ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆ ಮುಂದುವರಿದಿದ್ದು ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದೇಚೆಗೆ (Heavy rain) ಭಾರೀ ಮಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಎರಡು ದಿನಗಳ ಮಳೆ ಮುಂದುವರೆಯುವ ನಿರೀಕ್ಷೆಯಿದೆ. ಕೊಡಗಿನಲ್ಲಿ ಮಾತ್ರ ಕೊಂಚ ಮಳೆ ತಗ್ಗಿದೆ. ಉತ್ತರ ಕನ್ನಡದ ವಿವಿಧೆಡೆ ಭಾರೀ ಮಳೆಯಾಗಿದ್ದು, ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ.
ಕಾರವಾರ ತಾಲೂಕಿನಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳು, ಹಲವು ರಸ್ತೆಗಳು ಜಲಾವೃತವಾಗಿವೆ. ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ, ಜನ ಸಂಚಾರಕ್ಕೆ ಅಡಚಣೆ ಉಂಟಾಯಿತು. ದೇವಳಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹಳೆಯ ಮಣ್ಣಿನ ಗೋಡೆ ಭಾರಿ ಮಳೆಗೆ ಕುಸಿದು ಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಬಳಿ ನೇತ್ರಾವತಿ (netravati river) ಮತ್ತು ಕುಮಾರಧಾರಾ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆ ಆಗಿದೆ. ಇದೇ ರೀತಿ ಮಳೆ ಸತತವಾಗಿ ಸುರಿದರೆ ನೆರೆ ಭೀತಿ ಉಂಟಾಗಲಿದೆ.
ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಕಾಪು, ಬ್ರಹ್ಮಾವರ ತಾಲ್ಲೂಕುಗಳಲ್ಲಿ ಬಿರುಸಿನ ಮಳೆಯಾಗಿದೆ. ಕುಂದಾಪುರದ ಗಂಗೊಳ್ಳಿ, ಕಾರ್ಕಳದ ಕುಕ್ಕುಂದೂರು, ಬ್ರಹ್ಮಾವರದ ಹೊಸೂರು, ಹಲುವಳ್ಳಿ, ಹಾವಂಜೆ, ಕಾಡೂರು, ಹೆರೂರು ಗ್ರಾಮಗಳಲ್ಲಿ ಮನೆಗಳು ಕುಸಿದಿವೆ. ಕೃಷಿ ಭೂಮಿ ಜಲಾವೃತಗೊಂಡು ಬೆಳೆ ನಾಶವಾಗಿದೆ. ಮೈಸೂರಿನಲ್ಲಿ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ಮುಂಗಾರು ಹಂಗಾಮಿನ ಬೆಳೆಗೆ, ಕೆಆರ್ಎಸ್ (KRS) ಮತ್ತು ಕಬಿನಿ ಜಲಾಶಯಗಳಿಂದ ಇದೇ 28ರಿಂದ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಶನಿವಾರ ತೀರ್ಮಾನಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ, ಭದ್ರಾವತಿಯಲ್ಲಿ ಜೋರು ಮಳೆಯಾಗಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.
ಸೊನ್ನ (sonna) ಬ್ಯಾರೇಜಿನಿಂದ 4000 ಕ್ಯೂಸೆಕ್ಸ್ ನೀರು ಭೀಮಾ ನದಿಗೆ: ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ನೀರಿನ ಒಳ ಹರಿವು ಹೆಚ್ಚಿದ್ದು, ಅದರಂತೆ ಶನಿವಾರ ಬ್ಯಾರೇಜಿನಿಂದ 4000 ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಹರಿಸಲಾಗಿದೆ. ಬ್ಯಾರೇಜಿಗೆ ಒಳಹರಿವಿನ ನೀರಿನ ಪ್ರಮಾಣ 4000 ಕ್ಯೂಸೆಕ್ಸ್ ಇದ್ದು, ಅಷ್ಟೇ ಪ್ರಮಾಣದ ನೀರು ನದಿಗೆ ಹರಿಬಿಡಲಾಗುತ್ತಿದೆ. ಆದರಿಂದ ನದಿ ಡಂಡೆಯಲ್ಲಿರುವ ಸಾರ್ವಜನಿಕರು ನದಿಯ ದಡಕ್ಕೆ ಹೋಗದಂತೆ ಮತ್ತು ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದ್ದಾರೆ.
Share your comments