First Ever Census on Water Bodies in India: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಜಲಶಕ್ತಿ ಸಚಿವಾಲಯವು ದೇಶಾದ್ಯಂತ ಮೊದಲ ಬಾರಿಗೆ ಜಲಮೂಲಗಳ ಗಣತಿಯನ್ನು ನಡೆಸಿದೆ.
ಈ ಜಲಗಣತಿಯು ನೈಸರ್ಗಿಕ ಮತ್ತು ಮಾನವ ನಿರ್ಮಿತ ಜಲಮೂಲಗಳಾದ ಕೊಳಗಳು, ಕೆರೆಗಳು, ಸರೋವರಗಳು ಮುಂತಾದವುಗಳನ್ನು ಒಳಗೊಂಡಂತೆ ಭಾರತದ ಎಲ್ಲಾ ಜಲ ಸಂಪನ್ಮೂಲಗಳ ಸಮಗ್ರ ಪಟ್ಟಿಯನ್ನು ಒದಗಿಸುತ್ತದೆ.
ಜೊತೆಗೆ, ಜಲಮೂಲಗಳ ಅತಿಕ್ರಮಣದ ಬಗ್ಗೆ ದತ್ತಾಂಶವನ್ನು ಸಂಗ್ರಹಿಸುತ್ತದೆ. ಈ ಗಣತಿಯು ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಸಮಾನತೆ ಮತ್ತು ವಿವಿಧ ಮಟ್ಟದ ಅತಿಕ್ರಮಣವನ್ನು ಎತ್ತಿ ತೋರಿಸುತ್ತದೆ ಹಾಗೂ ದೇಶದ ಜಲಸಂಪನ್ಮೂಲಗಳ ಬಗ್ಗೆ ನಿರ್ಣಾಯಕ ಒಳನೋಟಗಳನ್ನು ಬಹಿರಂಗಪಡಿಸುತ್ತದೆ.
ಎಲ್ಲಾ ಜಲಮೂಲಗಳ ಸಮಗ್ರ ರಾಷ್ಟ್ರೀಯ ದತ್ತಾಂಶವನ್ನು ಅನ್ನು ಪಡೆಯುವ ಸಲುವಾಗಿ ʻ6ನೇ ಸಣ್ಣ ನೀರಾವರಿ ಗಣತಿʼಯ ಸಹಯೋಗದೊಂದಿಗೆ ಕೇಂದ್ರ ಪ್ರಾಯೋಜಿತ ಯೋಜನೆಯಾದ "ನೀರಾವರಿ ಗಣತಿ" ಅಡಿಯಲ್ಲಿ ಈ ಗಣತಿಯನ್ನು ಪ್ರಾರಂಭಿಸಲಾಯಿತು.
ಜಲಮೂಲಗಳ ವಿಧ, ಸ್ಥಿತಿ, ಅತಿಕ್ರಮಣಗಳ ಸ್ಥಿತಿ, ಬಳಕೆ, ಶೇಖರಣಾ ಸಾಮರ್ಥ್ಯ, ಸಂಗ್ರಹಣೆಯ ಸ್ಥಿತಿ ಸೇರಿದಂತೆ ಜಲಮೂಲಗಳ ಎಲ್ಲಾ ಪ್ರಮುಖ ಅಂಶಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಯಿತು.
ಇದು ಬಳಕೆಯಲ್ಲಿರುವ ಅಥವಾ ಬಳಕೆಯಲ್ಲಿಲ್ಲದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಎಲ್ಲಾ ಜಲಮೂಲಗಳನ್ನು ಒಳಗೊಂಡಿದೆ.
ನೀರಾವರಿ, ಕೈಗಾರಿಕೆ, ಮೀನು ಸಾಕಾಣಿಕೆ, ಗೃಹೋಪಯೋಗಿ/ ಕುಡಿಯುವ ನೀರು, ಮನರಂಜನೆ, ಧಾರ್ಮಿಕ, ಅಂತರ್ಜಲ ಮರುಪೂರಣ ಮುಂತಾದ ಜಲಮೂಲಗಳ ಎಲ್ಲಾ ರೀತಿಯ ಬಳಕೆಗಳನ್ನು ಇದರಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ.
ಗಣತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಅಖಿಲ ಭಾರತ ಮತ್ತು ರಾಜ್ಯವಾರು ವರದಿಗಳನ್ನು ಪ್ರಕಟಿಸಲಾಗಿದೆ.
ಜಲ ಗಣತಿಯ ಪ್ರಮುಖ ಲಕ್ಷಣಗಳು / ಸಂಶೋಧನೆಗಳು ಈ ಕೆಳಗಿನಂತಿವೆ:
- ದೇಶದಲ್ಲಿ 24,24,540 ಜಲಮೂಲಗಳನ್ನು ಗಣತಿ ಮಾಡಲಾಗಿದ್ದು, ಅವುಗಳಲ್ಲಿ 97.1% (23,55,055) ಗ್ರಾಮೀಣ ಪ್ರದೇಶಗಳಲ್ಲಿವೆ ಮತ್ತು ಕೇವಲ 2.9% (69,485) ಮಾತ್ರ ನಗರ ಪ್ರದೇಶಗಳಲ್ಲಿವೆ.
- ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಒಡಿಶಾ ಮತ್ತು ಅಸ್ಸಾಂ ರಾಜ್ಯಗಳು ದೇಶದ ಒಟ್ಟು ಜಲಮೂಲಗಳಲ್ಲಿ ಸುಮಾರು 63% ರಷ್ಟನ್ನು ಹೊಂದಿವೆ.
- ನಗರ ಪ್ರದೇಶಗಳಲ್ಲಿನ ನೀರಿನ ಮೂಲಗಳ ಸಂಖ್ಯೆಯಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಉತ್ತರ ಪ್ರದೇಶ ಮತ್ತು ತ್ರಿಪುರಾ ಅಗ್ರ 05 ರಾಜ್ಯಗಳಾಗಿ ಹೊರಹೊಮ್ಮಿವೆ.
- ಗ್ರಾಮೀಣ ಪ್ರದೇಶಗಳಲ್ಲಿ ಜಲ ಮೂಲಗಳ ಸಂಖ್ಯೆಯಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಒಡಿಶಾ ಮತ್ತು ಅಸ್ಸಾಂ ಟಾಪ್ 05 ರಾಜ್ಯಗಳಾಗಿವೆ.
- ಜಲಮೂಲಗಳ ಪೈಕಿ 59.5% ಕೊಳಗಳ ರೂಪದಲ್ಲಿವೆ, ಉಳಿದಂತೆ 15.7% ಕೆರೆಗಳು, 12.1% ಜಲಾಶಯಗಳು, 9.3% ಜಲ ಸಂರಕ್ಷಣಾ ಯೋಜನೆಗಳು / ಒಳಹರಿವು ಟ್ಯಾಂಕ್ಗಳು / ಚೆಕ್ ಡ್ಯಾಮ್ಗಳು, 0.9% ಸರೋವರಗಳು ಮತ್ತು 2.5% ಇತರೆ ರೂಪದಲ್ಲಿವೆ.
- 55.2% ಜಲಮೂಲಗಳು ಖಾಸಗಿ ಸಂಸ್ಥೆಗಳ ಒಡೆತನದಲ್ಲಿದ್ದರೆ, 44.8% ಜಲಮೂಲಗಳು ಸಾರ್ವಜನಿಕ ಮಾಲೀಕತ್ವದ ವ್ಯಾಪ್ತಿಯಲ್ಲಿವೆ.
- ಎಲ್ಲಾ ಸಾರ್ವಜನಿಕ ಸ್ವಾಮ್ಯದ ಜಲಮೂಲಗಳಲ್ಲಿ, ಗರಿಷ್ಠ ಜಲಮೂಲಗಳು ಪಂಚಾಯತ್ಗಳ ಒಡೆತನದಲ್ಲಿವೆ, ಉಳಿದವು ರಾಜ್ಯ ನೀರಾವರಿ / ರಾಜ್ಯ ಜಲಸಂಪನ್ಮೂಲ ಸಚಿವಾಲಯದ ಒಡೆತನದಲ್ಲಿವೆ.
