1. ಸುದ್ದಿಗಳು

ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿಗೆ ಸಂಬಂಧಿಸಿದಂತೆ ಪರಿಶೀಲಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ

Kalmesh T
Kalmesh T
CM instructs officials to review state's climate, rainfall and agriculture

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿ.ಇ.ಒ ಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು.

ಹಿಂದಿನ ಪ್ರವಾಹದ ಅನುಭವದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಜೀವಹಾನಿ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪ್ರವಾಹ ಬಂದಾಗ ಬಹಳ ರೈತರನ್ನು ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪ್ರವಾಹದ ಮುನ್ಸೂಚನೆ ಬಂದ ಕೂಡಲೇ ಸ್ಥಳಾಂತರಕ್ಕೆ ಕ್ರಮ ವಹಿಸಿ.

ಹಿಂದಿನ ಸರ್ಕಾರದ ವತಿಯಿಂದ ಪರ್ಯಾಯವಾಗಿ ಕಟ್ಟಲಾಗಿರುವ ಮನೆಗಳು ಯಾರೂ ವಾಸ ಮಾಡಲು ಕೂಡ ಯೋಗ್ಯವಲ್ಲ ಎನ್ನುವ ದೂರುಗಳು ಜನರಿಂದ ವ್ಯಾಪಕವಾಗಿ ಬರುತ್ತಿವೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳ ಕಡೆಗೆ ಹೆಚ್ಚು ಒತ್ತು ನೀಡಬೇಕು.

ಅನಾಹುತಗಳನ್ನು ತಪ್ಪಿಸಲು ಹೆಚ್ಚಿನ ಗಮನ ನೀಡಬೇಕು. ಜಿಲ್ಲಾಧಿಕಾರಿಗಳು ಪದೇ ಪದೇ ಪ್ರವಾಹವಾಗುವ ಸ್ಥಳಗಳಲ್ಲಿ ಜನರಿಗೆ ಮನವರಿಕೆ ಮಾಡಿ ಸ್ಥಳಾಂತರ ಮಾಡಿ ಜೀವಹಾನಿ ತಪ್ಪಿಸಬೇಕು.

ನೆರೆ ಬಂದು ನೀರು ಹೆಚ್ಚಾದರೆ ಅದರ ಬಳಿ ಜನರು ಹೋಗದಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು. ಜನರಿಗೆ ಈ ಬಗ್ಗೆ ಎಚ್ಚರಿಕೆ ನೀಡುವುದು ಹಾಗೂ ಅರಿವು ಮೂಡಿಸುವ ಕೆಲಸ ಮಾಡಿ ಪ್ರಾಣಹಾನಿಯನ್ನು ತಪ್ಪಿಸಬೇಕು.

ಭೂ ಕುಸಿತ ಆಗಬಹುದಾದ ಸ್ಥಳಗಳ ಬಗ್ಗೆ ಒಂದು ಹಂತಕ್ಕೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇರುತ್ತದೆ. ಪೊಲೀಸ್, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮಧ್ಯೆ ಸಮನ್ವಯವಿದ್ದರೆ ಸಾಕಷ್ಟು ಜೀವಹಾನಿ ತಪ್ಪಿಸಬಹುದು.

ಮಣ್ಣು ಕುಸಿತವಾಗುವ ಸ್ಥಳಗಳ ಬಗ್ಗೆ ಇಲಾಖೆಗಳಿಗೆ ಮಾಹಿತಿ ಇರುತ್ತದೆ. ಹಾಗಾಗಿ ಅಧಿಕಾರಿಗಳು ಕಾಳಜಿಯಿಂದ ವರ್ತಿಸಬೇಕು.

ಉಡುಪಿ ಜಿಲ್ಲೆಯಲ್ಲಿ ಬಹಳ ಮೊದಲೇ ವಾರ್ ರೂಂಗಳನ್ನು ತೆಗೆಯಲಾಗಿತ್ತು. ಇದರಿಂದ ಸಾಕಷ್ಟು ಅನಾಹುತಗಳನ್ನು ತಪ್ಪಿಸಿದ್ದೇವೆ. ಇದೇ ಕ್ರಮ ಎಲ್ಲಾ ಜಿಲ್ಲೆಗಳಲ್ಲೂ ಅಗತ್ಯ.

ಜನವರಿ ಒಂದರಿಂದ ಜುಲೈ 25 ರವರೆಗೆ 64 ಜನ ಮರಣಹೊಂದಿದ್ದಾರೆ. ಇವರಿಗೆ ತುರ್ತಾಗಿ ಪರಿಹಾರ ಒದಗಿಸಲಾಗಿದೆ. ಆದರೆ ಜಿಲ್ಲಾಡಳಿತ ಅಲರ್ಟ್ ಆಗಿದ್ದರೆ ಈ ಅನಾಹುತಗಳಲ್ಲಿ ಸಾಕಷ್ಟನ್ನು ತಪ್ಪಿಸಬಹುದಿತ್ತು.

ಸಂಬಂಧಪಟ್ಟ ಅಧಿಕಾರಿಗಳು ಮಳೆ ಸಾಧ್ಯತೆ, ಮಳೆಯ ಬಿರುಸಿನ ಬಗ್ಗೆ ಪ್ರತಿದಿನ ಪತ್ರಿಕಾಗೋಷ್ಠಿ ನಡೆಸಬೇಕು. ಕಾಲು ಜಾರುವ ಕಡೆಗಳಲ್ಲಿ ಹೋಗಬಾರದು, ತುಂಬಿ ಹರಿವ ನದಿಗಳನ್ನು ಹಾಯಬಾರದು ಎಂದು ಸೂಚಿಸಬೇಕು. ಸಾವು ತಡೆಗಟ್ಟಲು ಹೆಚ್ಚಿನ ಶ್ರಮವಹಿಸಬೇಕು.

ಅಂಗನವಾಡಿ, ಶಾಲಾ ಕಟ್ಟಡಗಳು, ಆಸ್ಪತ್ರೆಗಳ ಕಟ್ಟಡ ಶಿಥಿಲವಾಗಿವೆ, ಸೋರುತ್ತಿದೆ ಎನ್ನುವ ಮಾಹಿತಿ ಮೊದಲೇ ಗೊತ್ತಿರುತ್ತದೆ. ದುರಸ್ತಿ, ಸ್ಥಳಾಂತರ, ರಿಪೇರಿಗೆ ಸಾಕಷ್ಟು ಹಣ ಮೀಸಲಿಟ್ಟಿದ್ದರೂ ಈ ಬಗ್ಗೆ ಮೊದಲೇ ಕ್ರಮ ಕೈಗೊಳ್ಳದಿರುವುದು ಬೇಜವಾಬ್ದಾರಿಯ ನಡೆಯಾಗುತ್ತದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಜಿ.ಪರಮೇಶ್ವರ್, ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಎಂ.ಸಿ.ಸುಧಾಕರ್, ಲಕ್ಷ್ಮಿ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ,ಈಶ್ವರ್ ಖಂಡ್ರೆ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ , ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಹಾಗೂ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Published On: 27 July 2023, 04:54 PM English Summary: CM instructs officials to review state's climate, rainfall and agriculture

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.