ಕೃಷಿ ಜಾಗರಣ ಅಗ್ರಿನ್ಯೂಸ್‌ಗೆ ಸ್ವಾಗತ. ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ.
1. ರಾಜ್ಯದ ಪ್ರತಿ ಬಿಪಿಎಲ್ ಕುಟುಂಬಕ್ಕೆ ಸಿಗಲಿದೆ ಮಾಸಿಕ 2 ಸಾವಿರ
2. ರಾಜ್ಯದ ವಿವಿಧೆಡೆ ಮೈನಡುಗುವ ಚಳಿ
3. ಮನೆಯಲ್ಲಿ ನಾಯಿ ಸಾಕಿದರೂ ಇನ್ಮುಂದೆ ತೆರಿಗೆ ಪಾವತಿಸಬೇಕು
4. ಕಾಶ್ಮೀರಿ ಕೇಸರಿಗೆ GI ಟ್ಯಾಗ್: ಬಂಪರ್ ಬೆಲೆ!
5. ತೊಗರಿಬೆಳೆಗೆ ನೆಟೆ ರೋಗ: ರೈತಪರ ಸಂಘಟನೆಗಳಿಂದ ಪ್ರತಿಭಟನೆ
6. ಮಹಾರಾಷ್ಟ್ರದಲ್ಲಿ ನಿತ್ಯ ಒಂದು ಕೋಟಿ ಮೊಟ್ಟೆ ಕೊರತೆ!
7. ಮದ್ಯ ಖರೀದಿ ಮಿತಿ ಹೆಚ್ಚಳ ಪ್ರಸ್ತಾವನೆ ಕೈಬಿಟ್ಟ ಸರ್ಕಾರ
8. ಜನವರಿ 20ರಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ
9. ಕಲಬುರಗಿಯಲ್ಲಿ 1.98 ಲಕ್ಷ ಹೆಕ್ಟೇರ್ ತೊಗರಿ ಬೆಳೆಗೆ ರೋಗ
10. ಸಶಸ್ತ್ರ ಪಡೆಗಳಲ್ಲಿ ಅಗ್ನಿವೀರರ ಪಾತ್ರ ಮಹತ್ವದ್ದು: ಪ್ರಧಾನಿ ಮೋದಿ
ರಾಜ್ಯದ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 2000 ನೆರವು ನೀಡಲು ನಿರ್ಧರಿಸಲಾಗಿದ್ದು, ಬರುವ ಬಜೆಟ್‌ನಲ್ಲಿ ಯೋಜನೆ ಪರಿಚಯಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ ಘೋಷಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ತಾವು ಅಧಿಕಾರಕ್ಕೆ ಬಂದರೆ ಮಾಸಿಕ 2 ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಅದು ಜುಲೈನಿಂದ ಅನ್ವಯವಾಗಲಿದೆ. ಆದರೆ, ಅವರು ಅಧಿಕಾರಕ್ಕೇ ಬರುವುದಿಲ್ಲ. ನಾವು ತಕ್ಷಣವೇ ಶುರು ಮಾಡಲಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದರು. ಚುನಾವಣೆ ಸಮೀಪಸುತ್ತಿದ್ದಂತೆಯೇ ಬಹುತೇಕ ಪಕ್ಷಗಳನ್ನು ಜನರನ್ನು ಸೆಳೆಯಲು ವಿಭಿನ್ನವಾದ ಯೋಜನೆಗಳನ್ನು ಘೋಷಿಸುತ್ತಿವೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹಿಣಿಯರಿಗೆ ಮನೆ ನಿರ್ವಹಣೆ ಮಾಡಲು ಆರ್ಥಿಕ ನೆರವು ನೀಡುವ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಗೃಹಿಣಿಯರಿಗೆ 2 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಿತ್ತು.
