Excessive rain : ಎಲ್ಲೆಡೆ ಈಗಾಗಲೇ ಮಳೆ ಚುರುಕುಪಡೆದುಕೊಂಡಿದ್ದು, ಕೆಲವೊಂದು ಪ್ರದೇಶಗಳಲ್ಲಿ ಜೋರಾದ ಮಳೆ ಇದೆ. ಹೊಲಗಳಲ್ಲಿ ಹೆಚ್ಚಿನ ನೀರು ನಿಂತು, ಬೆಳೆ ಹಾಳಾಗದಂತೆ ರಕ್ಷಿಸಿಕೊಳ್ಳಲು ಕೃಷಿ ಇಲಾಖೆ ಒಂದಷ್ಟು ಸಲಹೆಗಳನ್ನು ನೀಡಿದೆ.
ಬಹುತೇಕ ಪ್ರದೇಶಗಳಲ್ಲಿ ಜುಲೈ 17 ರಿಂದ ಮಳೆಯಾಗುತ್ತಿದ್ದು, ಮುಂಚಿತವಾಗಿ ಬಿತ್ತಿದ ಹೆಸರು, ಅಲಸಂದಿ, ಸೋಯಾ, ಅವರೆ, ಗೋವಿನ ಜೋಳ, ಶೇಂಗಾ ಮುಂತಾದ ಬೆಳೆಗಳಿಗೆ ಅನುಕೂಲವಾಗಿರುವುದು ಕಂಡುಬಂದಿದೆ. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯು ತಡವಾಗಿ ಬಿತ್ತಿರುವ ಬೆಳೆಗಳಿಗೆ ತೊಂದರೆಯುಂಟು ಮಾಡಿದೆ.
ಭೂಮಿಯಲ್ಲಿ ಅತಿಯಾದ ತೇವಾಂಶದಿಂದ ಹಾಗೂ ಸೂರ್ಯಪ್ರಕಾಶ ಬೆಳೆಗಳಿಗೆ ತಾಗದೇ ಇರುವುದರಿಂದ ಮೊದಲು ಬಿತ್ತನೆಯಾದ ಸೋಯಾಬಿನ್, ಹೆಸರು, ಉದ್ದು ಬೆಳೆಗಳು ಹಳದಿ ವರ್ಣಕ್ಕೆ ತಿರುಗುತ್ತಿವೆ.
ಕಾರಣ ರೈತರು ಈ ಬೆಳೆಗಳ ನಿರ್ವಹಣೆಗಾಗಿ ಸೂಕ್ತ ಉಪಕ್ರಮಗಳನ್ನು ಕೈಗೊಳ್ಳಬೇಕೆಂದು ಕೃಷಿ ಇಲಾಖೆಯ ಜಂಟಿನಿರ್ದೇಶಕ ಡಾ. ವಿನೋದಕುಮಾರ ತಿಳಿಸಿದ್ದಾರೆ.
ಹೊಲದ ಒಡ್ಡುಗಳಲ್ಲಿ ನಿಂತಿರುವ ಹೆಚ್ಚುವರಿ ನೀರನ್ನು ಹರಿ ಮಾಡುವುದರ ಮೂಲಕ ಹೊರ ಹಾಕಲು ಪ್ರಯತ್ನ ಮಾಡಬೇಕು. ಈಗಾಗಲೇ ಭೂಮಿಯು ಗರಿಷ್ಟ ಪ್ರಮಾಣದ ತೇವಾಂಶವನ್ನು ಹಿಡಿದಿಟ್ಟುಕೊಂಡಿದ್ದು, ಹೆಚ್ಚುವರಿಯಾಗಿ ಬಿದ್ದ ಮಳೆಯ ನೀರನ್ನು ಹೊಲದಿಂದ ಹೊರಕ್ಕೆ ಕಳಿಸುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.
