ದೇಶದ ರಾಜಧಾನಿ ದೆಹಲಿಯಲ್ಲಿ ಶನಿವಾರ ಬೆಳಗ್ಗೆ ಭಾರಿ ಮಳೆಯಾಗಿದ್ದರಿಂದ ನಗರದ ವಿಂಟೋ ಸೇತುವೆ, ಮೂಲ್ ಚಂದ್ ಅಂಡರ್ಪಾಸ್ ಮತತ್ ಐಟಿಐ ಸೇರಿದಂತೆ ನಗರದ ಹಲವು ಕಡೆ ನೀರು ನಿಂತು ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದೆ. ದೆಹಲಯಲ್ಲಿ ಮುಂದಿನ ಕೆಲ ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿಯಲ್ಲಿ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ರಾತ್ರಿಯಿಂದ ಭಾರಿ ಮಳೆ ಮುಂದುವರೆದಿದೆ. ಹಲವು ದಿನಗಳಿಂದ ನಡೆಯುತ್ತಿರುವ ತೇವಾಂಶದ ವಾತಾವರಣವೂ ಕಡಿಮೆಯಾಗಿದ್ದು, ದೀರ್ಘ ಮಳೆಯಿಂದಾಗಿ ತಾಪಮಾನವೂ ಕುಸಿದಿದೆ. ಶನಿವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ಇಡೀ ದೆಹಲಿಯ ಬಡಾವಣೆಗಳ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡಿದರು. ಮುಂದಿನ 24 ಗಂಟೆಗಳ ಕಾಲ ದೆಹಲಿಯಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ಈ ಮಳೆಯು ಮುಂದಿನ ಮೂರು ದಿನಗಳವರೆಗೆ ಮುಂದುವರಿಯುತ್ತದೆ.
ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ಹಲವಾರು ರಾಜ್ಯಗಳಿಗೆ ಮಳೆ ಬರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ರಾಜ್ಯಗಳಲ್ಲಿಯೂ ನಿರಂತರ ಮಳೆಯಾಗುತ್ತಿದೆ. ಪಾಕಿಸ್ತಾನದ ಕೇಂದ್ರ ಭಾಗಗಳು ಮತ್ತು ರಾಜಸ್ಥಾನಕ್ಕೆ ಹೊಂದಿಕೊಂಡಿರುವ ಪಶ್ಚಿಮ ಭಾಗದಲ್ಲಿ ಮಳೆ ಬರುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಮಧ್ಯಪ್ರದೇಶದ ಕೆಲವು ಭಾಗಗಳು, ಈಶಾನ್ಯ ರಾಜಸ್ಥಾನ, ವಿದರ್ಭ, ಮರಾಠವಾಡ, ತೆಲಂಗಾಣ, ಕರಾವಳಿ ಆಂಧ್ರಪ್ರದೇಶ ಮತ್ತು ದಕ್ಷಿಣ ಗುಜರಾತ್ ನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯೊಂದಿಗೆ ಕೆಲವು ಸ್ಥಳಗಳಲ್ಲಿ ಭಾರಿ ಮಳೆ ಯಾಗುವ ಸಾಧ್ಯತೆಯಿದೆ.
ತೆಲಂಗಾಣ, ಒಡಿಶಾ, ಹರಿಯಾಣ, ಪಂಜಾಬ್, ದೆಹಲಿ, ರಾಯಲಸೀಮಾ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯೊಂದಿಗೆ ಒಂದೆರಡು ಸ್ಥಳಗಳಲ್ಲಿ ಭಾರಿ ಮಳೆಯಾಗಬಹುದು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಕ್ಷಿಣ ಒಳನಾಡು ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಸಾಧಾರಣ ಮಳೆ ಯಾಗುವ ಸಾಧ್ಯತೆಯಿದೆ. ಛತ್ತೀಸ್ ಗಢ, ಜಮ್ಮು ಮತ್ತು ಕಾಶ್ಮೀರ ಪೂರ್ವ ರಾಜಸ್ಥಾನ ಮತ್ತು ಸೌರಾಷ್ಟ್ರ ಮತ್ತು ಕಚ್ ನಲ್ಲಿ ಲಘು ಮಳೆಯಾಗಬಹುದು. ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದೆ. ಅಲ್ಲಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ.
Share your comments