ಆಧುನಿಕತೆಯ ಹೆಸರಿನಲ್ಲಿ ಸಂಪ್ರದಾಯಗಳು ಮರೆಯಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಕೆಲವರು ಇಂದಿಗೂ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸುತ್ತಿರುವುದು ವಿಶೇಷ. ಪ್ರಸಕ್ತ ವರ್ಷ ಮುಂಗಾರು ಉತ್ತಮವಾಗಿದ್ದರಿಂದ ರೈತರಲ್ಲಿ ಸಂತಸ ಇಮ್ಮಡಿಯಾಗಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಿರುವುದರಿಂದ ರೈತ ಸಮುದಾಯದಲ್ಲಿ ಒಂದಿಷ್ಟು ಆಶಾಭಾವನೆ ಮೂಡಿಸಿದೆ.
ರೈತಾಪಿ ವರ್ಗಕ್ಕೆ ಕಾರ ಹುಣ್ಣಿವೆಯ ನಂತರ ಬರುವ ಮಣ್ಣೆತ್ತಿನ ಅಮಾವಾಸ್ಯೆ ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬವಾಗಿದೆ. ಆದರೆ ಈ ಹಬ್ಬ ಸೂರ್ಯಗ್ರಹಣ ದಿನವೇ ಬಂದಿರುವುದರಿಂದ ಕೆಲವು ರೈತರು ಒಂದು ದಿನ ಮೊದಲೈ ಹಬ್ಬ ಆಚರಿಸಿಕೊಂಡಿದ್ದಾರೆ. ಇನ್ನೂ ಕೆಲವರು ಅಮಾವಾಸ್ಯೆ ದಿನವೇ ಆಚರಿಸಿದರೆ ಉತ್ತಮವೆಂದು ಭಾವಿಸಿ ಮಣ್ಣೆತ್ತುಗಳಿಗೆ ಭಕ್ತಿಯಿಂದ ಪೂಜಿಸಿದ್ದಾರೆ.
ಏನಿದು ಮಣ್ಣೆತ್ತಿನ ಅಮಾವಾಸ್ಯೆ:
ಮಣ್ಣೆತ್ತಿನ ಅಮಾವಾಸ್ಯೆ ದಿನದಂದು ರೈತರು ಕೃಷಿ ಕಾರ್ಯಗಳಿಗೆ ಬಿಡುವು ನೀಡಲಿದ್ದು, ಎತ್ತುಗಳಿಗೂ ವಿಶ್ರಾಂತಿ ನೀಡುತ್ತಾರೆ. ರೈತರು ಹೊಲಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಊರ ಕುಂಬಾರ ಮನೆಗಳಿಂದಲೂ ತಯಾರಿಸಿದ ಜೋಡಿ ಎತ್ತುಗಳನ್ನು ಜೋಳ ಕಾಳು .ಹಣಕೊಟ್ಟು ಖರೀದಿಸಿ ತರುತ್ತಾರೆ.ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ.
ಮಳೆ ಬೆಳೆ ಚೆನ್ನಾಗಿ ಆಗಲಿ:
ಈ ಹಸಿ ಮಣ್ಣಲ್ಲಿ ದನಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ.ಬಣ್ಣಗಳ ಬ್ಯಾಗಡಿ ಚೂರು ,ಬಣ್ಣದಲ್ಲಿ ತೊಯಿಸಿದ ಜೋಳ.ಕುಸುಬಿ ಕಾಳುಗಳಿಂದ ಎತ್ತುಗಳಿಗೆ ಕೊಂಬಣಸು,ಇಣಿಗವಚ,ಜೂಲು,ತೋಡೆ,ಗಂಟೆ ಸರಗಳಿಂದ ಸಿಂಗರಿಸುತ್ತಾರೆ.ಸಿಂಗರಿಸಿದ ಜೋಡೆತ್ತುಗಳನ್ನು ನೋಡುವದೇ ಒಂದು ಸೊಗಸು.ನಂತರ ದೇವರ ಜಗುಲಿಯ ಮೇಲಿಟ್ಟು ಪೂಜೆ ಮಾಡಿ ಪ್ರಸಕ್ತ ವರ್ಷವಾದರೂ ಮಳೆ-ಬೆಳೆ ಸಮೃದ್ಧಿಯಾಗಿ ಆಗಲೆಂದು ಪ್ರಾರ್ಥಿಸುತ್ತಾರೆ.
