1. ಸುದ್ದಿಗಳು

ದೆಹಲಿಯ ಪೆರೇಡ್‌: ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ!

Hitesh
Hitesh
Delhi Parade: Karnataka's silent film show denied!

ದೆಹಲಿಯ ಕರ್ತವ್ಯಪಥದಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈ ಬಾರಿಯ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ. 

ಕಳೆದ 13 ವರ್ಷಕ್ಕೂ ಹೆಚ್ಚು ಸಮಯದಿಂದ ರಾಜ್ಯದ ಸ್ತಬ್ಧಚಿತ್ರ ನಿರಂತರವಾಗಿ ಪ್ರದರ್ಶನವಾಗುತ್ತಿದೆ.

ಈ ಬಾರಿ ದೇಶದ ಇತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅವಕಾಶ ಕಲ್ಪಿಸಬೇಕು ಎನ್ನುವ ಕಾರಣದಿಂದ ರಾಜ್ಯದ ಸ್ತಬ್ಧಚಿತ್ರವನ್ನು ಕೈಬಿಟ್ಟಿರುವುದಾಗಿ ಸ್ತಬ್ಧಚಿತ್ರ ಆಯ್ಕೆ ಸಮಿತಿ ತಿಳಿಸಿದೆ.  

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿದ್ದು, ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಇದು ಇನ್ನಷ್ಟು ಇಂಬು ನೀಡಿದೆ.

ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯ ಕರ್ತವ್ಯ ಪಥದಲ್ಲಿ ದೇಶದ ವೈವಿಧ್ಯಮಯಗಳನ್ನು ಪ್ರದರ್ಶಿಸುವ ಸ್ತಬ್ಧ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಆಚಾರ, ವಿಚಾರಗಳು ಸೇರಿದಂತೆ ಹಲವಾರು ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಿ ವಿವಿಧತೆಯನ್ನು ಪ್ರದರ್ಶಿಸಲಾಗುತ್ತಿತ್ತು. ಈ ಬಾರಿ ಆ ಅವಕಾಶ ಕೈತಪ್ಪಿದೆ.   

ರಕ್ಷಣಾ ಸಚಿವಾಲಯವು ಸೆಪ್ಟೆಂಬರ್‌ 1ರಂದು ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ತಬ್ಧಚಿತ್ರದ ವಿಷಯಗಳ ಕುರಿತು ಟಿಪ್ಪಣಿ ಕಳುಹಿಸುವಂತೆ ಕೋರಿತ್ತು. ನವೆಂಬರ್‌ 24ರಂದು ನಡೆದ ಮೊದಲ ಆಯ್ಕೆ ಸಮಿತಿ ಸಭೆಯಲ್ಲಿ ಕರ್ನಾಟಕವೂ ಸೇರಿದಂತೆ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 23 ರಾಜ್ಯಗಳು ಭಾಗವಹಿಸಿದ್ದವು. ಡಿಸೆಂಬರ್ 1ರಂದು ನಡೆದ ಎರಡನೇ ಸಭೆಯಲ್ಲಿ ಕರ್ನಾಟಕದ ನಾರಿಶಕ್ತಿ ಎಂಬ ವಿಷಯ ಅಂತಿಮ ಮಾಡಲಾಗಿತ್ತು. ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಹಾಲಕ್ಕಿ ಅವರ ಸಾಧನೆಗಳನ್ನು ಬಿಂಬಿಸುವ ಸ್ತಬ್ಥಚಿತ್ರಕ್ಕೆ ಆಯ್ಕೆ ಸಮಿತಿ ಸಮ್ಮತಿಯನ್ನೂ ನೀಡಿತ್ತು.  