------------------------
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಳಿ ತೀವ್ರವಾಗಿ ಹೆಚ್ಚಾಗುತ್ತಿದೆ. ವಿವಿಧೆಡೆ ಮುಂಜಾನೆಯ ಚಳಿ ಜನರ ಮೈನಡುಗಿಸುತ್ತಿದೆ. ಬಾಗಲಕೋಟೆಯಲ್ಲಿ ಕನಿಷ್ಠ ಉಷ್ಣಾಂಶ 8.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ 48 ಗಂಟೆಯಲ್ಲಿ ರಾಜ್ಯದ ಒಳನಾಡಿನ ಹಲವು ಸ್ಥಳಗಳಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ 5ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಹಗಲು ವೇಳೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಬೆಳಿಗ್ಗೆ ದಟ್ಟ ಮಂಜು ಕವಿದ ವಾತಾವರಣ ಇರಲಿದ್ದು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಇದೆ. ಉಳಿದಂತೆ ರಾಜ್ಯದಲ್ಲಿ ಬಹುತೇಕ ಒಣಹವೆ ಮುಂದುವರಿದ್ದು, ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಕಂಡುಬಂದಿಲ್ಲ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
------------------------
ಮನೆಯಲ್ಲಿ ನಾಯಿ ಸಾಕಿದರೆ ತೆರಿಗೆ ಪಾವತಿಸಬೇಕು ಎಂಬ ನಿರ್ಧಾರವನ್ನು ಮಧ್ಯಪ್ರದೇಶದ ಸಾಗರ್ ಎಂಬ ನಗರಸಭೆ ತೆಗೆದುಕೊಂಡಿದೆ. ನಗರದ ಸ್ವಚ್ಛತೆ ಹಾಗೂ ಜನರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಕ್ಕೆ ಎಲ್ಲ ಸದಸ್ಯರು ಸಮ್ಮತಿ ನೀಡಿದ್ದಾರೆ. 40 ಮಂದಿ ಸದಸ್ಯರ ಅವಿರೋಧ ಬೆಂಬಲದೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಗರ ನಗರಸಭೆಯಿಂದ ಕಾನೂನು ರೂಪಗೊಂಡ ನಂತರ ಈ ವರ್ಷ ಏಪ್ರಿಲ್‌ನಿಂದಲೇ ಈ ಕಾನೂನು ಜಾರಿಯಾಗುವ ಸಾಧ್ಯತೆ ಇದೆ. ನಾಯಿಗಳ ಕಾಟದ ಬಗ್ಗೆ ಸಾಗರ್ ನಿವಾಸಿಗಳ ದೂರು ಹೆಚ್ಚಾದ ಮೇಲೆ ನಗರಸಭೆ ಈ ತೀರ್ಮಾನ ತೆಗೆದುಕೊಂಡಿದೆ. ನಗರಸಭೆಯ ವ್ಯಾಪ್ತಿಯಲ್ಲಿ ನಾಯಿಗಳ ಸರ್ವೆ ನಡೆಸಿ, ಎಲ್ಲ ನಾಯಿಗಳಿಗೂ ಲಸಿಕೆ ಹಾಕಲು ಹಾಗೂ ನಂತರ ತೆರಿಗೆ ವಿಧಿಸುವುದಕ್ಕೆ ಅಲ್ಲಿನ ನಗರಸಭೆ ತೀರ್ಮಾನಿಸಿದೆ.
------------------------
Money For House Wife| ಗೃಹಿಣಿಯರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ: ಮನೆ ನಿರ್ವಹಣೆಗೆ ಸಿಗಲಿದೆ ಹಣ!
