1. ಸುದ್ದಿಗಳು

ಉತ್ತರ ಕರ್ನಾಟಕದಲ್ಲಿ ಉಕ್ಕೇರಿದ ಪ್ರವಾಹ

Barish

ದಕ್ಷಿಣ ಮಹಾರಾಷ್ಟ್ರದ ಕೃಷ್ಣಾ ಕೊಳ್ಳ ಹಾಗೂ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆ(heavy rain)  ಯಿಂದಾಗಿ ರಾಜ್ಯದಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಉತ್ತರ ಕರ್ನಾಟಕ (North Karnataka) ಭಾಗದ ಬೆಳಗಾವಿ, ಬಾಗಲಕೋಟೆ, ಗದಗ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಮತ್ತೊಮ್ಮೆ ಪ್ರವಾಹದ (flood) ಭೀತಿ ಎದುರಾಗಿದೆ.

ಭಾರೀ ಮಳೆ, ಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಜನರ ಬದುಕು ಮೂರಾಬಟ್ಟೆಯಾಗಿದೆ. ಈ ಭಾಗದ ನದಿಗಳಲ್ಲಿ ನೆರೆ ಉಂಟಾಗಿದ್ದು, ಜನ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೇ ಹಲವಾರು ಸೇತುವೆಗಳು ಮುಳುಗಡೆಯಾಗಿದ್ದು, ಅಲ್ಲಲ್ಲಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ತೆಪ್ಪವೊಂದು ಮುಳುಗಿ ಒಂದೇ ಕುಟುಂಬದ ನಾಲ್ವರು ಕಣ್ಮರೆಯಾಗಿದ್ದಾರೆ. ರಾಯಚೂರು ತಾಲೂಕಿನ ನಡುಗಡ್ಡೆ ಪ್ರದೇಶ ಕುರುಪುರದ ಒಂದೇ ಕುಟುಂಬದ ಸುಮಲತಾ (35), ಮಗಳು ರೋಜಾ (6), ನರಸಮ್ಮ ರಾಮುಲು (45), ನರಸಮ್ಮ ನರಸಪ್ಪ (55) ನಾಪತ್ತೆಯಾದವರು. ಇವರು ತೆಲಂಗಾಣದ ಪಂಚಾದಿಪಾಡಕ್ಕೆ ದಿನಬಳಕೆ ವಸ್ತುಗಳ ಖರೀದಿಗೆ ತೆಪ್ಪದಲ್ಲಿ ಹೋಗಿದ್ದರು. ಹಿಂದಿರುಗುವಾಗ ತೆಪ್ಪದಲ್ಲಿ 13 ಜನ ಇದ್ದು, ಭಾರ ಹೆಚ್ಚಾದ ಕಾರಣ ತೆಪ್ಪ ಮುಳುಗಿದೆ. ಈ ವೇಳೆ 9 ಜನ ಈಜಿ ದಡ ಸೇರಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ.

ರಾಜ್ಯದ ಮಲೆನಾಡು, ಕರಾವಳಿ (Coastal district) ಜಿಲ್ಲೆಗಳಲ್ಲಿಯೂ ಸಹ ಸೋಮವಾರ ಭಾರಿ ಮಳೆ ಸುರಿದಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ನದಿಗಳು ಉಕ್ಕಿ ಹರಿಯುತ್ತಿವೆ. ಚಿಕ್ಕಮಗಳೂರಿನಲ್ಲೂ ಮಳೆಯ ಅಬ್ಬರ ಜೋರಾಗಿದೆ. ಭಾರಿ ಗಾಳಿ ಮಳೆಗೆ ಮೂಡಿಗೇರೆ ತಾಲೂಕಿನ ಹೊರಟ್ಟಿ ಹಾಗೂ ಕಲ್ಮನೆ ಗ್ರಾಮಗಳಲ್ಲಿ ಎರಡು ಮನೆಗಳು ಸಂಪೂರ್ಣ ಜಖಂಗೊಂಡಿದೆ.

ಮಲ್ಲಪ್ರಭಾ ನದಿ ಪ್ರವಾಹದಿಂದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ 34 ಹಳ್ಳಿಗಳು ಸಂಕಷ್ಟ ಎದುರಿಸುತ್ತಿವೆ. ಘಟಪ್ರಭೆಯಲ್ಲಿ 70 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ಮುಧೋಳ ತಾಲೂಕಿನ ನದಿದಡದ ಕೆಲ ಗ್ರಾಮಗಳಿಗೆ ನೀರು ನುಗ್ಗಿದೆ. ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ 35 ಮನೆಗಳು ಹಾನಿಯಾಗಿವೆ.

Dam

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 55,958 ಕ್ಯುಸೆಕ್ ಸೇರಿದಂತೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 1.21 ಲಕ್ಷ ಕ್ಯುಸೆಕ್ ನೀರುಹರಿದುಬರುತ್ತಿದೆ. ಮುಂದಿನ 48 ಗಂಟೆ ಗಳಲ್ಲಿ ಈ ಪ್ರಮಾಣ 2.75 ಲಕ್ಷ ಕ್ಯುಸೆಕ್‌ಗೆಏರಿಕೆಯಾಗುವ ಸಾಧ್ಯತೆ ಇದೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ನದಿ ತೀರದ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದೆ.