ಎರಡನೇ ಸಭೆಯಲ್ಲಿ ಒಟ್ಟು 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಿದ್ದವು. ಮೂರನೇ ಸುತ್ತಿನ ಆಯ್ಕೆ ಸಭೆಯಲ್ಲಿ ಕರ್ನಾಟಕದ ಮಾದರಿಗೆ ಒಪ್ಪಿಗೆ ಸೂಚಿಸಿತ್ತು. ಅಲ್ಲದೆ, ಕರ್ನಾಟಕವೂ ಸೇರಿ 20 ರಾಜ್ಯಗಳ ಸ್ತಬ್ಧಚಿತ್ರಗಳು ಆಯ್ಕೆಯಾಗಿದ್ದವು. ನಾಲ್ಕನೇ ಸಭೆಯಲ್ಲಿ ಕರ್ನಾಟಕದ ಕೀ-ಮಾಡಲ್‌ ಮತ್ತು ಸಂಗೀತಕ್ಕೆ ಒಪ್ಪಿಗೆ ಸೂಚಿಸಿ, ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಐದನೇ ಸುತ್ತಿನ ಸಭೆಗೆ 14 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ ಸಭಾ ಸೂಚನಾ ಪತ್ರ ಕಳುಹಿಸಲಾಗಿತ್ತು. ಈ ಪತ್ರದಲ್ಲಿ  ಕರ್ನಾಟಕದ ಹೆಸರು ಇರಲಿಲ್ಲ.

13 ವರ್ಷಗಳ ನಂತರ ಕೈತಪ್ಪಿದ ಅವಕಾಶ!

13 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ರಾಜ್ಯದ ಸ್ತಬ್ಧ ಚಿತ್ರವನ್ನು ತಿರಸ್ಕರಿಸುವುದರಿಂದ ಅವಕಾಶ ಕೈತಪ್ಪಿದೆ.

ರಾಜ್ಯದಿಂದ ಈ ಬಾರಿ ಒಟ್ಟು ನಾಲ್ಕು ಸ್ತಬ್ಧ ಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಸಿರಿಧಾನ್ಯ, ನಾರಿಶಕ್ತಿ, ಸಾಲು ಮರದ ತಿಮ್ಮಕ್ಕ ಸೇರಿದಂತೆ ಒಟ್ಟು ನಾಲ್ಕು ಸ್ತಬ್ಧ ಚಿತ್ರಗಳನ್ನು ಅಂತಿಮಗೊಳಿಸಿ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು. ಪ್ರತಿ ವರ್ಷ ಕೇಂದ್ರ ಸರ್ಕಾರ ಕೇಂದ್ರದ ರಕ್ಷಣಾ ಇಲಾಖೆ ಮತ್ತು ಪ್ರಸಾರ ಖಾತೆ ಇಲಾಖೆಯು ಜ. 26ರ ಗಣರಾಜ್ಯೋತ್ಸವಕ್ಕೆ ಸ್ತಬ್ಧ ಚಿತ್ರಗಳನ್ನು ಅಂತಿಮಗೊಳಿಸಿ ಕಳುಹಿಸಿಕೊಡಬೇಕೆಂದು ಆಯಾ ರಾಜ್ಯಗಳಿಗೆ ಸೂಚನೆ ನೀಡುತ್ತದೆ.

ಅದರಂತೆ ಕರ್ನಾಟಕದಿಂದ ಈ ಬಾರಿ ನಾಲ್ಕು ಸ್ತಬ್ಧ ಚಿತ್ರಗಳನ್ನು ಅಂತಿಮಗೊಳಿಸಿ ಸಮಿತಿಗೆ ಕಳುಹಿಸಿತ್ತು. ಸ್ತಬ್ಧ ಚಿತ್ರದಲ್ಲಿ ಈ ಬಾರಿ ಸಿರಿಧಾನ್ಯವನ್ನು ಪ್ರದರ್ಶನ ಮಾಡಲು ಆಲೋಚಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಸಿರಿಧಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸಿರಿಧಾನ್ಯದಲ್ಲಿ ಸಾಧಿಸಿರುವ ಪ್ರಗತಿ ಚಿತ್ರವನ್ನು ಬಿಂಬಿಸುವುದು ಇದರ ಉದ್ದೇಶವಾಗಿತ್ತು.