------------------------
ಕಾಶ್ಮೀರ ಕಣಿವೆಯಲ್ಲಿ ಕಂಡುಬರುವ ಕಾಶ್ಮೀರಿ ಕೇಸರ್ ಮಸಾಲೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕಾಶ್ಮೀರಿ ಕೇಸರ್‌ಗೆ ಈಚೆಗಷ್ಟೇ ಜಿಐ ಟ್ಯಾಗ್ ಲಭ್ಯವಾಗಿದ್ದು, ಇದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೇಸರಿ ಉತ್ಪಾದಿಸಿ ಲಾಭ ಗಳಿಸುತ್ತಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಈ ಮಸಾಲೆ ಕಂಡುಬರುತ್ತದೆ. ಕೇಸರಿ ಹೆಸರಿನಲ್ಲಿ ಕಲಬೆರಕೆ ಕುಂಕುಮವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಈ ಭಾಗದ ಬೆಳೆಗಾರರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದರು. ಇದೀಗ ಜಿ.ಐ ಟ್ಯಾಗ್ ಲಭ್ಯವಾಗಿರುವುದರಿಂದ ಕಲಬೆರಕೆ ತಡೆಯಲು ಸಹಕಾರಿ ಆಗಿದೆ.
------------------------
ನೆಟೆ ರೋಗದಿಂದ ತೊಗರಿ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ, ರೈತ ಪರ ಸೇರಿ ವಿವಿಧ ಸಂಘಟನೆಗಳು ಮಂಗಳವಾರ ಕಲಬುರಗಿ ಬಂದ್‌ಗೆ ಕರೆ ನೀಡಿದ್ದು, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಂಗಳವಾರ ಮುಂಜಾನೆ 5 ಗಂಟೆಗೆ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ನೆಟೆ ರೋಗದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ. ಸರ್ಕಾರವನ್ನು ಬಡಿದೆಬ್ಬಿಸಲು ಬಂದ್‌ಗೆ ಕರೆ ನೀಡ ಲಾಗಿದೆ ಎಂದು ಪ್ರತಿಭಟನಾ ನಿರತರು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಜ.19ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಈ ವೇಳೆ ತೊಗರಿ ಬೆಳೆ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಿಸಿ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
------------------------
ನಿತ್ಯ ಒಂದು ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಮಾತಿದೆ. ಆದರೆ, ಮಹಾರಾಷ್ಟ್ರದಲ್ಲಿ ನಿತ್ಯ ಬರೋಬ್ಬರಿ ಒಂದು ಕೋಟಿ ಮೊಟ್ಟೆಗಳ ಕೊರತೆ ಎದುರಾಗಿದೆ. ಇದರಿಂದ ಮಹಾರಾಷ್ಟ್ರ ಮೊಟ್ಟೆಗಾಗಿ ನೆರೆಯ ರಾಜ್ಯದ ಮೇಲೆ ಅವಲಂಬನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಮೊಟ್ಟೆ ಉತ್ಪಾದನೆಯನ್ನು ಹೆಚ್ಚಿಸಲು ಅಲ್ಲಿನ ಪಶುಸಂಗೋಪನಾ ಇಲಾಖೆ ಯೋಜನೆಯನ್ನು ರೂಪಿಸಿದೆ. ಮಹಾರಾಷ್ಟ್ರದಲ್ಲಿ ದಿನಕ್ಕೆ 2.25 ಕೋಟಿ ಮೊಟ್ಟೆಗಳನ್ನು ಬಳಸಲಾಗುತ್ತಿದ್ದು, ದಿನಕ್ಕೆ 1 ಕೋಟಿ ಮೊಟ್ಟೆಗಳ ಕೊರತೆ ಎದುರಾಗಿದೆ. ರಾಜ್ಯವು ದಿನಕ್ಕೆ ಒಂದರಿಂದ 1.25 ಮೊಟ್ಟೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ರಾಜ್ಯದ ಅಗತ್ಯವನ್ನು ಪೂರೈಸಲು ಇಲಾಖೆಯು ಯೋಜನೆಯನ್ನು ರೂಪಿಸುತ್ತಿದೆ ಎಂದು ಪಶುಸಂಗೋಪನೆ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ಧನಂಜಯ ಪರ್ಕಳೆ ತಿಳಿಸಿದ್ದಾರೆ. ಸದ್ಯ ಮೊಟ್ಟೆ ಕೊರತೆ ನೀಗಿಸಲು ಕರ್ನಾಟಕ, ತೆಲಂಗಾಣ, ತಮಿಳುನಾಡಿನಿಂದ ಮೊಟ್ಟೆ ಖರೀದಿಸಲಾಗುತ್ತಿದೆ ಎಂದಿದ್ದಾರೆ. ಮೊಟ್ಟೆ ಉತ್ಪಾದನೆಯನ್ನು ಹೆಚ್ಚಿಸಲು ಪ್ರತಿ ಜಿಲ್ಲೆಗೆ 1 ಸಾವಿರ ಗೂಡುಗಳೊಂದಿಗೆ 50 ಬಿಳಿ ಲೆಘೋರ್ನ್ ಕೋಳಿಗಳನ್ನು 21 ಸಾವಿರ ರೂಪಾಯಿ ಸಬ್ಸಿಡಿ ದರದಲ್ಲಿ ನೀಡಲು ಯೋಜನೆ ರೂಪಿಸಲಾಗುತ್ತಿದೆ.