ಮಳೆ ಕಡಿಮೆಯಾದ ನಂತರ ಹೆಸರು, ಉದ್ದು, ಅಲಸಂದಿ, ಸೋಯಾಬಿನ್ ಮುಂತಾದ ಬೆಳೆಗಳು ಹಳದಿ ವರ್ಣಕ್ಕೆ ತಿರುಗುತ್ತಿದ್ದಲ್ಲಿ ಎಲೆಗಳ ಮೂಲಕ ಪೋಷಕಾಂಶಗಳನ್ನು ಒದಗಿಸುವುದು ಒಳ್ಳೆಯದು.
ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 17:44:00 ಅಥವಾ 0:00:50 ಅಥವಾ 13:00:45 ಅಥವಾ 00:52:34 ಅಥವಾ 18:18:18:61 ಅಥವಾ 19:19:19 ಇವುಗಳಲ್ಲಿ ಯಾವುದಾದರೂ ಒಂದನ್ನು ಪ್ರತಿ ಲೀಟರ್ ನೀರಿಗೆ 5 ರಿಂದ 10 ಗ್ರಾಂ. ಬೆರೆಸಿ, ಬೆಳೆಗಳ ಮೇಲೆ ಸಿಂಪಡಿಸಬೇಕು.
ಕನಿಷ್ಟ 200 ಲೀ. ಸಿಂಪರಣಾ ದ್ರಾವಣ ಪ್ರತಿ ಎಕರೆಗೆ ಬೇಕಾಗುತ್ತದೆ. ಗೊಬ್ಬರಗಳನ್ನು ನೇರವಾಗಿ ಸಿಂಪರಣಾ ಯಂತ್ರಕ್ಕೆ ಹಾಕದೇ ಹೊರಗೆ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು ಎಂದು ಅವರು ಹೇಳಿದ್ದಾರೆ.
ಹಳದಿ ನಂಜಾಣು ಬಾಧಿತ ಸಸಿಗಳನ್ನು ಕಿತ್ತು ಕೈಯಲ್ಲಿ ಹಿಡಿದುಕೊಂಡು ಹೊಲದಲ್ಲಿ ತಿರುಗಾಡಬಾರದು. ಇದೊಂದು ರಸ ಹೀರುವ ಬಿಳಿ ನೊಣದ ಮೂಲಕ ಹರಡುವ ರೋಗವಾಗಿದ್ದು, ರೋಗವಾಹಕ ಕೀಟಗಳು ಎಲ್ಲೆಡೆ ಪಸರಿಸುವ ಸಾಧ್ಯತೆ ಇರುತ್ತದೆ.
ಬಾಧಿತ ಸಸಿಗಳನ್ನು ಕಿತ್ತು ಹೊಲದಿಂದ ಹೊರಗೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಬೇಕು. ಇಲ್ಲವೇ ಮಣ್ಣಿನಲ್ಲಿ ಗುಂಡಿ ತೋಡಿ ಹೂಳಬೇಕು ಎಂದು ತಿಳಿಸಿದ್ದಾರೆ.
ರಾಸಾಯನಿಕ ಉಪಕ್ರಮವಾಗಿ ಪ್ರತಿ ಲೀ. ನೀರಿಗೆ 0.3 ಗ್ರಾಂ. ಅಸಿಟಾಮಾಪ್ರಿಡ್ ಅಥವಾ 0.5 ಗ್ರಾಂ ಥಯೋಮೆಥಾಕ್ಸಾಮ್ ಅಥವಾ 2 ಮಿ.ಲೀ ಪ್ರೊಫೆನೊಫಾಸ್ ಕೀಟನಾಶಕವನ್ನು ಬೆರೆಸಿ ಸಿಂಪರಣೆ ಕೈಗೊಳ್ಳಬೇಕು.