ಯಾವುದೇ ಒಂದು ಸ್ತಬ್ಧ ಚಿತ್ರವನ್ನು ಆಯ್ಕೆ ಮಾಡಬೇಕಾದರೆ ಆಯ್ಕೆ ಸಮಿತಿಯ ಮುಂದೆ ಆಯಾ ರಾಜ್ಯಗಳ ಅಧಿಕಾರಿಗಳು ಅದರ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಬಳಿಕವಷ್ಟೇ ಯಾವುದಾದರೂ ಒಂದು ಸ್ತಬ್ಧ ಚಿತ್ರವನ್ನು ಅಂತಿಮಗೊಳಿಸಿ ಜ. 26ರ ಗಣರಾಜ್ಯೋತ್ಸವಕ್ಕೆ ಪ್ರದರ್ಶಿಸಲು ಅನುಮತಿ ನೀಡುತ್ತಾರೆ.

ಆದರೆ ಈ ಬಾರಿ ಸಿರಿಧಾನ್ಯದ ಬಗ್ಗೆ ಅಧಿಕಾರಿಗಳು ಆಯ್ಕೆ ಸಮಿತಿ ಮುಂದೆ ಸಮರ್ಪಕವಾದ ಮಾಹಿತಿ ನೀಡಲು ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ. ಸಿರಿಧಾನ್ಯದ ಬದಲಿಗೆ ರಾಗಿ ಮತ್ತಿತ್ತರ ಬೆಳೆಗಳ ಬಗ್ಗೆ ವಿವರಣೆ ನೀಡಿದ್ದರಿಂದ ನಾಲ್ಕು ಸ್ತಬ್ಧ ಚಿತ್ರಗಳನ್ನು ತಿರಸ್ಕರಿಸಲಾಗಿದೆ ಎಂದೂ ಹೇಳಲಾಗಿದೆ. ಸಾಮಾನ್ಯವಾಗಿ ಗಣರಾಜ್ಯೋತ್ಸವದ ಸ್ತಬ್ಧ ಚಿತ್ರದಲ್ಲಿ ಕರ್ನಾಟಕಕ್ಕೆ ಯಾವಾಗಲೂ ಅ ಪ್ರಾಶಸ್ತ್ಯ ಸಿಗುತ್ತಿತ್ತು.  

ಮೂರು ರಾಜ್ಯಗಳೂ ಆಯ್ಕೆಯಾಗಿಲ್ಲ!

ಕರ್ನಾಟಕವು 2022ರಲ್ಲಿ ಪ್ರಸ್ತುತ ಪಡಿಸಿದ್ದ ಸಾಂಪ್ರದಾಯಿಕ ಕಸೂತಿಯ ತೊಟ್ಟಿಲು  ಸ್ತಬ್ಧಚಿತ್ರಕ್ಕೆ ಎರಡನೇ ಅತ್ಯುತ್ತಮ ಪ್ರಶಸ್ತಿ ಬಂದಿತ್ತು. ಉತ್ತರಪ್ರದೇಶಕ್ಕೆ ಪ್ರಥಮ ಮತ್ತು ಮೇಘಾಲಯಕ್ಕೆ ಮೂರನೇ ಪ್ರಶಸ್ತಿ ಬಂದಿತ್ತು. ಕಳೆದ ವರ್ಷ ಪ್ರಶಸ್ತಿ ಪಡೆದಿದ್ದ ಮೂರು ರಾಜ್ಯಗಳು ಈ ಬಾರಿ ಪರೇಡ್‌ಗೆ ಆಯ್ಕೆಯಾಗಿಲ್ಲ.

Published On: 08 January 2023, 11:25 AM English Summary: Delhi Parade: Karnataka's Tableau denied!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.