------------------------
ಮದ್ಯ ಖರೀದಿಸುವವರ ಕನಿಷ್ಠ ವಯಸ್ಸಿನ ಮಿತಿಯನ್ನು 21 ವರ್ಷಗಳಿಂದ 18 ವರ್ಷಕ್ಕೆ ಇಳಿಸುವ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಕರ್ನಾಟಕ ಅಬಕಾರಿ ಪರವಾನಿಗೆ ನಿಯಮಗಳು–1967ಕ್ಕೆ ಹಲವು ತಿದ್ದುಪಡಿಗಳನ್ನು ತರುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯು ಈಚೆಗೆ ಕರಡು ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿತ್ತು. ಅದರಲ್ಲಿ, ಮದ್ಯ ಖರೀದಿದಾರರ ಕನಿಷ್ಠ ವಯಸ್ಸಿನ ಮಿತಿಯನ್ನು ಇಳಿಸುವುದು ಪ್ರಮುಖವಾಗಿತ್ತು. ಸರ್ಕಾರದ ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಸ್ತಾವನೆ ಕೈಬಿಡಲಾಗಿದೆ. ನಾವು ಜನರನ್ನು ಕತ್ತಲೆಯಲ್ಲಿಟ್ಟು ನಿಯಮ ಬದಲಾವಣೆ ಮಾಡುತ್ತಿಲ್ಲ ಎಂದು ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ. ತಿದ್ದುಪಡಿಗಳ ವಿವರ ಇರುವ ಕರಡು ನಿಯಮಗಳನ್ನು ಪ್ರಕಟಿಸಿ, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆ ಆಹ್ವಾನಿಸಲಾಗಿದೆ. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ನಿಯಮ ತಿದ್ದುಪಡಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಅಬಕಾರಿ ಕಾಯ್ದೆ ಮತ್ತು ನಿಯಮಗಳಲ್ಲಿ ವ್ಯತ್ಯಾಸಗಳಿವೆ. ಅವುಗಳನ್ನು ಸರಿಪಡಿಸಲು ತಿದ್ದುಪಡಿ ತರುವ ಪ್ರಸ್ತಾವ ಸಿದ್ಧಪಡಿಸಲಾಗಿದೆ. ವಯಸ್ಸಿನ ಮಿತಿಯೂ ಅದರಲ್ಲಿ ಸೇರಿತ್ತು. ಆದರೆ, ಜನರಿಂದ ವಿರೋಧ ವ್ಯಕ್ತವಾಗುತ್ತಿರುವುದರಿಂದ ಮದ್ಯ ಖರೀದಿದಾರರ ವಯಸ್ಸಿನ ಮಿತಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಮಾಡದಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ.
