಾನ್ ರೈಲು ಮೂಲಕ ಕೃಷಿ ಉತ್ಪನ್ನಗಳು ಎಲ್ಲೆಡೆ ತಲುಪಿಸುವುದು ನಮ್ಮ ಆಶಯವಾಗಿದೆ. ಪ್ರಧಾನಿ ನೀಡಿದ ಭರವಸೆಯಂತೆ ದೇವಲಾಲಿ-ದಾನಾಪುರ ನಡುವೆ ಕಿಸಾನ್ ರೈಲು ಆರಂಭಿಸಲಾಗಿದೆ. ಪ್ರತಿ ಭಾನುವಾರ ಸಂಚರಿಸಲಿದೆ. ಇದು ರೈತರ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿದೆ. ಕೃಷಿಕರಿಗೆ ವರದಾನವಾಗಲಿದೆ ಎಂದರು
Share your comments