- ಎಲ್ಲಾ ಖಾಸಗಿ ಸ್ವಾಮ್ಯದ ಜಲಮೂಲಗಳಲ್ಲಿ, ಗರಿಷ್ಠ ಜಲಮೂಲಗಳು ವೈಯಕ್ತಿಕ ಮಾಲೀಕರು / ರೈತರ ಕೈಯಲ್ಲಿವೆ, ಉಳಿದವು ವ್ಯಕ್ತಿಗಳ ಗುಂಪು ಮತ್ತು ಇತರ ಖಾಸಗಿ ಸಂಸ್ಥೆಗಳ ಒಡೆತನದಲ್ಲಿವೆ
- ಖಾಸಗಿ ಸ್ವಾಮ್ಯದ ಜಲಮೂಲಗಳಲ್ಲಿ ಮುಂಚೂಣಿಯಲ್ಲಿರುವ ಅಗ್ರ 05 ರಾಜ್ಯಗಳೆಂದರೆ: ಪಶ್ಚಿಮ ಬಂಗಾಳ, ಅಸ್ಸಾಂ, ಆಂಧ್ರಪ್ರದೇಶ, ಒಡಿಶಾ ಮತ್ತು ಜಾರ್ಖಂಡ್.
- 'ಬಳಕೆಯಲ್ಲಿರುವ' ಎಲ್ಲಾ ಜಲಮೂಲಗಳಲ್ಲಿ, ಪ್ರಮುಖ ಜಲಮೂಲಗಳನ್ನು ಮೀನು ಸಾಕಣೆಗೆ, ಕೃಷಿ ಉದ್ದೇಶಕ್ಕೆ ಬಳಕೆಯು ಎರಡನೇ ಸ್ಥಾನದಲ್ಲಿದೆ ಎಂದು ವರದಿಯಾಗಿದೆ.
- ಮೀನು ಸಾಕಣೆಯಲ್ಲಿ ಜಲಮೂಲಗಳ ಪ್ರಮುಖ ಬಳಕೆಯ ಅಗ್ರ 05 ರಾಜ್ಯಗಳೆಂದರೆ: ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ.
- ನೀರಾವರಿಯಲ್ಲಿ ಜಲಮೂಲಗಳನ್ನು ಹೆಚ್ಚಾಗಿ ಬಳಸುತ್ತಿರುವ ಅಗ್ರ 05 ರಾಜ್ಯಗಳೆಂದರೆ: ಜಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗುಜರಾತ್.
* 78% ಜಲಮೂಲಗಳು ಮಾನವ ನಿರ್ಮಿತ ಜಲಮೂಲಗಳಾಗಿದ್ದರೆ, 22% ನೈಸರ್ಗಿಕ ಜಲಮೂಲಗಳಾಗಿವೆ. ಒಟ್ಟು ಗಣತಿ ಮಾಡಲಾದ ಜಲಮೂಲಗಳಲ್ಲಿ 1.6% (38,496) ಜಲಮೂಲಗಳು ಅತಿಕ್ರಮಣಕ್ಕೊಳಗಾಗಿವೆ ಎಂದು ವರದಿಯಾಗಿದೆ, ಅದರಲ್ಲಿ 95.4% ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಉಳಿದ 4.6% ನಗರ ಪ್ರದೇಶಗಳಲ್ಲಿವೆ.
* 23,37,638 ಜಲಮೂಲಗಳಿಗೆ ಸಂಬಂಧಿಸಿದಂತೆ ನೀರು ಹರಡುವ ಪ್ರದೇಶದ ಬಗ್ಗೆ ಮಾಹಿತಿ ವರದಿಯಾಗಿದೆ. ಈ ಜಲಮೂಲಗಳಲ್ಲಿ, 72.4% 0.5 ಹೆಕ್ಟೇರ್ ಗಿಂತ ಕಡಿಮೆ ನೀರಿನ ಹರಡಿದ ಪ್ರದೇಶವನ್ನು ಹೊಂದಿವೆ.
