ಕೋವಿಡ್-19 ಪ್ರಯುಕ್ತ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯುತ್ ಮಗ್ಗಗಳಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರವು 2,000 ರೂ.ಗಳ ಪರಿಹಾರ ಧನ ನೀಡುತ್ತಿದೆ. ಇದಕ್ಕಾಗಿ ಆಯಾ ಜಿಲ್ಲೆಯ ಎಲ್ಲಾ ವಿದ್ಯುತ್ ಮಗ್ಗ ಘಟಕಗಳ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಲಾಖೆಯಿಂದ ವಿದ್ಯುತ್ ಸಹಾಯ ಧನ ಪಡೆಯುತ್ತಿರುವ ಜಿಲ್ಲೆಯಲ್ಲಿ 01 ರಿಂದ 20 ಹೆಚ್.ಪಿ. ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಮಗ್ಗ ಘಟಕಗಳಲ್ಲಿ ಕೂಲಿ ಕಾರ್ಮಿಕರಾಗಿ ಅಥವಾ ಸ್ವಂತ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ವಿದ್ಯುತ್ ಮಗ್ಗ ನೇಕಾರರು ಈ ಆರ್ಥಿಕ ನೆರವು ಪಡೆಯಲು ಅರ್ಹರು. ನೇರವಾಗಿ ವಿದ್ಯುತ್ ಮಗ್ಗಗಳ ನೇಕಾರರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗಿರುವದರಿಂದ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸಬೇಕು.
ಸಂಬಂಧಪಟ್ಟ ಜಿಲ್ಲೆಯ ವಿದ್ಯುತ್ ಮಗ್ಗ ಘಟಕಗಳ ಮಾಲೀಕರು ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ತಮ್ಮ ಘಟಕದಲ್ಲಿ ಕೆಲಸ ಮಾಡುತ್ತಿರುವ ನೇಕಾರರ ಪೂರ್ಣ ವಿವರಗಳೊಂದಿಗೆ 20 ರೂ. ಗಳ ಇ-ಸ್ಟಾಂಪ್ ಪೇಪರಿನಲ್ಲಿ ಸಹಿ ಮಾಡಿದ ಮುಚ್ಚಳಿಕೆ ಪತ್ರ, ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೂಲಿ ಕಾರ್ಮಿಕರು ಸ್ವಯಂ ಧೃಢೀಕರಿಸಿದ ಆಧಾರ್ ಕಾರ್ಡ ಪ್ರತಿ, ಆಧಾರ್ ಮಾಹಿತಿಯನ್ನು ಡಿ.ಬಿ.ಟಿ. ಗಾಗಿ ಬಳಕೆ ಮಾಡಲು ಕಾರ್ಮಿಕರ ಒಪ್ಪಿಗೆ ಪತ್ರ, ವಿದ್ಯುತ್ ಮಗ್ಗ ಘಟಕದ ಮುಂದೆ ವಿದ್ಯುತ್ ಮಗ್ಗ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಲಾನುಭವಿಗಳ ಗುಂಪಿನ ಫೋಟೋ, ಘಟಕದ ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್.ನಂ. ವಿದ್ಯುತ್ ಬಿಲ್., ಘಟಕವು ಬಾಡಿಗೆ/ ಲೀಸ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ ದಾಖಲಾತಿ, ಘಟಕದ ಉದ್ಯೋಗ ಆಧಾರ್/ಪಿ.ಎಂ.ಟಿ./ ಉದ್ದಿಮೆದಾರರ ಪರವಾನಗಿ ಪತ್ರದ ಪ್ರತ ಹಾಗೂ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ನೇಕಾರರ ವಿವರಗಳನ್ನು ಒಳಗೊಂಡ ಮಜೂರಿ ಪಾವತಿಯ ಪ್ರತಿ (ಲಭ್ಯವಿದ್ದಲ್ಲಿ) ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ 2020ರ ಜೂನ್ 26 ರೊಳಗಾಗಿ ಆಯಾ ಜಿಲ್ಲೆಯ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಕಚೇರಿಗೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬೇಕು.
Share your comments