ಮರುದಿನ ಮಕ್ಕಳು ಯಾವುದಾದರೂ ಒಂದೆತ್ತಿನ ಕಾಲು ಮುರಿದು ತಟ್ಟೆಯಲ್ಲಿಟ್ಟುಕೊಂಡು ಮನೆ ಮನೆಗೆ ತೆರಳಿ ಒಂಟೆತ್ತಿನ್ಯಾಗ ಒಂದ ಕುಂಟೆತ್ತ ಬಂದೈತಿ ಜ್ವಾಳಾ ನೀಡಿರಿ' ಎಂದು ತಿರುಗುತ್ತಾರೆ.ಮನೆಯವರು ಜೋಳ,ಗೋದಿ,ಸಜ್ಜೆ ,ಅಕ್ಕಿ ,ಹಣ ನೀಡಿ ಕಳಿಸುತ್ತಾರೆ. ನಂತರ ಮಕ್ಕಳು ಸಮೀಪವಿರುವ ಕೆರೆ, ಹೊಳೆ ಹಳ್ಳದಲ್ಲಿ ವಿಸರ್ಜನೆ ಮಾಡಿ ಮಕ್ಕಳು ಮಳೆ ಬೆಳೆ ಚೆನ್ನಾಗಿ ಆಗಲೆಂದು ಬೇಡಿಕೊಳ್ಳುತ್ತಾರೆ.
ಹಬ್ಬ ಸಂಭ್ರಮ ಜೋರು:
ಗ್ರಾಮೀಣ ಭಾಗದಲ್ಲಿ ರೈತನ ಜೀವನಾಡಿಗಳಾದ ಎತ್ತುಗಳ ಹಬ್ಬ ಎಂದರೆ ಸಾಕು ಎಲ್ಲಿಲ್ಲದ ಸಂಭ್ರಮದಿಂದ ಮನೆಮಾಡಿರುತ್ತದೆ. ಬೆಳಿಗ್ಗೆ ಎತ್ತುಗಳಿಗೆ ಜಳಕ ಮಾಡಿಸಲಾಗುತ್ತಿದೆ. ಅವುಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಮಣ್ಣಿನಿಂದ ತಯಾರು ಮಾಡಿದ ಎತ್ತುಗಳಿಗೂ ಪೂಜೆ ಮಾಡುತ್ತಾರೆ. ಇಡೀ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ.
ಭಾವನಾತ್ಮಕ ಸಂಬಂಧ:
ಸಾಮಾನ್ಯವಾಗಿ ರೈತರು ಮಣ್ಣೆತ್ತಿನ ಅಮಾವಾಸ್ಯೆ ದಿನ ಎತ್ತುಗಳಿಗೆ ಬಿಡುವು ನೀಡಿ, ಇತರೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ಕೃಷಿ ಯಾಂತ್ರಿಕೃತಗೊಂಡ ಹಿನ್ನೆಲೆಯಲ್ಲಿ ಎತ್ತುಗಳ ಬಳಕೆ ತೀರಾ ವಿರಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎತ್ತುಗಳಿಲ್ಲದ ಕೃಷಿಕರು ಮಣ್ಣೆತ್ತಿನ ಪೂಜೆ ಸಲ್ಲಿಸಿ, ಭಕ್ತಿಭಾವ ಮೆರೆಯುತ್ತಾರೆ.
ದೇಶಕ್ಕೆ ಅನ್ನ ನೀಡುವ ರೈತನ ಬದುಕು ಹಸನಾಗಲಿ ಹಾಗೂ ಈ ವರ್ಷ ಉತ್ತಮ ಮಳೆಯಾಗಿ ಎಲ್ಲೆಡೆ ಹಚ್ಚಹಸಿರು ಪಸರಿಸಲಿ, ರೈತರ ಆದಾರಯ ದ್ವಿಗುಣವಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ.
Share your comments