ಕಲ್ಯಾಣ ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ಕೆಲ ತಾಲ್ಲೂಕುಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. 200ಕ್ಕೂ ಹೆಚ್ಚು ಮನೆಗಳ ಗೋಡೆ ಬಿದ್ದಿದ್ದು, ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ.
ಬೀದರ್ ಹಾಗೂ ಕಲಬುರಗಿ ಜಿಲ್ಲೆಯ ಅನೇಕ ಹಳ್ಳಕೊಳ್ಳಗಳು, ನದಿಗಳು ಉಕ್ಕಿ ಹರಿದು ಅವಾಂತರ ಸೃಷ್ಟಿ ಮಾಡಿದೆ. ಬೀದರ್, ಭಾಲ್ಕಿ, ಔರಾದ್ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಸಾವಿರಾರು ಎಕರೆ ಬೆಳೆ ನೀರು ಪಾಲಾಗಿದೆ. ಕಲಬುರಗಿ ಜಿಲ್ಲೆಯ ಕಾಗಿಣಾ ನದಿಯು ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ಚಿತ್ತಾಪುರ, ಸೇಡಂ, ಕಾಳಗಿ ತಾಲ್ಲೂಕುಗಳ ಹಲವು ಸೇತುವೆಗಳು ಮುಳುಗಿದ್ದರಿಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಆಳಂದ ಮತ್ತು ಶಹಾಬಾದ್ ತಾಲ್ಲೂಕುಗಳಲ್ಲಿಯೂ ಹಲವು ಹಳ್ಳಗಳು ಉಕ್ಕಿ ಹರಿಯುತ್ತಿವೆ.
ಕಲಬುರಗಿಯಲ್ಲಿ ಮಳೆಯೊಂದಿಗೆ ಭೂಕಂಪನ:
ರಾಜ್ಯ ವಿವಿಧೆಡೆ ಮಳೆ ಚುರುಕುಗೊಂಡಿದ್ದು, ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಗುರುವಾರ ಮಳೆಯ ಆರ್ಭಟ ಮುಂದುವರೆದಿದೆ. ಗುರುವಾರ ಬೆಳಗ್ಗೆಯಿಂದಲೇ ಗುಡುಗು ಮಿಂಚಿನೊಂದಿಗೆ ಆರಂಭವಾದ ಆಗಾಗ ಜೋರಾದ ಮಳೆ ಸುರಿಯಿತು. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಮಳೆಯೊಂದಿಗೆ ಭೂಕಂಪನ ವಾಗಿದ್ದರಿಂದ ಜನರಲ್ಲಿ ಆತಂಕ ಮೂಡಿಸಿದೆ. ಕೆಲ ಮನೆಗಳು ಕುಸಿದಿವೆ.ಅದೃಷ್ಟವಶಾತ ಯಾವುದೇ ಪ್ರಾಣಹಾನಿಯಾಗಿಲ್ಲ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿನ ಹಳೆಯ ಮನೆಗಳು ಶಿಥಿಲಗೊಂಡಿದ್ದು, ಯಾವುದೇ ಕ್ಷಣಗಳಲ್ಲಿ ಬೀಳುವ ಆತಂಕ ಎದುರಾಗಿದೆ. ನಗರದ ಚರಂಡಿಗಳು, ನಾಲಾಗಳಲ್ಲಿ ನೀರು ನಿಂತುಕೊಂಡಿದ್ದು, ಹೆಚ್ಚುವರಿ ನೀರು ರಸ್ತೆಯ ಮೇಲೆ ನಿಲ್ಲುತ್ತಿದೆ..
ಕೋಡಿ ಬಿದ್ದ ಭೋಸಗಾ ಕೆರೆ: ಕಲಬುರಗಿ ನಗರಕ್ಕೆ ನೀರು ಪೂರೈಸುತ್ತಿದ್ದ ತಾಲ್ಲೂಕಿನ ಕೆರಿ ಭೋಸಗಾ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಕೋಡಿ ಬಿದ್ದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆರೆ ಏರಿಯ ದ್ವಾರವನ್ನು ಮುಚ್ಚಲಾಗಿದ್ದು, ಕೋಡಿ ಬೀಳುವಲ್ಲಿ ತೆರಳುವ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಬೀದರ್ ಜಿಲ್ಲೆಯಲ್ಲಿ ಮಳೆಯ ಆರ್ಭಟ:
ಕಳೆದೆರಡು ದಿನಗಳಿಂದ ಬೀದರ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಗುರುವಾರವೂ ತನ್ನ ಆರ್ಭಟ ಮುಂದುವರೆಸಿತು. ಹುಲಸೂರ ಹತ್ತಿರದ ಕೆರೆ ಒಡೆದು 400 ಎಕರೆಗೂ ಹೆಚ್ಚು ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ.
ಮಾಂಜ್ರಾ ನದಿ ಸೇರಿದಂತೆ ಅನೇಕ ಹಳ್ಳ, ನಾಲಾಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಮೂರು ದೊಡ್ಡ ಸೇತುವೆ ಸೇರಿ ಒಟ್ಟು ಆರು ಸೇತುವೆಗಳು ಮುಳುಗಡೆಯಾಗಿವೆ. ಮಳೆಯ ಅಬ್ಬರಕ್ಕೆ ಬೀದರ್, ಭಾಲ್ಕಿ, ಔರಾದ್ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಸಾವಿರಾರು ಎಕರೆ ಬೆಳೆ ನೀರು ಪಾಲಾಗಿದೆ.
ಔರಾದ್ ತಾಲ್ಲೂಕಿನ ಕೌಠಾ(ಬಿ) ಸಮೀಪದ ಮಾಂಜ್ರಾ ನದಿ ಸೇತುವೆ ಪಕ್ಕದ ಮಣ್ಣು ಇನ್ನಷ್ಟು ಕೆಳಗೆ ಕುಸಿದಿದೆ. ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡಿದೆ. ಮಾಂಜ್ರಾ ನದಿ ಪಾತ್ರದ ಹೊಲಗಳಲ್ಲಿನ ಬೆಳೆಗಳಲ್ಲಿ ನೀರು ನುಗ್ಗಿದೆ.
ರಾಜ್ಯದಲ್ಲಿ ಐದು ದಿನ ಮಳೆ ಸಾಧ್ಯತೆ:
ಕಳೆದ ಐದು ದಿನಗಳಿಂದ ಚುರುಕುಗೊಂಡ ಮಳೆ ಮತ್ತೆ ಐದು ದಿನಗಳ ಕಾಲವರೆಗೆ ಮುಂದುವರೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮುಂದಿನ 48 ಗಂಟೆಗಳವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆಪ್ಟೆಂಬರ್ 20 ರಿಂದ ಗುಡುಗು ಸಹಿತ ವ್ಯಾಪಕ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ
Share your comments