ಗೋವಿನ ಜೋಳದಲ್ಲಿ ಚುಕ್ಕೆ ಲದ್ದಿ ಹುಳುವಿನ ಬಾಧೆ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ 1 ಗ್ರಾಂ. ನ್ಯುಮೋರಿಯಾ ರಿಲೈ ಜೈವಿಕ ಪೀಡೆನಾಶಕವನ್ನು ಬೆರೆಸಿ ಸುಳಿಗೆ ಬೀಳುವಂತೆ ಸಿಂಪಡಿಸಬೇಕು ಅಥವಾ 0.2 ಗ್ರಾಂ. ಇಮಾಮೆಕ್ಟಿನ್ ಬೆಂಝೋಯೇಟ್ ಅಥವಾ 0.5 ಮಿ.ಲೀ ಸ್ಪೈನೋಟಿರ್ಯಾಮ್ ಅಥವಾ 0.2 ಮಿ.ಲೀ. ಕ್ಲೋರಂಟ್ರಾನಿಲಿಪ್ರೋಲ್ ಕೀಟನಾಶಕವನ್ನು ಸುಳಿಗೆ ಬೀಳುವಂತೆ ಸಿಂಪಡಿಸುವುದು ಸೂಕ್ತ. ಒಂದೊಂದೇ ಸಾಲು ಹಿಡಿದು ಸಿಂಪರಣೆ ಮಾಡಿದಲ್ಲಿ ಕೀಟದ ನಿರ್ವಹಣೆಯು ಹೆಚ್ಚು ಪರಿಣಾಮಕಾರಿಯಾಗಬಲ್ಲದು.
ಗೋವಿನಜೋಳದ ಬೆಳೆಯು ಹಳದಿಯಾದಲ್ಲಿ ಪ್ರತಿ ಲೀಟರ್ ನೀರಿಗೆ 4 ಮಿ.ಲೀ. ನೀರಿನಲ್ಲಿ ಕರಗುವ ನ್ಯಾನೋ ಯೂರಿಯಾವನ್ನು ಬೆರೆಸಿ ಸಾರಜನಕ ಪೋಷಕಾಂಶವನ್ನು ಎಲೆಗಳ ಮೂಲಕ ಒದಗಿಸಬಹುದು. ಹದ ಬಂದ ಕೂಡಲೇ ಎಡೆಕುಂಟೆ ಹೊಡೆಯಲು ಪ್ರಥಮ ಆದ್ಯತೆ ನೀಡಬೇಕು.
ಕಳೆನಾಶಕ ಬಳಸುವುದಾದಲ್ಲಿ ಸಮೀಪದ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ತಜ್ಞರ ಮಾಹಿತಿ ಪಡೆದು ಕಳೆನಾಶಕ ಬಳಸಬೇಕೆಂದು ತಿಳಿಸಿದ್ದಾರೆ.
ಕಬ್ಬಿನ ಬೆಳೆಗೆ ತುಕ್ಕುರೋಗದ ಬಾಧೆಕಂಡು ಬಂದಿದೆ. ಈ ರೋಗವನ್ನು ನಿಯಂತ್ರಿಸಲು ಗಾಳಿಯಾಡುವಂತೆ ವ್ಯವಸ್ಥೆ ಮಾಡಬೇಕು. ರಾಸಾಯನಿಕ ಗೊಬ್ಬರಗಳ ಅದರಲ್ಲೂ ಸಾರಜನಕಯುಕ್ತ ರಸಗೊಬ್ಬರಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು.
ರಾಸಾಯನಿಕ ಕ್ರಮವಾಗಿ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಹೆಕ್ಸಾಕೋನಾಝೋಲ್ ಅಥವಾ 1 ಮಿ.ಲೀ. ಪ್ರೊಪಿಕೋನಾಜೋಲ್ ಅಥವಾ 1 ಮಿ.ಲೀ. ಟೆಬ್ಯುಕೋನಾಝೋಲ್ ಅಥವಾ 0.5 ಗ್ರಾಂ, ಟೆಬ್ಯುಕೋನಾಝೋಲ್ + ಟ್ರಿಫ್ಲಾಕ್ಸಿಸ್ಟ್ರೋಬಿನ್ (ನೇಟಿವೋ) ಇವುಗಳಲ್ಲಿ ಯಾವುದಾದರೂ ಒಂದನ್ನು ಸಂಯುಕ್ತ ಶಿಲೀಂದ್ರನಾಶಕವಾಗಿ ಸಿಂಪರಣಿ ಮಾಡಬೇಕೆಂದು ಜಂಟಿ ಕೃಷಿ ನಿರ್ದೇಶಕ ಡಾ. ವಿನೋದಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share your comments