13.4% ಜಲಮೂಲಗಳು 0.5 - 1 ಹೆಕ್ಟೇರ್ ನೀರಿನ ಹರಡಿದ ಪ್ರದೇಶವನ್ನು ಹೊಂದಿದೆ, 11.1% ಜಲಮೂಲಗಳು 1-5 ಹೆಕ್ಟೇರ್ ನೀರಿನ ಹರಡುವಿಕೆ ಪ್ರದೇಶವನ್ನು ಹೊಂದಿದೆ ಮತ್ತು ಉಳಿದ 3.1% ಜಲಮೂಲಗಳು 5 ಹೆಕ್ಟೇರ್ಗಿಂತ ಹೆಚ್ಚು ನೀರಿನ ಹರಡುವಿಕೆಯ ಪ್ರದೇಶವನ್ನು ಹೊಂದಿವೆ.
'ರೋಮಾಂಚಕ ಭಾರತʼವು ವೈವಿಧ್ಯಮಯ ಮತ್ತು ವಿಭಿನ್ನ ಜಲಮೂಲಗಳನ್ನು ಹೊಂದಿದೆ. ಅಭಿವೃದ್ಧಿಗೆ ನೀರು ಒಂದು ಪ್ರಮುಖ ಅಂಶವಾಗಿದೆ, ಇದು ಪ್ರತಿಯೊಂದು ಸುಸ್ಥಿರ ಅಭಿವೃದ್ಧಿ ಗುರಿಯೊಂದಿಗೂ ಸಂಪರ್ಕ ಹೊಂದಿದೆ. ಇದು ಜೀವನಕ್ಕೆ ಅತ್ಯಗತ್ಯ ಮತ್ತು ಮೂಲಭೂತವಾಗಿದೆ.
ನೀರು ಮರುಬಳಕೆ ಮಾಡಬಹುದಾದ ಸಂಪನ್ಮೂಲವಾಗಿದೆ. ಆದರೆ ಅದರ ಲಭ್ಯತೆ ಸೀಮಿತವಾಗಿದೆ ಮತ್ತು ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವು ಕಾಲಾನಂತರದಲ್ಲಿ ವಿಸ್ತರಿಸುತ್ತಿದೆ. ಆದ್ದರಿಂದ, ಜಲಮೂಲಗಳನ್ನು ಸಂರಕ್ಷಿಸಲು ಮತ್ತು ಭದ್ರಪಡಿಸಲು ಸಂಘಟಿತ ಪ್ರಯತ್ನಗಳು ಬೇಕಾಗುತ್ತವೆ.
ಜಲಶಕ್ತಿ ಸಚಿವಾಲಯವು ರಾಷ್ಟ್ರೀಯ ಸಂಪನ್ಮೂಲವಾಗಿ ನೀರಿನ ಅಭಿವೃದ್ಧಿ, ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ನೀತಿ ಮಾರ್ಗಸೂಚಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿರುವ ನೋಡಲ್ ಸಚಿವಾಲಯವಾಗಿದೆ.
ಸಚಿವಾಲಯವು ನೀರಿಗೆ ಸಂಬಂಧಿಸಿದಂತೆ ಬಗ್ಗೆ ಬಹು ಆಯಾಮದ ವಿಧಾನವನ್ನು ಅನುಸರಿಸುತ್ತಿದೆ. ಒಂದೆಡೆ ದೇಶದ ಪ್ರತಿ ಮನೆಗೆ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಮಲವಿಸರ್ಜನೆಯನ್ನು ನಿರ್ಮೂಲನೆ ಮಾಡುವುದು.
ಗಂಗಾ ನದಿ ಮತ್ತು ಅದರ ಉಪನದಿಗಳ ಪುನರುಜ್ಜೀವನ, ಅಸ್ತಿತ್ವದಲ್ಲಿರುವ ಅಣೆಕಟ್ಟುಗಳ ಸುರಕ್ಷತೆ ಮತ್ತು ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ಸುಧಾರಿಸುವುದು ಮುಂತಾದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿದೆ.