------------------------
Self-Employment| 5 ಲಕ್ಷ ಜನರಿಗೆ ಸ್ವಯಂ ಉದ್ಯೋಗ ನೀಡಲು ಯೋಜನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
------------------------
ಬೆಂಗಳೂರಿನ ಲಾಲ್‌ಬಾಗ್‌ನ 213ನೇ ಫಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಗಾಜಿನ ಮನೆಯನ್ನು ಸಿಂಗರಿಸಲಾಗುತ್ತಿದೆ. ಲಾಲ್‌ಬಾಗ್ ಪುಷ್ಪ ಪ್ರದರ್ಶನವು ಜನವರಿ 20ರಂದು ಪ್ರಾರಂಭವಾಗಲಿದ್ದು, ಈ ವರ್ಷದ ಥೀಮ್ ಬೆಂಗಳೂರಿನ ಇತಿಹಾಸವಾಗಿದೆ. ತೋಟಗಾರಿಕಾ ಸಚಿವ ಮುನಿರತ್ನ ಅವರು ಮಾತನಾಡಿ, ಈ ಬಾರಿಯ ಫಲಪುಷ್ಪ ಪ್ರದರ್ಶನದ ಬೆಂಗಳೂರಿನ ಇತಿಹಾಸ ಹೇಳಲಿದ್ದು, ಕೆಂಪೇಗೌಡ, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್ ಬೆಂಗಳೂರಿಗೆ ನೀಡಿದ ಕೊಡುಗೆಯನ್ನು ಪ್ರದರ್ಶಿಸಲಾಗುತ್ತದೆ ಎಂದಿದ್ದಾರೆ. ಕೊಲಂಬಿಯಾ, ಕೀನ್ಯಾ, ನೆದರ್ಲ್ಯಾಂಡ್ಸ್, ಇಸ್ರೇಲ್, ಆಸ್ಟ್ರೇಲಿಯಾ ಸೇರಿದಂತೆ 11 ದೇಶಗಳ ಹೂವುಗಳು ಪ್ರದರ್ಶನದಲ್ಲಿರಲಿವೆ. ಅಲ್ಲದೇ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಸಿಕ್ಕಿಂ ಸೇರಿದಂತೆ ಐದು ರಾಜ್ಯಗಳ ಹೂವುಗಳು ಕೂಡ ಪ್ರದರ್ಶನಗೊಳ್ಳಲಿವೆ ಎಂದಿದ್ದಾರೆ. ಜನವರಿ 20 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜನವರಿ 30 ರಂದು ಮುಕ್ತಾಯಗೊಳ್ಳಲಿದೆ.
------------------------
ಕಲಬುರಗಿಯಲ್ಲಿ 4.78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ತೊಗರಿ ಬೆಳೆಯ ಪೈಕಿ 1.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತೊಗರಿ ಬೆಳೆಯು ಕೊಳೆ ರೋಗದಿಂದಾಗಿ ಹಾನಿಯಾಗಿರುವ ಕುರಿತು ಕಲಬುರಗಿ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಿದೆ. ಡಿಸೆಂಬರ್ 1ನೇ ವಾರದವರೆಗೆ ನಡೆಸಿದ ಪ್ರಾಥಮಿಕ ವರದಿಯಲ್ಲಿ 69,747 ಹೆಕ್ಟೇರ್ ಭೂಮಿಯಲ್ಲಿ ಸಂಕೀರ್ಣವಾದ ಕೊಳೆ ರೋಗದಿಂದಾಗಿ ಉಂಟಾಗಿರುವ ನಷ್ಟವನ್ನು ಉಲ್ಲೇಖಿಸಲಾಗಿದೆ. ಜ.7ರಂದು ಕೆಡಿಪಿ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು, ಕಾಂಪ್ಲೆಕ್ಸ್ ವಿಲ್ಟ್ ಕಾಯಿಲೆಯಿಂದ ಆಗಿರುವ ನಷ್ಟದ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ 5 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಕೃಷಿ ಇಲಾಖೆಗೆ ನಿರ್ದೇಶನ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಕೃಷಿ ಇಲಾಖೆಯು ಜ.10ರಂದು ಸಮಗ್ರ ಸಮೀಕ್ಷೆ ಆರಂಭಿಸಿ ಜನವರಿ 13ರಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದೆ.
