ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ತೌಕ್ತೆ ಚಂಡಮಾರುತದ ಪ್ರಭಾವ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣುತ್ತಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನದಿಂದಲೇ ಮಳೆ ಶುರುವಾಗಿದೆ.
ತೌಕ್ತೆ ಚಂಡಮಾರುತದಿಂದ ಕರಾವಳಿ ಜಿಲ್ಲೆಗಳು ತಲ್ಲಣಗೊಂಡಿದ್ದು, ದ.ಕ., ಉಡುಪಿ ಸೇರಿದಂತೆ ನಾನಾ ಕಡೆ ಭಾರೀ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಚಂಡಮಾರುತದ ಆರ್ಭಟಕ್ಕೆ ಕಡಲಿನ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ.
ಶುಕ್ರವಾರ ತಡರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗಾಳಿ-ಮಳೆ ಬಿರುಸುಗೊಂಡಿದ್ದು, ಶನಿವಾರ ಗಾಳಿ, ಮಳೆ ಬಿರುಸುಗೊಂಡಿದೆ. ಉಳ್ಳಾಲ ಸೋಮೇಶ್ವರ, ಸಸಿಹಿತ್ಲು, ಉಚ್ಚಿಲ ಪ್ರದೇಶದಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಕಡಲ್ಕೊರೆತ ತೀವ್ರವಾಗಿತ್ತು. ಸಮುದ್ರದ ಅಲೆಗಳು ದಡ ಮೀರಿ ಒಳ ನುಗ್ಗಿದ್ದು, ಆಸ್ತಿಪಾಸ್ತಿಗೆ ಹಾನಿಯುಂಟಾಗಿದೆ.
ಇನ್ನೆರಡು ದಿನವೂ 65-115 ಮಿಮೀ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರಿಕೆಗೆ ತೆರಳದಂತೆ ಉಡುಪಿ ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ. ಸಮುದ್ರ, ನದಿ ತೀರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಭಾರೀ ಗಾಳಿ ಮಳೆಯಿಂದ ಮಂಕಿಸ್ಟ್ಯಾಂಡ್, ಪಡೀಲ್, ಬಜಾಲು ಕಾವುಬೈಲ್, ಪ್ರಗತಿನಗರ ಇನ್ನಿತರ ಸ್ಥಳಗಳಲ್ಲಿ ಭೂ ಕುಸಿತ ಉಂಟಾಗಿ ಹಲವು ಮನೆಗಳಿಗೆ ಹಾನಿಯಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಚಂಡಮಾರುತ ತಂದ ಮಳೆಯ ಅಬ್ಬರದ ಮಧ್ಯೆ ರೈತನೊಬ್ಬ ಇಂದು ಮೃತಪಟ್ಟಿದ್ದಾನೆ. ವಿದ್ಯುತ್ ತಂತಿ ಸ್ಪರ್ಶಿಸಿದ ಕಾಪು ತಾಲೂಕಿನ ರೈತ ರಮೇಶ್ ಮೃತಪಟ್ಟಿದ್ದಾರೆ. ತೌಕ್ತೆ ಚಂಡಮಾರುತ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಭಾರತೀಯ ಕೋಸ್ಟ್ಗಾರ್ಡ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ 500ಕ್ಕೂ ಅಧಿಕ ಬೋಟುಗಳು ಧಕ್ಕೆಯಲ್ಲಿ ಲಂಗರು ಹಾಕಿದ್ದವು.
ಕರಾವಳಿ ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತ ಆತಂಕ ಎಲ್ಲೆಡೆ ಮನೆ ಮಾಡಿತ್ತು. ಚಂಡಮಾರುತ ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ ಉಂಟು ಮಾಡದಿರಲಿ ಎಂದು ಪ್ರಾರ್ಥಿಸುತ್ತಿದ್ದರು. ಅದರಲ್ಲೂ ಕಡಲ ತೀರದ ಜನತೆ, ತಗ್ಗುಪ್ರದೇಶ ಜನರು ತೀವ್ರ ಆತಂಕದಲ್ಲಿದ್ದರು.
ಮೀನುಗಾರಿಕಾ ದಕ್ಕೆಯಲ್ಲಿ ಲಂಗಾರು ಹಾಕಿದ ಬೋಟ್ನಲ್ಲಿದ್ದ ಕಾರ್ಮಿಕರು ಆತಂಕವಿಲ್ಲದೆ ಬೋಟ್ನಲ್ಲೇ ಊಟ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಕಡಲಿನಿಂದ ಅಲೆಗಳು ಉಕ್ಕಿ ಬರುತ್ತಿದ್ದು, ಹಿನ್ನೀರಿನಲ್ಲಿ ದೋಣಿಗಳು ತೇಲುತ್ತಿದ್ದರೂ ಏನೂ ನಡೆದಿಲ್ಲ ಎಂಬಂತಿದ್ದರು.
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶನಿವಾರ ಸಾಯಂಕಾಲದಿಂದ ಮಳೆಯಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಸಾಯಂಕಾಲದಿಂದ ನಿರಂತರವಾಗಿ ಎಡೆಬಿಡದೆ ಮಳೆ ಸುರಿಯತೊಡಗಿದೆ. ಮಳೆಯೊಂದಿಗೆ ಗುಡುಗು ಮಿಂಚಿನ ಆರ್ಭಟವೂ ಇದೆ. ಜೋರಾದ ಗಾಳಿ ಬೀಸತೊಡಗಿದೆ.
Share your comments