ಜೂನ್ ತಿಂಗಳ 21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡಲಾಗುವುದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೇಶದಲ್ಲಿ ಎರಡನೇ ಅಲೆ ಕಾಣಿಸಿಕೊಂಡು ತೀವ್ರವಾಗಿ ಬಾಧಿಸುತ್ತಿರುವ ಬೆನ್ನಲ್ಲೇ ಪ್ರಧಾನಿಯವರು 39 ನಿಮಿಷಗಳ ಕಾಲ ದೇಶ ವಾಸಿಗಳನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಗಳಿಗೆ ಉಚಿತ ಲಸಿಕೆ ನೀಡಲಿದೆ. ರಾಜ್ಯ ಸರ್ಕಾರಗಳ ಲಸಿಕೆ ಬೇಡಿಕೆಗಳನ್ನು ಕೇಂದ್ರ ಈಡೇರಿಸಲಿದೆ. ಮುಂದಿನ ಎರಡುವಾರಗಳ ನಂತರ ಲಸಿಕೆ ನೀಡಾಲಗುವುದು. ಸರ್ಕಾರವೇ ಕೊರೊನಾ ಲಸಿಕೆ ಖರೀದಿಸಿ, ರಾಜ್ಯಗಳಿಗೆ ನೀಡಲಾಗುತ್ತದೆ. ಲಸಿಕೆಗಾಗಿ ರಾಜ್ಯಗಳು ಹಣ ನೀಡುವಂತಿಲ್ಲ. ಈ ಸಂಬಂಧ ಶೀಘ್ರವೇ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ವಿವರಿಸಿದರು.
ದೇಶದಲ್ಲಿ ಮೂರನೇ ಅಲೆ ಕಾಣಿಸುಕೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಈ ಪ್ರಮುಖ ತೀರ್ಮಾನ ಘೋಷಣೆ ಮಾಡಿದ್ದಾರೆ. ಉಚಿತ ಲಸಿಕ ನೀಡಬೇಕೆಂಬ ವ್ಯಾಪಕ ಒತ್ತಡಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಉಚಿತ ಲಸಿಕೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಶೇ.25ರಷ್ಟು ಖರೀದಿ ನಿಯಮದಲ್ಲಿ ಬದಲಾವಣೆ ಇಲ್ಲ. ಖಾಸಗಿ ಆಸ್ಪತ್ರೆಗಳು 125 ರೂ.ಗಿಂತ ಹೆಚ್ಚಿನ ಸರ್ವಿಸ್ ಚಾರ್ಜ್ ಪಡೆಯುವಂತಿಲ್ಲ. ಕೋವಿನ್ ಆ್ಯಪ್ ಬಗ್ಗೆ ವಿಶ್ವದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಅವರೂ ಸಹ ನಮ್ಮ ಮಾದರಿಯಲ್ಲಿಯೇ ಲಸಿಕೆ ವಿತರಣೆ ಮಾಡಲು ಮುಂದಾಗಿವೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಎಂಟು ತಿಂಗಳು ಉಚಿತವಾಗಿ ನೀಡಲಾಗಿತ್ತು. ಕೊರೊನಾ ಎರಡನೇ ಅಲೆ ಆರಂಭದಲ್ಲಿ ಏಪ್ರಿಲ್ ಮತ್ತು ಮೇನಲ್ಲಿ ಉಚಿತ ಪಡಿತರ ನೀಡಲಾಗಿತ್ತು. ಈಗ ಈ ಯೋಜನೆಯಲ್ಲಿ ದೀಪಾವಳಿವರೆಗೂ ಅಂದರೆ ನವೆಂಬರ್ ವರೆಗೂ ಉಚಿತ ಪಡಿತರ ಲಭ್ಯವಾಗಲಿದೆ.
ಕೇಂದ್ರ ಲಸಿಕೆ ನೀಡುವ ಕಾರ್ಯಕ್ರಮವನ್ನು ಕೇಂದ್ರಿಕರಣ ಮಾಡಿಕೊಳ್ಳುತ್ತಿದೆ ಎಂದು ಹಲವು ರಾಜ್ಯ ಸರ್ಕಾರಗಳು ಆರೋಪಿಸಿದವು. ಹಾಗಾಗಿ ಅವರಿಗೂ ಶೇ.50ರಷ್ಟು ಜವಾಬ್ದಾರಿ ನೀಡಲಾಯಿತು. ಮೇನಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೆಲ ರಾಜ್ಯಗಳು ಮೊದಲಿನ ವ್ಯವಸ್ಥೆಯೇ ಚೆನ್ನಾಗಿತ್ತು ಎಂದು ಹೇಳಲಾರಂಭಿಸಿದವು. ಹಾಗಾಗಿ ಲಸಿಕೆಯ ಪೂರ್ಣ ಹಂಚಿಕೆಯನ್ನು ಕೇಂದ್ರವೇ ತೆಗೆದುಕೊಳ್ಳಲಿದೆ ಎಂದು ಮೋದಿ ಸ್ಪಷ್ಟಪಡಿಸಿದರು.
ಕೊರೊನಾ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿದೆ. ಅನೇಕ ಕುಟುಂಬಗಳು ತಮ್ಮವರನ್ನು ಕಳೆದುಕೊಂಡಿದ್ದಾರೆ. ಇದು 100 ವರ್ಷಗಳಲ್ಲಿಯೇ ಅತಿ ದೊಡ್ಡ ಮಹಾಮಾರಿ . ಕೋವಿಡ್ ವಿರುದ್ಧ ಹೋರಾಟದ ವೇಳೆ ದೇಶದಲ್ಲಿಯೇ ಹೊಸ ಆರೋಗ್ಯ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ಹೇಳಿದರು.
ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಉತ್ಪನ್ನಗಳಿಗಾಗಿ ಯುದ್ಧನೋಪಾದಿಯಲ್ಲಿ ಕೆಲಸ ಮಾಡಲಾಯಿತು ಎಂದ ಅವರು, ವಿಶ್ವದ ಯಾವುದೇ ಭಾಗದಲ್ಲಿ ಲಭ್ಯವಿರುವ ಔಷಧಗಳನ್ನು ತರಲಾಯಿತು.. ಈ ಹೋರಾಟದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಿಲ್ಲ ಎಂದು ಅವರು ಸಾರಿದರು.
Share your comments