ಟೊಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಹೆಮ್ಮೆಯ ಅಥ್ಲೀಟ್ ನೀರ್ಜ ಛೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ನೀರಜ್ ಛೋಪ್ರಾ ಭಾಜನರಾಗಿದ್ದಾರೆ.
ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಲಿಂಪಿಕ್ಸ್ ನಲ್ಲಿ ಶನಿವಾರ ಸಂಜೆ ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ನಲ್ಲಿ ಐತಿಹಾಸಿಕ ಪ್ರದರ್ಶನ ನೀಡಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ನೀರಜ್ ಒಲಿಂಪಿಕ್ಸ್ನ ಅಥ್ಲೆಟಿಕ್ಸ್ನಲ್ಲಿ ಭಾರತ ಪರ ಮೊದಲ ಪದಕ ತಂದುಕೊಟ್ಟ ಸಾಧನೆ ತೋರಿದರು.
ನೀರಜ್ ಚೋಪ್ರಾ ಅವರು ಶೂಟರ್ ಅಭಿನವ್ ಬಿಂದ್ರಾ (2008) ನಂತರ ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಎರಡನೇ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇನ್ನು ಟೋಕಿಯೋ ಒಲಿಂಪಿಕ್ಸ್ನ ಫೈನಲ್ನಲ್ಲಿ ಚೋಪ್ರಾ ತನ್ನ ಎರಡನೇ ಪ್ರಯತ್ನದಲ್ಲಿ 87.58 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದು, ಇದು ಫೈನಲ್ ನಲ್ಲಿ ಅವರ ಶ್ರೇಷ್ಠ ಪ್ರದರ್ಶನವಾಗಿತ್ತು. ಈ ಪ್ರದರ್ಶನವೇ ಅವರಿಗೆ ಚಿನ್ನದ ಪದಕ ತಂದುಕೊಟ್ಟಿತು. ಮೊದಲ ಪ್ರಯತ್ನದಲ್ಲಿ 87.03 ಮೀ.ದೂರಕ್ಕೆ ಜಾವೆಲಿನ್ ಎಸೆದರು. ಎರಡನೇ ಪ್ರಯತ್ನದಲ್ಲಿ 87.58 ಮೀ.ದೂರಕ್ಕೆ ಜಾವೆಲಿನ್ ಎಸೆದು ಶ್ರೇಷ್ಠ ಪ್ರದರ್ಶನ ನೀಡಿದರು. ಈ ಮೂಲಕ ಅಗ್ರ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು. ಮೂರನೇ ಪ್ರಯತ್ನದಲ್ಲಿ 76.79 ಮೀ.ದೂರಕ್ಕೆ ಎಸೆದರು. ನಾಲ್ಕನೇ ಪ್ರಯತ್ನವು ಫೌಲ್ ಥ್ರೋ ಆಗಿತ್ತು. ಐದನೇ ಪ್ರಯತ್ನದಲ್ಲಿ ಮತ್ತೊಮ್ಮೆ ಫೌಲ್ ಆಗಿರುವ ಚೋಪ್ರಾ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಜೆಕ್ ಗಣರಾಜ್ಯದ ಜಾಕಬ್ ವಾಡ್ಲೆಜ್ಚ್ (86.67 ಮೀ) ಬೆಳ್ಳಿ ಪದಕ ಜಯಿಸಿದರೆ ಹಾಗೂ ಅದೇ ರಾಷ್ಟ್ರದ ವೆಸೆಲಿ ವಿಟೆಜ್ಸ್ಲಾವ್ (85.44 ಮೀ.) ಕಂಚಿನ ಪದಕ ಜಯಿಸಿದರು. ಈ ನಡುವೆ ಭಾರೀ ಪ್ರಚಾರ ಪಡೆದುಕೊಂಡಿದ್ದ ಪಾಕಿಸ್ತಾನದ ಅರ್ಶದ್ ನದೀಮ್ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಅಭಿನಂದನೆಗಳ ಮಹಾಪೂರ
ಇನ್ನು ಒಲಿಂಪಿಕ್ಸ್ ಅಥ್ಲೆಟಿಕ್ಸ್ನಲ್ಲಿ ಚೊಚ್ಚಲ ಬಂಗಾರದ ಪದಕ ತಂದುಕೊಟ್ಟ ನೀರಜ್ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಸೆಲಿಬ್ರಿಟಿಗಳು ನೀರಜ್ಗೆ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಚಿನ್ನದ ಸರದಾರ, ಜಾವೆಲಿನ್ ಎಸೆತಗಾರ ನೀರಜ್ಗೆ ಶಹಬ್ಬಾಸ್ ಎಂದ ಮೋದಿ
ಟೋಕಿಯೋದಲ್ಲಿ ಇಂದು ಇತಿಹಾಸ ಬರೆಯಲಾಗಿದೆ. ನಿಮ್ಮ ಸಾಧನೆ ಮುಂದೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯಲಿದೆ. ನೀರಜ್ ಅಸಾಧಾರಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಗಮನಾರ್ಹವಾದ ಉತ್ಸಾಹದಿಂದ ಆಡಿ ಮತ್ತು ಅಪ್ರತಿಮ ಮನೋಭಾವವನ್ನು ತೋರಿಸಿದರು. ಬಂಗಾರದ ಪದಕ ಗೆದ್ದುಕೊಂಡಿದ್ದಕ್ಕೆ ಅಭಿನಂದನೆಗಳು.
-ನರೇಂದ್ರ ಮೋದಿ, ಪ್ರಧಾನಿ
Share your comments