ತಾಂತ್ರಿಕ ಮಾರ್ಗದರ್ಶನ, ಪರಿಶೀಲನೆ, ಅನುಮತಿ ಮತ್ತು ಮೇಲ್ವಿಚಾರಣೆಯ ಮೂಲಕ ದೇಶದ ಜಲ ಸಂಪನ್ಮೂಲಗಳ ಮೌಲ್ಯಮಾಪನ, ಅಭಿವೃದ್ಧಿ ಮತ್ತು ನಿಯಂತ್ರಣದಲ್ಲಿ ಸಚಿವಾಲಯವು ತೊಡಗಿದೆ.
ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳು ಹಾಗೂ ಜಲಶಕ್ತಿ ಸಚಿವಾಲಯದ ಗಂಗಾ ಪುನರುಜ್ಜೀವನ ಮತ್ತು ನದಿ ಅಭಿವೃದ್ಧಿ ಕಾರ್ಯದರ್ಶಿ ಶ್ರೀ ಪಂಕಜ್ ಕುಮಾರ್ ಅವರ ಮೇಲ್ವಿಚಾರಣೆ ಮತ್ತು ಬೆಂಬಲದೊಂದಿಗೆ ಜಲಶಕ್ತಿ ಸಚಿವಾಲಯದ ಸಣ್ಣ ನೀರಾವರಿ (ಅಂಕಿ-ಅಂಶ) ವಿಭಾಗದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಠಿಣ ಪ್ರಯತ್ನದಿಂದ, ರಾಷ್ಟ್ರೀಯ ಮಾಹಿತಿ ಕೇಂದ್ರ ಒದಗಿಸಿದ ತಾಂತ್ರಿಕ ಬೆಂಬಲ ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ಮಾಡಿದ ದೃಢ ಪ್ರಯತ್ನಗಳಿಂದ ಫಲಿತಾಂಶಗಳನ್ನು ಅಂತಿಮಗೊಳಿಸುವುದು ಮತ್ತು ಪೂರ್ಣಗೊಳಿಸುವುದು ಸಾಧ್ಯವಾಗಿದೆ.
ಸಚಿವಾಲಯದ ʻಐಇಸಿʼ ವಿಭಾಗವು ʻಜಲಗಣತಿʼ ವರದಿಯನ್ನು ದೇಶಾದ್ಯಂತ ಪ್ರಸಾರ ಮಾಡುವುದನ್ನು ಅದರಲ್ಲೂ ವಿಶೇಷವಾಗಿ ಯೋಜಕರು, ಸಂಶೋಧನಾ ವಿದ್ವಾಂಸರು, ಕೃಷಿ ಮತ್ತು ಜಲ ವಿಜ್ಞಾನಿಗಳು, ನೀತಿ ನಿರೂಪಕರು, ಆಡಳಿತಗಾರರು ಮತ್ತು ಈ ವಲಯದ ಇತರ ಎಲ್ಲ ಪಾಲುದಾರರಿಗೆ ತಲುಪುವಂತೆ ಖಾತರಿಪಡಿಸಿದೆ.
ಜಲಗಣತಿ ವರದಿಯು ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಿದೆ: https://jalshakti-dowr.gov.in.
ಪ್ರಮುಖ ಫಲಿತಾಂಶಗಳನ್ನು ʻಭುವನ್ʼ ಪೋರ್ಟಲ್ ಮೂಲಕವೂ ಪ್ರಸಾರ ಮಾಡಲಾಗುತ್ತದೆ.
ಅಖಿಲ ಭಾರತ ವರದಿಯ ಡೌನ್ಲೋಡ್ ಲಿಂಕ್:
https://jalshakti-dowr.gov.in/document/all-india-report-of-first-census-of-water-bodies-volume-1/ ;
ರಾಜ್ಯವಾರು ವರದಿ:
https://jalshakti-dowr.gov.in/document/state-wise-report-of-first-census-of-water-bodies-volume-2/
Share your comments