ಕಳೆದ ಐದಾರು ದಿನಗಳಿಂದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸುರಿಯುತ್ತಿರುವ ರಭಸದ ಮಳೆ ಮತ್ತು ದಟ್ಟ ಮೋಡ ಕವಿದ ವಾತಾವರಣದಿಂದ ಹೆಸರು, ಉದ್ದು, ತೊಗರಿ ಬೆಳೆದ ರೈತರ ಬದುಕು ದುಸ್ತರಗೊಂಡಿದೆ. ಒಂದೆಡೆ ಹೆಸರು ಕಾಳು ಹೊಲದಲ್ಲಿಯೇ ಮೊಳಕೆಯೊಡೆಯುತ್ತಿದ್ದರೆ ಇನ್ನೊಂದೆಡೆ ಸಾವಿರಾರು ಎಕರೆ ಬೆಳೆ ಕೊಚ್ಚಿಕೊಂಡು ಹೋಗಿದೆ. ಇದ್ದ ಬೆಳೆ ಕಟಾವು ಮಾಡಿ ಮಾರಾಟ ಮಾಡಲು ಹೋದರೆ ಅದಕ್ಕೆ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ಈ ವರ್ಷ ರೈತರ ಪಾಲಿಗೆ ವರವಾಗಬೇಕಿದ್ದ ಮಳೆ ಶಾಪವಾಗಿ ಕಾಡಿದೆ.
ಪ್ರಸಕ್ತ ವರ್ಷ ಉತ್ತಮ ಮುಂಗಾರು ಆರಂಭವಾಗಿದ್ದರಿಂದ ರೈತಬಾಂಧವರ ಮುಖದಲ್ಲಿ ಕಳೆಗಟ್ಟಿತ್ತು. ಕಳೆದ ಐದಾರು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಸರು ಉದ್ದು ಬೆಳೆಗಳು ನಳನಳಿಸುತ್ತಿದ್ದವು. ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಇತ್ತೀಚೆಗೆ ಸುರಿದ ಮಳೆ ಸಂಕಷ್ಟಕ್ಕೆ ಸಿಲುಕಿಸಿತು. ಕಷ್ಟಪಟ್ಟು ಇದ್ದ ಬೆಳೆಯನ್ನು ರಾಶಿ ಮಾಡಿ ಮಾರಾಟ ಮಾಡಲು ಮಾರುಕಟ್ಟೆಗೆ ಹೋದರೆ ಬೆಲೆ ಕುಸಿತದ ಮತ್ತೊಂದು ಏಟು. ಹೀಗೆ ರೈತ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಮಾರುಕಟ್ಟೆಯ ಆಟಕ್ಕೆ ನಲುಗಿಹೋಗಿದ್ದಾನೆ.
ಈ ವರ್ಷ ಸುರಿದ ಅತೀವೃಷ್ಟಿಯಿಂದ ಹೆಸರು ಕಾಳಿಗೆ ಬೆಲೆಯಿಲ್ಲದಂತಾಗಿದೆ. ಸರ್ಕಾರವೇನೋ ಬೆಂಬಲ ಬೆಲೆ ಘೋಷಿಸಿಸಿದೆ. ಆದರೆ ಹೆಸರು ಕಾಳು ಸಣ್ಣ ಮತ್ತು ಕಪ್ಪಾಗಿದ್ದರಿಂದ ಬೆಲೆಯಿಲ್ಲದಂತಾಗಿದೆ. ಇದರಿಂದಾಗಿ ಮಳೆ ರೈತರ ನೆಮ್ಮದಿಯ ಬದುಕನ್ನೇ ಕಸಿದುಕೊಂಡಿದೆ.
ಮುಂಗಾರು ಬೆಳೆ ಕಾಳುಗಳನ್ನು ಹೆಚ್ಚಾಗಿ ಬೆಳೆಯುವ ಕರ್ನಾಟಕದ ರೈತರು ಹೆಸರು ಕಾಳನ್ನು ಸುಮಾರು 3.85 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಈ ವರ್ಷ ಬಿತ್ತನೆ ಮಾಡಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಸುಮಾರು ಶೇಕಡಾ 50 ಕ್ಕಿಂತ ಹೆಚ್ಚಿದೆ.
ಉತ್ತರ ಕರ್ನಾಟಕದ ರೈತರು ಹೆಚ್ಚು ಹೆಸರು ಬೆಳೆಯ ಮೇಲೆಯೇ ಅವಲಂಬನೆಯಾಗಿರುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಕೊಡುವ ಈ ಬೆಳೆ ಈ ವರ್ಷ ರೈತರ ಜೇಬು ತುಂಬಲೇ ಇಲ್ಲ. ಏಕೆಂದರೆ ನಿರಂತರ ಮಳಿಯಿಂದಾಗಿ ಕಟಾವಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಯಿತು. ಇದು ಗುಣಮಟ್ಟದ ಮೇಲೆ ಹೊಡೆತ ಬೀಳುತ್ತಿದ್ದು, ಈ ಪ್ರದೇಶಗಳಿಂದ ಮಾರುಕಟ್ಟೆಗೆ ಆವಕವಾಗುತ್ತಿರವ ಬೆಳೆಯಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಬೆಳೆಗೆ ಬೆಲೆ ಬರುತ್ತಿಲ್ಲ.
ಹಸಿಯಾಗಿರುವ ಹೆಸರು ಕಾಳನ್ನು ಖರೀದಿದಾರರು ಖರೀದಿಸುತ್ತಿಲ್ಲ. ಇದರಿಂದಾಗಿ ಧಾರಣೆಗಳ ಮೇಲೆ ತೀವ್ರವಾದ ಒತ್ತಡ ಉಂಟಾಗುತ್ತದೆ. ಸರ್ಕಾರವೇನೋ 2020ನೇ ಮುಂಗಾರು ಹಂಗಾಮು ಹೆಸರಿಗೆ 7196/ಕ್ವಿಂಟಾಲ್ ನಂತೆ ಎಮ್ಎಸ್ಪಿ ನಿಗದಿಪಡಿಸಿದೆ. ಆದರೆ ಉತ್ತಮ ಗುಣಮಟ್ಟದ ಹೆಸರಿಗೆ ಮಾತ್ರ ಸರ್ಕಾರ ಘೋಷಿಸಿದ ಎಂಎಸ್ಪಿ ದರದಲ್ಲಿ ಖರೀದಿ ಮಾಡಲಾಗುತ್ತಿದೆ.
ಈ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಹೆಸರಿಗೆ 6000 ದಿಂದ 7000 ವರೆಗೆ ಮಾರಾಟವಾಗುತ್ತಿದೆ. ಮಧ್ಯಮ ಗುಣಮಟ್ಟದ ಹೆಸರು 3 ಸಾವಿರದಿಂದ 4 ಸಾವಿರಕ್ಕೆ ಮಾರಾಟವಾಗುತ್ತಿದೆ. ಕನಿಷ್ಟ ಬೆಂಬಲ ಬೆಲೆಯಡಿಯಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಧಾರಣೆಗೆ ರೈತರು ಅಂಜಿ ಕಡಿಮೆ ಬೆಲೆಗೆ ಮಾರಾಟಮಾಡುತ್ತಿದ್ದಾರೆ.
ಲೇಖಕರು: ಶಗುಪ್ತಾ ಅ. ಶೇಖ
Share your comments