ಇನ್ನು ಮುಂದೆ ತಾಜಾ ಮೀನು ಖರೀದಿಸಲು ಮಾರುಕಟ್ಟೆಗೆ ಹೋಗಬೇಕಾಗಿಲ್ಲ, ಆನ್ ಲೈನ್ ಮೂಲಕ ಆರ್ಡರ್ ಮಾಡಿದರೆ ಸಾಕು ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಹೌದು,, ಇಂತಹದ್ದೊಂದು ಹೊಸ ಆ್ಯಪ್ ಮೀನಾಗಾರಿಕೆ ಇಲಾಖೆಯು ಸಿದ್ದಪಡಿಸಿದೆ.
ಆನ್ಲೈನ್ ಮೂಲಕ ಗ್ರಾಹಕರ ಮನೆ ಬಾಗಿಲಿಗೇ ತಾಜಾ ಮೀನು ಪೂರೈಕೆ ಮಾಡುವ ಯೋಜನೆ ಜಾರಿ ಮಾಡಲಾಗುವುದು ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆನ್ ಲೈನ್ ಮೂಲಕ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಮೀನು ತಂದುಕೊಡುವ ಯೋಜನೆಯನ್ನು ರೂಪಿಸಲಾಗುತ್ತಿದೆ.. ಮನೆ ಬಾಗಿಲಿಗೆ ಮೀನು ಪೂರೈಕೆ ಮಾಡುವ ಯೋಜನೆ ಕಾರ್ಯಗತಗೊಳಿಸಲು ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಇದೇ 21 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ‘ಪ್ರಧಾನಮಂತ್ರಿ ಮತ್ಸ್ಯಸಂಪದ’ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯಿಂದ ಮೀನು ಉತ್ಪಾದನೆ ಮತ್ತು ಮೀನು ಕೃಷಿಕರಿಗೆ ಲಾಭದಾಯಕವಾಗಲಿದೆ ಎಂದರು.
ಕೇಂದ್ರ ಸರ್ಕಾರ ಈ ಸಾಲಿನಲ್ಲಿ 137 ಕೋಟಿ ಹಣವನ್ನು ಮಂಜೂರು ಮಾಡಿದೆ. ರಾಜ್ಯದಲ್ಲಿ ಮತ್ಸ್ಯಸಂಪದ ಯೋಜನೆ ಕಾರ್ಯಗತಗೊಳಿಸಲು 5 ವರ್ಷಗಳಿಗೆ 4,115 ಕೋಟಿ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಮಂಗಳೂರು ಮೀನುಗಾರಿಕೆ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮಾಡಲಾಗುವುದು. ಮೈಸೂರು, ಶಿವಮೊಗ್ಗ, ಅಂಕೋಲ, ಉಡುಪಿಯಲ್ಲಿ ಮೀನುಗಾರಿಕಾ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ಹೆಸರುಘಟ್ಟದಲ್ಲಿರುವ ಮೀನುಗಾರಿಕೆ ಸಾಕಾಣಿಕೆ ಕೇಂದ್ರದಲ್ಲಿ ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ಮೀನು ಕ್ವಾರೆಂಟೈನ್ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ವಿದೇಶದ ಬಣ್ಣದ ಮೀನು ಸಾಕಾಣಿಕೆ ಮಾಡಲಾಗುವುದು. ವಿದೇಶದಿಂದ ಆಮದು ಮಾಡಿದ ಮೀನನ್ನು ಒಂದು ವಾರ ಪ್ರತ್ಯೇಕವಾಗಿಟ್ಟು ರೋಗ ಮುಕ್ತವೆಂದು ನಿರ್ಧರಿಸಿದ ನಂತರ ಸಾಕಾಣಿಕೆ ಮಾಡಲಾಗುತ್ತದೆ. ಈ ವ್ಯವಸ್ಥೆ ಚೆನೈನಲ್ಲಿ ಮಾತ್ರ ಇತ್ತು. ಈಗ ನಮ್ಮ ರಾಜ್ಯಕ್ಕೂ ವಿಸ್ತರಣೆಯಾಗಿದೆ ಎಂದರು.
Share your comments