ಕೇಂದ್ರ ಮೀಸಲು ಪೊಲೀಸ್ ಪಡೆಯ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಕನ್ನಡಪರ ಸಂಘಟನೆಗಳು ಈ ಕ್ರಮವನ್ನು ತೀವ್ರವಾಗಿ ಖಂಡಿಸಿವೆ.
ಅಲ್ಲದೇ ಕೇಂದ್ರ ಮೀಸಲು ಪೊಲೀಸ್ ಪಡೆಯ ನೇಮಕಾತಿಯನ್ನು ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ನಡೆಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ.
ಈ ಸಂಬಂಧ ಫೇಸ್‌ಬುಕ್‌ನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಭಿಪ್ರಾಯ ಹಂಚಿಕೊಂಡಿದ್ದು, ಅದು ಈ ರೀತಿ ಇದೆ.
“ಕೇಂದ್ರ ಮೀಸಲು ಪೊಲೀಸ್ ಪಡೆಯ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಿರುವುದನ್ನು ತಕ್ಷಣ ಸಡಿಲಿಸಿ,
ಕನ್ನಡ ಭಾಷೆಯಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟು ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಪ್ರಧಾನಿ ಮೋದಿ ಅವರನ್ನು ಆಗ್ರಹಪಡಿಸುತ್ತಿದ್ದೇನೆ” ಎಂದಿದ್ದಾರೆ.
“ಭಾಷೆಯೇ ಜ್ಞಾನ ಅಲ್ಲ, ಅದು ಜ್ಞಾನದ ಸಂವಹನ ಸಾಧನ ಅಷ್ಟೆ.
ಕನ್ನಡ ಭಾಷಾ ಮಾಧ್ಯಮದಲ್ಲಿ ಓದಿದ ನಮ್ಮ ಯುವಜನರು ಜ್ಞಾನಿಗಳಾಗಿದ್ದರೂ ಭಾಷೆಯ ಸಮಸ್ಯೆಯಿಂದಾಗಿ ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ.
ಇದು ಅನ್ಯಾಯ. ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಭಾಷಾ
ನೀತಿಯಿಂದಾಗಿ ಕೇಂದ್ರದಲ್ಲಿ ಕನ್ನಡಿಗ ಯುವಜನರು ಉದ್ಯೋಗ ವಂಚಿತರಾಗುತ್ತಿದ್ದಾರೆ.
ಇದರಿಂದ ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ, ಯುವಜನರ ಭವಿಷ್ಯ ಮಂಕಾಗುತ್ತಿದೆ.
ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯ ಭಾಷೆಗಳನ್ನು ಮೂಲೆಗೆ ತಳ್ಳಿ ಹಿಂದಿ ಭಾಷೆಯನ್ನು ನಮ್ಮ ತಲೆ ಮೇಲೆ ಹೇರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ.
ಉದ್ಯಮ, ಉದ್ಯೋಗ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಿಂದಿ ಭಾಷೆಯ ಯಜಮಾನಿಕೆ ಹೆಚ್ಚಾಗುತ್ತಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ.
ಈಗಲೂ ಕಾಲ ಮಿಂಚಿಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಮಧ್ಯೆ ಪ್ರವೇಶಿಸಿ ಸಿಆರ್‌ಪಿಎಫ್ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ರಾಜ್ಯ
ಭಾಷೆಗಳಲ್ಲಿ ಬರೆಯಲು ಅನುಕೂಲ ಮಾಡಿಕೊಡಬೇಕು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತು ಬಿಜೆಪಿ
ಸಂಸದರು ಇದಕ್ಕಾಗಿ ಪ್ರಧಾನಿಗಳ ಮೇಲೆ ಒತ್ತಡ ಹೇರಬೇಕು” ಎಂದು ಆಗ್ರಹಿಸಿದ್ದಾರೆ.
ಇನ್ನು ಜನತಾ ದಳ (ಜಾತ್ಯತೀತ)ವು ಈ ಕ್ರಮವನ್ನು ವಿರೋಧಿಸಿದೆ. “ಕೇಂದ್ರೀಯ ಮೀಸಲು ಪೊಲೀಸ್ ಪಡೆಯ CRPF ಹುದ್ದೆಗಳು ಪ್ರಕಟವಾಗಿದೆ.
ಆದರೆ, ಹಿಂದಿ ಪ್ರೇಮಿ BJP Delhi ಸರ್ಕಾರ ಈ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಮಾತ್ರ ನಡೆಸಲು ತೀರ್ಮಾನಿಸಿದೆ.
ಇದು ಕನ್ನಡ ನಾಡಿನ ಯುವಕರಿಗೆ ಮಾಡುವ ಅನ್ಯಾಯವಲ್ಲದೆ ಬೇರೇನಲ್ಲ” ಎಂದು ಹೇಳಿದ್ದಾರೆ.
“ಭಾರತ ಗಣರಾಜ್ಯ ಒಕ್ಕೂಟ ದೇಶ. ಇಲ್ಲಿ ಎಲ್ಲಾ ಭಾಷೆಗಳು ಸಮಾನವಾಗಿದೆ. CRPF ತನ್ನ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಡೆಸಲು,
ಹಿಂದಿಗೆ ರಾಷ್ಟ್ರೀಯ ಭಾಷೆ ಎಂಬ 'ಹುಸಿ ಕಿರೀಟ' ತೊಡಿಸಿದ್ದೆ ಕಾರಣ. ಕನ್ನಡ ಸೇರಿದಂತೆ ಇತರ ಭಾಷೆಗಳ ಮೇಲೆ ಎಸಗುತ್ತಿರುವ ಈ ಅನ್ಯಾಯವನ್ನು ನಾವು ಸಹಿಸುವುದಿಲ್ಲ.
ಕನ್ನಡ ಮತ್ತು ಇತರ ಭಾಷೆಗಳ ಮೇಲಿನ ತಾರತಮ್ಯವನ್ನು ಎಸಗುವ ಹಾಗೂ ಸಮಾನ ಅವಕಾಶವನ್ನು ನಿರಾಕರಿಸುವ ಕೇಂದ್ರ
ಬಿಜೆಪಿ ಸರ್ಕಾರದ ಈ ತೀರ್ಮಾನವನ್ನು ತಕ್ಷಣವೇ ಬದಲಾಯಿಸಬೇಕಿದೆ. ಭಾಷೆಯ ಕಾರಣಕ್ಕೆ CRPF ಸೇರುವ ಹಕ್ಕನ್ನು
ನಮ್ಮ ನಾಡಿನ ಯುವಕರು ಕಳದುಕೊಳ್ಳುವುದನ್ನು ಯಾವುದೆ ಕಾರಣಕ್ಕೆ ಸಹಿಸಲು ಸಾಧ್ಯವಿಲ್ಲ” ಎಂದು ಹೇಳಲಾಗಿದೆ.
ಇನ್ನು ಹಲವು ಕನ್ನಡಪರ ಸಂಘಟನೆಗಳು ಈ ಕ್ರಮವನ್ನು ವಿರೋಧಿಸಿವೆ.
Share your comments