51 ಕುಟುಂಬಗಳು ಸ್ಥಳಾಂತರ:

ಮಲಪ್ರಭಾ ನದಿಯ ಪ್ರವಾಹದಿಂದಾಗಿ ರಾಮದುರ್ಗ ತಾಲೂಕಿನ ಹಿರೇ ಹಂಪಿಹೊಳಿ ಮತ್ತು ಚಿಕ್ಕಹಂಪಿಹೊಳಿ ಗ್ರಾಮಗಳ ಜನರು ತೊಂದರೆಗೆ ಈಡಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 51 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.77 ಲಕ್ಷ ಕ್ಯುಸೆಕ್‌ ನೀರು ಹರಿಬಿಡಲಾಗಿದೆ. ಇದರಿಂದಾಗಿ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದೆ. ರೋಣ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ.

ಆಲಮಟ್ಟಿ (Alamatti Dam): 2.50 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ

ಕೃಷ್ಣೆಯ ಉಗಮ ಸ್ಥಾನ ಮತ್ತು ಉಪ ನದಿಗಳ ಜಲಾನಯನ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಆಲಮಟ್ಟಿ ಜಲಾಶಯದಿಂದ 2.50 ಲಕ್ಷ ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಸೋಮವಾರ ಸಂಜೆ 106.172 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,50,472 ಕ್ಯುಸೆಕ್‌ ಒಳಹರಿವಿದ್ದು 2.50 ಲಕ್ಷ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

ಬೆಣ್ಣೆತೊರಾ, ಅಮರ್ಜಾ, ಸೊನ್ನ ಭೀಮಾ ಬ್ಯಾರೇಜ್, ಚಂದ್ರಂಪಳ್ಳಿ, ಗಂಡೋರಿ ನಾಲಾ ಮತ್ತು ನಾಗರಾಳ ಜಲಾಶಯಗಳು 15 ದಿನಗಳ ಹಿಂದೆಯೇ ಭರ್ತಿಯಾಗಿವೆ. ಅಫಜಲಪುರ ತಾಲ್ಲೂಕಿನ ಸೊನ್ನಾ ಭೀಮಾ ಬ್ಯಾರೇಜ್‌ನ 10 ಗೇಟ್‌ಗಳ ಮೂಲಕ 40 ಸಾವಿರ ಕ್ಯುಸೆಕ್ ನೀರನ್ನು ಭೀಮಾ ನದಿಗೆ ಬಿಡಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿರುವುದರಿಂದ ಜಿಲ್ಲೆಯ ಜೀವನಾಡಿ ಭೀಮೆಯ ಒಡಲು ತುಂಬಿದೆ. ಇದರಿಂದ ಅಫಜಲಪೂರ, ಜೇವರ್ಗಿ ಮತ್ತು ಚಿತ್ತಾಪುರ ತಾಲ್ಲೂಕಿನ ಹಲವು ಕೆರೆಗಳೂ ಭರ್ತಿಯಾಗಿವೆ.

ತುಂಗಭದ್ರಾ ಭರ್ತಿ:

ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನಲ್ಲಿ ತುಂಗಭದ್ರಾ ಜಲಾಶಯ ಇದೆ. ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ 3 ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೆ ಒಳಪಟ್ಟಿದೆ. ತುಂಗಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗಿರುವುದರಿಂದ ಜಲಾಶಯ ತುಂಬಿದೆ. 10 ಕ್ರಸ್ಟ್‌ ಗೇಟ್ ಮೂಲಕ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ.

ಬಸವಸಾಗರ ಭರ್ತಿ:

ಯಾದಗಿರಿ ಜಿಲ್ಲೆಯ ನಾರಾಯಣಪುರ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

ಭದ್ರಾ ಜಲಾಶಯ:

ಚಿಕ್ಕಮಗಳೂರು–ಶಿವಮೊಗ್ಗ ಜಿಲ್ಲೆ ಭಾಗದ ಲಕ್ಕವಳ್ಳಿ ಬಳಿ ಭದ್ರಾ ನದಿಗೆ 1964ರಲ್ಲಿ ಅಣೆಕಟ್ಟೆ ಕಟ್ಟಲಾಗಿದೆ. 71.53 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ (186 ಅಡಿ ಎತ್ತರ) ಜಲಾಶಯ ಮಲೆನಾಡು–ಬಯಲು ಸೀಮೆಯ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ 1.82 ಲಕ್ಷ ಹೆಕ್ಟೇರ್ ಜಮೀನುಗಳಿಗೆ ನೀರುಣಿಸುತ್ತದೆ.

ಗರಿಷ್ಟ ಮಟ್ಟಕ್ಕೆ ಕೆ.ಆರ್.ಎಸ್:

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ ಸೋಮವಾರ 124.80 ಅಡಿ ಗರಿಷ್ಟ ಮಟ್ಟ ತಲುಪುವ ಮೂಲಕ ಈ ಬಾರಿಯೂ ಆಗಸ್ಟ್ ತಿಂಗಳಿನಲ್ಲೇ ಭರ್ತಿಯಾದಂತಾಗಿದೆ. ಒಳಹರಿವಿನ ಪ್ರಮಾಣ 9228 ಕ್ಯೂಸೆಕ್ ಇದ್ದರೆ. 25580 ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಹೇಮಾವತಿನದಿಯ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಹಾಸನದ ಗೊರೂರು ಅಣೆಕಟ್ಟೆಯಿಂದ 19 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವುದರಿಂದ ಕೆಆರ್.ಎಸ್ ಅಣೆಕಟ್ಟೆಯ ಒಳಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

Published On: 18 August 2020, 11:10 AM English Summary: heavy rain affected in north Karnataka floods

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.