------------------------
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾಥಮಿಕ ತರಬೇತಿಯನ್ನು ಆರಂಭಿಸಿರುವ ಮೂರು ಸೇವೆಗಳ ಅಗ್ನಿವೀರರ ಮೊದಲ ಬ್ಯಾಚ್ ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. ಪ್ರಪ್ರಥಮ ಅಗ್ನಿಪಥ ಯೋಜನೆಯ ಪ್ರವರ್ತಕರಾಗಿದ್ದಕ್ಕಾಗಿ ಪ್ರಧಾನ ಮಂತ್ರಿಗಳು ಅಗ್ನಿವೀರರನ್ನು ಅಭಿನಂದಿಸಿದರು. ಈ ಪರಿವರ್ತನಾ ನೀತಿಯು ನಮ್ಮ ಸಶಸ್ತ್ರ ಪಡೆಗಳನ್ನು ಸಶಕ್ತಗೊಳಿಸುವಲ್ಲಿ ಮತ್ತು ಅವರನ್ನು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧಗೊಳಿಸುವಲ್ಲಿ ಹೊಸ ಇತಿಹಾಸವನ್ನೇ ಬರೆಯಲಿದೆ. ಇನ್ನು ಅಗ್ನಿವೀರರ ಸಾಮರ್ಥ್ಯವನ್ನು ಶ್ಲಾಘಿಸಿದ ಅವರು, ಬಾನೆತ್ತರದಲ್ಲಿ ಹಾರುವ ರಾಷ್ಟ್ರಧ್ವಜ ಸಶಸ್ತ್ರ ಪಡೆಗಳ ಶೌರ್ಯವನ್ನು ಪ್ರತಿಬಿಂಬಿಸುವ ಪ್ರತೀಕದಂತಿದೆ ಎಂದು ಹೇಳಿದರು. ನವ ಭಾರತವು ನವ ಚೈತನ್ಯದಿಂದ ತುಂಬಿದೆ ಮತ್ತು ನಮ್ಮ ಸಶಸ್ತ್ರ ಪಡೆಗಳನ್ನು ಆಧುನೀಕರಿಸುವ ಜೊತೆಗೆ ಅವರನ್ನು ಸ್ವಾವಲಂಬಿಯಾಗಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. 21ನೇ ಶತಮಾನದಲ್ಲಿ ಯುದ್ಧ ಮಾಡುವ ರೀತಿ ಬದಲಾಗುತ್ತಿದೆ. ಸಂಪರ್ಕರಹಿತ ಯುದ್ಧದ ಹೊಸ ರಂಗಗಳು ಮತ್ತು ಸೈಬರ್ ಯುದ್ಧದ ಸವಾಲುಗಳು ಎದುರಾಗಿವೆ. ನಮ್ಮ ಸಶಸ್ತ್ರ ಪಡೆಗಳಲ್ಲಿ ತಾಂತ್ರಿಕವಾಗಿ ಮುಂದುವರಿದ ಸೈನಿಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದಿದ್ದಾರೆ. ವಿಶೇಷವಾಗಿ ಪ್ರಸ್ತುತ ಯುವ ಪೀಳಿಗೆಯು ಈ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ನಮ್ಮ ಸಶಸ್ತ್ರ ಪಡೆಗಳಲ್ಲಿ ಅಗ್ನಿವೀರರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು. ವಿವಿಧ ಪ್ರದೇಶಗಳಲ್ಲಿ ನೇಮಕವಾಗು ವುದರಿಂದ ಅವರಿಗೆ ವೈವಿಧ್ಯಮಯ ಅನುಭವಗಳನ್ನು ಪಡೆಯುವ ಅವಕಾಶ ದೊರೆಯುತ್ತದೆ ಎಂದು ಹೇಳಿದ್ದಾರೆ.
------------------------
Share your comments