ಜಿಲ್ಲೆಯಲ್ಲಿ ಸೋಯಾಬೀನ್ ಸೇರಿದಂತೆ ಕೆಲ ಬಿತ್ತನೆ ಬೀಜಗಳ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯ ಪರ್ಯಾಯ ಬೆಳೆ ಬೆಳೆಯುವಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ .ನಿರಾಣಿ ಅವರು ರೈತರಲ್ಲಿ ಮನವಿ ಮಾಡಿದರು.
ಬುಧವಾರ ಗುಲ್ಬರ್ಗಾ ವಿಶ್ವವಿದ್ಯಾಲದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಈಗ ಅಭಾವವಾಗಿರುವ ಸೋಯಾಬೀನ್ ಮುಂತಾದ ಬಿತ್ತನೆ ಬೀಜಕ್ಕೆ ಪರ್ಯಾಯವಾಗಿ ಬೇರೆ ಬೀಜಗಳನ್ನು ಬಿತ್ತನೆ ಮಾಡಲು 10 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು. ಈ ಕುರಿತು ವಾಹನಗಳ ಮೂಲಕ ಹಳ್ಳಿಗಳಿಗೆ ತೆರಳಿ ಮನೆ-ಮನೆಗಳಿಗೆ ಪ್ರಚಾರ ಮಾಡಬೇಕು. ಸೋಯಾಬೀನ್ ಬೆಳೆಗಳಿಗೆ ಪರ್ಯಾಯ ಬೆಳೆ ಬೆಳೆಯುವಂತೆ ರೈತರಿಗೆ ತಿಳಿಹೇಳಿ ಅವರ ಮನವೊಲಿಸಬೇಕು ಎಂದು ಸಚಿವರು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ವಿ.ವಿ, ಜ್ಯೋತ್ಸಾö್ನ ಅವರು ಮಾತನಾಡಿ, ಸ್ಥಳೀಯವಾಗಿ ಬಿತ್ತನೆ ಬೀಜ ಉತ್ಪಾದನೆಯಾಗಿಲ್ಲ. ಬಿತ್ತನೆ ಬೀಜದ ಬೇಡಿಕೆ ಹೆಚ್ಚಾಗಿರುವ ಜೊತೆಗೆ ಮಧ್ಯಪ್ರದೇಶ ಮತ್ತಿತರೆಡೆಯಿಂದ ಬಿತ್ತನೆ ಬೀಜಗಳು ಸರಬರಾಜಾಗಿಲ್ಲ. ಆದ್ದರಿಂದ ಈ ಬಾರಿ ಸಮಸ್ಯೆಯಾಗಿದೆ ಎಂದ ಅವರು, ರೈತರು ಪರ್ಯಾಯ ಬೆಳೆಗಳನ್ನು ಬೆಳೆಯಲು ಮನವೊಲಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಅವರು ಮಾತನಾಡಿ, ಈ ಹಿಂದೆ ರೈತರೇ ಬಿತ್ತನೆ ಬೀಜಗಳನ್ನು ತಯಾರು ಮಾಡಿಕೊಳ್ಳುತ್ತಿದ್ದರು, ಇತ್ತೀಚಿನ ವರ್ಷಗಳಲ್ಲಿ ಕಂಪೆನಿ ಬಿತ್ತನೆ ಬೀಜಗಳನ್ನು ಆಶ್ರಯಿಸುತ್ತಿರುವುದೇ ಇದಕ್ಕೆಲ್ಲಾ ಕಾರಣ. ರೈತರೇ ಬಿತ್ತನೆ ಬೀಜಗಳನ್ನು ಉತ್ಪಾದನೆ ಮಾಡುವಂತಹ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕೆಂದು ಮನವಿ ಮಾಡಿದರು.
ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಕಳೆದ ಮೂರು ವರ್ಷದ ಹಿಂದೆ ಎಸ್ ಸಿ ಪಿ / ಟಿ ಎಸ್ ಪಿ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನ ಬಳಕೆ ಮಾಡದೇ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನೇ ಪೂರ್ಣಗೊಳಿಸದ ಕೃಷ್ಣಭಾಗ್ಯ ಜಲ ನಿಗಮದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಕಾನೂನು ಪ್ರಕಾರ ಆಯಾ ವರ್ಷದ ಬಿಡುಗಡೆಯಾದ ಅನುದಾನ ಬಳಕೆ ಮಾಡದ ಅಧಿಕಾರಿಗಳನ್ನು ಅಮಾನತು ಮಾಡಿ, ಎಫ್ಐಆರ್ ದಾಖಲಿಸಬೇಕು ಎಂದು ಸಚಿವರನ್ನು ಆಗ್ರಹಿಸಿದರು.
ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಟೆಂಡರ್ ಓಪನ್ ಮಾಡಿಲ್ಲ. ಕಾಮಗಾರಿಗೆ ಅಕ್ಷೇಪಣೆ ಬಂದಿದ್ದರಿಂದ ಮುಂದಿನ ಪ್ರಕ್ರಿಯೆಗಾಗಿ ನಿರ್ದೇಶನ ನೀಡಲು ಎಂ.ಡಿ. ಅವರಿಗೆ ಪತ್ರ ಬರೆಯಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆಗ ಮಧ್ಯೆ ಪ್ರವೇಶಿಸಿದ ಸಚಿವರು ಈ ಕೂಡಲೇ, ಟೆಂಡರ್ ಓಪನ್ ಮಾಡಿ ಉದ್ದೇಶಿತ ಕಾಮಗಾರಿಗಳನ್ನು ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಲ್ಲಾಮಾರಿ ನೀರಾವರಿ ಯೋಜನೆಯಲ್ಲೂ ಕಳಪೆ ಕಾಮಗಾರಿ ನಡೆದಿದ್ದು, ವಿಧಾನಸಭೆಯ ಅಧಿವೇಶನದಲ್ಲಿ ನಾನು ಹಾಗೂ ಚಿಂಚೋಳಿ ಶಾಸಕರಾದ ಡಾ. ಅವಿನಾಶ್ ಜಾಧವ್ ಅವರು ಪ್ರಶ್ನಿಸಿದಾಗ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಉತ್ತರಿಸಿದ್ದರು. ಆದರೆ, ಯಾವುದೇ ಪ್ರಗತಿ ಕಂಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ಅಧಿಕಾರಿಯ ಅನುಪಸ್ಥಿತಿಯಲ್ಲಿ ಸಭೆಗೆ ಉತ್ತರಿಸಿದ ಕಿರಿಯ ಇಂಜಿನಿಯರ್ 2018 ರಲ್ಲಿ ಪ್ರಾರಂಭವಾದ ಯೋಜನೆಗೆ ಒಟ್ಟು ರೂ 124 ಕೋಟಿ ನಿಗದಿಯಾಗಿದೆ. ಸಧ್ಯ ರೂ 90 ಕೋಟಿ ಅನುದಾನ ಖರ್ಚಾಗಿ ಶೇ 90 ಕಾಮಗಾರಿ ಮುಗಿದಿದ್ದು ಮುಂದಿನ ನಾಲ್ಕೈದು ತಿಂಗಳಲ್ಲಿ ಕೆಲಸ ಮುಗಿಸುವುದಾಗಿ ಹೇಳಿದರು. ಆಗ ಮಧ್ಯೆ ಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ, ಈ ಯೋಜನೆ ಪ್ರಾರಂಭವಾದ ದಿನದಿಂದಲೂ ಕಳಪೆಯಾಗಿದೆ. ಈ ಕುರಿತು ಸಮಗ್ರ ತನಿಖೆಗಾಗಿ ಲೋಕಾಯುಕ್ತಕ್ಕೆ ವಹಿಸಬೇಕು ಎಂದು ಆಗ್ರಹಿಸಿದರು. ಆಗ ಪ್ರತಿಕ್ರಿಯಿಸಿದ, ಸಚಿವರು ಹಿರಿಯ ಅಧಿಕಾರಿಯು ಸಭೆಗೆ ಬಂದಿಲ್ಲ ಅವರನ್ನು ಕರೆಸಲಾಗುತ್ತಿದೆ. ಕೆಡಿಪಿ ಸಭೆ ಮುಗಿದ ನಂತರ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಂದೇ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಮಾತನಾಡಿ, ಗುಲ್ಬರ್ಗಾ ವಿದ್ಯುತ್ ಸರಬರಾಜು ನಿಯಮಿತ (ಜೆಸ್ಕಾಂ) ಕಾರ್ಯನಿರ್ವಹಣೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್ ಗಳನ್ನು ಸೇಡಂ ತಾಲ್ಲೂಕಿನಲ್ಲಿ ರಸ್ತೆ ಮಧ್ಯೆಯೇ ನೆಡಲಾಗಿದೆ. ಇಂತಹವುಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಅಂದ್ರೆ, ನಮ್ಮ ಬಳಿ ಅನುದಾನ ಇಲ್ಲ ಅನ್ನತ್ತಾರೆ. ಆದರೆ, ಹಣವನ್ನು ಮಾತ್ರ ನಿರಂತರವಾಗಿ ಖರ್ಚು ಮಾಡುತ್ತಿದ್ದಾರೆ. ಮುಂದಿನ ಸಭೆಯಲ್ಲಿ ಜೆಸ್ಕಾಂ ಯಾವುದಕ್ಕೆಲ್ಲಾ ಹಣ ಖರ್ಚು ಮಾಡಿದೆ ಎಂಬ ವಿವರ ನೀಡಬೇಕು ಎಂದು ಅವರು ಇಂಜಿನಿಯರ್ಗೆ ತಾಕೀತು ಮಾಡಿದರು.
ಸಭೆ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಠಾಚಾರ ಪಾಲನೆಯಾಗುತ್ತಿಲ್ಲ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ. ಅಜಯ್ ಸಿಂಗ್ ಹಾಗೂ ಎಂ.ವೈ. ಪಾಟೀಲ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ತಪ್ಪು ಯಾರಿಂದಲೇ ಆಗಲಿ, ಕ್ಷಮೆಯಾಚಿಸುತ್ತೇನೆ. ಮತ್ತೆ ಇಂತಹ ಲೋಪವಾಗದಂತೆ ಜಾಗ್ರತೆ ವಹಿಸಲಾಗುವುದು ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ತಾವುಗಳು ಕ್ಷಮೆಯಾಚಿಸಬಾರದು. ಬದಲಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕರಾದ ಸುಭಾಶ್ ಗುತ್ತೇದಾರ್, ಕನೀಜ್ ಫಾತಿಮಾ, ಡಾ. ಅವಿನಾಶ್ ಜಾಧವ್, ಬಸವರಾಜ್ ಮತ್ತಿಮೂಡ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಶಶಿಲ್ ನಮೋಶಿ, ಸುನೀಲ್ ವಲ್ಯಾಪುರೆ, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಶ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಡಿಎಫ್ಓ ಎಂ.ಎ. ವಾನತಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.
Share your comments